ಮೊರಾಕೊ ದೇಶದ ಈ ಸೌರಮಾದರಿ, ನಮಗೂ ತೋರಲಿ ಸಾಧ್ಯತೆಗಳ ದಾರಿ

ಡಿಜಿಟಲ್ ಕನ್ನಡ ಟೀಮ್

ಒಳ್ಳೆಯ ಸಂಗತಿಗಳು ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಸ್ವೀಕರಿಸಬೇಕು ಅಂತ ಈ ದೇಶದ ಹಿರಿಯರು ಅವೆಷ್ಟೋ ಸಹಸ್ರ ವರ್ಷಗಳ ಹಿಂದೆಯೇ ಹೇಳಿದ್ದಾರೆ. ಹೀಗಾಗಿ ನಾವು ಈ ಭಾನುವಾರ ಕುಳಿತಲ್ಲೇ, ಆಫ್ರಿಕಾದ ದೇಶ ಮೊರಾಕೊವನ್ನು ಜಾಲಾಡೋಣ, ಅಲ್ಲಿಂದ ಸೂಸುತ್ತಿರುವ ಅರಿವಿನ ಕಿರಣಗಳನ್ನು ನಮ್ಮ ಯೋಚನೆಗಳಲ್ಲೂ ಬಿಟ್ಟುಕೊಳ್ಳೋಣ.

ಮರುಭೂಮಿಗಳಿಂದ ಆವೃತವಾದ, ಜಗತ್ತಿನಲ್ಲಿ ಅತಿಹೆಚ್ಚು ಬಿಸಿಲ ಜಳಕ್ಕೆ ತೆರೆದುಕೊಂಡಿರುವ ದೇಶ ಮೊರಾಕೊ. ಆದರೆ ಪಕ್ಕದ ಅಲ್ಜೀರಿಯಾ, ಲಿಬಿಯಾಗಳಿಗಿರುವ ತೈಲದ ವರ ಈ ದೇಶಕ್ಕಿಲ್ಲ. ಜಾಗತಿಕ ಕಚ್ಚಾತೈಲ ಉತ್ಪಾದನೆಯಲ್ಲಿಮೇಲಿನ ಎರಡು ರಾಷ್ಟ್ರಗಳು ಕ್ರಮವಾಗಿ 15 ಮತ್ತು 27ನೇ ಕ್ರಮಾಂಕದಲ್ಲಿದ್ದರೆ, ಮೊರಾಕೊ 96ನೇ ಕ್ರಮಾಂಕದಲ್ಲಿದೆ. ಆದರೂ ಶಕ್ತಿ ಉತ್ಪಾದನೆಯಲ್ಲಿ ತಾನು ಹಿಂದುಳಿಯಬಾರದು ಅಂತ ನಿರ್ಧರಿಸಿದ ಮೊರಾಕೊ ಈಗ ಸೂರ್ಯನಿಗೆ ಸೌರಫಲಕಗಳ ಕೊಡೆ ಹಿಡಿದಿದೆ!

ಈವರೆಗೂ ತನಗೆ ಬೇಕಿದ್ದ ಶೇ.97ರಷ್ಟು ಶಕ್ತಿ ಸಂಪನ್ಮೂಲಕ್ಕೆ ಹೊರ ದೇಶಗಳ ಮೇಲೆ ಅವಲಂಬಿತವಾಗಿದ್ದ ಮೊರಾಕೊ, ಮರುಭೂಮಿಯಲ್ಲಿಅತಿಬೃಹತ್ ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ನಿರ್ಮಿಸುತ್ತ ಸ್ವಾವಲಂಬನೆಯ ಹೆಜ್ಜೆ ಇಟ್ಟಿದೆ. ಐದು ಘಟಕಗಳ ಪೈಕಿ ಮೊದಲ ಘಟಕವನ್ನು ಉದ್ಘಾಟಿಸಲಾಗಿದ್ದು, ಇಲ್ಲಿಂದ ದೊರೆಯಲಿರುವ ಶಕ್ತಿ 160 ಮೆಗಾವ್ಯಾಟ್ ಗಳು. 2018ರ ವೇಳೆಗೆ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಿರೀಕ್ಷೆ ಹೊಂದಲಾಗಿದೆ. ಸೌರಶಕ್ತಿ ಉತ್ಪಾದನೆಯ ಯೋಜನೆಗೆ ಮೊರಾಕೊ ಎಂಥ ವ್ಯಾಪಕ ಪ್ರಮಾಣದಲ್ಲಿ ಮುಂದಾಗಿದೆ ಅಂದರೆ, ಈ ವಲಯಗಳು ಅದರ ರಾಜಧಾನಿ ರಬಾಟದಷ್ಟು ದೊಡ್ಡದಾಗಿವೆ. ಆಫ್ರಿಕಾ ಖಂಡದ ಅತಿ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವೆನಿಸಿರುವ ಈ ಯೋಜನೆ ತನ್ನ ಎಲ್ಲ ಹಂತಗಳನ್ನು ಪೂರೈಸಿದಾಗ 2000 ಮೆಗಾವ್ಯಾಟ್ ಉತ್ಪಾದನೆಯ ಗುರಿ ಹೊಂದಲಾಗಿದೆ.

solar-power

ಈ ಯೋಜನೆಯಿಂದ ಮೊರಾಕೊ ವಾರ್ಷಿಕವಾಗಿ 2.5 ಮಿಲಿಯನ್ ಟನ್ ನಷ್ಟು ತೈಲ ಇಂಧನನ್ನು ಉಳಿಸಬಹುದಾಗಿದ್ದು, 7.60 ಲಕ್ಷ ಟನ್ ಇಂಗಾಲ ವಿಸರ್ಜನೆಗೆ ತಡೆ ಬೀಳಲಿದೆ. ಮೊರಾಕೊದ 10 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈ ಯೋಜನೆಯಿಂದಲೇ ವಿದ್ಯುತ್ ಪೂರೈಕೆಯಾಗಲಿ ದೀರ್ಘಾವಧಿಯಲ್ಲಿಈ ಶಕ್ತಿಯನ್ನು ಯುರೋಪ್ ರಾಷ್ಟ್ರಗಳಿಗೂ ರಫ್ತು ಮಾಡುವ ಗುರಿ ಇಟ್ಟುಕೊಂಡಿದೆ.

moracco

ಸೌರ ಯೋಜನೆಯಲ್ಲಿ ಕಾನ್ಸಟ್ರೇಟೆಡ್ ಸೋಲಾರ್ ಪವರ್ (ಸಿಪಿಎಸ್) ತಂತ್ರಜ್ಞಾನ ಅಳವಡಿಕೆಯಾಗಿದೆ. ಅರ್ಥಾತ್, ಇಲ್ಲಿ ಬಳಸಲಾಗಿರುವ ಪ್ಲೇಟ್ ಗಳು ಕನ್ನಡಿ ಮಾದರಿಯಲ್ಲಿದ್ದು, ಅವು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುತ್ತದೆ. ಆ ಮೂಲಕ ಶಾಖವನ್ನು ಹೆಚ್ಚಾಗಿಸಿ ಅದನ್ನು ಸ್ಟೀಮ್ ಆಗಿ ಪರಿವರ್ತಿಸಿ, ಇಲ್ಲಿನ ಜನರೇಟರ್ ಗಳಿಗೆ ಬಳಸಲಾಗುತ್ತದೆ.

ಅರಬ್ ದೇಶಗಳ ತೈಲ ಶ್ರೀಮಂತಿಕೆ ಕುರಿತಷ್ಟೇ ಕಣ್ಣರಳಿಸಿಕೊಂಡುಬಂದವರು ನಮಗೆ. ಮೊರಾಕೊ ತುಳಿಯುತ್ತಿರುವ ಹೊಸಹೆಜ್ಜೆಯ ಕುರಿತೂ ಬೆರಗಿರಲಿ. ಇಂಥ ಮಾದರಿಗಳು ನಮ್ಮನ್ನೂ ಪ್ರೇರೇಪಿಸಲಿ. ಬೆಳಕು ಎಲ್ಲಿಂದಲಾದರೂ ಬರಲಿ, ಕಿಟಕಿ ತೆರೆದಿರಲಿ.

Leave a Reply