ಬೆಂಗಳೂರು ಕಳ್ಳಸಾಗಣೆ ಜಾಲ ಅಮೆರಿಕಕ್ಕೆ ಸಾಗಿಸಿದ ಮಕ್ಕಳು ಅಲ್ಲಿನ ಲೈಂಗಿಕ ವಿಕೃತಿಗೆ ಬಲಿಯಾಗ್ತಿದಾರಾ?

 

ಡಿಜಿಟಲ್ ಕನ್ನಡ ವಿಶೇಷ

ಫೆಬ್ರವರಿ 8ರಂದು ಬೆಂಗಳೂರಿನಿಂದ ಬೆಚ್ಚಿ ಬೀಳಿಸುವಂಥ ಪ್ರಕರಣವೊಂದು ವರದಿಯಾಗಿತ್ತು. ದೇಶದ ನಾನಾ ಕಡೆಗಳಿಂದ ಮಕ್ಕಳನ್ನು ಒಗ್ಗೂಡಿಸಿ ಅವರನ್ನು ಅಮೆರಿಕಕ್ಕೆ ಬಿಟ್ಟುಬಂದ ಕಳ್ಳಸಾಗಣೆದಾರರ ಜಾಲವೊಂದನ್ನು ಇಲ್ಲಿನ ಪೊಲೀಸರು ಬೇಧಿಸಿದ್ದರು. ಪ್ರಕರಣದ ಮುಖ್ಯ ರೂವಾರಿ ರುದ್ರ ಪ್ರತಾಪ್ ಸಿಂಗ್ ಸೇರಿದಂತೆ 16 ಜನರ ಬಂಧನವಾಯಿತು.

ಎಲ್ಲ ಸರಿ… ಅಮೆರಿಕಕ್ಕೆ ಹೋದ ಆ ಮಕ್ಕಳೇನಾದರು? ಈ ಪ್ರಶ್ನೆಗೆ ಖಚಿತ ಉತ್ತರವಿಲ್ಲ. ಬೆಂಗಳೂರಿನಲ್ಲೇ ನಕಲಿ ಪಾಸ್ಪೋರ್ಟ್- ವೀಸಾಗಳನ್ನೆಲ್ಲ ತಯಾರಿಸಿ, ಮಕ್ಕಳಿಗೆ ನಕಲಿ ಅಪ್ಪ-ಅಮ್ಮಂದಿರನ್ನು ಸೃಷ್ಟಿಸಿ, ಅವರು ಅಮೆರಿಕಕ್ಕೆ ಹೋಗಿ ವಾಪಸಾಗುವಾಗ ಮಕ್ಕಳನ್ನು ಅಲ್ಲೇ ಬಿಟ್ಟು ಬಂದಿರೋದು ಪ್ರಕರಣದ ತಿರುಳು. ಅವರನ್ನೇನು ಮಾಡಿದ್ರಿ ಅಂತ ಬಂಧಿತರನ್ನು ವಿಚಾರಿಸಿದ್ರೆ- ದುಡ್ಡು ಕೊಟ್ಟಿದ್ದಕ್ಕೆ ಕೆಲಸ ಮಾಡಿದ್ವಿ, ಅವರನ್ನು ಮುಂದೆಲ್ಲಿ ತಲುಪಿಸ್ತಾರೋ ಗೊತ್ತಿಲ್ಲ ಎಂಬ ಉತ್ತರ ಸಿಕ್ಕಿದೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎನ್ನುತ್ತಿದ್ದಾರೆ. ಹಾಗೆಯೇ ಸಧ್ಯಕ್ಕೆ ಲಭ್ಯವಿರುವ ವಿವರಣೆ ಎಂದರೆ-  ಹೀಗೆ ಅಲ್ಲಿಗೆ ಕಳುಹಿಸಿರುವ ಮಕ್ಕಳ ಅಮೆರಿಕದಲ್ಲಿ ತಮ್ಮ ನೈಜ ತಂದೆ-ತಾಯಿಯರನ್ನು ಸೇರಲು ಹೋದವರೆಂದು ತಿಳಿದುಬಂದಿದೆ… ಅಕ್ರಮ ವಲಸಿಗರಾಗಿ ಅಮೆರಿಕದ ನಿರಾಶ್ರಿತ ಶಿಬಿರದಲ್ಲಿದ್ದವರಿಗೆ ಅವರ ಮಕ್ಕಳನ್ನು ತಲುಪಿಸಲಾಗಿದೆ ಎಂಬರ್ಥದ ಮಾಹಿತಿ.

ಇದನ್ನು ಒಪ್ಪುವುದು ಕಷ್ಟ. ಏಕೆ ಗೊತ್ತೇ? ಅಮೆರಿಕದಲ್ಲಿ ಅಕ್ರಮ ವಲಸಿಗಳಾಗಿ ನಿರಾಶ್ರಿತ ಶಿಬಿರದಲ್ಲಿರೋರು ಮಕ್ಕಳನ್ನು ಏಕಾದರೂ ಕರೆಸಿಕೊಳ್ಳುತ್ತಾರೆ? ಅವರ ಉಪಸ್ಥಿತಿಯೇ ಅಕ್ರಮ ಎಂದಾದರೆ, ಆ ಕೂಪಕ್ಕೆ ಮಕ್ಕಳನ್ನು ಎಳೆದುಕೊಳ್ಳುವ ಕೆಲಸ ಯಾರೂ ಮಾಡುವುದಿಲ್ಲ. ಸರಿ, ಭಾರೀ ಭಾವನಾತ್ಮಕತೆಯಲ್ಲಿ ಕರೆಸಿಕೊಳ್ಳುವುದಕ್ಕೆ ಮುಂದಾದರು ಎಂದಿಟ್ಟುಕೊಂಡರೂ ಇಂಥದೊಂದು ಅಪಾಯಕಾರಿ ಅಕ್ರಮ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು ಅವರು ಹೇಗೆ ಭರಿಸಲು ಸಾಧ್ಯ? ಒಂದು ಮಗುವಿಗೇ 10 ಲಕ್ಷ ರುಪಾಯಿ ಕಮಿಷನ್ ಪಡೆಯುತ್ತಿದ್ದರು ಅನ್ನೋದು ಬಂಧಿತರ ಮೇಲಿರುವ ಆರೋಪ. ಅದರಲ್ಲೂ ಇವರು ಆ ಕಳ್ಳಸಾಗಣೆ ಜಾಲದ ಕೊನೆಯ ಕೊಂಡಿ. ಇನ್ನೂ ಹಲವು ಮಧ್ಯಸ್ತಿಕೆಗಳನ್ನು ದಾಟಿ ಹೋಗಬೇಕೆಂದರೆ ಒಂದು ಮಗುವನ್ನು ಕರೆಸಿಕೊಳ್ಳಲು ಅಲ್ಲಿದ್ದವರು ವ್ಯಯಿಸಬೇಕಾದ ಮೊತ್ತವೆಷ್ಟು? ಉನ್ನತ ಹುದ್ದೆಯಲ್ಲಿದ್ದು ದುಡಿಯುತ್ತಿರುವವರಿಗೇ ಅಲ್ಲಿನ ಜೀವನಶೈಲಿಯಲ್ಲಿ ಉಳಿತಾಯ ಕಷ್ಟದ ಕೆಲಸ ಆಗಿರುವಾಗ, ಯಾರೋ ಅಕ್ರಮ ವಲಸಿಗರು ತಮ್ಮ ಮಕ್ಕಳನ್ನು ಕರೆಸಿಕೊಳ್ಳಲು ಭಾರೀ ಮೊತ್ತದ ಹಣ ಕೊಡಲು ಹೇಗೆ ಸಾಧ್ಯ? ಬಿಹಾರ, ಉತ್ತರ ಪ್ರದೇಶ ಹೀಗೆ ನಾನಾ ಭಾಗಗಳಿಂದ ಮಕ್ಕಳನ್ನು ಒಟ್ಟುಗೂಡಿಸಿ ಅಮೆರಿಕಕ್ಕೆ ಕರೆಸಿಕೊಳ್ಳುವಷ್ಟರಮಟ್ಟಿಗೆ ಅಲ್ಲಿನ ಅಕ್ರಮ ನಿವಾಸಿಗಳು ಪ್ರಭಾವಿಗಳೇ?

ಇಂಥ ಸಾಧ್ಯತೆ ಕ್ಷೀಣ ಎಂದಾದಾಗ, ಅಲ್ಲಿಗೆ ಕಳುಹಿಸಿದ ಮಕ್ಕಳು ಎಲ್ಲಿಗೆ ಹೋದರೆಂಬ ಪ್ರಶ್ನೆ ಮತ್ತೆ ಚುಚ್ಚುತ್ತದೆ. ಬಾಲಕಾರ್ಮಿಕರನ್ನು ಉಪಯೋಗಿಸಿಕೊಳ್ಳುವ ಶ್ರಮ ಶಿಬಿರಗಳಿಗೆ ಸೇರಿಸಿರಬಹುದು ಅನ್ನೋದು ಮತ್ತೊಂದು ಸಾಧ್ಯತೆ. ಅಮೆರಿಕ ವಿಷಯಕ್ಕೆ ಬಂದರೆ ಆ ಸಾಧ್ಯತೆಯೂ ಕ್ಷೀಣವೇ. ಏಕೆಂದರೆ, ಸಾಮಾನ್ಯವಾಗಿ ನೇಪಾಳ- ಬಾಂಗ್ಲಾದೇಶಗಳಿಗೆ ಈ ಬಗೆಯ ಮಾನವ ಕಳ್ಳಸಾಗಣೆಗಳಾಗುತ್ತವೆ. ಅಲ್ಲಿನ ಉದ್ದೇಶ ಸ್ಪಷ್ಟ. ಮಕ್ಕಳನ್ನು ಕೂಲಿಗಳಾಗಿ ದುಡಿಸಿಕೊಳ್ಳಲಾಗುತ್ತದೆ. ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ತಳ್ಳಲಾಗುತ್ತದೆ.

ಆದರೆ ಭಾರತದಿಂದ ಅಮೆರಿಕಕ್ಕೆ ಮಕ್ಕಳ ಸಾಗಣೆ ಎಂಬುದು ಬೇರೆಯದೇ ಭಯಾನಕ ಚಿತ್ರಣದ ಸಾಧ್ಯತೆ ಮುಂದಿಡುತ್ತದೆ. ಏಕೆಂದರೆ, ಅಮೆರಿಕದಲ್ಲಿ ಹೋಟೇಲ್ ಇಲ್ಲವೇ ಗೃಹಕಾರ್ಯಕ್ಕೆ ಭಾರತದಿಂದಲೋ- ಪಾಕಿಸ್ತಾನದಿಂದಲೋ ಮಕ್ಕಳನ್ನು ಕರೆದುಕೊಂಡುಹೋಗಬೇಕಾದ ಸ್ಥಿತಿ ಇಲ್ಲ. ಅವರಿಗೆ ಹಾಗೆ ದುಡಿಮೆಗೆ ಒದಗುವ ಅಕ್ರಮವಲಸಿಗರು ಹತ್ತಿರದ ಮೆಕ್ಸಿಕೋದಿಂದಲೇ ದಂಡಿಯಾಗಿ ಸಿಗುತ್ತಾರೆ.

ಹಾಗಾದರೆ ಈ ಮಕ್ಕಳನ್ನು ಏನಕ್ಕಾಗಿ ಉಪಯೋಗಿಸಿಕೊಳ್ಳುತ್ತಿರಬಹುದು? ಅದೊಂದು ವಿಕೃತ ನಡಾವಳಿ. ಪಿಡೋಪಿಲಿಯಾ ಅರ್ಥಾತ್ ಬಾಲನಿಂದೆ ಅಂತ ಕರೆಸಿಕೊಳ್ಳುವ ಮಾನಸಿಕ ಅಸ್ವಸ್ಥತೆಯೊಂದು ಅಮೆರಿಕದಲ್ಲಿ ದಟ್ಟವಾಗಿದೆ. 12-10 ವರ್ಷದೊಳಗಿನ ಮಕ್ಕಳನ್ನು ಕಾಮದಾಟಕ್ಕೆ ಬಳಸಿಕೊಳ್ಳುವ ಭೀಕರ ಲೋಕ ಅದು.

ಅಮೆರಿಕದ ಗೃಹಖಾತೆಯೇ ಈ ಹಿಂದೆ ನೀಡಿರುವ ಅಂಕಿಅಂಶವೊಂದರ ಪ್ರಕಾರ ಪ್ರತಿವರ್ಷ ಜಗತ್ತಿನಾದ್ಯಂತ 6-8 ಲಕ್ಷ ಮಾನವ ಕಳ್ಳಸಾಗಣೆ ಆಗುತ್ತದೆ. ಈ ಪೈಕಿ 14-17 ಸಾವಿರ ಮಂದಿಯನ್ನು ಅಮೆರಿಕಕ್ಕೆ ಒಯ್ಯಲಾಗುತ್ತದೆ. ಇದರಲ್ಲಿ ಅರ್ಧದಷ್ಟು ಪ್ರಮಾಣ ಮಕ್ಕಳದ್ದೇ!

ಅಲ್ಲಿ ಮಕ್ಕಳನ್ನುಲೈಂಗಿಕವಾಗಿ ಬಳಸಿಕೊಳ್ಳುವ ಬಾಲನಿಂದಕ ವಿಕೃತರಿದ್ದಾರೆ. ಅಮೆರಿಕದಲ್ಲಿ ಇಂಥ ಪ್ರಕರಣಗಳು ಆಗಾಗ ವರದಿಯಾಗಿ ಶಿಕ್ಷೆಗಳೂ ಆಗುತ್ತಿವೆ. ಆದರೂ ಅಲ್ಲಿನ ಸಮಾಜ ಬಾಲನಿಂದೆಯನ್ನು ಅಪರಾಧವೆಂದು ಪರಿಗಣಿಸಬೇಕೋ ಅಥವಾ ಅದರಲ್ಲಿ ತೊಡಗಿಕೊಂಡವರ ಲೈಂಗಿಕ ಅಭೀಪ್ಸೆ ಭಿನ್ನ ಬಗೆಯದು ಎಂದು ಪರಿಗಣಿಸಿ ಅದನ್ನು ಮಾನಸಿಕ ಅನುಕಂಪದ ಆಯಾಮದಲ್ಲಿ ನೋಡಬೇಕೋ ಎಂಬ ಚರ್ಚೆಯಲ್ಲಿದೆ! ಈ ಬಗ್ಗೆ ಅಧ್ಯಯನಗಳು ಜಾರಿಯಲ್ಲಿವೆಯಾದರೂ, ಸಾಮಾನ್ಯ ಗ್ರಹಿಕೆಯಿಂದ ಒಂದಂಶ ಹೇಳಬಹುದು. ಭಾರತದಲ್ಲಿ ಹುಡುಗ- ಹುಡುಗಿ ಯಾವ ಹಂತದಲ್ಲಿ ನಿಜವಾದ ಲೈಂಗಿಕ ಸುಖ ಅನುಭವಿಸುತ್ತಾರೋ ಅದನ್ನು ಹೈಸ್ಕೂಲು ಮಟ್ಟದಲ್ಲೇ ತಮ್ಮದಾಗಿಸಿಕೊಳ್ಳುವ ಅವಕಾಶ ಮುಂದುವರಿದ ದೇಶಗಳಲ್ಲಿದೆ. ಇದನ್ನು ಮುಗಿಸಿದ ನಂತರದ ಭಿನ್ನ ಅನುಭವಕ್ಕಾಗಿ ಇಂಥ ವಿಕೃತಿಗೆ ಕೆಲವರು ಹೊರಳುತ್ತಿದ್ದಾರೆಯೇ ಎಂಬುದು ಯೋಚಿಸಬೇಕಾದ ಅಂಶ. ಅದೇನೇ ಇದ್ದರೂ ಇವರ ತೀಟೆಗೆ ಬಲಿಯಾಗುತ್ತಿರುವವರು ಬಡ- ಅಭಿವೃದ್ಧಿಶೀಲ ರಾಷ್ಟ್ರದ ಮಕ್ಕಳು.

ಬೆಂಗಳೂರಿನ ವಿದ್ಯಮಾನವನ್ನೇ ತೆಗೆದುಕೊಂಡರೆ, ಇಲ್ಲಿಮುಖ್ಯ ರೂವಾರಿ ಎನಿಸಿರುವ ಬ್ರೋಕರ್ ಗೆ ಒಂದು ಮಗು ಪೂರೈಕೆಗೆ 10 ಲಕ್ಷ ರುಪಾಯಿ ಸಿಗುತ್ತದೆ ಎಂದು ಪೊಲೀಸ್ ಮೂಲಗಳು ವಿವರಿಸುತ್ತವೆ. ಅದರಲ್ಲೇನೂ ಆಶ್ಚರ್ಯವಿಲ್ಲ. ಏಕೆಂದರೆ ಅಮೆರಿಕದಲ್ಲಿಕಾಮದಾಟಕ್ಕೆ ಬಳಕೆಯಾಗುವ ಮಕ್ಕಳಿಗೆ ತಾಸಿಗೆ 50 ಸಾವಿರ ರುಪಾಯಿಗಳಲ್ಲಿವಸೂಲು ಮಾಡುತ್ತಾರೆ!

ಮಧ್ಯಪ್ರಾಚ್ಯಕ್ಕೆ ಮಕ್ಕಳ ಕಳ್ಳಸಾಗಣೆ ಆದರೆ, ಹೆಚ್ಚಿನ ಪ್ರಮಾಣದಲ್ಲಿ ಈ ಮಕ್ಕಳು ಬಳಕೆ ಆಗುವುದು ಒಂಟೆ ಓಟದ ಸ್ಪರ್ಧೆಗೆ. ಅಂದರೆ, ಭಯಗ್ರಸ್ಥ ಮಕ್ಕಳನ್ನು ಒಂಟೆ ಕೊರಳಿಗೆ ಕಟ್ಟಿ ರೇಸ್ ನಡೆಸಲಾಗುತ್ತದೆ. ಮಕ್ಕಳು ಹೆದರಿ ಅತ್ತಷ್ಟೂ ಒಂಟೆ ಜೋರಾಗಿ ಓಡುತ್ತದೆ. ಆದರೆ ಬಾಂಗ್ಲಾ, ನೇಪಾಳ, ಮಧ್ಯಪ್ರಾಚ್ಯಗಳಿಗಿಂತ ಭಿನ್ನ ವಿಕೃತಿ ಅಮೆರಿಕನ್ನರದ್ದು.

ಇಲ್ಲಿಂದ ರವಾನೆಯಾದ ಮಕ್ಕಳು ಹೋದರೆಲ್ಲಿಗೆ ಅಂತ ಲೆಕ್ಕಕ್ಕೆ ಸಿಗುತ್ತಿಲ್ಲ ಅಂತಾದರೆ, ಈ ವಿಕೃತಿಗೆ ಬಲಿಯಾಗಿರುವ ಸಾಧ್ಯತೆಯೇ ದಟ್ಟವಾಗಿದೆ.

Leave a Reply