ಅಂಡರ್19 ವಿಶ್ವಕಪ್ ಮುಗೀತು, ಕಿರಿಯರ ಮಾರ್ಗವೇನು?

ಸೋಮಶೇಖರ ಪಿ. ಭದ್ರಾವತಿ

ಭವಿಷ್ಯದ ಸ್ಟಾರ್ ಗಳನ್ನು ಹುಟ್ಟು ಹಾಕೋ ವೇದಿಕೆ ಎಂದೇ ಬಿಂಬಿತವಾಗಿದ್ದ ಅಂಡರ್ 19 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದೆ. ನಿರೀಕ್ಷೆಯಂತೆ ಭರವಸೆಯ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದೂ ಬಿಂಬಿತವಾಗಿತ್ತಾದರೂ ವೆಸ್ಟ್ ಇಂಡೀಸ್ ತಂಡ ಅಚ್ಚರಿ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆದ್ದುಕೊಂಡು ಹೋಯಿತು. ಇದು 1983ರಲ್ಲಿ ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಮಣಿಸಿ ಅಚ್ಚರಿ ಮೂಡಿಸಿದಂತೆ, ಈಗ ವಿಂಡೀಸ್ ಕಿರಿಯರು ಪ್ರಶಸ್ತಿ ಫೇವರಿಟ್ ಭಾರತವನ್ನು ಪರಾಭವಗೊಳಿಸಿದ್ದಾರೆ. ಫಲಿತಾಂಶ ಏನೇ ಇರಲಿ, ಯಾರೇ ಗೆಲ್ಲಲಿ. ಈಗ ಪ್ರತಿಯೊಬ್ಬರು ಗಮನ ಹರಿಸಬೇಕಾದ ಪ್ರಮುಖ ವಿಷಯ, ಈ ಆಟಗಾರರ ಮುಂದಿನ ಸವಾಲುಗಳೇನು ಎಂಬುದರ ಬಗ್ಗೆ.

ಅಂಡರ್ 19 ತಂಡದಲ್ಲಿ ಆಡಿದ ಬಹುತೇಕ ಆಟಗಾರರು ಸ್ವಲ್ಪ ದಿನಗಳಲ್ಲೇ ಈ ವಯೋಮಾನವನ್ನು ದಾಟಲಿದ್ದಾರೆ. ಹಾಗಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಈ ಯುವ ಪ್ರತಿಭೆಗಳ ಮುಂದಿನ ಗುರಿಯಾಗಬೇಕಿದೆ. ಈ ಹಿಂದೆ ಯುವರಾಜ್ ಸಿಂಗ್, ಮೊಹಮದ್ ಕೈಫ್, ರೋಹಿತ್ ಶರ್ಮಾ, ಇರ್ಫಾನ್ ಪಠಾಣ್, ಶಿಖರ್ ಧವನ್, ವಿರಾಟ್ ಕೊಹ್ಲಿ ಹೀಗೆ ಹಲವು ಆಟಗಾರರು ಕಿರಿಯರ ವಿಶ್ವಕಪ್ ಮುಗಿಯುತ್ತಿದ್ದಂತೆ ತಮ್ಮ ಸ್ಪರ್ಧೆಯನ್ನು ಹಿರಿಯ ಆಟಗಾರರೊಂದಿಗೆ ನಡೆಸಿದರು. ಕಠಿಣ ಪರಿಶ್ರಮದಿಂದ ಶೀಘ್ರವಾಗಿ ಟೀಂ ಇಂಡಿಯಾ ಬಾಗಿಲು ತಟ್ಟಿದರು. ಸ್ಥಾನ ಪಡೆದು ವಿಶ್ವಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಗುರಿ ಮುಟ್ಟಿದರು. ಪ್ರಸ್ತುತ ಅಂಡರ್ 19 ತಂಡದ ಆಟಗಾರರ ಮುಂದೆ ಇರುವ ಸವಾಲು ಸಹ ಇದೇ. ಸ್ವತಃ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್, ವಿಶ್ವಕಪ್ ಮುಗಿದ ನಂತರ ಈ ಆಟಗಾರರು ರಾಷ್ಟ್ರೀಯ ತಂಡದ ಆಟಗಾರರೊಂದಿಗೆ ಪೈಪೋಟಿ ನಡೆಸಬೇಕಿದೆ ಎಂದು ಮಾತಾಡಿದ್ದರು.

ಹೌದು, ಕಿರಿಯರ ವಿಶ್ವಕಪ್ ಮುಗಿದ ನಂತರ ಈ ಆಟಗಾರರೆಲ್ಲರೂ ಪ್ರಥಮ ದರ್ಜೆ ಮಟ್ಟದ ಟೂರ್ನಿಗಳಲ್ಲಿ ಆಡಬೇಕಾಗುತ್ತದೆ. ಒಂದಿಬ್ಬರು ಆಟಗಾರರು ಮಾತ್ರ 17ರ ಆಸುಪಾಸಿನಲ್ಲಿದ್ದು, ಅವರು ಮಾತ್ರ ಮುಂದಿನ ವಿಶ್ವಕಪ್ ವರೆಗೂ ಈ ಮಟ್ಟದಲ್ಲಿ ಆಡುವ ಅವಕಾಶ ಇದೆ. ಉಳಿದವರೆಲ್ಲ ಈ ಮಟ್ಟದಲ್ಲಿ ತಮ್ಮ ಆಟ ಅಂತ್ಯಗೊಳಿಸಿದ್ದಾರೆ. ಕಿರಿಯರ ಮಟ್ಟದಿಂದ ಹಿರಿಯರ ವೇದಿಕೆಯಲ್ಲಿ ಆಡುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಹೊಸ ಸವಾಲು ಹಾಗೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ.

ಈ ಆಟಗಾರರ ಪೈಕಿ ಕೆಲವರು ಈಗಾಗಲೇ ರಣಜಿ ತಂಡದಲ್ಲಿ, ಐಪಿಎಲ್ ಹಾಗೂ ಪ್ರಥಮ ದರ್ಜೆ ಮಟ್ಟದಲ್ಲಿ ಪದಾರ್ಪಣೆ ಮಾಡಿದ್ದಾರೆ. ಆದರೆ, ಅಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಂಡು ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವುದು ಈ ಆಟಗಾರರಿಗೆ ನಿಜವಾದ ಪರೀಕ್ಷೆ ಎಂದರೆ ತಪ್ಪಲ್ಲ. ಈ ಆಟಗಾರರು ಐಪಿಎಲ್, ರಣಜಿಯಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಸಂಪಾದಿಸುವುದು ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಆದರೆ, ಈ ಹಂತದಲ್ಲಿ ಸಿಕ್ಕ ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳುವರು, ಅದಕ್ಕಾಗಿ ನಡೆಸುವ ತಾಲೀಮು, ಪ್ರಯತ್ನಗಳು ಏನು ಎಂಬುದೇ ಮುಖ್ಯವಾಗುತ್ತವೆ. ಕೇವಲ 50 ಓವರ್ ಮಾದರಿ ಮಾತ್ರವಲ್ಲದೇ, ಕ್ರೀಡೆಯ ಮೂರೂ ಮಾದರಿಯಲ್ಲಿ ಆಟಗಾರನಿಗೆ ಬೇಕಾದ ಪ್ರತಿಭೆ ಹಾಗೂ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಸಹ ಒಂದು ಸವಾಲಾಗಿದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತಾಗ ಮಾತ್ರ, ಈ ಯುವ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ, ಹತ್ತರ ಜತೆ ಒಂದು ಹನ್ನೊಂದು ಎಂಬಂತೆ ಕಣ್ಮರೆಯಾಗುತ್ತಾರೆ.

Leave a Reply