ವ್ಯಾಲಂಟೈನ್ ದಿನ ಹೇಗೆ ಆಚರಿಸೋದು ಅಂದ್ಕೊಳ್ತಿದೀರಾ? ತವರಿಗೆ ಮರಳುತ್ತಿರುವ ಈ ವೀರ ಮಹಿಳೆಯರಿಗೆ ಹೆಮ್ಮೆಯ ಸೆಲ್ಯೂಟ್ ಕೊಡಿ ಸಾಕು!

ಡಿಜಿಟಲ್ ಕನ್ನಡ ಟೀಮ್

ಫೆಬ್ರವರಿ ಹದಿನಾಲ್ಕಕ್ಕೆ ಅವರೆಲ್ಲ ಆಫ್ರಿಕಾ ಖಂಡದ ಮೂಲೆಯೊದರಲ್ಲಿರುವ ಲಿಬೆರಿಯಾ ಎಂಬ ದೇಶದಿಂದ ತವರು ನೆಲ ಭಾರತಕ್ಕೆ ಮರಳುತ್ತಿದ್ದಾರೆ. ಬರೋಬ್ಬರಿ 9 ವರ್ಷಗಳ ಹಿಂದೆ ಆ ನೆಲಕ್ಕೆ ಹೋಗಿದ್ದ ಅವರು, ಭಾನುವಾರದಂದು ಭಾರತಕ್ಕೆ ಮರಳುವುದಕ್ಕೆ ಸಿದ್ಧರಾಗುತ್ತಿರುವಾಗ ಇಡೀ ಜಗತ್ತೇ ಅವರನ್ನು ಹೊಗಳುತ್ತಿದೆ. ಕಾರಣ… ಯುದ್ಧಗ್ರಸ್ತ ಲಿಬೆರಿಯಾದಲ್ಲಿ ಶಾಂತಿ ಸ್ಥಾಪನೆಯ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಹೊರಡುತ್ತಿದ್ದಾರವರು. ಶಾಂತಿ ಸ್ಥಾಪಿಸುವುದೆಂದರೆ ಒಂದರ್ಥದಲ್ಲಿ ಪ್ರೀತಿ ಸ್ಥಾಪಿಸುವುದೇ ಅಲ್ಲವೇ?

ನಾವಿಲ್ಲಿ ಮಾತನಾಡುತ್ತಿರೋದು ಕಳೆದ 9 ವರ್ಷಗಳಿಂದ ಲಿಬೆರಿಯಾದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನೆ ಪಡೆಯ ಭಾಗವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದ ‘ಇಂಡಿಯನ್ ಫಾರ್ಮಡ್ ಪೊಲೀಸ್ ಯುನಿಟ್ (ಎಫ್ ಪಿ ಯು)’ ಎಂಬ 125 ಮಂದಿ ಭಾರತೀಯ ಮಹಿಳೆಯರ ಪಡೆಯ ಬಗ್ಗೆ. ಪ್ರತಿವರ್ಷ ತಂಡದ ಒಂದಿಷ್ಟು ಮಂದಿ ರೊಟೇಷನ್ ಪದ್ಧತಿಯಲ್ಲಿ ವರ್ಷದ ಅವಧಿಗೆ ಭಾರತದಲ್ಲಿದ್ದು ಹೋಗುತ್ತಿದ್ದದು ಬಿಟ್ಟರೆ, ಅಂತಃಕಲಹದಿಂದ ಬೆಂಡೆದ್ದು ಹೋಗಿದ್ದ ಲಿಬೆರಿಯಾವೇ ಅವರ ಮನೆಯಾಗಿತ್ತು.

1980ರ ದಶಕದ ಅಂತ್ಯದಲ್ಲಿ ಲಿಬೆರಿಯಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿತು. ನ್ಯಾಷನಲ್ ಪೆಟ್ರಿಯಾಟಿಕ್ ಫ್ರಂಟ್ ಆಫ್ ಲಿಬೆರಿಯಾ ಎಂಬ ಬಂಡುಕೋರ ಗುಂಪು ಗೀಚಿದ ಕಿಡಿ, ಇಡೀ ದೇಶವನ್ನೇ ಆವರಿಸಿಕೊಂಡು ವ್ಯವಸ್ಥೆ ಕುಸಿದುಬಿತ್ತು. ಅಲ್ಲಿಂದಲೂ ಅಂತಃಕಲಹಗಳೇ ಆ ದೇಶದ ದಿನಚರಿಯ ಭಾಗವಾಗಿಬಿಟ್ಟವು. ಬಂಡುಕೋರ ಗುಂಪುಗಳ ನಡುವೆಯೇ ಸಂಘರ್ಷಗಳು ಹೊತ್ತಿಕೊಂಡವು. 2003ರ ವೇಳೆಗೆ ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಧ್ವನಿಗಳೇಳತೊಡಗಿದವು. ವಿಶ್ವಸಂಸ್ಥೆಯ ಮಧ್ಯಪ್ರವೇಶದಲ್ಲಿ ಶಾಂತಿ ಸ್ಥಾಪನೆ ಪ್ರಯತ್ನ ಮೊದಲುಗೊಂಡಿತು.

2007ರಲ್ಲಿ ಭಾರತದಿಂದ ಇಂಡಿಯನ್ ಫಾರ್ಮಡ್ ಪೊಲೀಸ್ ಯುನಿಟ್ (ಎಫ್ ಪಿ ಯು)ನಿಂದ ಮಹಿಳಾ ಸೇನಾ ಪಡೆ ಶಾಂತಿ ಸ್ಥಾಪನೆಗಾಗಿ, ಅಲ್ಲಿನ ಭದ್ರತೆಗಾಗಿ ಕಾರ್ಯಾರಂಭ ಮಾಡಿತು. ಆ ಮೂಲಕ ವಿಶ್ವಸಂಸ್ಥೆಯ ಶಾಂತಿಪಾಲನೆ ಕಾರ್ಯಚರಣೆಯಲ್ಲಿ ಭಾಗವಹಿಸಿದ ಮೊಟ್ಟ ಮೊದಲು ಮಹಿಳಾ ತಂಡ ಎಂಬ ಹೆಗ್ಗಳಿಕೆಗೂ ಭಾಜನವಾಗಿದೆ.

ಕಳೆದ ವರ್ಷ ಈ ದೇಶದಲ್ಲಿ ಶಾಂತ ರೀತಿಯಲ್ಲಿ ಚುನಾವಣೆಯಾಗಿದ್ದು, ಎಲೆನ್ ಜಾನ್ಸನ್ ಸಿರ್ಲಿಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ವರ್ಷ ಜೂನ್ ವೇಳೆಗೆ ತನ್ನ ಪೂರ್ಣ ಪ್ರಮಾಣದ ಭದ್ರತಾ ಜವಾಬ್ದಾರಿಯನ್ನು ಏಕಾಂಗಿಯಾಗಿ ನಿಭಾಯಿಸುವಂತಹ ವಾತಾವರಣ ಲಿಬೆರಿಯಾದಲ್ಲಿ ನೆಲೆಗೊಂಡಿದೆ. ಹೀಗಾಗಿ ಭಾರತದ ಮಹಿಳಾ ಶಾಂತಿಪಾಲನೆ ಪಡೆ ಶಾಶ್ವತವಾಗಿ ಹಿಂತಿರುಗುತ್ತಿದೆ.

ಯುದ್ಧಗ್ರಸ್ತ ಪ್ರದೇಶದಲ್ಲಿ ಶಾಂತಿಪಾಲನೆ ಮಾಡುವುದು, ನೊಂದವರಿಗೆ ನೆರವಾಗುವುದು, ಕಷ್ಟದಲ್ಲಿರುವವರನ್ನು ರಕ್ಷಿಸುವುದು ಇವೆಲ್ಲ ತಮಾಷೆಯ ಮಾತೇನು? ಭಾರತದ ಹೆಮ್ಮೆಯ ಸಹೋದರಿಯರು ಈ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆಂಬುದಕ್ಕೆ ಲಿಬೆರಿಯಾ ಅಧ್ಯಕ್ಷರು, ವಿಶ್ವಸಂಸ್ಥೆ ಮುಖ್ಯಸ್ಥ ಬಾನಿ ಕಿ ಮೂನ್ ಪ್ರಶಂಸೆಗಳೇ ಸಾಕ್ಷಿ.

ಭಾರತ ಮಹಿಳಾ ಪಡೆಯನ್ನು ಬೀಳ್ಕೊಡುಗೆ ಮಾಡಿಕೊಡುವ ಸಂದರ್ಭದಲ್ಲಿ ಲಿಬೆರಿಯಾ ಅಧ್ಯಕ್ಷೆ ಎಲೆನ್ ಜಾನ್ಸನ್ ಸಿರ್ಲಿಫ್ ಏನೆಂದರು ಗೊತ್ತೇ? ‘ನಿಮ್ಮನ್ನು ಕುಟುಂಬವೆಂದೇ ಪರಿಗಣಿಸಿಬಿಟ್ಟಿದ್ದೇವೆ. ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನನ್ನ ಕೈಲೇನಾದರೂ ಇದ್ದಿದ್ದರೆ, ವಿಶ್ವಸಂಸ್ಥೆಯ ಶಾಂತಿಪಾಲನೆಯ ಇನ್ಯಾವುದಾದರೂ ಪಡೆ ಹಿಂತಿರುಗಲಿ; ಆದರೆ ಭಾರತದ ಮಹಿಳಾ ಪಡೆ ನಮ್ಮೊಂದಿಗೇ ಇರಲಿ ಅಂದುಬಿಡುತ್ತಿದ್ದೆ!’

ಇಂಥ ಪ್ರಶಂಸೆ ಸುಮ್ಮನೇ ಒಲಿದಿದ್ದಲ್ಲ. ಲಿಬೆರಿಯಾ ಮಹಿಳೆಯರ ಮೇಲೆ ಈ ತಂಡದ ಪ್ರಭಾವ ಹೆಚ್ಚಾಗಿಯೇ ಇದೆ. ಈ ಹಿಂದೆ ಲಿಬೆರಿಯಾ ದೇಶದ ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ.1ಕ್ಕಿಂತ ಕಡಿಮೆ ಇದ್ದದ್ದು, ಭಾರತ ಮಹಿಳಾ ಸೇನಾ ಪಡೆ ಕಾರ್ಯನಿರ್ವಹಿಸಿದ ನಂತರ ಶೇ.17ರಷ್ಟು ಹೆಚ್ಚಿದೆ.

‘ಎಬೊಲಾದಿಂದ ದೇಶ ತತ್ತರಿಸಿದ ಸಂದರ್ಭದಲ್ಲೂ ಭಾರತೀಯ ಮಹಿಳಾ ತಂಡದ ದಿಟ್ಟ ಕಾರ್ಯನಿರ್ವಹಣೆ, ವೃತ್ತಿಪರತೆ ಮತ್ತು ಶಿಸ್ತು ಗಮನಾರ್ಹ. ಈ ಧೈರ್ಯವಂತ ಮಹಿಳೆಯರು ಕೇವಲ ಲಿಬೆರಿಯಾ ಸರ್ಕಾರ ಮಾತ್ರವಲ್ಲ ಅಲ್ಲಿನ ಜನಸಾಮಾನ್ಯರ ಗೌರವವನ್ನು ಸಂಪಾದಿಸಿದ್ದಾರೆ’ ಎಂಬುದು ಯುಎನ್ ನ ಮುಖ್ಯಸ್ಥ ಬಾನ್ ಕೀ ಮೂನ್ ಪ್ರಶಂಸಾ ನುಡಿ.

liberia

ಲಿಬೆರಿಯಾದಲ್ಲಿ ಶಾಂತಿ ಸ್ಥಾಪನೆಯನ್ನಷ್ಟೇ ಅಲ್ಲ, ಬದುಕಿನ ಗ್ರಹಿಕೆಯನ್ನೇ ಬದಲಿಸಿ ಬಂದಿದ್ದಾರೆ ಈ ಹೆಮ್ಮೆಯ ವನಿತೆಯರು. ಪೋಲೀಸ್ ಸಮವಸ್ತ್ರದಲ್ಲಿ ನೋಡಬಹುದಾದದ್ದು ಗಂಡಸನ್ನು ಮಾತ್ರ ಎಂದುಕೊಂಡಿದ್ದ ದೇಶದಲ್ಲಿ ತಮ್ಮ ಕರ್ತವ್ಯದ ಮೂಲಕವೇ ಹೊಸದೊಂದು ಆತ್ಮಬಲವನ್ನು, ಸಾಧ್ಯತೆಯನ್ನು ಲಿಬೆರಿಯಾದ ಮಹಿಳಾ ಸಮುದಾಯದಲ್ಲಿ ತುಂಬಿ ಬಂದಿದ್ದಾರಿವರು.

ಶೌರ್ಯ- ಪ್ರೀತಿ ಎಂಬ ಪದಗಳಿಗೆ ಇನ್ನೆಲ್ಲೂ ಅರ್ಥ ಹುಡುಕಬೇಕಿಲ್ಲ. ಈ ಅಕ್ಕಂದಿರು- ಅಮ್ಮಂದಿರಲ್ಲೇ ಅದನ್ನು ಢಾಳಾಗಿ ಕಾಣಬಹುದು.

ಸೆಲ್ಯೂಟ್!

1 COMMENT

Leave a Reply