ತಗಳ್ರಪಾ… ಭಾರತಕ್ಕೊಂದು ನಂಬರ್ 1 ಪಟ್ಟ ಸಿಕ್ಕಿದೆ, ಸೆಲ್ಫಿ ಹುಚ್ಚಲ್ಲಿ ಪ್ರಾಣ ಕಳೆದುಕೊಂಡವ್ರಲ್ಲಿ ನಮ್ಮವರೇ ಹೆಚ್ಚು!

ಡಿಜಿಟಲ್ ಕನ್ನಡ ಟೀಮ್

ಪ್ರಸ್ತುತ ಯುವ ಜನಾಂಗದ ಟ್ರೆಂಡ್ ಆಗಿರುವ ಸೆಲ್ಫಿ ವಿಶ್ವವ್ಯಾಪಿ ಚಾಲ್ತಿಯಲ್ಲಿರುವ ಅಭ್ಯಾಸ. ಹುಡುಗರು ಹುಡುಗಿಯರೆನ್ನದೇ, ವಯಸ್ಸಿನ ವ್ಯಾತ್ಯಾಸ ಇಲ್ಲದೇ, ಶಾಲಾ ಮಕ್ಕಳಿಂದ ಹಿಡಿದು, ಕಾಲೇಜು ವಿದ್ಯಾರ್ಥಿಗಳು ಸೆಲೆಬ್ರಿಟಿಗಳು, ಹೀಗೆ ಪ್ರತಿಯೊಬ್ಬರು ಸೆಲ್ಫಿಗೆ ಪೋಸು ಕೊಟ್ಟಿರೋರೆ. ಈ ಸೆಲ್ಫಿ ಎಷ್ಟು ಪ್ರಭಾವ ಬೀರುತ್ತಿದೆ ಎಂದರೆ, ಪಾರ್ಕ್ ಇರಲಿ, ಟ್ರಾಫಿಕ್ ಸಿಗ್ನಲ್ ಇರಲಿ, ಬಸ್ ಇರಲಿ, ಬಾತ್ ರೂಮ್ ಇರಲಿ, ಕಂಡಕಂಡಲ್ಲಿ ತಮ್ಮ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವ ಗೀಳು ಹೆಚ್ಚಾಗುತ್ತಿದೆ. ಈ ಗೀಳು ಈಗ ಸಾವಿಗೆ ಒಂದು ಹೊಸ ದಾರಿಯನ್ನು ಮಾಡಿಕೊಟ್ಟಿದೆ ಎಂದರೆ ನೀವು ನಂಬಲೇಬೇಕು.

ಶುಕ್ರವಾರ ಮಂಡ್ಯದಲ್ಲಿ ಬೆಂಗಳೂರಿನ ಇಬ್ಬರು ಹಾಗೂ ತುಮಕೂರಿನ ಒಬ್ಬ ಯುವಕರು ಬಲಿಯಾಗಿರುವುದು ತಾಜಾ ಉದಾಹರಣೆ. ಮಂಡ್ಯದ ಮಿಮ್ಸ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷ 5 ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ನಾಲೆಯಲ್ಲಿ ಇಳಿದಿದ್ದರು. ಆ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಶೃತಿ(22), ಜೀವನ್ (22) ಮತ್ತು ಗಿರೀಶ್ (23) ಎಂಬುವವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಇತ್ತೀಚೆಗೆ ಸೆಲ್ಫಿ ತೆಗೆದುಕೊಳ್ಳುವ ತವಕದಲ್ಲಿ ಅನಾಹುತಕ್ಕೆ ಬಲಿಯಾಗಿರುವವರ ಸಂಖ್ಯೆ ಒಂದೆರಡಲ್ಲ. ವ್ಯಕ್ತಿಯೊಬ್ಬ ಮರದ ಮೇಲಿರುವ ಹಾವಿನ ಜತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರ ಫೇಸ್ ಬುಕ್ ನಲ್ಲಿ ಸಾಕಷ್ಟು ಹರಿದಾಡಿದ್ದನ್ನು ನೀವೇ ನೋಡಿದ್ದೀರಿ. ಹೀಗೆ ಸೆಲ್ಫಿ ತೆಗೆಯಲು ಹುಚ್ಚು ಸಾಹಸಗಳಿಗೆ ಮುಂದಾಗಿ ಪ್ರಾಣ ಬಿಟ್ಟವರ ಸಂಖ್ಯೆ ಹೆಚ್ಚಾಗಿದೆ. ಕಳೆದ 14 ತಿಂಗಳಲ್ಲಿ ಬರೊಬ್ಬರಿ 32. ಕಳೆದ ವರ್ಷ ಸಮುದ್ರದಲ್ಲಿ ಶಾರ್ಕ್ ದಾಳಿಗೆ ಬಲಿಯಾದವರ ಸಂಖ್ಯೆ 8. ಈ ಅರ್ಥದಲ್ಲಿ ಶಾರ್ಕ್ ದಾಳಿಗಿಂತ ಸೆಲ್ಫಿಯೇ ಡೆಡ್ಲಿ!

ಈ ಸಾವಿನ ಅಂಕಿ ಅಂಶಗಳಲ್ಲಿ ದೇಶವಾರು ವಿಂಗಡಣೆ ಮಾಡಿದರೆ, ಅಗ್ರ ಸ್ಥಾನದಲ್ಲಿ ನಿಲ್ಲುವುದು ಭಾರತ. ಅಚ್ಚರಿಯಾಯ್ತೇ? ಕಳೆದ ತಿಂಗಳು ಚೆನ್ನೈನಲ್ಲಿ ದಿನೇಶ್ ಕುಮಾರ್ ಎಂಬಾತ ರೈಲು ಹೋಗುವಾಗ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ರೈಲಿಗೆ ಸಿಕ್ಕಿ ಸತ್ತರೆ, ಜ.18ರಂದು ಮಧ್ಯಪ್ರದೇಶದಲ್ಲಿ ಅಮಿತ್ ಮತ್ತು ಕಮಲ್ ಎಂಬ ಯುವಕರು ಓಂಕಾರೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದಾಗ, ಸೆಲ್ಫಿ ತೆಗೆಯುವಾಗ ನದಿಗೆ ಜಾರಿ ಬಿದ್ದು ಸತ್ತ ಪ್ರಕರಣ ನಿಮ್ಮೆಲ್ಲರಿಗೂ ನೆನಪಿರಬಹುದು. ಭಾರತದಲ್ಲಿ ಸೆಲ್ಫಿ ತೆಗೆಯುವ ವೇಳೆ ಸತ್ತವರ ಸಂಖ್ಯೆ 16 ಅಂದರೆ, ಸಿಕ್ಕಿರುವ ಅಂಕಿಅಂಶಗಳ ಅರ್ಧದಷ್ಟು ಪ್ರಕರಣ ಭಾರತದಲ್ಲಿನಡೆದಿವೆ. ರಷ್ಯಾದಲ್ಲಿ 5 ಪ್ರಕರಣಗಳು, ಸ್ಪೇನ್ ನಲ್ಲಿ 2, ರೊಮೇನಿಯಾ, ಜಪಾನ್, ಇಂಡೊನೇಷ್ಯಾ ಸಿಂಗಾಪುರ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಲಾ 1, ಉಳಿದ ಕಡೆ 4 ಪ್ರಕರಣಗಳಿವೆ.

selfie1

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಈ 32 ಸಾವಿನ ಪ್ರಕರಣಗಳಲ್ಲಿ11 ಮಂದಿ ನೀರಿನ ಮೇಲೆ ಪ್ರಯಾಣ ಮಾಡುವಾಗ ಸೆಲ್ಫಿ ತೆಗೆಯುವಾಗ, 9 ಜನ ದೊಡ್ಡ ಕಟ್ಟಡ, ಬೆಟ್ಟ ಹಾಗೂ ಎತ್ತರ ಪ್ರದೇಶದಲ್ಲಿ ಸೆಲ್ಫಿ ತೆಗೆಯುವಾಗ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. 5 ಮಂದಿ ರೈಲು ಹರಿದು ಸತ್ತರೆ, ಸೆಲ್ಫಿ ತೆಗೆದುವಾಗ ವಿದ್ಯುತ್ ಸ್ಪರ್ಶಕ್ಕೆ ಮೂವರ ಬಲಿಯಾಗಿದ್ದಾರೆ. ಇಬ್ಬರು ಸ್ಫೋಟಕ ವಸ್ತುವನ್ನು ಕೈಯಲ್ಲಿಡಿದು ಸೆಲ್ಫಿ ತೆಗೆದುಕೊಳ್ಳುವಾಗ, ಒಬ್ಬ ಅಪಘಾತಕ್ಕೆ ಮತ್ತೊಬ್ಬ ಗೂಳಿ ತಿವಿತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ಈ ರೀತಿಯಾದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಕಡೆ ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ. ಆ ಪೈಕಿ ನಮಗೆ ಸಿಗುವ ಉದಾಹರಣೆಗಳು ಹೀಗಿವೆ.

  • ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ನಾಸಿಕ್ ಕುಂಬ ಮೇಳೆದ ಸಂದರ್ಭದಲ್ಲಿನ ನಿಷೇಧ
  • ಕ್ಯಾಲಿಫೋರ್ನಿಯಾದ ಲೇಕ್ ಥೋಯ್ ನಲ್ಲಿ ಪ್ರವಾಸಿಗರಿಗೆ ಸೆಲ್ಫಿ ಅವಕಾಶವಿಲ್ಲ
  • ಇನ್ನು ಹಲವು ದೇಶಗಳಲ್ಲಿ ಹೆಚ್ಚು ಜನ ಸೇರಿರುವಾಗ ಅಂದರೆ, ಸ್ಪೇನ್ ನ ಪಂಪ್ಲೊನಾದಲ್ಲಿ ನಡೆಯುವ ಗೂಳಿಗಳ ಓಟ, ಅಮೆರಿಕದ ಕೆಂಟುಕಿ ಡರ್ಬಿ ರೇಸ್, ಕೌಚೆಲ್ಲಾ ಮ್ಯೂಸಿಕ್ ಫೆಸ್ಟಿವಲ್ ಸೇರಿದಂತೆ ಇತರೆ ಸಂದರ್ಭದಲ್ಲಿ ಸೆಲ್ಫಿಗೆ ನಿಷೇಧ ಹೇರಲಾಗಿದೆ.
  • ಫ್ರಾನ್ಸ್ ನ ವರ್ಸಲೈಸ್ ನಲ್ಲಿರುವ ಡಿಸ್ನಿ ವರ್ಲ್ಡ್ ಪ್ಯಾಲೆಸ್ ಮತ್ತು ರೋಮ್ ನ ಖ್ಯಾತ ಪ್ರವಾಸಿ ತಾಣ ಕೊಲೊಸಿಯಮ್ ನಲ್ಲಿ ಸೆಲ್ಫಿ ಸ್ಟಿಕ್ ಗಳಿಗೆ ನಿರ್ಬಂಧವಿದೆ.

ಮಾನಸಿಕ ಅಸ್ವಸ್ಥತೆಗೆ ದಾರಿ: ಕಳೆದ ವರ್ಷ ವಿಶ್ವ ಮಾನಸಿಕ ಆರೋಗ್ಯ ದಿನವಾದ ಅಕ್ಟೋಬರ್ 10ರ ಸಂದರ್ಭದಲ್ಲಿ ಅಮೆರಿಕ ಮನಶಾಸ್ತ್ರ ಸಂಸ್ಥೆ (ಎಪಿಎ), ಈ ಸೆಲ್ಫಿ ಹೆಚ್ಚಾಗಿ ತೆಗೆಯುತ್ತಿದ್ದರೆ, ಮಾನಸಿಕ ಅಸ್ವಸ್ಥತೆಗೆ ಕಾರಣವಾಗಲಿದೆ ಎಂದು ತಿಳಿಸಿತ್ತು. ಮುಂಬೈನ ಕೊಲಾಬಾ ಪ್ರದೇಶದಲ್ಲಿ ಕಳೆದ ವರ್ಷ 18ರ ಪ್ರಾಯದ ಯುವತಿಯೊಬ್ಬಳು ಪ್ರತಿ ದಿನ ಫೋನ್ ನಲ್ಲೇ ಹೆಚ್ಚು ಕಾಲಕಳೆಯುತ್ತಾಳೆ ಎಂದು ಆಕೆಯ ಪೋಷಕರು ಮನೋತಜ್ಞರ ಬಳಿ ಕರೆದೊಯ್ದರು. ಆಗ ವೈದ್ಯರು ಕೌನ್ಸೆಲಿಂಗ್ ಮಾಡಿದಾಗ ಈಕೆ ಸಾಮಾಜಿಕ ತಾಣಕ್ಕೆ ಅಪ್ ಲೋಡ್ ಮಾಡಲೆಂದೇ, ದಿನಕ್ಕೆ 7-8 ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು ಎಂಬ ಮಾಹಿತಿ ಲಭಿಸಿತ್ತು.

Leave a Reply