ಪ್ರೀತಿ ಅಂದರೇನು ಎಂಬ ಪ್ರಶ್ನೆಗೆ ಯೋಧನೊಬ್ಬನ ಹೆಂಡತಿ ಏನುತ್ತರಿಸಿದಳು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

“ಪ್ರೀತಿ” ಅಂದರೆ ಏನು? ವ್ಯಾಲಂಟೈನ್ ದಿನದ ಗುಂಗಲ್ಲಿ ಹಲವರು ಹಲವು ರೀತಿ ಪುಂಖಾನುಪುಂಖ ವ್ಯಾಖ್ಯಾನ ನೀಡಬಹುದೇನೋ? ಆದರೆ, ಪ್ರೀತಿ ಅಂದರೇನು ಅಂತ ಫಾಕ್ಸ್ ನ್ಯೂಸ್.ಕಾಂ ತನ್ನ ಓದುಗರ ಪ್ರತಿಕ್ರಿಯೆ ಕೇಳಿದಾಗ, ಯೋಧನ ಮಡದಿಯೊಬ್ಬಳು ನಾಲ್ಕು ಸಾಲು ಬರೆದಳು. ಅದು ನಿಮ್ಮನ್ನು ಕವಿತೆಯ ಥರ ಕಾಡದಿದ್ದರೆ ಹೇಳಿ!

ಪ್ರೀತಿ ಅಂದರೆ ಏನು ಎಂಬ ಪ್ರಶ್ನೆ ಕೌತುಕದ್ದು. ವೈಯಕ್ತಿಕ ನೆಲೆಯಲ್ಲಿ ಇದಕ್ಕೆ ಉತ್ತರಿಸೋದು ನನ್ನ ಮಟ್ಟಿಗಂತೂ ಸುಲಭವಾಗಿದೆ ಈಗ. ನನ್ನ ಪತಿ ನೌಕಾಸೇನೆಯಲ್ಲಿ ನಾಲ್ಕನೇ ಬಾರಿ ದೂರಪ್ರದೇಶದ ಕರ್ತವ್ಯದಲ್ಲಿ ನಿಯೋಜನೆಗೊಂಡು ಮತ್ತೆ ವಾಪಸ್ಸಾಗುತ್ತಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನಿಂತು ನಿನ್ನ ನಾಲ್ಕು ಮುದ್ದು ಮಕ್ಕಳೊಂದಿಗೆ ವಿಮಾನ ಹತ್ತುವವರೆಗೆ ಮರೀನ್ ರನ್ನು ನೋಡುವುದು… ವಿಮಾನ ನಿರ್ಗಮಿಸುವವರೆಗೂ, ಆ ಸದ್ದು ಕೊನೆಯಾಗುವವರೆಗೂ ಆಗುವ ಮನಸ್ಸಿನ  ತಳಮಳವೇ ಪ್ರೀತಿ.

ಇವರು ತುಂಬಾ ಚಿಕ್ಕ ಮಕ್ಕಳಾಗಿರುವುದರಿಂದ ಇಸ್ಲಾಮಿಕ್ ಭಯೋತ್ಪಾದನೆ ಅಥವಾ ಇಸಿಸ್ ನ ಬಗ್ಗೆ ಅರ್ಥವಾಗುವುದಿಲ್ಲ. ಅವುಗಳ ಕುರಿತೇನೂ ಹೇಳದೇ ತಂದೆಯ ವಿದಾಯದ ಅವಶ್ಯವನ್ನು ಆ ಪುಟ್ಟ ಹೃದಯಗಳಿಗೆ ಘಾಸಿಯಾಗದಂತೆ ಮನದಟ್ಟುಗೊಳಿಸೋದೇ ಪ್ರೀತಿ.

ಆತ ಇನ್ನೊಂದು ವರ್ಷ ಕುಟುಂಬವನ್ನು ಹೇಗೆ ಬಿಟ್ಟಿರಲಿ ಅಂತ ಕಳವಳಗೊಳ್ಳುತ್ತಲೇ, ತಾನಲ್ಲದಿದ್ದರೆ ಮತ್ತೊಬ್ಬರಾದರೂ ಈ ಕರ್ತವ್ಯ ನೆರವೇರಿಸಲೇಬೇಕಲ್ಲ ಅಂತ ಯುದ್ಧಭೂಮಿಗೆ ಹೊರಟು ನಿಲ್ತಾನಲ್ಲ… ಅದೇ ಪ್ರೀತಿ.

ಮೊದಲ ಅಪ್ಪುಗೆ, ಮೊದಲ ಮುತ್ತು ನೆನಪಿಸಿಕೊಳ್ಳುತ್ತಿರುವಾಗಲೇ, ಮರಳಿಬಂದಾತನನ್ನು ನೋಡುತ್ತ 5 ವರ್ಷದ ಮಗು ‘ಇವನೇ ನನ್ನಪ್ಪನಾ’ ಅಂತ ಕೇಳುವಾಗ ‘ಮತ್ತೆ ನನ್ನ ಕುಟುಂಬ ಒಂದಾಗ್ತಿದೆಯಲ್ಲ’ ಅಂತ ಆನಂದಿಸೋದೇ ಪ್ರೀತಿ.

ಆತನಿಲ್ಲದೇ ನಾವು ಪರಿಪೂರ್ಣರಲ್ಲ ಎಂಬುದನ್ನು ಅರ್ಥಮಾಡಿಕೊಂಡು ಅವನನ್ನು ದೇವರ ಅಭಯಹಸ್ತವೊಂದು ನಿರಂತರ ಪೊರೆಯುತ್ತಿರುತ್ತದಲ್ಲ… ಅದುವೇ ಪ್ರೀತಿ.

ಒಂದು ಸಾರಿ ಪ್ರೀತಿ ಆವರಿಸಿಕೊಂಡ ನಂತರ ಅದನ್ನು ಸುಲಭಕ್ಕೆ ಪರಿಗಣಿಸಿಬಿಡುತ್ತೇವೆ. ಪ್ರೀತಿ ಹೇಗೆಂದರೂ ಇದ್ದಲ್ಲೇ ಇರುತ್ತದೆ ಅಂತ ನಿರಾಳರಾಗಿಬಿಡುತ್ತೇವೆ. ಹಾಗಲ್ಲದೇ ಅದನ್ನು ಕಳೆದುಕೊಳ್ಳುವ ಸಾಧ್ಯತೆಗಳ ಅರಿವೊಂದು ಮೂಡುತ್ತದೆಯಲ್ಲ… ನಾವು ಈ ಪ್ರೀತಿಯನ್ನು ಪಡೆಯಲು ಎಷ್ಟೆಲ್ಲ ಹೋರಾಡಿದೆವೆಂಬುದನ್ನು ನೆನಪಲ್ಲಿ ಇಟ್ಟುಕೊಳ್ಳುತ್ತಲೇ, ಇದನ್ನು ಕಳೆದುಕೊಳ್ಳೋದು ಸಹ ಕಷ್ಟದ್ದಲ್ಲ ಎಂಬ ಎಚ್ಚರಿಕೆಯಿಂದ ಇರೋದು..

ಆತನೊಂದಿಗೆ ಇದೇ ಕೊನೆಯ ದಿನವೇನೋ ಎಂಬಂತೆ ಪ್ರೀತಿಸಿ, ಆಗ ಸಣ್ಣ ಕಿರಿಕಿರಿಗಳೆಲ್ಲ ಹತ್ತಿರಕ್ಕೂ ಸುಳಿಯುವುದಿಲ್ಲ.

Leave a Reply