ಹೆರಿಗೆ ಪ್ರಕ್ರಿಯೆ, ನೀವು ತಿಳಿದಿರಬೇಕಾದ ಅಂಶಗಳು

author-shamaಒಡಲಲ್ಲಿ ಚಿಗುರಿದ ಜೀವವನ್ನು ಭುವಿಗೆ ತರುವ ಕೆಲಸ ಸುಲಭದ್ದಲ್ಲ. ಹೆರಿಗೆಯೆಂದರೆ ಮತ್ತೆ ಮರು ಜನ್ಮ. ಪ್ರತಿ ಹೆಣ್ಣೂ ತನಗೇನಾದರೂ ಆಗಲಿ ಕಂದ ಚೆನ್ನಾಗಿರಲಿ ಎಂಬ ಆಶಯ ಹೊತ್ತುಕೊಂಡೇ ಆಸ್ಪತ್ರೆ ಮೆಟ್ಟಲೇರುತ್ತಾಳೆ.  ಆತಂಕದ ಮೂಟೆಯನ್ನ ಬಗಲಲ್ಲಿಟ್ಟುಕೊಂಡೇ ನಿರಾತಂಕದ ಮುಖವಾಡ ಧರಿಸಿ ಹೆರಿಗೆ ವಾರ್ಡ್^ನಲ್ಲಿ ಮಲಗುತ್ತಾಳೆ. ಎಷ್ಟೇ ಪ್ರಯತ್ನವಿದ್ದರೂ ವಿಧಿಯ ರೀತಿ ನೀತಿಗಳು ನೂರಿದ್ದಾಗ ಇವೆಲ್ಲ ಸಹಜವೇ. ಪ್ರತಿ ಬಸುರಿನಲ್ಲೂ ಭಿನ್ನತೆಯಿದ್ದ ಹಾಗೆ ಹೆರಿಗೆಯಲ್ಲೂ ಬೇರೆ ಬೇರೆ ನಮೂನೆಗಳುಂಟು.

ಸಹಜ ಹೆರಿಗೆ : ಇದು ಶತಮಾನಗಳಿಂದ ನಡೆದು ಬಂದ ಪ್ರಕೃತಿ ಸಹಜ ಹೆರಿಗೆಯ ರೀತಿ. ಆಧುನಿಕತೆ ಮನುಷ್ಯನ ಅಂಗಳಕ್ಕೆ ಕಾಲಿಡುವ ಮೊದಲು ಇದರ ಹೊರತು ಬೇರೆ ವಿಧಾನವೇ ಗೊತ್ತಿರಲಿಲ್ಲ. ಯಾವುದೇ ಔಷಧಿಗಳ ಸಹಾಯವಿಲ್ಲದೇ ಮಗು ಸಹಜವಾಗಿ ಗರ್ಭಕೋಶದಿಂದ ಯೋನಿಮಾರ್ಗವಾಗಿ ಜಗತ್ತಿಗೆ ಬರುತ್ತಿತ್ತು. ಹತ್ತಿಪ್ಪತ್ತು ಹೆರುತ್ತಿದ್ದ ಕಾಲದಲ್ಲಿ ಸಹಜ ಹೆರಿಗೆಯಲ್ಲಿ ಮಗು ಉಳಿದರೆ ಅದೃಷ್ಟ; ಇಲ್ಲದೇ ಹೋದಲ್ಲಿ ದುರ್ವಿಧಿ ಅನ್ನುತ್ತ ಸಮಾಧಾನ ಪಟ್ಟುಕೊಳ್ಳುತ್ತಿದ್ದರಷ್ಟೇ. ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಮನೆ ಮದ್ದು, ಸೂಲಗಿತ್ತಿಯರು ಬಂದು ಹೆರಿಗೆಯ ಜವಾಬ್ದಾರಿ ಹೊತ್ತು ಮಗು ಹುಟ್ಟಿದ ನಂತರ ಅವಶ್ಯಕತೆಯಿರುವ ಎಲ್ಲ ಕೆಲಸಗಳನ್ನು ಮುಗಿಸಿ ಹೋಗುತ್ತಿದ್ದರು. ಇವತ್ತಿಗೆ ಬದಲಾಗಿದ್ದು ಸೂಲಗಿತ್ತಿಯರ ಬದಲು ವೈದ್ಯರು ಅನ್ನುವುದಷ್ಟೇ ಹೊರತು ಬೇರೇನಿಲ್ಲ. ತಡೆಯಲಾರದ ನೋವು ಅನುಭವಿಸುವುದು ಅನಿವಾರ್ಯವಾದರೂ ಯಾವತ್ತಿಗೂ ಇಷ್ಟು ಆರೋಗ್ಯಪೂರ್ಣವಾದ ಹೆರಿಗೆ ಇನ್ನಾವುದೂ ಅಲ್ಲ ಅನ್ನುವುದನ್ನು ಜಗತ್ತೇ ಒಪ್ಪುತ್ತದೆ. ಈಗೀಗ ಮಗುವಿನ ಗಾತ್ರ ಅಥವಾ ತಲೆಯ ಗಾತ್ರ ಯೋನಿದ್ವಾರದಿಂದ ಹೊರಬರಲಾರದಷ್ಟು ದೊಡ್ಡವಾಗಿದ್ದಾಗ ಯೋನಿ ಮತ್ತು ಗುದದ್ವಾರಗಳ ನಡುವಿನ ಭಾಗವನ್ನು ಕತ್ತರಿಸಿ ಹೆರಿಗೆಯನ್ನು ಸುಲಭವಾಗಿಸುತ್ತಾರೆ. ಇದನ್ನುಎಪಿಸಿಯೋಟಮಿ (Episiotamy) ಅನ್ನಲಾಗುತ್ತದೆ. ನಂತರ ಇದನ್ನು ಹೊಲಿಗೆ ಹಾಕಿ ಮುಚ್ಚಲಾಗುತ್ತದೆ. ಹೆರಿಗೆ ನೋವು ಬಂದರೂ ಬಹಳ ಸಮಯ ಹೆರಿಗೆಯಾಗುವ ಯಾವುದೇ ಲಕ್ಷಣಗಳು ಕಾಣದಿದ್ದಲ್ಲಿ ಗರ್ಭಚೀಲವನ್ನು ಸಣ್ಣಗೆ ಹರಿದು ಒಳಗಿನ ದ್ರವವನ್ನು ತೆಗೆಯುವುದೂ ಇದೆ. ಇದನ್ನು ಅಮ್ನಿಯೋಟಮಿ (amniotomy) ಅನ್ನಲಾಗುತ್ತದೆ ಇದು ವೈದ್ಯರು ಸಮಯ ಸಂದರ್ಭಗಳಿಗೆ ಅನುಸಾರವಾಗಿ ವಿವೇಚಿಸಿ ತೆಗೆದುಕೊಳ್ಳುವ ನಿರ್ಧಾರ. ಈ ಪ್ರಕ್ರಿಯೆಯ ನಂತರ ಸುರಕ್ಷತಾ ದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ಮಗುವನ್ನು ಹೊರ ತರುವುದವಶ್ಯ.

ಸಹಜ ಹೆರಿಗೆಯ ನಂತರವೂ ಒಂದಷ್ಟು ದಿನ ನೋವು ಇರುವ ಕಾರಣ ವೈದ್ಯರು ನೋವು ನಿವಾರಕ ಗುಳಿಗೆಗಳನ್ನು, ಹೊಲಿಗೆ ಹಾಕಿದ್ದರೆ ಅದಕ್ಕವಶ್ಯವಾದ ಮುಲಾಮುಗಳು ಅಥವಾ ಅವಶ್ಯಕತೆಗೆ ಅನುಸಾರವಾಗಿ ಬೇರೆ ಔಷಧಿಗಳನ್ನೂ ನೀಡುತ್ತಾರೆ. ರಕ್ತ ಸ್ರಾವ ಅವರವರ ದೇಹ ಪ್ರಕೃತಿಗನುಸಾರವಾಗಿ ಸುಮಾರಿಗೆ ಹದಿನೈದು ದಿನಗಳಿಂದ ತಿಂಗಳ ವರೆಗೂ ಇರುವುದುಂಟು. ಈ ವಿಚಾರದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಸಣ್ಣ ಸೋಂಕು ತಗುಲಿದರೂ ಮಗುವಿಗೂ ತೊಂದರೆಯಾಗುವ ಸಾಧ್ಯತೆಗಳುಂಟು. ಆದ್ದರಿಂದ ಸ್ವಚ್ಛತೆ ಅನ್ನುವುದು ಮೊದಲ ಆದ್ಯತೆಯಾಗಿರಬೇಕು.

ವೈದ್ಯ ವಿಜ್ಞಾನ ಮುಂದುವರಿದ ಮತ್ತು ಆಧುನಿಕ ಸಂಶೋಧನೆಗಳ ಪರಿಣಾಮವಾಗಿ ಅವಧಿಗೆ ಸರಿಯಾಗಿ ಹೆರಿಗೆ ನೋವು ಕಾಣಿಸಿಕೊಳ್ಳದೇ ಇದ್ದಲ್ಲಿ ಬೇರೆ ವಿಧಾನಗಳನ್ನು ಅನುಸರಿಸುವ ಬದಲಿಗೆ ಸಹಜ ಹೆರಿಗೆಯನ್ನೇ ಮಾಡಿಸುವದಕ್ಕೆ ಹೊಸ ವಿಧಾನ ಕಂಡುಕೊಳ್ಳಲಾಗಿದೆ. ಇಲ್ಲಿ ಹೆರಿಗೆ ವಿಧಾನ ಕೃತಕವಲ್ಲ; ಆದರೆ ಔಷಧಿಗಳನ್ನು ನೀಡುವ ಮೂಲಕ ಹೆರಿಗೆ ನೋವು ಬರಿಸುವುದು ಕೃತಕ.

ಈ ವಿಧಾನದಲ್ಲಿ ಸಾಮಾನ್ಯವಾಗಿ ಹೆರಿಗೆ ದಿನಾಂಕದಂದು ಅಥವಾ ಒಂದು ದಿನ ಮುಂಚಿತವಾಗಿ ಆಸ್ಪತ್ರಗೆ ಹೋಗಬೇಕಿರುತ್ತದೆ. ಗರ್ಭದ್ವಾರವನ್ನು (cervix, the neck of the uterus) ಮೃದುವಾಗಿಸಲು ಯೋನಿದ್ವಾರದೊಳಕ್ಕೆ ಗುಳಿಗೆಯೊಂದನ್ನು ಅಥವಾ ಒಂದು ಔಷಧೀಯ ಜೆಲ್ ತೂರಿಸುತ್ತಾರೆ. ಇದಾಗಿ ಸುಮಾರು ಆರು ಘಂಟೆಯೊಳಗೆ ನೋವು ಶುರುವಾಗುತ್ತದೆ. ಒಂದೊಮ್ಮೆ ಶುರುವಾಗದೇ ಇದ್ದರೆ ಮತ್ತೊಂದು ಡೋಸ್ ಔಷಧಿ ಕೊಟ್ಟು ನೋವು ಶುರುವಾಗುವಂತೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಒಮ್ಮೊಮ್ಮೆ ಸ್ವಲ್ಪ ಸುಸ್ತು, ವಾಂತಿಯಂಥದ್ದು ಆಗುವುದುಂಟು. ತೀರಾ ಸುಸ್ತಾದರೆ ಗ್ಲುಕೋಸ್ ಅಥವಾ ಅವಶ್ಯಕ ಆಹಾರ ನೀಡಿ ದೇಹ ಸ್ಥಿತಿ ಸಹಜವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಒಮ್ಮೆ ನೋವು ಶುರುವಾಯಿತೆಂದರೆ ಹೆರಿಗೆಯನ್ನು ಸಹಜ ರೀತಿಯಲ್ಲಿ ಮಾಡಿಸಲಾಗುತ್ತದೆ. ಈ ವಿಧಾನದಲ್ಲಿ ಔಷಧಿ ನೀಡಿದ ನಂತರ ಹೆರಿಗೆಗೆ 24 ರಿಂದ 48 ಗಂಟೆಗಳಾಗುವ ಸಾಧ್ಯತೆಯಿರುತ್ತದೆ. ಈ ಥರದ ಹೆರಿಗೆಯಲ್ಲಿ ಸಾಮಾನ್ಯವಾಗಿ ಹೆರಿಗೆ ನೋವು ಸಹಜ ನೋವಿನ ಹತ್ತರಷ್ಟಿರುತ್ತದೆ. ಹೆರಿಗೆ ವಾರ್ಡ್^ನಲ್ಲಿ ಚೀರಾಟ ಗೋಳಾಟಗಳು ಕೇಳುವುದಿದೆ. ಒಮ್ಮೆ ಮಗು ಹೊರ ಬಂದು ಯಾವಾಗ ಮುಕ್ತಿಯೋ ಎಂಬ ಭಾವ ತಾಯಿಯಲ್ಲಿ ಹುಟ್ಟಿದರೆ ಆಶ್ಚರ್ಯವಿಲ್ಲ. ಇತರ ಕೃತಕ ವಿಧಾನಗಳಿಗಿಂತ ಇದು ಮೇಲು ಎಂಬುದಷ್ಟೇ ಹೆಗ್ಗಳಿಕೆ.

ನುರಿತ ವೈದ್ಯರು, ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವ ತಾಯಿ, ಜತೆಗೆ ಎಲ್ಲವನ್ನೂ ನಿಭಾಯಿಸಿ ಭರವಸೆ ನೀಡುವ ಕುಟುಂಬ, ಸ್ನೇಹಿತರು, ಸೌಜನ್ಯದಿಂದ ವರ್ತಿಸಿ ಸಹಾನುಭೂತಿ ತೋರಿಸಬಲ್ಲ ಆಸ್ಪತ್ರೆ ಸಿಬ್ಬಂದಿ ಎಲ್ಲವೂ ಮುಖ್ಯವೇ. ಇದಷ್ಟೂ ಸಿಕ್ಕಿ ಆರೋಗ್ಯವೂ ಸಹಕರಿಸುವ ಹಾಗಿದ್ದರೆ ಆಕೆ ಅದೃಷ್ಟವಂತೆಯೇ ಸರಿ. ಪುನರ್ಜನ್ಮ ಕೂಡ ಖುಷಿಯ ನಿರೀಕ್ಷೆಯೇ ಹೌದು.

Leave a Reply