ಅವತ್ತು ವೀರಯೋಧರು ಸಂಸತ್ತಿನಲ್ಲಿ ಕಾಪಿಟ್ಟಿದ್ದ ಜೀವವನ್ನು ಇಂದು ಉಗ್ರರ ಆರಾಧನೆಗೆ ಬಳಸಿಕೊಳ್ಳುತ್ತಿರುವ ಇವರೆಂಥ ಕೃತಘ್ನರು!

praveen kumar shetty (2)

ಪ್ರವೀಣ್ ಕುಮಾರ್ ಶೆಟ್ಟಿ, ಕುವೈತ್

2001, ಡಿಸೆಂಬರ್ 13 ರಂದು ದೆಹಲಿ ಸಂಸತ್ ಭವನದ ಹೊರಗಡೆ ಢಮಾರ್ ಅಂದಾಗ, ಭದ್ರಕೋಟೆಯಂತಿದ್ದ ಪಾರ್ಲಿಮೆಂಟ್ ಕಟ್ಟಡದ ಒಳಗಿದ್ದ ಬಿಳಿಕೋಟಿನ ನೇತಾರರು ಅವಡುಕಚ್ಚಿಕೊಂಡಿದ್ದರೆ, ಬಟಾಬಯಲಿನಲ್ಲಿ ಪಾರ್ಲಿಮೆಂಟಿನ ಕಾವಲು ಕಾಯುತ್ತಿದ್ದ ನಮ್ಮ ಸೈನಿಕರು ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟಿದ್ದರು. ಆ ಕರಾಳ ದಿನದಂದು ಸಂಸತ್ತಿನ ರಕ್ಷಣೆಗೆ ನಿಂತ ಪ್ರತಿಯೊಬ್ಬ ಯೋಧನೂ ತನ್ನ ತಾಯ್ನಾಡಿನ ಪ್ರಜಾಪ್ರಭುತ್ವದ ದೇಗುಲವನ್ನು ರಕ್ಷಿಸಲು ತನ್ನೆಲ್ಲಾ ಹಿತಾಸಕ್ತಿಯನ್ನು ಬದಿಗೊತ್ತಿ, ಭಯೋತ್ಪಾದಕರೆಡೆಗೆ ನುಗ್ಗಿ ಶತ್ರುಗಳನ್ನು ಕೊಂದು ಹಾಕಿದ್ದರು. ಆ ದಿನ 9 ಭಾರತ ಮಾತೆಯ ಮಕ್ಕಳು ಪ್ರಾಣಕೊಟ್ಟರೆ 18 ಮಂದಿ ಗಾಯಗೊಂಡಿದ್ದರು. ಆವತ್ತಿನ ದಿನ ನೋವುಂಡಿದ್ದೆಲ್ಲಾ ಬಹುತೇಕ ನಮ್ಮ ಸೈನಿಕರೇ ಹೊರತು ಒಬ್ಬನೇ ಒಬ್ಬ ರಾಜಕಾರಣಿಯ ಕೂದಲೂ ಕಿತ್ತು ಆಚೆ ಬರಲಿಲ್ಲ.

 ಪ್ರತಿಯೊಬ್ಬ ವಯಸ್ಕ ಭಾರತೀಯನೂ ಮತದಾರನೇ, ಪ್ರತಿಯೊಬ್ಬನಿಗೂ ಒಂದೊಂದು ರಾಜಕೀಯ ಸಿದ್ಧಾಂತದ ಒಲವಿರುತ್ತದೆ. ನಮ್ಮ ಸೈನಿಕರೂ ಕೂಡ ಮತ ಚಲಾಯಿಸುತ್ತಾರೆ. ಹಾಗಂತ ಆ ದಿನ ಪಾರ್ಲಿಮೆಂಟಿಗೆ ದಾಳಿ ನೆಡೆದಾಗ, ಒಳಗಿದ್ದ ರಾಜಕಾರಣಿಗಳು ಯಾವ ಪಕ್ಷದವರೆಂಬುದು ದೇಶಪ್ರೇಮದ ಬಿರುಸಿನಲ್ಲಿ ನಗಣ್ಯವಾಗಿತ್ತು. ವಿಪಕ್ಷದ ನೇತಾರರು ಸಂಸತ್ತಿನ ಒಳಹೋಗುವ ಬಾಗಿಲನ್ನೂ ಸಹಿತ ಭದ್ರಪಡಿಸಿ, ಅತ್ಮಾಹುತಿ ದಾಳಿಗೆ ತನ್ನ ಮೈಯೆನ್ನೆಲ್ಲಾ ಚೂರುಚೂರು ಮಾಡಿಕೊಂಡು ಮಡಿದು ಬಿದ್ದಿದ್ದ. ಸೈನಿಕ ತಾನು ಯಾವುದೇ ಪಕ್ಷಕ್ಕಾದರೂ ಮತ ನೀಡಿರಲಿ, ಆರಸಿ ಬಂದ ಸರಕಾರ ಯಾರದ್ದೇ ಆಗಿರಲಿ,  ಆತನಿಗೆ ದೇಶ ಮಾತ್ರ ತನ್ನದಾಗಿತ್ತು. ತಾನು, ತನ್ನವರು, ಬಂಧು, ಬಳಗ, ಹೆಂಡತಿ, ಮಕ್ಕಳು ಎಲ್ಲವನ್ನೂ ಮರೆತು ಎಲ್ಲಾ ಪಕ್ಷದ ರಾಜಕಾರಣಿಗಳನ್ನೂ ರಕ್ಷಿಸಲು ಪ್ರಾಣವನ್ನೇ ತ್ಯಾಗಮಾಡುವ ದೇಶದ ಸೈನಿಕರ ಮನಸ್ಥೈರ್ಯವನ್ನು ಕುಗ್ಗಿಸುವ ಘಟನೆಯೊಂದು ಈ ದೇಶದಲ್ಲಿ ಜರುಗಿಯೇ ಬಿಟ್ಟಿತು. ಯಾವ ರಾಜಕಾರಣಿಗಳಿಗಾಗಿ ಪ್ರಾಣವನ್ನೆ ಒತ್ತೆಯಿಟ್ಟರೋ ಅಂತವರೇ ನಮ್ಮ ಸೈನಿಕರ ಎದೆಯ ಮೇಲೆ ನೆಡೆದುಕೊಂಡು ಅಫ್ಜಲ್ ಗುರುವಿಗೆ ಜಯಕಾರ ಹಾಕಲು ಹೊರಟುಬಿಟ್ಟರು.

ಅಫ್ಜಲ್ ಗುರು ಎಂಬ ಭಯೋತ್ಪಾದಕನೊಬ್ಬ ಸಂಸತ್ತಿನ ದಾಳಿಯ ಸಂಚುಕೋರನೆಂದು ದೇಶದ ಸುಪ್ರೀಂಕೋರ್ಟಿನಲ್ಲಿ ಆರೋಪ ಸಾಬೀತಾಗಿ ಗಲ್ಲಿಗೇರಿಸಿದಾಗ,  ವೀರಮರಣವನ್ನಪ್ಪಿದ ಯೋಧರಿಗೆ ತಡವಾಗಿಯಾದರೂ ನ್ಯಾಯ ದೊರಕಿತ್ತು. ಸುಪ್ರೀಂಕೋರ್ಟಿನ ತೀರ್ಪಿನಲ್ಲಿ ಅಫ್ಜಲ್ ಗುರುವಿನ ದೇಶದ್ರೋಹಿ ಕೆಲಸಗಳು ಸಂಪೂರ್ಣವಾಗಿ ಉಲ್ಲೇಖವಾಗಿದೆ. ಇದೇ ಅಫ್ಜಲ್ ಗುರುವಿನಿಂದಾಗಿಯೇ 2001, ಡಿಸೆಂಬರ್ 13 ರಂದು ನಮ್ಮ ಸೈನಿಕರು ಸಂಸತ್ ಭವನದ ಹೊರಗಡೆ ರಕ್ತಚೆಲ್ಲಿ ಪ್ರಾಣಬಿಟ್ಟಿದ್ದರು. ನಮ್ಮ ಸೈನಿಕರ ದೇಶಕ್ಕೆ ಪ್ರಾಣಕೊಡುವ ಉದಾತ್ತ ಮನಸ್ಸಿನಿಂದಾಗಿಯೇ ಐದು ವರ್ಷಕ್ಕೊಮ್ಮೆ ಚುನಾಯಿತರಾಗಿ ದೇಶಭಕ್ತಿಯ ಬಗ್ಗೆ ಪುಂಗಿ ಬಿಡುವ ಪೊಳ್ಳು ರಾಜಕಾರಣಿಗಳು ಜೀವ ಉಳಿಸಿಕೊಂಡಿದ್ದರು. ಆ ದಿನದಂದು ಉಳಿಸಿಕೊಂಡ ಜೀವವನ್ನು ಮೊನ್ನೆ JNU (ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ) ದಲ್ಲಿ ಅಫ್ಜಲ್ ಗುರುವಿಗೆ ಜೈಕಾರ ಹಾಕಿದವರನ್ನು ಬೆಂಬಲಿಸಲು ಬಳಸಿಕೊಂಡರು. ಯಾವ ಭಯೋತ್ಪಾದಕನು ಭಾರತದ ವಿರುದ್ಧ ಯುದ್ಧ ಸಾರಿದ್ದನೋ ಅಂತಹವನಿಗೆ ಜಯಕಾರ ಹಾಕಿದವರನ್ನು ಬೆಂಬಲಿಸುವ ದೇಶದ್ರೋಹಿ ರಾಜಕಾರಣಿಗಳೇ ನಿಮಗೆ ಕಿಂಚಿತ್ತೂ ಉಪಕಾರ ಪ್ರಜ್ಞೆಯಾದರೂ ಬೇಡವೆ? ಅಫ್ಜಲ್ ಗುರುವಿಗೆ ಜಯಕಾರ ಹಾಕಿ, ಭಾರತವನ್ನು ನಿರ್ನಾಮ ಮಾಡದೇ ವಿರಮಿಸುವುದಿಲ್ಲವೆಂದು ಘೋಷಣೆಗಳನ್ನು ಕೂಗುತ್ತಿರುವವರು ಖಂಡಿತವಾಗಿಯೂ ಈ ದೇಶದ ವಿರೋಧಿಗಳೇ ಹೊರತು ಸರಕಾರದ ವಿರೋಧಿಗಳಲ್ಲ.

ಎಲವೋ ಲಜ್ಜೆಗೆಟ್ಟ ದೇಶದ್ರೋಹಿ ರಾಜಕಾರಣಿಗಳೇ, ನಿಮ್ಮನ್ನು ಆ ದಿನ ಸಂಸತ್ ದಾಳಿಯ ದಿನದಂದು ರಕ್ಷಿಸುವ ಬದಲು ನಮ್ಮ ಸೈನಿಕರು ಪ್ರಾಣ ಉಳಿಸಿಕೊಂಡಿದ್ದರೆ, ನಾವಿಂದು ಕನಿಷ್ಠ 9 ರಾಷ್ಟ್ರಭಕ್ತರನ್ನಾದರೂ ಉಳಿಸಿಕೊಂಡಿರುತ್ತಿದ್ದೆವು. ನಾವೆಲ್ಲ ದೀಪ ಆರಿಸಿ ಮಲಗಿರುವಾಗ ಸಿಯಾಚಿನ್ ನಂತಹ ದುರ್ಗಮ ಜಾಗದಲ್ಲಿ ನಮ್ಮ ರಕ್ಷಣೆಗಾಗಿ ಪಹರೆ ಕಾಯುತ್ತಿರುವ ಯಾರೋ ಹೆತ್ತಬ್ಬೆಯ ಮಗನ ನೆನಪೂ ಮಾಡಿಕೊಳ್ಳುವುದಿಲ್ಲ. ಯಾರು ತನ್ನ ದೇಶದ ಸೈನಿಕನು ಚೆಲ್ಲಿದ ರಕ್ತಕ್ಕೆ ಬೆಲೆಕೊಡುವುದಿಲ್ಲವೋ ಅಂತವನಿಗೆ ದೇಶದ ಒಳಗೆ ಸುಖನಿದ್ದೆ ಮಾಡುವ ಯಾವುದೇ ಹಕ್ಕಿಲ್ಲ. ನಮ್ಮ ಸೈನಿಕನೇಕೆ ಅಂಥವರಿಗಾಗಿ ಜೀವ ತೆರಬೇಕು..?

1 COMMENT

Leave a Reply