ಭಾರತವನ್ನು ಬರ್ಬಾದ್ ಮಾಡುವ ತನಕ ವಿರಮಿಸೋದಿಲ್ಲ ಅನ್ನೋದು ದೇಶದ್ರೋಹವಲ್ಲದಿದ್ದರೆ ಇನ್ಯಾವುದಾಗಲು ಸಾಧ್ಯ?

ಚೈತನ್ಯ ಹೆಗಡೆ

ಯಾವಾಗ ದೇಶದ್ರೋಹದ ಗಂಭೀರ ಆರೋಪ ಹೊರೆಸಿ ಜೆ ಎನ್ ಯು ವಿದ್ಯಾರ್ಥಿಕೂಟದ ಮುಖಂಡ ಕನಯ್ಯಾ ಕುಮಾರನನ್ನು ಎಳೆದೊಯ್ಯಲಾಯಿತೋ, ಅಲ್ಲಿಗೆ ಜೆ ಎನ್ ಯುದಲ್ಲಿ ಹಲವು ದಶಕಗಳಿಂದ ತಾವು ಹೇಳಿದ್ದೇ ಮಾತು ಎಂದುಕೊಂಡಿದ್ದ ಕಮ್ಯುನಿಸ್ಟ್ ಸಾಮ್ರಾಜ್ಯಕ್ಕೆ ಬಿಸಿ ಮುಟ್ಟಿದೆ.

ಇವರ ಪ್ರತಿಕ್ರಿಯೆಗಳನ್ನು ಗಮನಿಸಿ…

ಮೊದಲಿಗೆ ಇವರ ಮಾತುಗಳು, ‘ಹೌದು, ಉಗ್ರರ ಪರ ಮಾತಾಡ್ತೀವಿ, ಅದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಧಾಟಿಯಲ್ಲಿತ್ತು. ಶುಕ್ರವಾರದ ವೇಳೆಗೆ ಟಿವಿ ಚಾನೆಲ್ ಗಳಲ್ಲಿ ಹತಾಶೆಯಿಂದ ಅಬ್ಬರಿಸುತ್ತಿರುವ ಕೆಲ ಯುವಕರು, ‘ದೇಶದ ವಿರುದ್ಧ ಕೂಗುವುದಕ್ಕೆ ನಮ್ಮದೂ ಸಹಮತ ಇರಲಿಲ್ಲ. ಬೇರೆ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಗಾಗಿಬಿಟ್ಟಿದ್ದಕ್ಕೆ ನಾವು ಜವಾಬ್ದಾರರಲ್ಲ. ನಮ್ಮನ್ನು ಎಬಿವಿಪಿ ಹತ್ತಿಕ್ಕುತ್ತಿದೆ. ಕ್ಯಾಂಪಸ್ ಒಳಗೆ ಪೋಲೀಸರು ಬರಬಾರದಾಗಿತ್ತು’ ಅಂತೆಲ್ಲ ನಾಲಗೆ ಹೊರಳಿಸುತ್ತಿದ್ದಾರೆ.

ಸಿಪಿಎಂನ ಸೀತಾರಾಮ್ ಯೆಚೂರಿ ಬಡಬಡಿಸುತ್ತಿದ್ದಾರೆ- ‘ಇದೇನಿದು? ಕ್ಯಾಪಸ್ಸಿಗೆ ಪೋಲೀಸರು ಪ್ರವೇಶಿಸಿ ತಪಾಸಣೆ ನಡೆಸೋ ಹಾಗಾಯ್ತಲ್ಲ… ಬಂಧನವೂ ಆಗ್ತಿದೆ.. ಇದು ಅಘೋಷಿತ ತುರ್ತು ಪರಿಸ್ಥಿತಿ.’

ಅವರಿಗೆ ಅದೇ ಧಾಟಿಯಲ್ಲಿ ಹೇಳಬೇಕಿದೆ- ‘ಇದೇನಿದು ಜೆ ಎನ್ ಯು ದಲ್ಲಿ ದೇಶ ಚೂರು ಮಾಡುವ ಮಾತುಗಳು ಲಂಗುಲಗಾಮಿಲ್ಲದೇ ಮೊಳಗುತ್ತಿವೆಯಲ್ಲ. ಈ ದೇಶದ ಕಾನೂನು ಸಮಗ್ರ ವಿಚಾರಣೆ ನಂತರವೇ ಗಲ್ಲಿಗೇರಿಸಿದ ಉಗ್ರನನ್ನು ಹುತಾತ್ಮನೆಂದು ಆರಾಧಿಸಲಾಗ್ತಿದೆಯಲ್ಲ… ಹಾಗಿದ್ದೂ ಅಲ್ಲಿಗೆ ಕಾನೂನುಪಾಲಕರು ಕಾಲಿಡಬಾರದು ಎಂದು ಕೂಗಲಾಗ್ತಿದೆಯಲ್ಲ… ಇಲ್ಲೇನು ಪ್ರತ್ಯೇಕ ರಾಷ್ಟ್ರ ಸ್ಥಾಪನೆ ಆಗ್ತಿದೆಯೇ?’

ಕಾಂಗ್ರೆಸ್ ನ ಕಪಿಲ್ ಸಿಬಲ್ ಹೇಳ್ತಿದಾರೆ- ‘ದೇಶದ ಸಾರ್ವಭೌಮತೆ ವಿರುದ್ಧವಾಗಿ ಮಾತಾಡಬಾರದು ನಿಜ. ಆದರೆ ವಿದ್ಯಾರ್ಥಿಯ ವಿರುದ್ಧ ದೇಶದ್ರೋಹದ ಆರೋಪ ಹೊರೆಸುವುದು ಅತಿಯಾಯಿತು. ಇದು ಬ್ರಿಟಿಷರ ಕಾಲದ ಹಳೇ ಕಾನೂನು…’

ಭಾರತ ಪ್ರಶ್ನಿಸಬೇಕಿದೆ. ಜೆ ಎನ್ ಯು ಪುಂಡರ ಈ ನಡೆ ದೇಶವಿರೋಧಿ ಅಲ್ಲ ಎಂದಾದರೆ ಇನ್ಯಾವುದನ್ನು ತಾನೇ ದೇಶದ್ರೋಹ ಎನ್ನಲಾದೀತು? ಯಾವ ದೇಶ ತಾನೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ತನ್ನ ಅಸ್ತಿತ್ವವನ್ನೇ ಅಲ್ಲಾಡಿಸುವುದಕ್ಕೆ ಅವಕಾಶ ಕೊಡುತ್ತದೆ? ಲ್ಯಾನ್ಸ್ ನಾಯಕ್ ಹನುಮಂತಪ್ಪ ವೀರಗಾಥೆಗೆ ದೇಶವೇ ಮಿಡಿಯುತ್ತಿದ್ದಾಗ ಇವರಿಗೆ ಆರಾಧಿಸುವುದಕ್ಕೆ ಅಫ್ಜಲ್ ಗುರು, ಮಕ್ಬೂಲ್ ಭಟ್ ಥರದ ಉಗ್ರರನ್ನು ಬಿಟ್ಟರೆ ಇನ್ಯಾರೂ ಸಿಗಲಿಲ್ಲವೇ? ಇಷ್ಟಕ್ಕೂ ಅಂಥ ಅಫ್ಜಲ್ ನನ್ನು ಆರೋಪ ಬಂದಾಕ್ಷಣ ಸೌದಿ ಅರೇಬಿಯಾದಲ್ಲಾದಂತೆ ನಡುರಸ್ತೆಯಲ್ಲಿ ಕಲ್ಲುಹೊಡೆದು ಕೊಂದಿಲ್ಲ ಭಾರತ. ಆತನಿಗೆ ನ್ಯಾಯದಾನ ಪ್ರಕ್ರಿಯೆಯ ಎಲ್ಲ ಅವಕಾಶಗಳನ್ನೂ ನೀಡಿ, ತಪ್ಪಿತಸ್ಥ ಎಂದು ಸಾಬೀತಾದ ಬಳಿಕವೇ ಗಲ್ಲಿಗೆ ಹಾಕಿದ್ದು.

ನಿಜ, ಇತ್ತೀಚೆಗೆ ತಮ್ಮ ಮಾತಿಗೆ ಮಾತು ಸೇರಿಸದವರನ್ನೆಲ್ಲ ದೇಶದ್ರೋಹಿ ಎನ್ನುವ, ಪಾಕಿಸ್ತಾನಕ್ಕೆ ಹೋಗೆಂದು ನಿಂದಿಸುವ ಅತಿರೇಕದ ರೈಟಿಸ್ಟರು ಉದ್ಭವಿಸಿದ್ದಾರೆ. ಆದರೆ ಜೆ ಎನ್ ಯು ವಿಚಾರದಲ್ಲಿ ಎಬಿವಿಪಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು ಎಂಬ ಮಾತ್ರಕ್ಕೆ ಯಾರೂ ಈ ಎಡಪಂಥೀಯ ವಿದ್ಯಾರ್ಥಿ ನೇತಾರನ ಮೇಲೆ ದೇಶದ್ರೋಹದ ಆರೋಪ ಹೊರೆಸುತ್ತಿಲ್ಲ.

kashmir

ಪ್ರಾರಂಭದಲ್ಲಿ ಅಫ್ಜಲ್ ಗುರುವಿನ ಬಗ್ಗೆ ಸಿನಿಮಾ ತೋರಿಸ್ತೇವೆ ಅಂತ ಮುಂದಾಗಿತ್ತು ಈ ಗುಂಪು. ಅದನ್ನು ಜೆ ಎನ್ ಯು ಆಡಳಿತ ನಿರಾಕರಿಸಿತ್ತು. ಅಂಥ ಅತಿರೇಕಕ್ಕೆ ಮುಂದಾದಾಗಲೇ ಯಾರೂ ಅವರ ಮೇಲೆ ಕೇಸು ಜಡಿಯಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿ ಈ ದೇಶದಲ್ಲಿ ಅಲ್ಲಿಯವರೆಗೂ ಇದೆ. ಆದರೆ ಇಷ್ಟಕ್ಕೇ ನಿಲ್ಲದ ಈ ವಿದ್ಯಾರ್ಥಿ ಪೋಷಾಕಿನ ವಿಕೃತರು, ‘ಸಾಂಸ್ಕೃತಿಕ ಕೂಟ’ ನಡೆಸ್ತೇವೆ ಅಂತ ಸುಳ್ಳು ಹೇಳಿ ತಮ್ಮ ಘನಂದಾರಿ ಕೃತ್ಯ ಅನುಷ್ಠಾನಕ್ಕೆ ತಂದರು.

ಅಲ್ಲಿ ನಡೆದಿದ್ದು ಒಬ್ಬ ಅಫ್ಜಲ್ ಗುರುವಿನ ಆರಾಧನೆ ಮಾತ್ರ ಅಲ್ಲ. ಅದಾಗಲೇ ನಿಖರ ವಿಡಿಯೋ ಸಾಕ್ಷ್ಯ ತೋರಿಸುತ್ತಿರುವಂತೆ ಇವರೆಲ್ಲ, ದೆಹಲಿಯ ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ನಿಂತು ‘ಇಂಡಿಯಾ ಗೋಬ್ಯಾಕ್’ ಅಂತ ಕೂಗ್ತಾರೆ! ಈ ದೇಶದ ತೆರಿಗೆದಾರರ ಹಣದ ಸಬ್ಸಿಡಿಯಲ್ಲಿ ಓದುತ್ತಿರುವ ಇವರೆಲ್ಲ ಕೂಗ್ತಾರೆ- ಕಾಶ್ಮೀರ ಸ್ವತಂತ್ರವಾಗುತ್ತಿರುವ ತನಕವೂ ನಮ್ಮ ಯುದ್ಧ ನಿಲ್ಲಲ್ಲ!

ಇವರ ಕೂಗಾಟ ಇಷ್ಟಕ್ಕೇ ನಿಲ್ತು ಅಂದುಕೊಂಡ್ರಾ? ಉಹುಂ… ಇವರಿಗೆ ಕಾಶ್ಮೀರ ಸ್ವತಂತ್ರವಾದರೆ ಸಾಕಾಗದು. ‘ಭಾರತವನ್ನು ಬರ್ಬಾದ್ ಮಾಡೋ ತನಕ ನಮ್ಮ ಯುದ್ದ ಮುಂದುವರಿಯುತ್ತೆ’.

ಈಗ ಹೇಳಿ…

ಇದು ದೇಶದ್ರೋಹ ಅಲ್ಲವಾದರೆ ಇನ್ಯಾವುದು ದೇಶದ್ರೋಹವಾಗುತ್ತದೆ? ಇವರೆಲ್ಲ ದೇಶವನ್ನು ಛಿದ್ರಗೊಳಿಸುವ ತನಕ ಕಾದು ನಂತರ ದೇಶದ್ರೋಹದ ಪ್ರಕರಣ ದಾಖಲಿಸಬೇಕಿತ್ತೇ?

ಪ್ರಶ್ನಿಸಬೇಕಿರೋದು ಈ ಪ್ರಕರಣದಲ್ಲಿ ಒಬ್ಬನೇ ಒಬ್ಬ ಕನಯ್ಯಾನನ್ನುಬಂಧಿಸಿದರೆ ಸಾಕೇ ಅಂತ. ದೇಶದ್ರೋಹಿಗಳ ಇಡೀ ಗುಂಪು ಕಂಬಿಗಳ ಹಿಂದಿರಬೇಕು. ಇದಾಗುವುದಕ್ಕೆ ಸಹಿಷ್ಣುತೆಯಿಂದ ಕಾಯುವ ದೊಡ್ಡತನ ದೇಶಕ್ಕೆ ಬೇಕಿಲ್ಲ.

1 COMMENT

  1. How is that in our country freedom of speech has gone to the extent of tolerating the traitors, terrorists, politicians who are the conspirators to conspire with enemy countries, allowed to talk against our nation in public without punishment as per the law of the land, illegally bringing arms and ammunition to fight against our Army, drug peddling, fraudulently distributing fake currency, illegally storing black money, cheating in the name of Government, and travelling on fake passports and migrating into this country by corrupt means.
    When are we tightening implementation of laws of the land? Why corrupt are still not punished by courts of law who are supposed to speed up cases on fast track? This has to be answered by the Law department, and finance department of Govt of India.

Leave a Reply