ಶಾರುಖ್ ಖಾನ್ ಗೆ ಕ್ಯಾರೇ ಅನ್ನದೇ ದಂಡ ಕಟ್ಟಿಸಿಕೊಂಡ್ತು ಬಿಎಂಸಿ!

 

ಡಿಜಿಟಲ್ ಕನ್ನಡ ಟೀಮ್

ಇದೇನಿದು, ಉದ್ಯಮಿಗಳು ಸಾಲಬಾಕಿ ಉಳಿಸಿಕೊಂಡಿರೋದು ಹಾಗೂ ರಾಜಕಾರಣಿಗಳು ಬಾಡಿಗೆ ಕಟ್ಟದೇ ಬಂಗಲೆಗಳಲ್ಲಿ ವಾಸಿಸುತ್ತಿರೋದು ಇಂಥ ಸುದ್ದಿಗಳೇ ಆಗೋಯ್ತಾ ಅಂತ ನೀವು ಬೇಸರಿಸಿಕೊಳ್ಳಬೇಕಿಲ್ಲ. ನಟ ಶಾರುಖ್ ಖಾನ್ ತನ್ನ ಮನೆ ಎದುರು ಅಕ್ರಮವಾಗಿ ವೇದಿಕೆ ನಿರ್ಮಿಸಿಕೊಂಡಿದ್ದಕ್ಕೆ ಸ್ಥಳೀಯಾಡಳಿತ ಅವರಿಂದ ದಂಡ ಕಟ್ಟಿಸಿಕೊಂಡಿದೆ. ಅಷ್ಟರಮಟ್ಟಿಗೆ ವ್ಯವಸ್ಥೆ ತನ್ನಲ್ಲಿನ ಬಿಸಿ ಮುಟ್ಟಿಸೋ ತಾಕತ್ತನ್ನು ಕಳೆದುಕೊಂಡಿಲ್ಲ ಅಂತ ನಾವಾದರೂ ಖುಷಿ ಪಡಬಹುದು.

ನಟ ಶಾರುಕ್ ಖಾನ್ ತನ್ನ ಬಂಗಲೆ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಕಾಂಕ್ರೀಟ್ ನ ವೇದಿಕೆಯೊಂದನ್ನುನಿರ್ಮಿಸಿದ್ದರು. ಇದನ್ನು ತೆರವುಗೊಳಿಸಿದ ಬೃಹನ್ ಮುಂಬೈ ಕಾರ್ಪೊರೇಷನ್ (ಬಿಎಂಸಿ) ಖಾನ್ ರಿಂದ 1.93 ಲಕ್ಷ ರು ಗಳನ್ನು ದಂಡವಾಗಿ ಕಟ್ಟಿಸಿಕೊಂಡಿದೆ.

ಮುಂಬೈನ ಬಾಂದ್ರದಲ್ಲಿರುವ ಎಸ್ ಆರ್ ಕೆ ಬಂಗಲೆಯ ಪಕ್ಕದ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಗಾಗಿ ramp ನಿರ್ಮಿಸಿದ್ದರು. ಇದರಿಂದ ಆ ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತಿದೆ ಎಂದು ಆರ್ ಟಿ ಐ ಕಾರ್ಯಕರ್ತ ಅನಿಲ್ ಗಲ್ಗಲಿ ಬಿಎಂಸಿ ಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ದೂರಿನ್ವಯ ಬಿಎಂಸಿ ಅಧಿಕಾರಿಗಳು ಮತ್ತು 40 ಸಿಬ್ಬಂದಿ 2 ಜೆಸಿಬಿಗಳ ಮೂಲಕ ramp ಅನ್ನು ಕೆಡವಿ ಹಾಕಿದ್ದರು. ಇದೀಗ ಇದಕ್ಕೆ ತಗುಲಿದ ವೆಚ್ಚವನ್ನು ಖಾನ್ ರಿಂದ ದಂಡದ ರೂಪದಲ್ಲಿ ಪಡೆದು ಕೊಂಡಿದ್ದಾರೆ. ಈ ಅಕ್ರಮ ಕಾಮಗಾರಿಯನ್ನು ತೆರವುಗೊಳಿಸುವ ಬಗ್ಗೆ ಬಿಎಂಸಿ 2015 ರ ಮಾರ್ಚ್ 11 ರಂದು ನೋಟಿಸ್ ನೀಡಿತ್ತು. ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ 1888 ಮತ್ತು ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ ಕಾಯ್ದೆ 1966 ರ ಪ್ರಕಾರ ದಂಡ ವಸೂಲಿಯಾಗಿದೆ.

Leave a Reply