ಜೆ ಎನ್ ಯು ದೇಶವಿರೋಧಿ ಕೂಗುಗಳನ್ನುವಿರೋಧಿಸುತ್ತಲೇ ದೇಶ ಖಂಡಿಸಬೇಕಿರುವ 2 ಅತಿರೇಕಗಳು

ಪ್ರವೀಣ್ ಕುಮಾರ್

ಜೆ ಎನ್ ಯುದ ರಾಷ್ಟ್ರವಿರೋಧಿ ಘೋಷಣೆಗಳನ್ನುಉಗ್ರವಾಗಿ ಖಂಡಿಸುತ್ತಲೇ ಈ ದೇಶದ ಬಲಪಂಥದೊಂದಿಗೆ ಗುರುತಿಸಿಕೊಂಡಿರುವವರ ಎರಡು ಅತಿರೇಕಗಳನ್ನು ವಿರೋಧಿಸಲೇಬೇಕು.

  1. ಪಾಟಿಯಾಲಾ ನ್ಯಾಯಾಲಯಕ್ಕೆ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರರನ್ನು ಹಾಜರುಪಡಿಸಿದ ಸಂದರ್ಭದಲ್ಲಿ, ಕೋರ್ಟ್ ನ ಹೊರ ಆವರಣದಲ್ಲಿ ಬಿಜೆಪಿ ನಾಯಕ ಓಂ ಪ್ರಕಾಶ್ ಶರ್ಮಾ ನಡೆದುಕೊಂಡ ರೀತಿ. ನ್ಯಾಯಾಲಯದ ಹೊರಗೆ ಕನ್ಹಯ್ಯ ಬಂಧನದ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬನ ಮೇಲೆ ಹಲ್ಲೆ ಮಾಡಿರುವುದು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ‘ಶರ್ಮಾರಿಗೆ ಮೊದಲು ಈ ವಿದ್ಯಾರ್ಥಿಗಳು ಪ್ರಚೋದಿಸಿ, ತಲೆ ಮೇಲೆ ಮೊಟಕಿದ್ದರಿಂದ ಪ್ರತಿಕ್ರಿಯಾತ್ಮಕವಾಗಿ ಹಲ್ಲೆ ಮಾಡಿದರು’ ಅನ್ನೋದು ಬಿಜೆಪಿ ನೀಡುತ್ತಿರುವ ಸಮರ್ಥನೆ. ‘ನನ್ನ ಕೈಯಲ್ಲಿ ಬಂದೂಕು ಇದ್ದರೆ ಗುಂಡೇ ಹೊಡೀತಿದ್ದೆ. ಯಾರಾದರೂ ತಾಯಿಯನ್ನು ನಿಂದಿಸಿದರೆ ಸುಮ್ಮನಿರಬೇಕೆ’ ಎಂಬ ವೀರಾವೇಶದ ಪ್ರತಿಕ್ರಿಯೆ ಶರ್ಮಾರದ್ದು.

ಸಣ್ಣದೊಂದು ಸೈದ್ಧಾಂತಿಕ ವರ್ಗವೊಂದನ್ನು ಹೊರತುಪಡಿಸಿದರೆ, ದೇಶವನ್ನು ತುಂಡುಮಾಡುವ ಘೋಷಣೆ ಕೂಗಿದವರ ವಿರುದ್ಧ ಉಗ್ರಕ್ರಮ ಜರುಗಲಿ ಎಂಬುದನ್ನೇ ದೇಶವಾಸಿಗಳು ಬಯಸುತ್ತಿದ್ದಾರೆ. ಹಾಗೆ ಕೂಗಿದ್ದವರ ನೇತೃತ್ವ ಕನ್ಹಯ್ಯ ವಹಿಸಿದ್ದು ಹೌದೋ, ಅಲ್ಲವೋ ಎಂಬುದೆಲ್ಲ ನ್ಯಾಯಾಲಯದಲ್ಲಿ ನಿರ್ಧಾರವಾಗಲಿ. ಅದಕ್ಕೂ ಮುನ್ನ, ನ್ಯಾಯಾಲಯದ ಹೊರಗಡೆ ಜಮಾಯಿಸಿ ಪ್ರತಿಭಟನೆ ಮಾಡುವ ವಿದ್ಯಾರ್ಥಿ ಗುಂಪಿನ ನಡೆಗೂ ಅರ್ಥವಿಲ್ಲ ಹಾಗೂ ಇವರನ್ನೆಲ್ಲ ಮುಗಿಸಿಬಿಡುತ್ತೇನೆ ಎಂಬಂಥ ಆಕ್ರಮಣ ತೋರುತ್ತಿರುವ ಒಪಿ ಶರ್ಮರಂಥವರ ನಡೆಯನ್ನೂ ದೇಶಭಕ್ತಿ ಹೆಸರಲ್ಲಿ ಸಮರ್ಥಿಸುವುದು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ನ್ಯಾಯಾಲಯದ ಎದುರು ನಿಂತು ಕನ್ಹಯ್ಯ ಕುಮಾರ್ ಬಿಡುಗಡೆ ಆಗಲಿ ಅಂತ ಎಡಪಂಥೀಯರು ಕೂಗಿದರೆ, ನೆರೆದಿರುವವರ ಗಲಾಟೆ ನೋಡಿ ನ್ಯಾಯಾಲಯ ನಿರ್ಧಾರಕ್ಕೆ ಬರೋದಿಲ್ಲ. ಅದು ಪರಿಗಣಿಸೋದು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮಾತ್ರ.

  1. ಶಾರುಖ್ ಖಾನ್ ವಿರುದ್ಧ ಸಿಟ್ಟುಗೊಳ್ಳುವ ಹಕ್ಕು ಎಲ್ಲರಿಗೂ ಇದೆ. ಅದನ್ನು ವ್ಯಕ್ತಪಡಿಸುವುದಕ್ಕೂ ಮಾರ್ಗಗಳಿವೆ. ಶಾರುಖ್ ಚಿತ್ರಗಳನ್ನು ನೋಡದಿರುವುದು, ನೀವೂ ನೋಡಬೇಡಿ ಅಂತ ಸಮಾನ ಮನಸ್ಕರಲ್ಲಿ ಜಾಗೃತಿ ಮೂಡಿಸೋದು, ಅವರು ಪ್ರಚಾರ ಮಾಡುತ್ತಿರೋ ವಸ್ತುಗಳನ್ನು ಖರೀದಿಸಲ್ಲ ಅನ್ನೋದು… ಇಂಥವೆಲ್ಲಪ್ರತಿಭಟಿಸುವವರ ‘ಅಭಿವ್ಯಕ್ತಿ ಸ್ವಾತಂತ್ರ್ಯ’, ಹಾಗೂ ಇದು ಪರಿಣಾಮಕಾರಿ ಅಂತಲೂ ಇತ್ತೀಚೆಗೆ ಸಾಬೀತಾಗಿದೆ.

ಆದರೆ, ಸಿನಿಮಾ ಪ್ರದರ್ಶನಕ್ಕೆ ತಡೆ ಒಡ್ಡುವುದು.., ಇನ್ನೊಬ್ಬರನ್ನು ಬಲವಂತವಾಗಿ ಪ್ರತಿಬಂಧಿಸುವುದು ಇವೆಲ್ಲ ಕಾನೂನುಬಾಹಿರ. ತಮ್ಮದೇ ಗುಂಪಿನ ಕಟ್ಟರ್ ವಾದಿಗಳು ಚಪ್ಪಾಳೆ ಹೊಡೆಯಬಹುದಾಗಲೀ ಭಾರತದ ಬಹುಸಂಖ್ಯಾತರು ಇಂಥ ಭಯದ ವಾತಾವರಣ ಒಪ್ಪುವುದೂ ಇಲ್ಲ. ಗುಜರಾತ್ ನಲ್ಲಿ ರಾಯೀಸ್ ಚಿತ್ರೀಕರಣ ಮಾಡುತ್ತಿದ್ದ ವೇಳೆ, ಇದಕ್ಕೆ ಅನುಮತಿಯನ್ನೇ ಕೊಡಬಾರದು ಅಂತ ವಿಎಚ್ ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅದಾಗಿ ಎರಡು ದಿನಗಳ ನಂತರ ಶಾರುಖ್ ಕಾರಿಗೆ ಕಲ್ಲುತೂರಿದ ಘಟನೆ ನಡೆಯಿತು. ಈ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆಯಾದರೂ ನೇರವಾಗಿ ಯಾವ ಸಂಘಟನೆ ಮೇಲೂ ಆರೋಪ ದೃಢಪಟ್ಟಿಲ್ಲ.

ಅದು ಜೆ ಎನ್ ಯುದಲ್ಲಿ ಮೊಳಗಿದ ದೇಶದ್ರೋಹದ ಘೋಷಣೆಗಳಿರಬಹುದು ಇಲ್ಲವೇ ಶಾರುಖ್ ಅಸಹಿಷ್ಣುತೆ ಹೇಳಿಕೆ ಇರಬಹುದು ಆಯಾ ಪ್ರಕರಣದ ವ್ಯಾಪ್ತಿಗೆ ತಕ್ಕಂತೆ ಸರಿಯಾದ ಬಿಸಿ ಮುಟ್ಟಲಿ ಅಂತ ಬಯಸುವ ದೇಶವಾಸಿಗಳ ಸಂಖ್ಯೆ ದೊಡ್ಡದಿದೆ. ಹಾಗಂತ ಇದನ್ನು ಲಾಭಕ್ಕೆ ಪರಿವರ್ತಿಸಿಕೊಳ್ಳುವುದಕ್ಕೆ ಹೊರಡುವ ರೈಟು- ಲೆಫ್ಟುಗಳ ಅತಿರೇಕಗಳ್ಯಾವವೂ ಬೇಕಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳಲಿ ಎಂಬ ದೇಶಕಾಳಜಿಯ ಧ್ವನಿಗಳಿಗೆ ಈ ದೇಶ ಗೌರವ ನೀಡುತ್ತದೆಯೇ ಹೊರತು, ತಾವೇ ಕಾನೂನಾಗಿ ದೇಶ ಕಾಪಾಡುತ್ತೇವೆ ಎಂಬ ಆಕ್ರೋಶಗಳಿಗಲ್ಲ.

Leave a Reply