ಅಮೇಜಾನ್ ನ 3 ನಿಮಿಷಗಳ ವಿಡಿಯೋದಲ್ಲಿದೆ ಪ್ರೇಮದ ತಿರುಳು

ಡಿಜಿಟಲ್ ಕನ್ನಡ ಟೀಮ್

ಪ್ರೀತಿ ಅಂತಂದ್ರೆ ಯೌವನದಲ್ಲಿ ದಕ್ಕಿಸಿಕೊಳ್ಳಬೇಕಾದ, ಸುಖಿಸಬೇಕಾದ ಒಂದು ಅನುಭೂತಿ ಎಂದೇ ಹೆಚ್ಚಾಗಿ ಗ್ರಹಿಕೆಯಲ್ಲಿದೆ. ಸಿನಿಮಾ- ಟಿವಿಯಂಥ ಜನಪ್ರಿಯ ಮಾಧ್ಯಮವೂ ಸಾರೋದು ಇದನ್ನೇ.

ಪ್ರಪೋಸ್ ಮಾಡುವ, ಅವಳನ್ನೋ- ಆತನನ್ನೋ ತನ್ನ ಬದುಕಲ್ಲಿ ತಂದುಕೊಳ್ಳುವ ಗಳಿಗೆ ರೋಮಾಂಚಕವೇ ಹೌದು. ಆದರೆ ಪ್ರೀತಿ ಹಾಗೆ ಸಾಧಿಸಿ ನಿರಾಳವಾಗಿಬಿಡುವ ಗುರಿಯಲ್ಲ… ಅದೊಂದು ಯಾನ. ಪಡೆದ ಮೇಲೂ ನಿರಂತರ ಪೋಷಿಸಿಕೊಂಡಿರಬೇಕಾದ ಜೀವದ್ರವ್ಯ. ಇದನ್ನು ಅರ್ಥಮಾಡಿಕೊಳ್ಳುವವರ ಸಂಖ್ಯೆ ವಿರಳ.

ಇತ್ತೀಚೆಗೆ ಬಂದಿರುವ ಅಮೇಜಾನ್ ಅಂತರ್ಜಾಲ ವಹಿವಾಟು ಕಂಪನಿಯ ಜಾಹೀರಾತು ಮಾತ್ರ ಈ ವಿರಳ ಮಿಡಿತವನ್ನೇ ಕತೆಯಾಗಿಸಿ ಮೂರು ನಿಮಿಷದ ಅನನ್ಯ ಜಾಹೀರಾತು ವಿಡಿಯೋ ಒಂದನ್ನು ಪ್ರಸ್ತುತಪಡಿಸಿದೆ.

ಪ್ರೀತಿಯ ಅಭಿವ್ಯಕ್ತಿಗೆ ‘ಗಿಫ್ಟ್’ ಮಾನದಂಡವಾಗಿಸುವ ವ್ಯಾಪಾರಿ ದೃಷ್ಟಿಕೋನದ ಅಭಿವ್ಯಕ್ತಿ ಇಲ್ಲಿರೋದು ಹೌದು. ಎಷ್ಟೆಂದರೂ ಅದು ತನ್ನ ಸರಕುಗಳು ಮಾರಾಟವಾಗಲಿ ಅಂತಲೇ ಅಲ್ಲವೇ ಜಾಹೀರಾತು ಮಾಡಿರೋದು?

ಆದರೆ ಅದನ್ನು ಪಕ್ಕಕ್ಕಿಟ್ಟು ನೋಡಿದರೆ ಇದೊಂದು ಪ್ರೇಮಕವಿತೆ. ನೂರನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ವ್ಯಕ್ತಿ ತಾನು ಸಿಂಥಿಯಾಳನ್ನು ಭೇಟಿ ಆಗಿದ್ದು, ಸೇನೆಯಲ್ಲಿರೋದ್ರಿಂದ ಈತನಿಗೆ ಆಕೆಯನ್ನು ಮದುವೆ ಮಾಡಿಕೊಡುವುದಕ್ಕೆ ಆಕ್ಷೇಪ ಎದುರಾಗಿದ್ದು, ಆದರೂ ಪರಸ್ಪರ ಒಪ್ಪಿಗೆಯಿಂದ ವಿವಾಹವಾಗಿದ್ದು… ಎಲ್ಲದರ ಕತೆ ಹೇಳುತ್ತ ಹೋಗುತ್ತಾರೆ. ಗತಿಸಿರುವ ಆಕೆಯನ್ನು ಈಗಲೂ ನೆನಪು ಮಾಡಿಕೊಂಡು ಶುಭಾಶಯ ಪತ್ರವಿರಿಸಿ ಹಾಡು ಗುನುಗುವ ದೃಶ್ಯದೊಂದಿಗೆ ಜಾಹೀರಾತು ಕೊನೆಯಾಗುತ್ತದೆ.

Leave a Reply