ಹೃದಯ ಕಾಂಪ್ಲೆಕ್ಸು, ಆದ್ರೆ ಹಾರ್ಟ್ ಸಿಂಬಲ್ ಏಕೆ ಇಷ್ಟು ಸಿಂಪಲ್ಲು?

ಡಿಜಿಟಲ್ ಕನ್ನಡ ಟೀಮ್

ಹಾರ್ಟ್ ಚಿಹ್ನೆ ಯಾರಾದರೂ ಗೀಚಿಬಿಡಬಹುದು. ಆದರೆ ಹೃದಯಕ್ಕೆ ಸಂಬಂಧಿಸಿದ ಫಿಸಿಕಲ್ ಸಂಗತಿ ಆಗಿರ್ಲಿ ಅಥವಾ ಲವ್ ಎಂಬ ಹೃದಯದೊಂದಿಗೆ ತಳುಕು ಹಾಕಿಕೊಂಡಿರುವ ಭಾವನಾತ್ಮಕ ಅಂಶವಾಗಲೀ ಅಷ್ಟು ಸರಳವಲ್ಲ ಬದಲಿಗೆ ಸಂಕೀರ್ಣ ಅಂತ ಎಲ್ಲರಿಗೂ ಗೊತ್ತು.

ಈಗ ವ್ಯಾಲೆಂಟೈನ್ ಡೇ ಸಂಭ್ರಮದಲ್ಲಿ ಎಲ್ಲೆಲ್ಲೂ ನೋಡಿದರೂ ಈ ಚಿಹ್ನೆ ಅಬ್ಬರ ಹೆಚ್ಚಾಗಿಯೇ ಇದೆ. ಸಿನಿಮಾಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಈ ಚಿಹ್ನೆ ಸಹಜವಾಗಿ ಬಿಟ್ಟಿದೆ. ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳು ಲೈಕ್ ಹಾಗೂ ಫೇವರಿಟ್ ಬಟನ್ ಗೆ ಹಾರ್ಟ್ ಚಿಹ್ನೆ ಬಳಕೆಯಲ್ಲಿದೆ. ಇನ್ನು ವಾಟ್ಸ್ ಆ್ಯಪ್ ನಲ್ಲಿ ಈ ಚಿಹ್ನೆಯ ವಿವಿಧ ಇಮೋಜಿಗಳು ಕಾಣಸಿಗುತ್ತೇವೆ. ಪ್ರೇಮಿಗಳ ದಿನದ ಸೀಸನ್ ನಲ್ಲಂತೂ ಗ್ರೀಟಿಂಗ್ ಕಾರ್ಡ್ ಗಳು, ಚಾಕೊಲೆಟ್ ಗಳು, ಉಡುಗೊರೆ, ನೆನಪಿನ ಕಾಣಿಕೆ ಎಲ್ಲವೂ ಈ ಚಿಹ್ನೆಯನ್ನೇ ಹೊತ್ತು ನಿಂತಿವೆ.

ಈ ಚಿಹ್ನೆಗೂ ಮಾನವನ ಹೃದಯಕ್ಕೂ ಯಾವುದೇ ಸಾಮ್ಯತೆ ಇಲ್ಲ. ಆದರೂ ನಮ್ಮ ಹೃದಯ ಹಾಗೂ ಪ್ರೀತಿಯ ಸಂಕೇತವಾಗಿ ಇದನ್ನು ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಚಿಹ್ನೆ ಹೇಗೆ ಬಂತು? ಪ್ರೀತಿ ಹಾಗೂ ಹೃದಯದ ಸಂಕೇತವಾಗಿ ಬಳಸುತ್ತಿರುವುದಾದರೂ ಏಕೆ? ಎಂಬ ಪ್ರಶ್ನೆ ನಿಮ್ಮಲ್ಲಿ ಬಂದಿದ್ದರೂ ಬಂದಿರಬಹುದು.

ಹಾರ್ಟ್ ಚಿಹ್ನೆ ಏಕಿಷ್ಟು ಸರಳ ಎಂಬ ಪ್ರಶ್ನೆಗೆ ಉತ್ತರವೂ ಸರಳ. ಶವಪರೀಕ್ಷೆಗಳಿಗೆ ಒಪ್ಪಿಗೆ ಇಲ್ಲದ ಕಾಲದಲ್ಲೇ ಹುಟ್ಟಿಕೊಂಡಿದ್ದು ಈ ಪ್ರೇಮ ಸಂಕೇತ. ಹೀಗಾಗಿ ಹೃದಯ ನಿಜಕ್ಕೂ ಹೆಂಗಿರುತ್ತೆ ಅಂತ ಯಾರಿಗೂ ಗೊತ್ತಿರಲಿಲ್ಲ.

ಜಾಚರಿ ಕ್ರೊಕೆಟ್ ಈ ಚಿಹ್ನೆಯ ಇತಿಹಾಸ ಕೆದಕಿದ್ದು, ಆತನ ಪ್ರಕಾರ ಕ್ರಿ.ಪೂ 2000ರಿಂದಲೂ ಈ ಚಿಹ್ನೆ ಬಳಕೆಯಲ್ಲಿದೆ. ಆಗಿನ ಕಾಲದ ನಾಣ್ಯಗಳಲ್ಲಿಇದನ್ನುಬಳಸಲಾಗುತ್ತಿತ್ತು. ಈ ಹಿಂದಿನ ಕಾಲದಲ್ಲಿ ಮಾನವನ ಹೃದಯ ಯಾವ ಆಕಾರದಲ್ಲಿದೆ ಎಂಬ ಅರಿವಿರಲಿಲ್ಲ. 13ನೇ ಶತಮಾನದಲ್ಲಿ ಮೂಡಲಾದ ರೊಮ್ಯಾನ್ಸ್ ಆಫ್ ದ ಪಿಯರ್ (ಸುಮಾರು 1250ನೇ ಇಸವಿ) ಎಂಬ ಪೇಂಟಿಗ್ ಕಲಾಕೃತಿಯಲ್ಲಿ ಯುವಕನೊಬ್ಬ ತಾನು ಮೆಚ್ಚಿದ ಹುಡುಗಿಗೆ ತನ್ನ ಹೃದಯವನ್ನು ನೀಡುತ್ತಿರುವುದನ್ನು ಮೂಡಿಸಲಾಗಿತ್ತು. ಆ ಚಿತ್ರದಲ್ಲಿ ಯುವಕನ ಕೈಯಲ್ಲಿದ್ದ ಹೃದಯ ಈಗಿನ ಹಾರ್ಟ್ ಚಿಹ್ನೆಯನ್ನೇ ಹೋಲುತ್ತದೆ. ಆ ಮೂಲಕ ಮೊದಲ ಬಾರಿಗೆ ಈ ಚಿಹ್ನೆಯನ್ನು ಹೃದಯ ಹಾಗೂ ಪ್ರೀತಿಯ ಸಂಕೇತವನ್ನಾಗಿ ಬಳಸಲಾಗಿದೆ ಎಂಬ ಮಾತುಗಳಿವೆ.

ಕ್ಯಾಥೊಲಿಕ್ ಚರ್ಚ್ ನಲ್ಲಿ ಏಸುವಿನ ಸೇಕ್ರೆಡ್ ಹಾರ್ಟ್ ಚಿತ್ರದಲ್ಲಿ ಎದೆಯ ಭಾಗದಲ್ಲೂ ಈ ಚಿಹ್ನೆಯನ್ನು ಹೃದಯವನ್ನಾಗಿ ಬಳಸಲಾಗಿತ್ತು. ಇದಾದ ನಂತರ ಯಾವುದೇ ಚಿತ್ರಕಾರನಾದರೂ ಹೃದಯವನ್ನುಇದೇ ಚಿಹ್ನೆ ಮೂಲಕ ಚಿತ್ರಿಸಲು ಆರಂಭಿಸಿದ. ಲೂಥರ್ ರೋಸ್ (1519ನೇ ಇಸವಿ) ಕಲಾಕೃತಿಯಲ್ಲೂ ಇದೇ ಚಿಹ್ನೆ ಬಳಸಲಾಗಿತ್ತು. ಈ ಚಿಹ್ನೆಯನ್ನು 15ನೇ ಶತಮಾನದಲ್ಲೂ ಫ್ರೆಂಚ್ ನಲ್ಲಿ ಇಸ್ಪೀಟ್ ಕಾರ್ಡ್ಸ್ ಗಳಲ್ಲಿ ಈ ಚಿಹ್ನೆಯನ್ನು ಬಳಸಲಾಯಿತು. ಕಾಲ ಕ್ರಮೇಣ ವಿಜ್ಞಾನ ಬೆಳವಣಿಗೆ ಕಂಡ ನಂತರ, ಮಾನವನ ನಿಜವಾದ ಹೃದಯದ ರೂಪ ತಿಳಿಯಿತು. ಆದರೆ ಆವೇಳೆಗೆಲ್ಲ ಈ ‘ಸರಳ ಹೃದಯ’ದ ಚಿಹ್ನೆಯೇ ಎಲ್ಲರೆದೆಯಲ್ಲೂ ಅಚ್ಚೊತ್ತಿಬಿಟ್ಟಿತ್ತು. 1977ರಲ್ಲಿ ಐ ಲವ್ ನ್ಯೂಯಾರ್ಕ್ ಎಂಬ ಪ್ರಚಾರದ ವೇಳೆಯೂ ಈ ಚಿಹ್ನೆ ಬದಲಾಗಲಿಲ್ಲ. ಸಿನಿಮಾ ಹಾಗೂ ಇತರೆ ಕಲಾಕೃತಿಗಳಲ್ಲೂಇದನ್ನೇ ಮುಂದುವರಿಸಿಕೊಂಡು ಬರಲಾಯಿತು. ಎಂಥ ಕಾಂಪ್ಲೆಕ್ಸ್ ಲವ್ ಸ್ಟೋರಿ ಹೇಳೋದಿದ್ರೂ ಈ ಸಿಂಪಲ್ ಹಾರ್ಟ್ ಸಿಂಬಲ್ ಅನಿವಾರ್ಯವಾಗಿಬಿಟ್ಟಿದೆ.

Leave a Reply