ಸುದ್ದಿಸಂತೆ: ನ್ಯಾಷನಲ್ ಹೆರಾಲ್ಡ್ ಪ್ರಕರಣ- ಕೈಗೆ ಅರ್ಧ ಸಮಾಧಾನ, ಇಶ್ರತ್- ಜೆಎನ್ ಯು ವಿಷಯಗಳಲ್ಲಿ ಬಿಜೆಪಿ ಗರಂ

 

ಡಿಜಿಟಲ್ ಕನ್ನಡ ಟೀಮ್

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ಉಭಯ ಗುಂಪಿನ ವಾದ ಆಲಿಸಿತು. ಪ್ರಕರಣದ ವಿಚಾರಣೆಯಲ್ಲಿ ಸೋನಿಯಾ- ರಾಹುಲ್ ಅವರ ಖುದ್ದು ಅನುಮತಿಗೆ ಸುಪ್ರೀಂಕೋರ್ಟ್ ವಿನಾಯತಿ ನೀಡಿದೆ. ಅಲ್ಲದೇ ಸೆಷನ್ ಕೋರ್ಟಿನ ವಿಚಾರಣೆ ವೇಳೆ ಈ ಪ್ರಕರಣದ ಕುರಿತು ಹೈಕೋರ್ಟ್ ನ ಪರಿವೀಕ್ಷಣೆ ಮಾತುಗಳನ್ನು ಪರಿಗಣಿಸಬೇಕಿಲ್ಲ ಎಂದಿದೆ. ಅಂದರೆ, ಸೆಷನ್ ಕೋರ್ಟ್ ವಿಚಾರಣೆ ಸಂಬಂಧ ರಾಹುಲ್- ಸೋನಿಯಾ ಹೈಕೋರ್ಟಿನ ಮೆಟ್ಟಿಲೇರಿದಾಗ ಈ ಪ್ರಕರಣದಲ್ಲಿ ಇಬ್ಬರ ಅಪರಾಧ ಇರುವುದಾಗಿ ವ್ಯಾಖ್ಯಾನಿಸಿ ಕೆಲವು ಮಾತುಗಳನ್ನು ಆಡಿತ್ತು. ಅವು ಸೆಷನ್ ಕೋರ್ಟ್ ವಿಚಾರಣೆಯಲ್ಲಿ ಪ್ರಾಮುಖ್ಯ ಪಡೆಯುವಂತಿಲ್ಲ ಎಂಬುದು ಈಗಿನ ತೀರ್ಮಾನ.

ಆದರೆ, ಪ್ರಕರಣದ ವಿಚಾರಣೆ ಅದರ ಪಾಡಿಗೆ ಮುಂದುವರಿಯುತ್ತದೆ. ಪ್ರಕರಣವನ್ನೇ ವಜಾ ಮಾಡುವುದಕ್ಕೆ ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಕಾಂಗ್ರೆಸ್ ನ ಜಯ ಎಂದೇನೂ ಬೀಗುವಂತಿಲ್ಲ. ಕಾಂಗ್ರೆಸ್ ಪರವಾದ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಹಾಗೂ ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಇಬ್ಬರೂ ಸುಪ್ರೀಂಕೋರ್ಟ್ ನಿರ್ದೇಶನ ತೃಪ್ತಿ ತಂದಿರುವುದಾಗಿ ಹೇಳಿದ್ದಾರೆ.

ಇನ್ನೊಂದೆಡೆ, ಈ ಹಿಂದೆ ಇಶ್ರತ್ ಜಹಾನ್ ಪರ ಅನುಕಂಪದ ಮಾತನಾಡಿದ್ದ ಕಾಂಗ್ರೆಸ್ ಪಕ್ಷ ದೇಶದ ಕ್ಷಮೆಯಾಚಿಸಬೇಕು ಅಂತ ಬಿಜೆಪಿ ಆಗ್ರಹಿಸಿದೆ. ಇಶ್ರತ್ ಲಷ್ಕರೆ ಪರವಾಗಿಯೇ ಕೆಲಸ ಮಾಡುತ್ತಿದ್ದಳು ಎಂದು ಮಾಫಿ ಸಾಕ್ಷಿ ಡೇವಿಡ್ ಹೆಡ್ಲಿ ಹೇಳಿರುವುದರಿಂದ ಈ ಹಿಂದೆ ಈ ಪ್ರಕರಣವನ್ನು ಬಿಜೆಪಿ ವಿರುದ್ಧ ಬಳಸಿಕೊಂಡು, ಭಯೋತ್ಪಾದಕ ಚಟುವಟಿಕೆಗೆ ಪೂರಕವಾಗಿ ಮಾತನಾಡಿದ್ದ ಕಾಂಗ್ರೆಸ್ ಈಗ ಮಾಧ್ಯಮಕ್ಕೆ, ಜನಸಾಮಾನ್ಯರಿಗೆ ಉತ್ತರ ಹೇಳಬೇಕು ಎಂದಿದ್ದಾರೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್.

ಜೆ ಎನ್ ಯು ಆವರಣದಲ್ಲಿ ಉಗ್ರ ಅಫ್ಜಲ್ ಗುರು ಪರ ಹಾಗೂ ಭಾರತದ ವಿರುದ್ಧ ಘೋಷಣೆ ಮೊಳಗಿಸಿದವರ ವಿರುದ್ಧವೂ ಅತ್ಯುಗ್ರ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಮುಂದಾಗಿದೆ. ಗೃಹ ಸಚಿವ ರಾಜನಾಥ ಸಿಂಗ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಸಹ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಉಗ್ರ ಪ್ರತಿಕ್ರಿಯೆ ನೀಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವಿರೋಧಿ ಪ್ರಚೋದನೆಗಳನ್ನು ಸಹಿಸಿಕೊಂಡಿರುವುದಕ್ಕೆ ಸಾಧ್ಯವಿಲ್ಲ’ ಅಂತ ಗುಡುಗಿದ್ದಾರೆ.

Leave a Reply