ಜೆ. ಎನ್. ಯು. ದ ಉಗ್ರ ಆರಾಧಕರ ಎದುರು ದೇಶ ನೆನಪಿಸಿಕೊಳ್ಳಬೇಕಿರುವ ಕಮಲೇಶ್ ಕುಮಾರಿ

ಚೈತನ್ಯ ಹೆಗಡೆ

ಅದು 2001ರ ಡಿ.13. ದೆಹಲಿಯ ಸಂಸತ್ ಭವನದ ಆವರಣ. ಚಳಿಗಾಲದ ಅಧಿವೇಶನ ಆರಂಭಗೊಂಡಿತ್ತು. ಆದರೆ, 11.30ರ ಸುಮಾರಿಗೆ 5 ಜನರ ಉಗ್ರರ ತಂಡ ಸಂಸತ್ ಭವನದ ಮೇಲೆ ನಡೆಸಿದ ದಾಳಿ, ಅಲ್ಲಿನ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಿತ್ತು. ಈ ದಾಳಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ 8 ಸಿಬ್ಬಂದಿ ಪ್ರಾಣ ಬಲಿಪಡೆಯಿತು. ಆರು ದೆಹಲಿ ಪೊಲೀಸ್ ಸಿಬ್ಬಂದಿ, ಇಬ್ಬರು ಸಂಸತ್ತಿನ ಭದ್ರತಾ ಸಿಬ್ಬಂದಿ ಮತ್ತು ಒಬ್ಬರು ತೋಟದ ಕೆಲಸಗಾರ ಮೃತಪಟ್ಟರು.

kamalesh kumariಎಲ್ಲ ಶುರುವಾಗಿದ್ದು ಸಂಸತ್ ಭವನದ ಗೇಟ್ ನಂಬರ್ 11ರಲ್ಲಿ. ಅಲ್ಲಿ ನಿಯೋಜನೆಗೊಂಡಿದ್ದವರು ಕಾನ್ ಸ್ಟೇಬಲ್ ಕಮಲೇಶ್ ಕುಮಾರಿ. 104 ರಾಪಿಡ್ ಆ್ಯಕ್ಷನ್ ಫೋರ್ಸ್ ನ ಮಹಿಳಾ ಕಾನಸ್ಟೇಬಲ್ ಕಮಲೇಶ್ ಕುಮಾರಿ ಬಳಿ ವೈರ್ ಲೆಸ್ ಬಿಟ್ಟರೆ ಅಸ್ತ್ರಗಳೇನೂ ಇರಲಿಲ್ಲ. ಇಷ್ಟಕ್ಕೂ ಅವರು ನಿಯೋಜನೆಗೊಂಡಿದ್ದು ಸಂಸತ್ ಭವನ ಪ್ರವೇಶಿಸುವವರನ್ನು ತಪಾಸಣೆ ಮಾಡುವವರಿಗೆ ಸಹಾಯ ಮಾಡುವುದಕ್ಕೆ ಅಂತಷ್ಟೆ. ಆದರೆ, ಅದ್ಯಾವುದೋ ಹಿಂದಿನ ಗೇಟಿನಲ್ಲಿ ಮೊಳಗಿದ ಗ್ರೈನೇಡ್ ಸ್ಫೋಟದ ಸದ್ದು ಕಮಲೇಶ್ ಕುಮಾರಿ ಅವರ ಕರ್ತವ್ಯಪ್ರಜ್ಞೆ ಜಾಗೃತಗೊಳಿಸಿತು. ಅಷ್ಟರಲ್ಲಿ ಅಂಬಾಸಿಡರ್ ಕಾರೊಂದು ಗೇಟು ಸಮೀಪಿಸತೊಡಗಿತು. ಆ ಕಾರಿನಲ್ಲಿದ್ದವರು ಉಗ್ರರೆಂದೂ, ಅಷ್ಟೇ ಅಲ್ಲ, ಆ ಪೈಕಿ ಒಬ್ಬ ಆತ್ಮಹತ್ಯಾ ಬಾಂಬರ್ ಇದ್ದಾನೆಂದೂ ಮೊದಲು ಗುರುತಿಸಿದ್ದೇ ಕಮಲೇಶ್ ಕುಮಾರಿ. ಅದು ಗಮನಕ್ಕೆ ಬರುತ್ತಲೇ ಮೊದಲು ಕಾವಲಿದ್ದ ದ್ವಾರದ ಗೇಟುಗಳನ್ನು ಮುಚ್ಚಿದ ಆಕೆ, ತಾನು ಶಸ್ತ್ರರಹಿತಳು ಎಂಬುದನ್ನೂ ಮರೆತು ತಮ್ಮ ನಿರೀಕ್ಷಣಾ ಚೌಕಿಯಿಂದ ಕೂಗುತ್ತ ಹೊರಬಂದರು. ಸೂಸೈಡ್ ಬಾಂಬರ್ ಬರ್ತಿದಾನೆ, ದಾಳಿಕೋರರು ಬರ್ತಿದಾರೆ ಅಂತ ಕೂಗುತ್ತಲೇ ಸಕಲ ಭದ್ರತಾ ಪಡೆಯನ್ನೂ ಎಚ್ಚರಿಸಿದರು ಕಮಲೇಶ್ ಕುಮಾರಿ. ಇದನ್ನು ಕೇಳುತ್ತಲೇ ಭದ್ರತಾ ಪಡೆ ಯೋಧರಿಗೆ ವಿದ್ಯುತ್ ಸಂಚಾರವಾಯಿತು! ಹತ್ತಿರದಲ್ಲೇ ಇದ್ದ ಸುಖವಿಂದರ್ ಸಿಂಗ್ ಎಂಬ ಯೋಧ, ಕಮಲೇಶ್ ಕುಮಾರಿ ಎಚ್ಚರಿಕೆಯನ್ನೇ ಅನುಸರಿಸಿ ತನ್ನ ಮೊದಲ ಆದ್ಯತೆ ಎಂಬಂತೆ ಕಾರಿನಲ್ಲಿ ಬರುತ್ತಿದ್ದ ಆತ್ಮಹತ್ಯಾ ಬಾಂಬರ್ ಗೆ ಗುಂಡಿಟ್ಟು ಕೊಂದರು. ಇವೆಲ್ಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ನಡೆದುಹೋದವು…

ಆದರೆ…

ಕಮಲೇಶ್ ಕುಮಾರಿಯವರ ಎಚ್ಚರಿಕೆ ಘೋಷಗಳು ಕೇವಲ ಯೋಧರನ್ನಷ್ಟೇ ಅಲ್ಲದೇ, ಉಗ್ರರ ಗಮನವನ್ನೂ ಸೆಳೆದವಾದ್ದರಿಂದ, ಅತ್ತ ಆತ್ಮಹತ್ಯಾ ಬಾಂಬರ್ ಗೆ ಗುಂಡು ಹೊಕ್ಕುತ್ತಲೇ, ಉಗ್ರರ ಕಡೆಯಿಂದ ತೂರಿಬಂದ ಗುಂಡುಗಳ ಸರಮಾಲೆಯಲ್ಲಿ 11 ಗುಂಡುಗಳು ಕಮಲೇಶ್ ಕುಮಾರಿಯವರ ದೇಹವನ್ನು ಸೀಳಿ ರಕ್ತದ ಕೋಡಿ ಹರಿಸಿದವು. ಕೆಲವೇ ಸೆಕೆಂಡುಗಳಲ್ಲಿ ಕಮಲೇಶ್ ಕುಮಾರಿ ಅವರ ಪ್ರಾಣಪಕ್ಷಿ ಹಾರಿಹೋಯಿತು.

ಆ ಹೊತ್ತಿನ ಆ ಶೌರ್ಯದ ಮುನ್ನುಗ್ಗುವಿಕೆಯಿಂದ ಕಮಲೇಶ್ ಕುಮಾರಿ ಅವೆಷ್ಟು ಪ್ರಾಣಗಳನ್ನು ಉಳಿಸಿದರು ಅಂತ ಒಮ್ಮೆ ಕಲ್ಪನೆ ಮಾಡಿಕೊಳ್ಳೋಣ. ಇನ್ನು ಕೆಲವೇ ದೂರ ಕ್ರಮಿಸುವುದಕ್ಕೆ ಆ ಸೂಸೈಡ್ ಬಾಂಬರ್ ಸಫಲನಾಗಿದ್ದರೆ ಅವಘಡದ ಪ್ರಮಾಣ ಏನಿರುತ್ತಿತ್ತು?

ಆ ಸಮಯದಲ್ಲಿ ಆಗಿನ ಗೃಹ ಸಚಿವ ಎಲ್.ಕೆ ಅಡ್ವಾಣಿ ಸೇರಿದಂತೆ ಸಚಿವರು, ಸಂಸದರು ಹಾಗೂ ಸರ್ಕಾರಿ ಅಧಿಕಾರಿಗಳು ಸಂಸತ್ತಿನ ಕಟ್ಟದ ಒಳಗೆ ಇದ್ದರು. ಉಗ್ರರ ಬಳಿ ಇಡೀ ಸಂಸತ್ತನ್ನೇ ಉಡಾಯಿಸುವಷ್ಟು ಪ್ರಮಾಣದ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳಿದ್ದವು. ಯಾವ ಪ್ರಮಾಣದಲ್ಲಿ ಹಾನಿ ಮಾಡಲು ದಾಳಿ ಉದ್ದೇಶಿಸಿತ್ತು ಎಂಬುದನ್ನು ಊಹಿಸಿಕೊಂಡರೆ, ಎದೆ ನಡುಗುತ್ತದೆ. ಭದ್ರತಾ ಸಿಬ್ಬಂದಿಗಳು ಐದೂ ಉಗ್ರರನ್ನು ಸದೆಬಡೆಯುವಲ್ಲಿ ಯಶಸ್ವಿಯಾದರು.

ಅಫ್ಜಲ್ ಬಗ್ಗೆ ಅನುಕಂಪ ಸೂಸಿ ಜೆ ಎನ್ ಯು ದಲ್ಲಿ ಚಲನಚಿತ್ರ, ವಿಚಾರಗೋಷ್ಠಿ ಏರ್ಪಡಿಸುವವರಿಗೆ ಕಮಲೇಶ್ ಕುಮಾರಿಯಂಥ ಹುತಾತ್ಮರ ಹೆಸರಾದರೂ ಗೊತ್ತಿದೆಯಾ? ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ತಮ್ಮ ದೇಶದ್ರೋಹದ ಕುಕೃತ್ಯ ಮುಚ್ಚಿಟ್ಟುಕೊಳ್ಳುವವರಿಗೆ ಹಾಗೂ ಅವರನ್ನು ಬೆಂಬಲಿಸುತ್ತಿರುವ ರಾಜಕಾರಣಿಗಳಿಗೆ ಗೊತ್ತಿರಲಿ… ಅವತ್ತು ಕಮಲೇಶ್ ಕುಮಾರಿ ‘ಸುಮ್ಮನಿದ್ದು ಪಾರಾಗುವ’ ಆಯ್ಕೆ ತೆಗೆದುಕೊಂಡಿದ್ದರೆ, ಪಾರ್ಲಿಮೆಂಟು ರಕ್ತದ ಕೋಡಿಯಾಗುತ್ತಿತ್ತು.

ಕಮಲೇಶ್ ಕುಮಾರಿಗೆ ಮರಣೋತ್ತರವಾಗಿ ಶಾಂತಿಕಾಲದ ಅತ್ಯುನ್ನತ ಶೌರ್ಯಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಯಿತು. ಉಗ್ರರ ವಿರುದ್ಧ ಹೋರಾಡಿದ ಸಿ ಆರ್ ಪಿ ಎಫ್ ನ ಇತರೆ ನಾಲ್ವರು ಸಿಬ್ಬಂದಿ ಹೆಡ್ ಕಾನ್ಸ್ ಟೇಬಲ್ ವೈ.ಬಿ ಥಾಪಾ, ಕಾನ್ಸ್ ಟೇಬಲ್ ಡಿ.ಸಂತೋಷ್ ಕುಮಾರ್, ಸುಖ್ವಿಂದರ್ ಸಿಂಗ್ ಅವರಿಗೂ ಅಶೋಕ ಚಕ್ರ ನೀಡಿ ಗೌರವಿಸಲಾಯಿತು. ದೆಹಲಿ ಪೊಲೀಸ್ ಅಧಿಕಾರಿಗಳಾದ ನಾಯಕ್ ಚಾಂದ್, ಓಂ ಪ್ರಕಾಶ್, ರಾಂಪಾಲ್, ಘನಶ್ಯಾಮ್ ಸಹ ವೀರಮರಣ ಹೊಂದಿದರು.

ಸುಪ್ರೀಂಕೋರ್ಟ್ ಮರಣದಂಡನೆ ತೀರ್ಪಿನ ನಂತರವೂ ಅಫ್ಜಲ್ ಕುಟುಂಬ ಕ್ಷಮಾದಾನದ ಅರ್ಜಿ ಹಾಕಿದಾಗ, ಕಮಲೇಶ್ ಕುಮಾರಿಯವರ ಕುಟುಂಬವೂ ಸೇರಿದಂತೆ ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರೆಲ್ಲ ತಮ್ಮ ಶೌರ್ಯಪದಕಗಳನ್ನು ಹಿಂತಿರುಗಿಸಿ ಭಾರತದ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸಿದರು. ಅಫ್ಜಲನ ಕ್ಷಮಾದಾನ ತಿರಸ್ಕೃತಗೊಂಡು ಗಲ್ಲಿಗೇರಿದ ನಂತರವಷ್ಟೇ ಇವರೆಲ್ಲ ಗೌರವ ಪದಕಗಳನ್ನು ಮತ್ತೆ ಸ್ವೀಕರಿಸಿದರು.

ದೇಶಕ್ಕೆ ಬೇಕಿರುವ ಹೋರಾಟದ ಮಾದರಿ ಇಂಥವರದ್ದು. ವಿಶ್ವವಿದ್ಯಾಲಯದ ಕ್ಯಾಂಪಸ್ ಗಳಲ್ಲಿ ಸ್ಮರಣೆಯಾಗಬೇಕಿರುವುದು ಕಮಲೇಶ್ ಕುಮಾರಿ ಹೆಸರೇ ಹೊರತು ಉಗ್ರನದ್ದಲ್ಲ. ಜೆ ಎನ್ ಯು ವಾಮಪಂಥೀಯರಿಗೆ ಇವೆಲ್ಲ ಸಲ್ಲದ ವಿಷಯಗಳಾಗಿರಬಹುದು. ಆದರೆ ನಾವೆಲ್ಲ, ಇಂಥವರ ಅಫ್ಜಲ್ ಆರಾಧನೆ ಎದುರು ಕಮಲೇಶ್ ಕುಮಾರಿ, ಸುಖ್ವಿಂದರ್ ಸಿಂಗ್, ಸಂತೋಷ್ ಕುಮಾರ್, ವೈ. ಬಿ. ಥಾಪಾ, ನಾಯಕ್ ಚಾಂದ್, ಓಂ ಪ್ರಕಾಶ್ ರಾಂಪಾಲ್, ಘನಶ್ಯಾಮ್ ಈ ಎಲ್ಲ ಹೆಸರುಗಳನ್ನು ದೊಡ್ಡ ದನಿಯಲ್ಲಿ ಸಾರೋಣ.

Leave a Reply