ಆಧುನಿಕ  ಭಗಿರಥ , ಭಗವತಿ ಅಗರವಾಲ್!

ರಂಗಸ್ವಾಮಿ ಮೂಕನಹಳ್ಳಿ

ರಾಜಸ್ತಾನ ದೇಶದಲ್ಲೇ ಹೆಚ್ಚು ಒಣ ಪ್ರದೇಶ ಹೊಂದಿದೆ. ಅಂತರ್ಜಲ ಮಟ್ಟ ಕುಸಿದು ಮಹಿಳೆಯರು ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ಬಿಸಿಲಿನಲ್ಲಿ ನಡೆಯಬೇಕಾದ ಸ್ಥಿತಿ. ಬದುಕು ದುಸ್ತರವಾಗಿ ಇನ್ನೇನು ಗತಿ ಅನ್ನುವಾಗ ದೇವರಂತೆ ಬಂದವರು ಭಗವತಿ ಅಗರವಾಲ್.
ಭಗವತಿ ಅಗರವಾಲ್ ಹುಟ್ಟಿದ್ದು ರಾಜಸ್ತಾನದಲ್ಲಿ. ಲಕ್ಷಾಂತರ ಭಾರತೀಯರಂತೆ ಅಮೆರಿಕ ಪಾಲಾಗಿ ಕಾರ್ಪೊರೇಟ್ ವರ್ಲ್ಡ್ ನಲ್ಲಿ ದುಡಿತ. 2006 ರಲ್ಲಿ ಅವರು ದುಡಿಯುತ್ತಿದ್ದ ಕಂಪನಿ ದಿವಾಳಿಯಾಗುತ್ತದೆ. ಆಗ ರಾಜಸ್ತಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ಬಯಕೆ ಮನಸ್ಸಿನಲ್ಲಿ ಮೂಡಿ ಭಾರತಕ್ಕೆ ವಾಪಸ್ಸು ಬರುತ್ತಾರೆ.
ನಂತರ ನಡೆದದ್ದು ಯಾವ ಚಲನ ಚಿತ್ರಕ್ಕೂ ಕಮ್ಮಿಯಿಲ್ಲ. ‘ಆಕಾಶ ಗಂಗಾ ‘ ಎನ್ನುವ ಯೋಜನೆ ಸಿದ್ಧಪಡಿಸಿ, ಮಳೆ ನೀರನ್ನು ಹಿಡಿದಿಡುವ ಕಾರ್ಯಕ್ಕೆ ಅಣಿಗೊಳ್ಳುತ್ತಾರೆ. ಪಬ್ಲಿಕ್ ಹಾಗು ಪ್ರೈವೇಟ್ ಸಹಭಾಗಿತ್ವದಲ್ಲಿ ಈ ಯೋಜನೆ ನಡೆದು ಬಂದಿದೆ. ಮನೆ ಮನೆ ಯ ಮಹಡಿ, ನೆಲ ಮಾಳಿಗೆ ಹೀಗೆ ಎಲ್ಲಿ ಸಾಧ್ಯವೋ ಅಲ್ಲಿ ನೀರನ್ನು ಸಂಗ್ರಹಿಸಿ ಇಡುತ್ತಾರೆ. ಮಾನ್ಸೂನ್ ನಲ್ಲಿ ಬರುವ ಮಳೆ ನೀರನ್ನು ಹಿಡಿದಿಟ್ಟು, ಕುಡಿಯಲು ಹಾಗೂ ಇತರ ಕೆಲಸಕ್ಕೆ ಎಂದು ವಿಂಗಡಿಸಿಸುತ್ತಾರೆ. ನೀರು ಸಂಗ್ರಹಿಸಲು ಜಾಗ ಕೊಟ್ಟವರಿಗೆ ನೀರು ಸರಬರಾಜು ಆಗುತ್ತದೆ. ಉಳಿದ ನೀರು ಪೈಪುಗಳ ಮೂಲಕ ಹಳ್ಳಿಯ ಮನೆ ಮನೆಗೆ ತಲುಪುತ್ತದೆ. ವರ್ಷಪೂರ್ತಿ ಪ್ರತಿದಿನ 2.5 ಗ್ಯಾಲನ್ ನೀರು ಪ್ರತಿ ವ್ಯಕ್ತಿಗೆ ತಲುಪಿಸುವುದಕ್ಕೆ ತಗಲುವ ವೆಚ್ಚ  ಎರಡು ಅಮೆರಿಕನ್ ಡಾಲರ್. ಅಂದರೆ ವರ್ಷಕ್ಕೆ  135 ರೂಪಾಯಿಗಳು.
ರಾಜಸ್ತಾನದ ವಾಯುವ್ಯ ದಲ್ಲಿಚ್ಚಪೋಲಿ ಎನ್ನುವ ಗ್ರಾಮದಲ್ಲಿ ಜನಿಸಿದ ಭಗವತಿ ಅಗರವಾಲ್ ಅವರ ಬದುಕು ಅಂದಿನ ದಿನಗಳಲ್ಲಿ ಬಹುತೇಕ ಭಾರತೀಯರಂತೆ ಬವಣೆಯ ಬದುಕು. ‘ವಿಜ್ಞಾನ ಪುಸ್ತಕ ಕೊಳ್ಳಲು ಹಣವಿಲ್ಲದೆ, ಶಾಲೆಯಲ್ಲಿ ಕೂತು ಇಡೀ ಪುಸ್ತಕವನ್ನು ಬರೆದು ಕೊಳ್ಳುತ್ತಿದ್ದೆ. ನನ್ನ ಬವಣೆ ನೋಡಿ ಗುರುಗಳೊಬ್ಬರು ಪುಸ್ತಕ ಎರವಲು ನೀಡಿದ್ದರು. ಅವರಿಗೆ ನಾನು ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಮೊದಲ ಹತ್ತರಲ್ಲಿ ಸ್ಥಾನ ಪಡೆಯುತ್ತೇನೆ’ ಎಂದು ವಚನ ಕೊಟ್ಟಿದ್ದೆ. ದೈವದ ಕೃಪೆಯಿಂದ ಅವರಿಗೆ ಕೊಟ್ಟ ಮಾತು ಉಳಿಸಿಕೊಂಡೆ. ಎರಡು ಹೊತ್ತಿನ ಊಟ ಸಿಕ್ಕರೆ ಅದೇ ನಮ್ಮ ಪಾಲಿಗೆ ಹಬ್ಬ’ ಎಂದು ಹಳೆಯ ಮೆಲುಕು ಹಾಕುತ್ತ, ‘ಮಳೆ ನೀರನ್ನು ಹಿಡಿದಿಡುವ ಈ ಕಾರ್ಯ 600 ವರ್ಷಕ್ಕೂ ಮುಂಚೆಯೇ ಭಾರತದಲ್ಲಿ ಅಸ್ತಿತ್ವದಲ್ಲಿ ಇತ್ತು. ಅದಕ್ಕೆ ನೂತನ ತಂತ್ರಜ್ಞಾನ ಅಳವಡಿಸಿದ್ದೇವೆ ಅಷ್ಟೇ’ ಎಂದು ತಮ್ಮದೇನೂ ಹೆಚ್ಚುಗಾರಿಕೆ ಇಲ್ಲ ಎನ್ನುವ ಭಾವನೆ ವ್ಯಕ್ತಪಡಿಸುವ ಭಗವತಿ ಅಗರವಾಲ್ ಅವರಿಗೆ 71 ವರ್ಷ. ‘ನಾನು ಎಷ್ಟು ವರ್ಷ ಬದುಕಬಹುದು? ಎಂಬತ್ತು? ನನ್ನ ಬಳಿ ಹೆಚ್ಚು ಸಮಯವಿಲ್ಲ. ಹುಸೇನ್ ಬೋಲ್ಟ್ ಮಾದರಿಯಲ್ಲಿ ನಾನು ಓಡಬೇಕಿದೆ, ಹೆಚ್ಚು ಜನರಿಗೆ ಸಹಾಯ ಮಾಡಬೇಕಿದೆ’  ಎನ್ನುವ  ಇವರು ‘ಸಸ್ಟೈನ್ಬಲ್ ಇನ್ನೋವೇಶನ್ಸ್’  ಎನ್ನುವ ಲಾಭರಹಿತ ಸಂಘಟನೆ  ಮೂಲಕ ರಾಜಸ್ತಾನದ ಆರು ಹಳ್ಳಿಯ 10 ಸಾವಿರಕ್ಕೂ ಹೆಚ್ಚು ಜನರಿಗೆ ನೀರು ಪೂರೈಕೆ ಮಾಡಿದ್ದಾರೆ.
ನೀರಿಗಾಗಿ ಗಂಟೆ ಅಲೆಯುವುದು ತಪ್ಪಿ ಜನರ ಒಟ್ಟು ಜೀವನ ಮೌಲ್ಯ ಸುಧಾರಿಸಿದೆ. ಇವರ ಕೆಲಸವನ್ನು ಗುರುತಿಸಿ 2012ರಲ್ಲಿ ಪರ್ಪಸ್ ಪ್ರೈಸ್ ದೊರಕಿದೆ. ೨೦೧೫ ರ’  cnn  ಟಾಪ್ ಟೆನ್ ಹೀರೋಸ್ ‘ ರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ.
ಇವರ  ‘ಸಸ್ಟೈನ್ಬಲ್ ಇನ್ನೋವೇಶನ್ಸ್’  ಜೊತೆ ಗುರುತಿಸಿಕೊಳ್ಳಲು, ಕೆಲಸ ಮಾಡಲು, ಚೀನಾ, ಅಮೆರಿಕ ಮುಂತಾದ ದೇಶಗಳು ಮುಂದೆ ಬಂದಿವೆ. ಇವರ ಯೋಜನೆಗೆ ಭಾರತ ಮತ್ತು ಅಮೆರಿಕ ಸರ್ಕಾರಗಳು ಹಣ ಸಹಾಯವನ್ನು ಒದಗಿಸಿವೆ.
‘ನಮ್ಮ ಸಂಸ್ಕೃತಿ ಹೇಳುವುದು ಒಂದೇ. ನಿನ್ನ ಹೊಟ್ಟೆ ತುಂಬಿದ ನಂತರ ಇನ್ನೊಬ್ಬರ ಹೊಟ್ಟೆ ತುಂಬಿಸುವ ಕಾರ್ಯ ಮಾಡು. ನನ್ನ ಎಲ್ಲಾ ಜವಾಬ್ದಾರಿ ಮುಗಿದಿದೆ. ಮಕ್ಕಳು ಅವರ ದಾರಿ ಅವರು ಹುಡುಕಿ ಕೊಂಡಿದ್ದಾರೆ. ನನ್ನ ಉಳಿದ ಸಮಯ ಸಮಾಜಕ್ಕೆ’  ಎನ್ನುವ ಭಗವತಿ ಅಗರವಾಲ್ ಅವರ ಮುಖದಲ್ಲಿ ಕಾಣುವ ಆತ್ಮತೃಪ್ತಿ, ದೈವೀ ಕಳೆ ನೀವೇ ನೋಡಿ!

(ಚಿತ್ರ ಮತ್ತು ವಿಡಿಯೋ ಕೃಪೆ- ಸಿಎನ್ ಎನ್)

Leave a Reply