ಟಾಟಾ ಅಷ್ಟೇ ಅಲ್ಲ, ಸ್ಟೀವ್ ಜಾಬ್ಸೂ ಜೆ ಎನ್ ಯು ಹುಡುಗ್ರನ್ನ ಕೆಲ್ಸಕ್ಕೆ ತಗಳ್ಳಲ್ಲ… ಹಂಗಂದಿದ್ದು ಅನ್ ಅಫೀಷಿಯಲ್ ಸ್ವಾಮಿ!

ಡಿಜಿಟಲ್ ಕನ್ನಡ ಟೀಮ್

ರತನ್ ಟಾಟಾ ಅವರು ಜೆ ಎನ್ ಯುದ ಪದವೀಧರರನ್ನು ತಮ್ಮ ಸಂಸ್ಥೆಗೆ ನೇಮಿಸಿಕೊಳ್ಳುವುದಿಲ್ಲ ಎಂದು ಸಾರಿದ್ದಾರೆ ಎಂಬ ಮಾಹಿತಿ ಸೋಮವಾರವಿಡೀ ಸಾಮಾಜಿಕ ಜಾಲತಾಣದಲ್ಲಿ, ವಿಶೇಷವಾಗಿ ಫೇಸ್ ಬುಕ್ ನಲ್ಲಿಹರಿದಾಡಿಕೊಂಡಿತ್ತು. ಟಾಟಾ ಅಂಥ ಯಾವುದೇ ಹೇಳಿಕೆ ನೀಡಿಲ್ಲ ಅಂತ ಸಂಸ್ಥೆ ಸ್ಪಷ್ಟಪಡಿಸಿದೆ.

ರತನ್ ಟಾಟಾ ಅವರು ಹೇಳಿದ್ದಾರೆಂಬ ಈ ಹೇಳಿಕೆ ಇಟ್ಟುಕೊಂಡು, ತಮ್ಮನ್ನು ದೇಶಭಕ್ತರ ಸಾಲಿನಲ್ಲಿ ಇಟ್ಟುಕೊಂಡವರು ಸೋಮವಾರವಿಡೀ ಸಂಭ್ರಮದಲ್ಲಿದ್ದರು. ‘ಟಾಟಾ ನಿಜವಾದ ದೇಶಪ್ರೇಮಿ. ನೋಡಿ ಜೆ ಎನ್ ಯು ದೇಶದ್ರೋಹಿಗಳಿಗೆ ಸರಿಯಾಗಿ ಜಾಡಿಸಿದ್ದಾರೆ’ ಎಂದೆಲ್ಲ ದೇಶಭಕ್ತಿಯ ಉದ್ವೇಗಗಳು ಹರಿದಾಡಿದ್ದವು. ಇದೀಗ ಟಾಟಾ ಕಂಪನಿ ನೀಡಿರುವ ಸ್ಪಷ್ಟನೆಯಿಂದ, ಕಂಡಿದ್ದನ್ನೆಲ್ಲ ಶೇರ್ ಮಾಡುವುದು ಎಂಥ ನಗೆಪಾಟಲಿಗೆ ಒಡ್ಡಬಹುದು ಎಂಬುದನ್ನು ಜಾಹೀರಾಗಿಸಿದೆ.

ಮಜದ ಸಂಗತಿ ಏನೆಂದರೆ ಅಂತರ್ಜಾಲದಲ್ಲಿ ಇಂಥ ಫೇಕುಗಳ ಮನರಂಜನಾ ಪರ್ವವೇ ಬಿದ್ದುಕೊಂಡಿದೆ. ಟ್ವಿಟ್ಟರ್ ನಲ್ಲಿ ಸರ್ ರವೀಂದ್ರ ಜಡೇಜಾ ಹೆಸರಿನ ಖಾತೆಯೊಂದಿದೆ. ಇದನ್ನು ನಿಜವಾಗಿಯೂ ಕ್ರಿಕೆಟರ್ ಖಾತೆ ಅಂತಲೇ ನಂಬಿಕೊಂಡಿರುವವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಭಾರತೀಯ ಕ್ರಿಕೆಟ್ ನ ದೊಡ್ಡ ದೇಶಭಕ್ತ ಎಂದರೆ ರವೀಂದ್ರ ಜಡೇಜ ಅಂತ ಹೆಮ್ಮೆಪಡುವ ಕುರುಡು ಬೆಂಬಲಿಗರ ಸಂಖ್ಯೆಯೂ ಜೋರು. ಏಕಂದ್ರೆ, ಬಲಪಂಥೀಯರಿಗೆ ಇಷ್ಟವಾಗುವ ಪಂಚಿಂಗ್ ಟ್ವೀಟ್ ತೇಲಿಸೋದರಲ್ಲಿ ಈ ಖಾತೆಯ ಕೌಶಲ ಮೆಚ್ಚುವಂಥದ್ದು. ಇದನ್ನು ಅನುಸರಿಸುತ್ತಿರುವ ಎಲ್ಲರೂ ಇದು ಜಡೇಜ ಖಾತೆಯೇ ಅಂಥ ನಂಬಿದ್ದಾರೆ ಅಂತೇನಿಲ್ಲ. ಇದು ವಿಡಂಬನೆಯ ಖಾತೆ ಅಂತ ಗೊತ್ತಿದ್ದೂ ತಮಾಷೆಗೆ, ಕಿಕ್ ಗೆ ಇದನ್ನು ಅನುಸರಿಸಿ ರೀಟ್ವೀಟ್ ಮಾಡೋರು ಇದಾರೆ.

ಬಲಪಂಥೀಯರ ಭಾವನೆಯನ್ನು ಬಂಡವಾಳ ಮಾಡಿಕೊಂಡು ಅದ್ಭುತ ಎತ್ತರಕ್ಕೆ ಏರಿರುವ ಫೇಸ್ಬುಕ್ ಪೇಜೊಂದರ ಕತೆಯನ್ನಂತೂ ಹೇಳಲೇಬೇಕು. ಅದುವೇ ‘ಅನ್ ಅಫೀಷಿಯಲ್ ಸುಬ್ರಮಣಿಯಮ್ ಸ್ವಾಮಿ’. ಒಂದೂವರೆ ಲಕ್ಷ ಅನುಯಾಯಿಗಳನ್ನು ಹೊಂದಿರುವ ಈ ಪುಟವನ್ನು ಮ್ಯಾಂಗೋಮನ್ ಎಂಬ ಮುಖರಹಿತ ಟೆಕಿ ನಡೆಸುತ್ತಿರೋದು. ತಮಾಷೆ ಅಂದ್ರೆ, ಇದನ್ನು ಅನುಸರಿಸುತ್ತಿರುವವರಲ್ಲಿಸುಬ್ರಮಣಿಯನ್ ಸ್ವಾಮಿ ಬೆಂಬಲಿಗರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕುರುಡು ಅನುಸರಣೆ ಅನ್ನೋದು ಇದಕ್ಕೇ. ನೋಡುವಷ್ಟು ದಿನ ನೋಡಿ ಸುಬ್ರಮಣಿಯನ್ ಸ್ವಾಮಿ ಟ್ವೀಟು ಬರೆದರು- ‘ಇದು ಕಾಂಗಿ- ಆಪ್ಟಾರ್ಡ್ ಗಳ ಕೆಲಸ. ಈ ಪುಟ ಬಂದ್ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ’ ಅಂತ. ಅದುವರೆಗೆ ಅಫೀಷಿಯಲ್ ಸುಬ್ರಮಣಿಯಮ್ ಸ್ವಾಮಿ ಅಂತಿದ್ದ ಪುಟ, ‘ಅನ್ ಅಫೀಷಿಯಲ್’ ಅಂತ ಕರೆದುಕೊಂಡಿತು ಹೊರತು ಬಂದ್ ಆಗಲಿಲ್ಲ. ಎಲ್ಲವನ್ನೂ ಭಾರತೀಯತೆಗೆ ಬೆಸೆಯುವ ಮೂಲಕ ಈ ಪುಟ ವಿಡಂಬನೆಗಿಳಿಯಿತು. ಆದರೆ, ಇದು ಸ್ವಾಮಿಯವರದ್ದೇ ಅಭಿಪ್ರಾಯ ಅಂದುಕೊಂಡು ಶೇರ್ ಮಾಡುತ್ತಿದ್ದ ಬೆಂಬಲಿಗರೂ ಹಲವರಿದ್ದರು. ಸಾಂತಾ ಕ್ಲಾಸ್ ವಾಸ್ತವದಲ್ಲಿ ಸನಾತನ ಕೈಲಾಶ್ ಆಗಿದ್ದ, ಮೊನಾಲಿಸಾ ಮೂಲತಃ ಮೊನಾಲಿ ಶಾ ಆಗಿದ್ದಳು ಅಂತೆಲ್ಲ ತಮಾಷೆ ಮಾಡುತ್ತ ಜನಪ್ರಿಯವಾಯಿತು ಅನ್ ಅಫೀಷಿಯಲ್ ಸುಬ್ರಮಣಿಯಮ್ ಸ್ವಾಮಿ.

swamy

ಸಾಮಾಜಿಕ ಜಾಲತಾಣಗಳ ಅನುಯಾಯಿ, ಶೇರಿಗರೆಲ್ಲರೂ ಎಚ್ಚರಿಕೆಯಿಂದಿರುವ ಶ್ರಮ ತೆಗೆದುಕೊಳ್ಳಲಿ. ಇಲ್ಲವೇ ನಗೆಪಾಟಲಾಗೋದಕ್ಕೆ ಸಿದ್ಧರಿರಲಿ!

Leave a Reply