ವಿಬ್ಗಯೋರ್ ಶಾಲೇಲಿ ಸೆರೆಸಿಕ್ಕ ಚಿರತೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿನ ಎರಡು ಬೋನು, ತಂತಿಬೇಲಿ ಹಾರಿ ಪರಾರಿ!

ಡಿಜಿಟಲ್ ಕನ್ನಡ ಟೀಮ್

‘ಹಿಡಿಯೋರಿಗೆ ಒಂದು ದಾರಿ ಆದರೆ ತಪ್ಪಿಸ್ಕೊಳ್ಳುವವರಿಗೆ ನೂರು ದಾರಿ’ ಅಂತಾರೆ. ಅದೇ ರೀತಿ, ಮೊನ್ನೆ ವಿಬ್ಗಯೋರ್ ಶಾಲೆಯಲ್ಲಿ ಬೇಜಾನ್ ಗಲಾಟೆ ಮಾಡಿ ಸೆರೆ ಸಿಕ್ಕಿದ್ದ ಫಟಿಂಗ ಚಿರತೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಭದ್ರತಾ ಸಿಬ್ಬಂದಿಗೆ ಟಾಂಗ್ ಕೊಟ್ಟು ಬೋನ್ ನಿಂದ ಪರಾರಿಯಾಗಿದೆ.

ಯೆಸ್, ನಂಬಲೇ ಬೇಕಾದ ‘ಚಿರತೆ ಕಣ್ಕಟ್ಟು’ ಆಟ ಇದು. ತಾನಿದ್ದ ಬೋನು ದಾಟಿ, ಅದಕ್ಕಂಟಿಕೊಂಡಿದ್ದ ಚಿಕಿತ್ಸೆ ಪಂಜರದ ಕಬ್ಬಿಣದ ಸರಳುಗಳನ್ನು ಹಿಂಜಿ ಹಿಗ್ಗಿಸಿ ಹೊರಬಂದು, ಹೊರಆವರಣದ 25 ಅಡಿ ಎತ್ತರದ ತಂತಿ ಬೇಲಿ ಹತ್ತಿ, ಅಲ್ಲಿಂದ ನೆಗೆದು ಈ ಖತರ್ ನಾಕ್ ಚಿರತೆ ಪರಾರಿಯಾದದ್ದು ಸೋಮವಾರ ಬೆಳಗ್ಗೆ 6.45 ಕ್ಕೆ. ತಂತಿಬೇಲಿ ಹಾರಿ ಪರಾರಿ ಆಗುವಾಗ ಭದ್ರತಾ ಸಿಬ್ಬಂದಿ ಕಣ್ಣಿಗೆ ಬಿದ್ದಿದೆಯಾದರೂ ಯಾರೂ ಏನೂ ಮಾಡುವಂತಿರಲಿಲ್ಲ. ಚಿರತೆ ಕೈ, ಬಾಯಿಗೆ ಸಿಗದಿದ್ದರೆ ಸಾಕು ಎಂದು ಬಡಜೀವ ಉಳಿಸಿಕೊಳ್ಳಲು ದಾರಿ ಹುಡುಕುತ್ತಿದ್ದ ಸಿಬ್ಬಂದಿಯನ್ನು ಅಣಕಿಸುವಂತೆ ಈ ಚಿರತೆ ಸಂರಕ್ಷಿತಾ ಕಾಡು ಪ್ರದೇಶದಲ್ಲಿ ತನ್ನ ಬದುಕಿನ ದಾರಿ ಅರಸಿಕೊಂಡು ಓಡಿಹೋಗಿದೆ.

ಬೆಂಗಳೂರು ಹೊರವಲಯದ ವಿಬ್ಗಯೋರ್ ಶಾಲೆಯಲ್ಲಿ ಕಳೆದ ಫೆ. 7 ರಂದು ಭಾನುವಾರ ಕಂಡುಬಂದ ಈ ಚಿರತೆಯನ್ನು ಸತತ 14 ಗಂಟೆಗಳ ಕಾರ್ಯಾಚರಣೆ ನಂತರ ಸೆರೆಹಿಡಿಯಲಾಗಿತ್ತು. ಅಷ್ಟೊತ್ತಿಗೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸೇರಿದಂತೆ ಆರು ಮಂದಿ ಮೇಲೆ ಹಲ್ಲೆ ನಡೆಸಿದ್ದ ಈ ಚಿರತೆ ತೀರಾ ವ್ಯಗ್ರಗೊಂಡಿತ್ತು. ಅದರ ವ್ಯಗ್ರತೆ ಎಷ್ಟರಮಟ್ಟಿಗಿತ್ತೆಂದರೆ ಬನ್ನೇರುಘಟ್ಟಕ್ಕೆ ಸಾಗಿಸಿದ ಬೋನಿನ ಕಬ್ಬಿಣದ ಸರಳುಗಳೇ ಬೆಂಡಾಗಿ ಹೋಗಿದ್ದವು. ಈಗ ಚಿರತೆ ಅದೇ ರೀತಿ ಬೋನಿನ ಸರಳುಗಳನ್ನು ಹಿಗ್ಗಿಸಿ ಹೊರಬಂದು ಕಾಡಿನಲ್ಲಿ ಕಣ್ಮರೆಯಾಗಿದೆ. ಅದಕ್ಕೆ ಮೊದಲು ತನ್ನ ಶಕ್ತಿ ಮತ್ತು ಯುಕ್ತಿ ಎರಡನ್ನೂ ಚೆನ್ನಾಗಿ ಬಳಸಿಕೊಂಡಿದೆ.

ಬನ್ನೇರುಘಟ್ಟ ವನ್ಯಜೀವಿ ಪುನರ್ವಸತಿ ಕೇಂದ್ರದ ಸಾಲು ಬೋನುಗಳಲ್ಲಿ ಸುಮಾರು 20 ಚಿರತೆಗಳನ್ನು ಇರಿಸಲಾಗಿದೆ. ಸಿಕ್ಕಾಪಟ್ಟೆ ಸಿಟ್ಟು ಎಂಬ ಕಾರಣಕ್ಕೆ ಈ ಚಿರತೆಯನ್ನು ಪ್ರತ್ಯೇಕ ಬೋನಿನಲ್ಲಿ ಇರಿಸಲಾಗಿತ್ತು. ಅದರ ವ್ಯವಸ್ಥೆ ಹೇಗಿದೆ ಎಂದರೆ, ಮೊದಲು ಚಿರತೆಯ ಕಬ್ಬಿಣದ ಬೋನು. ಇದಕ್ಕೆ ಹೊಂದಿಕೊಂಡಂತೆ ಮತ್ತೊಂದು ಕಿರಿದಾದ ಕಬ್ಬಿಣದ ಪಂಜರ. ಚಿರತೆಗೆ ಔಷಧೋಪಚಾರ ಮಾಡಲು ಈ ಕಿರಿದಾದ ಪಂಜರದಲ್ಲಿ ಮಿಸುಕಾಡದಂತೆ ಸೇರಿಸಿಕೊಳ್ಳಲಾಗುತ್ತದೆ. ಈ ಪಂಜರದ ಹಿಂಭಾಗದಲ್ಲಿ ವಿಶಾಲ ಆವರಣ ಇದೆ. ಚಿರತೆ ಆರಾಮವಾಗಿ ಓಡಾಡಿಕೊಂಡಿರಲಿ ಅಂತ. ಅದರ ಸುತ್ತಲು 25 ಅಡಿ ಎತ್ತರದ ತಂತಿಬೇಲಿ. ಚಿರತೆ ಬೋನಿನಿಂದ ಔಷಧೋಪಚಾರ ಪಂಜರಕ್ಕೆ ಬರಲು ಬಾಗಿಲಿದೆ. ಅದೇ ರೀತಿ ಪಂಜರದಿಂದ ವಿಶಾಲ ಆವರಣಕ್ಕೆ ಬರಲು ಮತ್ತೊಂದು ಬಾಗಿಲು. ಬೋನು ಮತ್ತು ಪಂಜರದ ಮೇಲ್ಮಧ್ಯ ಭಾಗದಲ್ಲಿ ಪ್ರತ್ಯೇಕ ಕಬ್ಬಿಣದ ಹಗ್ಗ ಇಳಿಬಿಟ್ಟಿರುತ್ತಾರೆ. ಅದು ಹೊರಮೇಲ್ಭಾಗದ ರಾಟೆ ಮೂಲಕ ನಿಯಂತ್ರಿಸಲ್ಪಡುತ್ತದೆ. ಚಿರತೆ ಬೋನಿನಿಂದ ಪಂಜರಕ್ಕೆ, ಪಂಜರದಿಂದ ಹೊರಆವರಣಕ್ಕೆ ಬರಲು ಸಹಕಾರಿ ಆಗುವಂತೆ.

ಹೀಗಿರುವಾಗ ಈ ಚಿರತೆ ಮೊದಲಿಗೆ, ಬೋನಿನ ಮಧ್ಯಭಾಗದಲ್ಲಿ ಇಳಿಬಿಟ್ಟಿದ್ದ ಕಬ್ಬಿಣದ ಹಗ್ಗವನ್ನು ಹಿಡಿದುಕೊಂಡು ಜೋಕಾಲಿಯಾಡಿದೆ. ಹಗ್ಗ ಜಗ್ಗಾಟದಿಂದ ಚಿಕಿತ್ಸೆ ಪಂಜರದ ಬಾಗಿಲು ತೆರೆದುಕೊಂಡಿದೆ. ಅಲ್ಲಿಗೆ ಬಂದ ಚಿರತೆ ಶಕ್ತಿಯನ್ನೆಲ್ಲ ಕ್ರೋಢೀಕರಿಸಿ ಕಬ್ಬಿಣದ ಸರಳುಗಳನ್ನು ಹಿಗ್ಗಿಸಿ, ಕಷ್ಟಪಟ್ಟು ಮೈತೂರಿಸಿ ಹೊರಬಂದು ವಿಶಾಲ ಆವರಣ ಸೇರಿಕೊಂಡಿದೆ. ನಂತರ ಆ ಆವರಣದ ಸುತ್ತಲಿನ 25 ಆಡಿ ಎತ್ತರದ ತಂತಿ ಬೇಲಿಯನ್ನು ಏಣಿಯಂತೆ ಹತ್ತಿ, ಹೊರಕ್ಕೆ ಹಾರಿ ಓಡಿಹೋಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ದಟ್ಟ ಕಾನನಕ್ಕೆ ಹೊಂದಿಕೊಂಡಿದೆ. ಆನೇಕಲ್, ಕನಕಪುರ, ಮುತ್ತತ್ತಿ, ಮಲೆಮಹದೇಶ್ವರಬೆಟ್ಟ, ನಾಗರಹೊಳೆ, ಬಂಡೀಪುರ, ಕೇರಳದ ವಯನಾಡ್ ವರೆಗೂ, ಇನ್ನೊಂದೆಡ ಮುತ್ತತ್ತಿ ಮೂಲಕ ತಮಿಳುನಾಡಿನ ಡೆಂಕನಕೋಟೆವರೆಗೂ ಈ ಅರಣ್ಯವಲಯ ವಿಸ್ತಾರಗೊಂಡಿದೆ. ಈಗ ಚಿರತೆಯ ಪಯಣ ಎತ್ತಲಿಗೋ ಗೊತ್ತಿಲ್ಲ. ಅದು ಕಾಡಿನ ದಾರಿ ತುಳಿಯುತ್ತದೋ, ನಾಡಿನ ಕಡೆ ಇನ್ನೊಂದು ರೌಂಡು ಬರುತ್ತದೋ ಗೊತ್ತಿಲ್ಲ. ನೋಡಬೇಕು…!

Leave a Reply