ಸುದ್ದಿಸಂತೆ: ಯಾರಿಗೆಲ್ಲ ಬಂತು ಚಿತ್ರಪ್ರಶಸ್ತಿ?, ಇಂದು ಕೇಸರಿ ಹೋರಾಟ ದಿನ- ಯಾಕ್ ಗೊತ್ತಾ?, ಅಮೆರಿಕವನ್ನುಆಕ್ಷೇಪಿಸಿದೆ ಭಾರತ…

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಹರಿವು ಚಿತ್ರ, ಸಂಚಾರಿ ವಿಜಯ್, ಲಕ್ಷ್ಮಿಗೆ ಅತ್ಯುತ್ತಮ ಪ್ರಶಸ್ತಿ

2014-15 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ವಾರ್ತಾಇಲಾಖೆ ಶುಕ್ರವಾರ ಪ್ರಕಟಿಸಿದೆ. ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ “ಹರಿವು” ಆಯ್ಕೆಯಾಗಿದ್ದು ಎರಡು ಮತ್ತು ಮೂರನೇ ಅತ್ಯುತ್ತಮ ಚಿತ್ರಗಳ ಪ್ರಶಸ್ತಿಗಳಿಗೆ ಕ್ರಮವಾಗಿ “ಅಭಿಮನ್ಯು” ಮತ್ತು “ಹಗ್ಗದಕೊನೆ” ಮತ್ತು ಅತ್ಯುತ್ತಮ ಮಕ್ಕಳ ಚಿತ್ರವಾಗಿ “ಬಾನಾಡಿ” ಆಯ್ಕೆಯಾಗಿವೆ. ಅತ್ತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗಳಿಗೆ ಕ್ರಮವಾಗಿ ಸಂಚಾರಿ ವಿಜಯ್ (ನಾನು ಅವನಲ್ಲ ಅವಳು), ಲಕ್ಷ್ಮಿ ಗೋಪಾಲಸ್ವಾಮಿ (ವಿದಾಯ), ಅತ್ಯುತ್ತಮ ಬಾಲ ನಟನಾಗಿ ಮಾಸ್ಟರ್ ಸಾಹಿತ್ (ತೆಂಡುಲ್ಕರ್ ಅಲ್ಲ) ಆಯ್ಕೆಯಾಗಿದ್ದಾರೆ.

ಜೀವಿತಾವಧಿ ಸಾಧನೆಗೆ ನೀಡುವ ಡಾ.ರಾಜ್ ಕುಮಾರ್ ಪ್ರಶಸ್ತಿ (ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿದ ಸಾಧಕರು) ಗೆ ಬಸಂತ್ ಕುಮಾರ್ ಪಾಟೀಲ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ (ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರು)ಗೆ ಡಾ.ಬರಗೂರು ರಾಮಚಂದ್ರಪ್ಪ, ಡಾ. ವಿಷ್ಣುವರ್ಧನ್ ಪ್ರಶಸ್ತಿ (ಕನ್ನಡ ಚಲನಚಿತ್ರ ರಂಗದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನ)ಗೆ ಸುರೇಶ್ ಅರಸ್ ಭಾಜನರಾಗಿದ್ದಾರೆ.

ಅತ್ಯುತ್ತಮ ಪೋಷಕ ನಟ ಮತ್ತು ನಟಿ ಪ್ರಶಸ್ತಿಗೆ ಅರುಣ್ ದೇವಸ್ಯ ಮತ್ತು ಜಯಶ್ರೀರವರು ಆಯ್ಕೆಯಾಗಿದ್ದಾರೆ. ಪ್ರಥಮ ನಿರ್ದೇಶನ ಅತ್ಯುತ್ತಮ ಚಿತ್ರ ಉಳಿದವರು ಕಂಡಂತೆ, ಮನರಂಜನಾ ಚಿತ್ರ ಗಜಕೇಸರಿ, ಪ್ರಾದೇಶಿಕ ಚಿತ್ರ ವಿಷದ ಮಳೆ, ಅತ್ಯುತ್ತಮ ಕಥೆ ನಾನು ಅವನಲ್ಲ ಅವಳು, ಚಿತ್ರ ಕಥೆ ವಿದಾಯ, ಸಂಭಾಷಣೆ ತಿಪ್ಪಜ್ಜಿ ಸರ್ಕಲ್ (ಬಿ ಎಲ್ ವೇಣು) ಚಿತ್ರಗಳು ಪ್ರಶಸ್ತಿಗಳನ್ನು ಪಡೆದಿವೆ. ಅತ್ಯುತ್ತಮ ಛಾಯಗ್ರಾಹಕ ಸತ್ಯ ಹೆಗಡೆ (ರಾಟೆ), ಸಂಗೀತ ನಿರ್ದೇಶಕ ಅಜನಿಶ್ ಲೋಕನಾಥ್, ಸಂಕಲನ ಶ್ರೀಕಾಂತ್ (ಉಗ್ರಂ), ಬಾಲ ನಟಿ ಲಹರಿ (ಆಟ-ಪಾಠ), ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ (ತುಳು).

ನ್ಯಾಷನಲ್ ಹೆರಾಲ್ಡ್, ಇಶ್ರತ್, ಜೆಎನ್ ಯು… ಬಿಜೆಪಿ ಹಿಟ್ ಬ್ಯಾಕ್

ಶುಕ್ರವಾರ ಕೇಸರಿ ಹೋರಾಟ ದಿವಸ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅರ್ಜಿದಾರರಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ವಜಾ ಮಾಡುವಂತೆ ಸೋನಿಯಾ- ರಾಹುಲ್ ಮನವಿಯನ್ನು ಸುಪ್ರೀಂಕೋರ್ಟ್ ಪರಿಗಣಿಸಲಿಲ್ಲ. ದೇಶದ್ರೋಹದ ಮಾತುಗಳನ್ನು ಸಹಿಸೋದಿಲ್ಲ ಅಂತ ಜೆಎನ್ ಯು ವಿದ್ಯಮಾನ ಉಲ್ಲೇಖಿಸಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದರ ಬೆನ್ನಲ್ಲೇ, ಉಗ್ರ ಅಫ್ಜಲ್ ಆರಾಧನೆ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ನಾಯಕ ಕನಹಯ್ಯಾ ಕುಮಾರರನ್ನು ದೇಶದ್ರೋಹ ಆಪಾದನೆ ಮೇಲೆ ಬಂಧಿಸಲಾಯಿತು. ಮಾಫಿ ಸಾಕ್ಷಿ ಡೇವಿಡ್ ಹೆಡ್ಲಿ ವಿಚಾರಣೆ ವೇಳೆ ಇಶ್ರತ್ ಜಹಾನ್ ಲಷ್ಕರೆ ನಂಟು ಹೊಂದಿದ್ದನ್ನು ದೃಢೀಕರಿಸಿರುವ ಹಿನ್ನೆಲೆಯಲ್ಲಿ, ಆಕೆಯ ಬಗ್ಗೆ ಅನುಕಂಪದ ಮಾತಾಡಿದ್ದ ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕೆಂದೂ ಬಿಜೆಪಿ ಆಗ್ರಹಿಸಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ಉಭಯ ಗುಂಪಿನ ವಾದ ಆಲಿಸಿತು. ಪ್ರಕರಣದ ವಿಚಾರಣೆಯಲ್ಲಿ ಸೋನಿಯಾ- ರಾಹುಲ್ ಅವರ ಖುದ್ದು ಅನುಮತಿಗೆ ಸುಪ್ರೀಂಕೋರ್ಟ್ ವಿನಾಯತಿ ನೀಡಿದೆ. ಅಲ್ಲದೇ ಸೆಷನ್ ಕೋರ್ಟಿನ ವಿಚಾರಣೆ ವೇಳೆ ಈ ಪ್ರಕರಣದ ಕುರಿತು ಹೈಕೋರ್ಟ್ ನ ಪರಿವೀಕ್ಷಣೆ ಮಾತುಗಳನ್ನು ಪರಿಗಣಿಸಬೇಕಿಲ್ಲ ಎಂದಿದೆ. ಅಂದರೆ, ಸೆಷನ್ ಕೋರ್ಟ್ ವಿಚಾರಣೆ ಸಂಬಂಧ ರಾಹುಲ್- ಸೋನಿಯಾ ಹೈಕೋರ್ಟಿನ ಮೆಟ್ಟಿಲೇರಿದಾಗ ಈ ಪ್ರಕರಣದಲ್ಲಿ ಇಬ್ಬರ ಅಪರಾಧ ಇರುವುದಾಗಿ ವ್ಯಾಖ್ಯಾನಿಸಿ ಕೆಲವು ಮಾತುಗಳನ್ನು ಆಡಿತ್ತು. ಅವು ಸೆಷನ್ ಕೋರ್ಟ್ ವಿಚಾರಣೆಯಲ್ಲಿ ಪ್ರಾಮುಖ್ಯ ಪಡೆಯುವಂತಿಲ್ಲ ಎಂಬುದು ಈಗಿನ ತೀರ್ಮಾನ.

ಆದರೆ, ಪ್ರಕರಣದ ವಿಚಾರಣೆ ಅದರ ಪಾಡಿಗೆ ಮುಂದುವರಿಯುತ್ತದೆ. ಪ್ರಕರಣವನ್ನೇ ವಜಾ ಮಾಡುವುದಕ್ಕೆ ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಕಾಂಗ್ರೆಸ್ ನ ಜಯ ಎಂದೇನೂ ಬೀಗುವಂತಿಲ್ಲ. ಕಾಂಗ್ರೆಸ್ ಪರವಾದ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಹಾಗೂ ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಇಬ್ಬರೂ ಸುಪ್ರೀಂಕೋರ್ಟ್ ನಿರ್ದೇಶನ ತೃಪ್ತಿ ತಂದಿರುವುದಾಗಿ ಹೇಳಿದ್ದಾರೆ.

ಇನ್ನೊಂದೆಡೆ, ಈ ಹಿಂದೆ ಇಶ್ರತ್ ಜಹಾನ್ ಪರ ಅನುಕಂಪದ ಮಾತನಾಡಿದ್ದ ಕಾಂಗ್ರೆಸ್ ಪಕ್ಷ ದೇಶದ ಕ್ಷಮೆಯಾಚಿಸಬೇಕು ಅಂತ ಬಿಜೆಪಿ ಆಗ್ರಹಿಸಿದೆ. ಇಶ್ರತ್ ಲಷ್ಕರೆ ಪರವಾಗಿಯೇ ಕೆಲಸ ಮಾಡುತ್ತಿದ್ದಳು ಎಂದು ಮಾಫಿ ಸಾಕ್ಷಿ ಡೇವಿಡ್ ಹೆಡ್ಲಿ ಹೇಳಿರುವುದರಿಂದ ಈ ಹಿಂದೆ ಈ ಪ್ರಕರಣವನ್ನು ಬಿಜೆಪಿ ವಿರುದ್ಧ ಬಳಸಿಕೊಂಡು, ಭಯೋತ್ಪಾದಕ ಚಟುವಟಿಕೆಗೆ ಪೂರಕವಾಗಿ ಮಾತನಾಡಿದ್ದ ಕಾಂಗ್ರೆಸ್ ಈಗ ಮಾಧ್ಯಮಕ್ಕೆ, ಜನಸಾಮಾನ್ಯರಿಗೆ ಉತ್ತರ ಹೇಳಬೇಕು ಎಂದಿದ್ದಾರೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್.

ಜೆ ಎನ್ ಯು ಆವರಣದಲ್ಲಿ ಉಗ್ರ ಅಫ್ಜಲ್ ಗುರು ಪರ ಹಾಗೂ ಭಾರತದ ವಿರುದ್ಧ ಘೋಷಣೆ ಮೊಳಗಿಸಿದವರ ವಿರುದ್ಧವೂ ಅತ್ಯುಗ್ರ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಮುಂದಾಗಿದೆ. ಗೃಹ ಸಚಿವ ರಾಜನಾಥ ಸಿಂಗ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಸಹ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಉಗ್ರ ಪ್ರತಿಕ್ರಿಯೆ ನೀಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವಿರೋಧಿ ಪ್ರಚೋದನೆಗಳನ್ನು ಸಹಿಸಿಕೊಂಡಿರುವುದಕ್ಕೆ ಸಾಧ್ಯವಿಲ್ಲ’ ಅಂತ ಗುಡುಗಿದರು.

ಪಾಕಿಸ್ತಾನಕ್ಕೇಕೆ ನೆರವು? ಅಮೆರಿಕವನ್ನು ಪ್ರಶ್ನಿಸಿದೆ ಭಾರತ

ಪಾಕಿಸ್ತಾನಕ್ಕೆ ಅಮೆರಿಕ ನೀಡಲು ಉದ್ದೇಶಿಸಿದ್ದ 860 ಮಿಲಿಯನ್ ಡಾಲರ್ ಗಳ ಆರ್ಥಿಕ ನೆರವನ್ನು ನೀಡದಂತೆ ಭಾರತ ಅಮೆರಿಕಕ್ಕೆ ತಿಳಿಸಿದೆ. ಅಮೆರಿಕ ನೀಡುವ ನೆರವಿನಲ್ಲಿ ಭಾರತದ ವಿರುದ್ಧದ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಶ್ ಸ್ವರೂಪ್ ತಿಳಿಸಿದ್ದಾರೆ. ಕಳೆದ ವಾರದ ಪ್ರಾರಂಭದಲ್ಲಿ ಒಬಾಮಾ ನೇತೃತ್ವದ ಆಡಳಿತ ಈ ಬಗ್ಗೆ ಪ್ರಸ್ತಾಪಿಸಿ ರಕ್ಷಣೆಗೆ 265 ಮಿಲಿಯನ್ ಡಾಲರ್ ಸೇರಿದಂತೆ ಒಟ್ಟು 860 ಮಿಲಿಯನ್ ಡಾಲರ್ ನಷ್ಟು ನೆರವು ನೀಡಲು ಚಿಂತಿಸಿತ್ತು.

Leave a Reply