ಗುರುತ್ವಾಕರ್ಷಣ ಅಲೆ ಪತ್ತೆ, ಇಲ್ಲೂ ಇದೆ ಭಾರತೀಯ ವಿಜ್ಞಾನಿಗಳ ಗುರುತರ ಪಾತ್ರ

ಡಿಜಿಟಲ್ ಕನ್ನಡ ಟೀಮ್

ತಂತ್ರಜ್ಞಾನ ವಲಯದ ಮೈಕ್ರೋಸಾಫ್ಟ್, ಗೂಗಲ್ ಗಳನ್ನು ಭಾರತೀಯರೇ ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ ಅಂತ ನಾವೆಲ್ಲ ಹೆಮ್ಮೆಪಡುತ್ತೇವೆ. ಪಿಚ್ಚೈ, ನಾಡೆಲ್ಲ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ ಗೊತ್ತಿರಲಿ, ವಿಜ್ಞಾನ ಕ್ಷೇತ್ರದಲ್ಲೂ ಭಾರತೀಯರ ಛಾಪು ಇದ್ದೇ ಇದೆ.

ಶತಮಾನದ ಹಿಂದೆ ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಮಂಡಿಸಿದ ಗುರುತ್ವಾಕರ್ಷಣ ಸಿದ್ಧಾಂತವನ್ನು ಈಗ ವಿಜ್ಞಾನಿಗಳ ತಂಡ ಪ್ರಯೋಗಾತ್ಮಕವಾಗಿ ಸಾಬೀತು ಪಡಿಸಿರುವುದು ನಿಮಗೆಲ್ಲ ತಿಳಿದಿರುವ ಸಂಗತಿ. ಈ ಸಾಧನೆಯಲ್ಲಿ ಭಾರತೀಯ ಮೂಲಕ ವಿಜ್ಞಾನಿಗಳ ಪಾತ್ರವೂ ಇರುವುದು ಹೆಮ್ಮೆಪಡಬೇಕಾಗ ವಿಷಯ.

ಹೌದು, ಈ ಹೊಸ ಆವಿಷ್ಕಾರ ಪ್ರಕ್ರಿಯೆಯಲ್ಲಿ ಭಾರತೀಯ ವಿಜ್ಞಾನಿಗಳು ಭಾಗಿಯಾಗಿರುವ ಸಂಖ್ಯೆ ತಿಳಿದರೆ ನಿಮ್ಮೆಲ್ಲರ ಹುಬ್ಬೇರಬಹುದು. ಕಾರಣ, ಗುರುತ್ವಾಕರ್ಷಣೆ ಅಲೆಗಳ ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಭಾರತದ ಒಂಬತ್ತು ವಿವಿಧ ವಿಜ್ಞಾನ ಸಂಸ್ಥೆಗಳಿಂದ ಒಟ್ಟು 60 ವಿಜ್ಞಾನಿಗಳು ಭಾಗಿಯಾಗಿದ್ದಾರೆ.

ವಿಶ್ವ ಮಟ್ಟದ ಯಾವುದೇ ಕ್ಷೇತ್ರದ ಆವಿಷ್ಕಾರದಲ್ಲಿ ಭಾರತೀಯರ ಕೊಡುಗೆ ಗಣನೀಯ ಪ್ರಮಾಣದಲ್ಲಿರುವುದು ನಮ್ಮ ಮುಂದೆ ಕಾಣಸಿಗುತ್ತಿದೆ. ಗುರುತ್ವಾಕರ್ಷಣ ಅಲೆಯ ಪತ್ತೆ ಹಚ್ಚಿದ ವಿಜ್ಞಾನಿಗಳ ತಂಡದಲ್ಲಿ ನಾಲ್ವರು ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ. ಅವರೇ, ಆನಂದ್ ಸೇನ್ ಗುಪ್ತಾ, ಅರ್ಚನಾ ಪೈ, ಪರಮೇಶ್ವರನ್ ಅಜಿತ್ ಮತ್ತು ಸಂಜೀವ್ ದುರಂಧರ್.

ಸಂಜೀವ್ ದುರಂಧರ್ (64) ಬೆಂಗಳೂರಿನಲ್ಲಿ ತಮ್ಮ ಪಿ ಎಚ್ ಡಿ ಪದವಿ ಮುಗಿಸಿದ್ದು, ಪುಣೆಯ ಐಯುಸಿಎಎನಲ್ಲಿ ಎಮೆರಿಟಸ್ ಪ್ರೊಫೆಸರ್ ಸಹ ಆಗಿದ್ದಾರೆ. ಅಜಿತ್ ಪರಮೇಶ್ವರನ್ (35) ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನ ಫಂಡಮೆಂಟಲ್ ರಿಸರ್ಚ್ ಮತ್ತು ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸೈನ್ಸ್ ನಲ್ಲಿ ಆಸ್ಟ್ರೋಫಿಸಿಕಲ್ ರಿಲೇಟಿವ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆನಂದ್ ಸೇನ್ ಗುಪ್ತಾ (40), ಗಾಂಧಿನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರ ಶಿಕ್ಷಕರಾಗಿದ್ದಾರೆ. ಅರ್ಚನಾ ಪೈ (42), ತಿರುವನಂತಪುರಂನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ರಿಸರ್ಚ್ ಮತ್ತು ಎಜುಕೇಶನ್ ನಲ್ಲಿ ಭೌತಶಾಸ್ತ್ರ ಶಿಕ್ಷಕಿಯಾಗಿದ್ದಾರೆ.

ವಿಜ್ಞಾನ ಕ್ಷೇತ್ರವೆಂದರೆ ಹಾಗೆಯೇ. ಅಲ್ಲಿ ಸದ್ದುಗದ್ದಲವಿಲ್ಲದ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಗುರುತ್ವಾಕರ್ಷಣದ ವಿಷಯವನ್ನೇ ತೆಗೆದುಕೊಂಡರೂ ಪ್ರತಿಷ್ಠಿತ ‘ಫಿಸಿಕಲ್ ರಿವ್ಯೂ ಲೆಟರ್’ನಲ್ಲಿ ಮಂಡನೆಯಾಗಿರುವ ಪ್ರಬಂಧಕ್ಕೆ 37 ಮಂದಿ ಭಾರತೀಯ ವಿಜ್ಞಾನಿಗಳು ಕೊಡುಗೆ ಸಲ್ಲಿಸಿದ್ದಾರೆ.

Leave a Reply