ಸಿದ್ದರಾಮಯ್ಯ, ಹೈಕಮಾಂಡ್ ‘ಮರ್ಯಾದೆ ಹತ್ಯೆ’ಗೈದ ಮರುಚುನಾವಣೆ ಫಲಿತಾಂಶ ಬರೆಯಲಿದೆಯೇ ಹೊಸ ರಾಜಕೀಯ ಭಾಷ್ಯ..?

Chief Minister Siddaramaiah during the Ed – Ul – Fitar Prayer and Wishes following the Ramzan Festival at Masjid – E – Idgah Bilal Ground in Bengaluru on Tuesday.

author-thyagaraj (1)ಹೈಕಮಾಂಡ್ ಕೊಟ್ಟ ಸವಾಲು ಜಯಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದ್ದಾರೆ. ಅವರ ಇಷ್ಟಕ್ಕೆ ವಿರುದ್ಧ ಸವಾಲು ಕೊಟ್ಟ ಕಾಂಗ್ರೆಸ್ ಹೈಕಮಾಂಡ್ ಮರ್ಯಾದೆಯೂ ಮಣ್ಣುಪಾಲಾಗಿದೆ.

ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ ಹೊಸ ರಾಜಕೀಯ ಪರಿಭಾಷೆಗೆ ನಾಂದಿ ಹಾಡಿದೆ. ಚುನಾವಣೆ ನಡೆದದ್ದು ಮೂರು ಕ್ಷೇತ್ರಗಳಿಗೆ ಆದರೂ ಕಾಂಗ್ರೆಸ್ ಪ್ರತಿಷ್ಠೆಯನ್ನು ಹೈಜಾಕ್ ಮಾಡಿದ್ದು ಮಾತ್ರ ಬೆಂಗಳೂರಿನ ಹೆಬ್ಬಾಳ. ಟಿಕೆಟ್ ಹಂಚಿಕೆ ಸಂಬಂಧ ಏರ್ಪಟ್ಟ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಅನುಮೋದಿತ ಮೂಲ ಕಾಂಗ್ರೆಸ್ಸಿಗರ ನಡವಣ ಸಮರ ಇಬ್ಬರ ‘ಮರ್ಯಾದೆ ಹತ್ಯೆ’ಯೊಡನೆ ಪರ್ಯವಸಾನಗೊಂಡಿದೆ. ಜತೆಗೆ ಮೂರು ವರ್ಷ ಅಧಿಕಾರ ಪೂರೈಸುತ್ತಿರುವ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿರುವುದರ ಹಿಂದೆ ಆಡಳಿತವಿರೋಧಿ ಅಲೆ ತೆಳ್ಳಗೆ ಬೀಸಲು ಆರಂಭಿಸಿರುವುದರ ಮುನ್ಸೂಚನೆ ಸಿಕ್ಕಿದೆ. ಎರಡು ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿ ಈ ಅಲೆಯನ್ನು ತನ್ನ ಪರ ಪರಿವರ್ತಿಸಿಕೊಳ್ಳಲು ಇರುವ ಅವಕಾಶವನ್ನು ತೆರೆದಿಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮತ ಕಬಳಿಸದಿದ್ದರೂ ಅನ್ಯರ ಗೆಲುವಿನಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸಬಹುದು ಎಂಬುದನ್ನು ಮಾಜಿ ಪ್ರಧಾನಿ ದೇವೇಗೌಡರು ಹೆಬ್ಬಾಳದಲ್ಲಿ ಶೃತಪಡಿಸಿದ್ದಾರೆ.

ಹೆಬ್ಬಾಳ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಸೋಲಲಿ, ಗೆಲ್ಲಲಿ ನಷ್ಟ ಮಾತ್ರ ಸಿದ್ದರಾಮಯ್ಯ ಅವರಿಗೇ ಎಂದು ಮೊದಲೇ ಗೆರೆ ಎಳೆಯಲಾಗಿತ್ತು. ಅದರಂತೆ ರೆಹಮಾನ್ ಸೋಲಿನ ಗೆರೆ ಸಿದ್ದರಾಮಯ್ಯನವರ ಹಣೆ ಮೇಲೆ ಮೂಡಿದೆ. ಟಿಕೆಟ್ ಹಿನ್ನೆಲೆಯಲ್ಲಿ ಏರ್ಪಟ್ಟಿದ್ದ ಚತುಷ್ಕೋನ ಒಳಜಗಳ ಕಾಂಗ್ರೆಸ್ ಗೆಲುವಿನ ಸಾಧ್ಯತೆಯನ್ನು ಎಂದೋ ಆಪೋಶನ ತೆಗೆದುಕೊಂಡಿತ್ತು. ಸೋಲಿನ ಅಂತರವಷ್ಟೇ ನಿರ್ಧಾರವಾಗಬೇಕಿತ್ತು. ಒರಿಜಿನಲ್ ಚಾಯ್ಸ್ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಉತ್ತರಾಧಿಕಾರಿ ದಿವಂಗತ ಜಗದೀಶ್ ಕುಮಾರ್ ಇಬ್ಬರಿಗಿಂತಲೂ ಹೆಚ್ಚು ಅಂದರೆ 19149 ಮತಗಳ ಅಂತರದಿಂದ ವೈ.ಎ. ನಾರಾಯಣಸ್ವಾಮಿ ಗೆಲುವು ಕಾಂಗ್ರೆಸ್ ಅಧಃಪತನದ ಸಂಕೇತವಾಗಿದೆ.

ಹಾಗೆ ನೋಡಿದರೆ ಹೆಬ್ಬಾಳ ಬಿಜೆಪಿ ಭದ್ರಕೋಟೆಯೇ. ಹಿಂದೆ ಪಕ್ಷ ಇಲ್ಲಿ ಎರಡು ಬಾರಿ ಗೆದ್ದಿತ್ತು. ಕಟ್ಟಾ ಅವರು 4952 ಹಾಗೂ ಜಗದೀಶ್ ಕುಮಾರ್ 5136 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ನಾರಾಯಣಸ್ವಾಮಿ ಗೆದ್ದಿರುವುದು 19149 ಮತಗಳಿಂದ. ಇಷ್ಟೊಂದು ಭಾರೀ ಅಂತರ ಸಾಧ್ಯವಾಗಿದ್ದು ಹೇಗೆ? ಅದಕ್ಕೆ ಕಾರಣ ಇದೆ. ಆರು ತಿಂಗಳ ಸತತ ಶ್ರಮಧಾರೆಯಿಂದ ಭೈರತಿ ಸುರೇಶ್ ಕ್ಷೇತ್ರದಲ್ಲಿ ಮತಗಳನ್ನು ಕ್ರೋಢೀಕರಿಸಿ ಇಟ್ಟುಕೊಂಡಿದ್ದರು. ಕೋಟ್ಯಂತರ ರುಪಾಯಿಯನ್ನೂ ಖರ್ಚು ಮಾಡಿದ್ದರು. ಕಾಂಗ್ರೆಸ್ ಅಷ್ಟೇ ಅಲ್ಲದೇ ಅನ್ಯಪಕ್ಷಗಳ ಮುಖಂಡರನ್ನೂ ತಮ್ಮದೇ ಆದ ರೀತಿಯಲ್ಲಿ ‘ಡೀಲ್’ ಮಾಡಿದ್ದರು. ಯಾವಾಗ ಹೈಕಮಾಂಡ್ ಉಲ್ಟಾ ಹೊಡೆದು, ಟಿಕೆಟ್ ರೆಹಮಾನ್ ಷರೀಫ್ ಪಾಲಾಯಿತೋ ಸಹಜವಾಗಿಯೇ ಭೈರತಿ ಕೂಡಿಟ್ಟಿದ್ದ ಮತಗಳು ಸಾರಸಗಟಾಗಿ ಬಿಜೆಪಿಗೆ ವರ್ಗಾವಣೆ ಅದವು. ಅವರು ಪ್ರತಿನಿಧಿಸುವ ಕುರುಬ ಸಮುದಾಯದ ಮತಗಳೂ ಸೇರಿ. ಇದು ಒಂದು ಯಡವಟ್ಟಾದರೆ ಮತ್ತೊಂದು ಜೆಡಿಎಸ್ ಕದನದ ಫಲ. ‘ಪಕ್ಷಕ್ಕಿಂತ ಸಮುದಾಯ, ಧರ್ಮ ದೊಡ್ಡದು’ ಎಂದ ಜಮೀರ್ ಅಹಮದ್ ಖಾನ್ ಗೌಡರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ನ ರೆಹಮಾನ್ ಷರೀಫ್ ಪರ ಬ್ಯಾಟಿಂಗ್ ಗೆ ಇಳಿದಾಗ ಇದೇ ಸಿದ್ದರಾಮಯ್ಯ ಕುಮ್ಮಕ್ಕು ಕೊಟ್ಟರು. ಮುಸ್ಲಿಂ ಮತಗಳನ್ನು ರೆಹಮಾನ್ ಪರ ಒಗ್ಗೂಡಿಸಲು ಹೊರಟ ತಮ್ಮನ್ನು ‘ಮೀರ್ ಸಾದಿಕ್’ ಎಂದು ಜರಿದ ದೇವೇಗೌಡರ ವಿರುದ್ಧ ಜಮೀರ್ ಅಹಮದ್ ಖಾನ್ ಟೌನ್ ಹಾಲ್ ಎದಿರು ಮುಸ್ಲಿಂ ಸಮುದಾಯದ ಪ್ರತಿಭಟನೆ ಪ್ರಾಯೋಜಿಸಿದರು. ಪ್ರತಿಭಟನೆನಿರತರು ಗೌಡರ ಪ್ರತಿಕೃತಿಯನ್ನು ಚಪ್ಪಲಿ ಕಾಲಿಂದ ತುಳಿದರಲ್ಲದೆ, ಬೆಂಕಿ ಹಚ್ಚಿ ಸುಟ್ಟರು. ಇದು ಒಕ್ಕಲಿಗ ಸಮುದಾಯವನ್ನು ಭಾವನಾತ್ಮಕವಾಗಿ ರೊಚ್ಚಿಗೆಬ್ಬಿಸಿತು. ತತ್ಪರಿಣಾಮವಾಗಿ ಸಮುದಾಯದ ಮತಗಳು ಇಡೀ, ಇಡಿಯಾಗಿ ಬಿಜೆಪಿ ತೆಕ್ಕೆಗೆ ಜಾರಿದವು. ಭೈರತಿ ಪಕ್ಷದ ಒಳಗಿನ ಮತಗಳಿಗೆ ಸುರಂಗ ಕೊರೆದರೆ, ಗೌಡರು ಜೆಡಿಎಸ್ ನಿಂದ ಬಿಜೆಪಿಗೆ ‘ಮತನಾಲೆ’ ತೋಡಿಟ್ಟರು. ಕಾಂಗ್ರೆಸ್ ಸಮಾಧಿಗೆ ಇನ್ನೇನು ಬೇಕಿತ್ತು?

ಇನ್ನು ದೇವದುರ್ಗದಲ್ಲಿ ಹಿಂದೆ ಎರಡು ಬಾರಿ ಸೋತು ಅನುಕಂಪದ ಅಲೆ ಸವರಿದ್ದ ಬಿಜೆಪಿಯ ಶಿವನಗೌಡ ನಾಯಕ್ 16,877 ಮತಗಳ ಭಾರೀ ಅಂತರದಿಂದ ಕಾಂಗ್ರೆಸ್ ನ ರಾಜಶೇಖರ ನಾಯಕ್ ಅವರನ್ನು ಸೋಲಿಸಿದ್ದಾರೆ. ಇಲ್ಲಿ ತಂದೆ ವೆಂಕಟೇಶ್ ನಾಯಕ್ ಸಾವಿನ ಅನುಕಂಪದ ಲಾಭ ಪಡೆವಲ್ಲಿ ರಾಜಶೇಖರ ನಾಯಕ್ ವಿಫಲರಾಗಿದ್ದಾರೆ. ಸಂಬಂಧಿಕರಾದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವ ಎಚ್.ಸಿ. ಮಹದೇವಪ್ಪ ಅವರು ಪ್ರಯೋಗಿಸಿದ ಎಲ್ಲ ‘ಚಮತ್ಕಾರ’ಗಳು ರಾಜಶೇಖರ ನಾಯಕ್  ಕ್ಷೇತ್ರದಲ್ಲಿ ಗಳಿಸದಿದ್ದ ಉತ್ತಮ ಅಭಿಪ್ರಾಯದ ಮುಂದೆ ಠುಸ್ಸಾಗಿವೆ. ಒಂದೊಮ್ಮೆ ವೆಂಕಟೇಶ್ ನಾಯಕ್ ಪತ್ನಿ ಸಾವಿತ್ರಮ್ಮ ನಾಯಕ್ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಗತಿ ಬದಲಾವಣೆಗೆ ಆಸ್ಪದವಿತ್ತು. ಜೆಡಿಎಸ್ ನ ಕರೆಮ್ಮ ನಾಯಕ್ ಗಳಿಸಿದ 9156 ಮತಗಳು ಫಲಿತಾಂಶದ ಮೇಲೆ ಪರಿಣಾಮವನ್ನೇನೂ ಬೀರಿಲ್ಲ. ಆದರೆ ಅವರು ಇಷ್ಟೊಂದು ಮತ ಗಳಿಸುವಲ್ಲಿ ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಹಾಗೂ ಗೌಡರು ಸಿಎಂ ಆಗಿದ್ದಾಗ ಮಂಜೂರು ಮಾಡಿದ ನಾರಾಯಣಪುರ ಬಲದಂಡೆ ನಾಲೆ ಯೋಜನೆ ಋಣ ಕೆಲಸ ಮಾಡಿದೆ.

ಕಾಂಗ್ರೆಸ್ ಮರ್ಯಾದೆ ಉಳಿಸಿದ್ದು ಬೀದರ್ ಮಾತ್ರ. ಇಲ್ಲಿ ಬಿಜೆಪಿಗೆ ಸೂಕ್ತ ಅಭ್ಯರ್ಥಿ ಸಿಗದೇ ಹೋದದ್ದು, ಜೆಡಿಎಸ್ ಕಣಕ್ಕೆ ಇಳಿಸಿದ ಅಭ್ಯರ್ಥಿ ಲೆಕ್ಕಕ್ಕೆ ಇಲ್ಲದೇ ಹೋದದ್ದು ಕಾಂಗ್ರೆಸ್ 22,721 ಮತಗಳ ಭಾರೀ ಅಂತರದ ಗೆಲುವು ದಾಖಲಿಸಲು ಪೂರಕವಾಯಿತು. ಕಾಂಗ್ರೆಸ್ ನ ರಹೀಂ ಖಾನ್ ಕಳೆದ ಚುನಾವಣೆಯಲ್ಲಿ 2571 ಮತಗಳ ಅಂತರದಿಂದ ಕೆಜೆಪಿಯ ಗುರುಪಾದಪ್ಪ ನಾಗಮಾರಪಲ್ಲಿ ವಿರುದ್ಧ ಸೋತಿದ್ದರು. ಗುರುಪಾದಪ್ಪ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಅವರ ಪುತ್ರ ಸೂರ್ಯಕಾಂತ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿತು. ಆದರೆ ತಮ್ಮ ಸಹೋದರ ಉಮಾಕಾಂತ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ನಡೆದಿರುವ ಹಗರಣಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರ ಸರಕಾರ ಆಟ ಆಡಬಹುದೆಂಬ ಭೀತಿಯಿಂದ ಸೂರ್ಯಕಾಂತ್ ಕಣಕ್ಕಿಳಿಯಲು ನಿರಾಕಸಿದರಷ್ಟೇ ಅಲ್ಲದೇ ಒಮ್ಮೆಯೂ ಬೀದರ್ ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಹೆಬ್ಬಾಳದಲ್ಲಿ ಕೆಲಸ ಮಾಡಿದರು. ಇದು ಮತ್ತೊಂದು ಮೈನಸ್ ಪಾಯಿಂಟ್. ಇನ್ನೊಂದು ವಿಚಾರ. ಬೀದರ್ ನಲ್ಲಿ ಮುಸ್ಲಿಮರೇ ಬಹುಸಂಖ್ಯಾತ ಮತದಾರರು. ಶೇಕಡಾ 50 ರಷ್ಟು ಅವರದೇ ಮತಗಳಿವೆ.  ‘ಅಪ್ರಯೋಜಕ ಸಚಿವ’ ಎಂಬ ಬಿರುದಿಗೆ ಒಳಗಾಗಿರುವ ಖಮರುಲ್ ಇಸ್ಲಾಂ ಅವರು ಮುಂದೆ ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದ ಬದಲು ಬೀದರ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಅದಕ್ಕೆ ಪೂರಕ ವಾತಾವರಣ ನಿರ್ಮಾಣ ನಿಮಿತ್ತ ರಹೀಂ ಖಾನ್ ಪರ ಸಾಕಷ್ಟು ಸುರಿದಿರುವುದೂ ಇಲ್ಲಿ ಕೆಲಸ ಮಾಡಿದೆ.

ಇವಿಷ್ಟು ಫಲಿತಾಂಶ ಸುತ್ತಮುತ್ತಲಿನ ಮಾತಾಯಿತು. ಹಾಗಾದರೆ ಮುಂದೇನು..?

ಈ ಫಲಿತಾಂಶ ಸರಕಾರದ ಬಗ್ಗೆ ಜನಾದೇಶವೇ? ಯಾವುದರ ದಿಕ್ಸೂಚಿ ಎಂದು ಕೇಳಿದರೆ, ಹಿಂದೆ ಕಾಂಗ್ರೆಸ್ ಒಂದು ಸ್ಥಾನದಲ್ಲಿತ್ತು. ಕೆಜೆಪಿ ಒಳಗೊಂಡ ಬಿಜೆಪಿ ಎರಡರಲ್ಲಿತ್ತು. ಈಗಲೂ ಅದೇ ಸ್ಥಿತಿ. ಎಲ್ಲೋ ಒಂದು ಕ್ಷೇತ್ರ ಅದಲು-ಬದಲಾಗಿರಬಹುದು, ಅಷ್ಟೇ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ಪರಿಸ್ಥಿತಿ ಅವರು ಹೇಳುವಷ್ಟು ಸರಳ, ಸುಲಭವಾಗಿದೆಯೇ? ಏನೋ ಆಗಿದ್ದು ಆಗಿ ಹೋಯಿತು, ಮುಂದೆ ನೋಡಿಕೊಂಡರಾಯಿತು ಎಂದು ಪಕ್ಷದ ಇತರ ನಾಯಕರು, ವರಿಷ್ಠರು ಸುಮ್ಮನಾಗುತ್ತಾರೆಯೇ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಏಳುತ್ತದೆ. ಆದರೆ ಅದಕ್ಕೆ ಉತ್ತರ ಮಾತ್ರ ಅಷ್ಟು ಸುಲಭವಾಗಿಲ್ಲ.

ನಿಜ, ಈ ಹಿಂದೆ ಸಿದ್ದರಾಮಯ್ಯನವರ ಎರಡೂಮುಕ್ಕಾಲು ವರ್ಷದ ಆಳ್ವಿಕೆ ನೋಡಿದರೆ ಅವರು ಅನುಭವಿಸಿದ ಸ್ವಾತಂತ್ತ್ಯ, ಏಕಮೇವದ್ವಿತೀಯ ನಾಯಕನೆಂಬ ಪಟ್ಟ ಆಬಾಧಿತ ಎಂಬ ಭಾವನೆಗೆ ಹೆಬ್ಬಾಳ ಟಿಕೆಟ್ ಪ್ರಹಸನ ಎಲ್ಲೋ ಒಂದು ಕಡೆ ಅಲ್ಪವಿರಾಮ ಹಾಕಿರುವುದು ಸುಳ್ಳಲ್ಲ. ಹೈಕಮಾಂಡ್ ನೇರ ಸಂಪರ್ಕದಿಂದ ಕಾಂಗ್ರೆಸ್ ಗೆ ಬಂದ, ಅದೇ ಸಂಪರ್ಕದಿಂದಲೇ ವಿಧಾನಸಭೆ ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿ ಪಟ್ಟವನ್ನೂ ಅಲಂಕರಿಸಿದ ಸಿದ್ದರಾಮಯ್ಯ ಅವರನ್ನು ಈವರೆಗೂ ಯಾರು ಪ್ರಶ್ನೆ ಮಾಡಿರಲಿಲ್ಲ. ಪ್ರಶ್ನೆ ಮಾಡುವ ಮನಸ್ಸಿದ್ದರೂ ಧೈರ್ಯವಿರಲಿಲ್ಲ. ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಎಸ್.ಎಂ. ಕೃಷ್ಣ ಅವರಂಥವರು ಅಲ್ಲೋ, ಇಲ್ಲೋ ಒಂದು ಗುಂಡು ಹಾರಿಸಿದರೂ ಸಿದ್ದರಾಮಯ್ಯ ಅದನ್ನು ನೇವರಿಸಿಕೊಂಡು ಮುಂದಕ್ಕೆ ಹೋಗುತ್ತಿದ್ದರು. ಆದರೆ ಹೆಬ್ಬಾಳದಲ್ಲಿ ಸಿದ್ದರಾಮಯ್ಯ ತೇಲಿಬಿಟ್ಟ ತಮ್ಮ ‘ನೀಲಿಗಣ್ಣಿನ ಹುಡುಗ’ ಭೈರತಿ ಸುರೇಶ್ ಉಮೇದುವಾರಿಕೆ ಪ್ರಸ್ತಾಪವನ್ನು ಮೂಲನಿವಾಸಿ ಹಿರಿಯ ನಾಯಕರ ಪ್ರೇರಣೆಯಿಂದ ಹೈಕಮಾಂಡ್ ಯಾವಾಗ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿಬಿಟ್ಟಿತೋ ಅಲ್ಲಿಂದೀಚಿಗೆ ವಾತಾರವಣದಲ್ಲಿ ಬದಲಾವಣೆಗೆ ಆಸ್ಪದ ಸಿಕ್ಕಿದೆ. ಸಿದ್ದರಾಮಯ್ಯ ವಿರುದ್ಧ ತಮ್ಮ ಮಾತಿಗೆ ಹೈಕಮಾಂಡ್ ಮಟ್ಟದಲ್ಲಿ ಕಿಮ್ಮತ್ತು ಸಿಗುತ್ತದೆ ಎಂದು ಗೊತ್ತಾಗಿರುವ ಹಿರಿಯ ನಾಯಕರೆಲ್ಲ ಇನ್ನು ಮುಂದೆ ಸುಮ್ಮನಿರುವುದಿಲ್ಲ. ಸಿಕ್ಕ, ಸಿಕ್ಕ ವಿಚಾರಗಳಿಗೆ ಪುಂಗಿ ಊದಿಯೇ ಊದುತ್ತಾರೆ. ಈಗಾಗಲೇ ಫಲಿತಾಂಶದ ಅದರಲ್ಲೂ ಹೆಬ್ಬಾಳ ಸೋಲಿನ ಹೊಣೆ ಸಿದ್ದರಾಮಯ್ಯನವರ ತಲೆಗೆ ಕಟ್ಟುವ ಕಾಯಕ ಚಾಲ್ತಿ ಪಡೆದಿದೆ.

ಈ ಮಧ್ಯೆ, ಸ್ವಪಕ್ಷೀಯರು, ಅನ್ಯಪಕ್ಷೀಯರು ಎಂಬ ಬೇಧವಿಲ್ಲದೆ ಎಲ್ಲರ ಕಣ್ಣು ಕುಕ್ಕಿರುವ ಸಿದ್ದರಾಮಯ್ಯನವರ ವಜ್ರಖಚಿತ ಕೈಗಡಿಯಾರ ಹಗರಣದ ಸ್ವರೂಪದೊಡನೆ ಹೈಕಮಾಂಡ್ ಅಂಗಳದಲ್ಲಿದೆ. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಈ ಪ್ರಕರಣದಿಂದ ಹೊರಬರಲು ಸಿದ್ದರಾಮಯ್ಯನವರು ಇನ್ನೂ ಮಾರ್ಗಾನ್ವೇಷಣೆಯಲ್ಲಿದ್ದಾರೆ. ಇದೊಂದು ‘ಯಾರೋ ಕೊಟ್ಟ ಉಡುಗೊರೆ’ ಎಂದು ಹೇಳಿ ತಗಲಾಕಿಕೊಂಡಿರುವ ಅವರೀಗ ಉಡುಗೊರೆ ಹಿಂದೆ-ಮುಂದಿನ ತೆರಿಗೆ, ಕಾನೂನು ರೀತಿ- ರಿವಾಜುಗಳನ್ನು ಪೂರೈಸದಿರುವುದರ ಗಂಭೀರ ಪರಿಣಾಮ ಊಹಿಸಿಕೊಂಡೇ ಒದ್ದಾಡುತ್ತಿದ್ದಾರೆ. ಅದರ ಜತೆಗೆ ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಗುಟುಕು ಜೀವದೊಂದಿಗೆ ದಿಲ್ಲಿ ಕಮಾಂಡೋ ಆಸ್ಪತ್ರೆ ಸೇರಿದ್ದ ಕರ್ನಾಟಕದ ಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರನ್ನು ಸಿದ್ದರಾಮಯ್ಯನವರು ದಿಲ್ಲಿಯಲ್ಲಿದ್ದರೂ ಭೇಟಿ ಮಾಡದೇ ಹೋದದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ ತವರಿನ ಸೇನಾನಿಯ ಆರೋಗ್ಯ ವಿಚಾರಣೆ ತಮ್ಮ ಆದ್ಯ ಕರ್ತವ್ಯ ಎಂದು ಅವರಿಗೆ ಹೊಳೆಯದೇ ಹೋದದ್ದು, ಹುಬ್ಬಳ್ಳಿಯಲ್ಲಿದ್ದರೂ ಅನತಿ ದೂರದ ಬೆಟ್ಟದೂರಿಗೆ ಹೋಗಿ ಯೋಧನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳದೇ ಹೋದದ್ದು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಏನೇ ಕಾರಣ, ಸಬೂಬುಗಳನ್ನು ಕೊಟ್ಟರೂ ಆಗಿರುವ ಅನಾಹುತವನ್ನು ಸರಿಪಡಿಸಲು ಆಗದು. ಏಕೆಂದರೆ ಭಾವನಾತ್ಮಕ ವಿಚಾರಗಳಲ್ಲಿ ಲೋಪಗಳಿಗೆ ಕ್ಷಮೆ ಸಿಗುವುದಿಲ್ಲ. ಬದಲಿಗೆ ಅವು ವ್ಯಕ್ತಿಯ ಸೌಜನ್ಯ, ಸಂವೇದನಾಶೀಲತೆಗೆ ಕನ್ನಡಿ ಹಿಡಿಯುತ್ತವೆ. ಹೀಗಾಗಿ ಇಲ್ಲಾಗಿರುವ ಲೋಪ ಬರೀ ಅವರೊಬ್ಬರಿಗೇ ಅಲ್ಲ, ಅವರು ಪ್ರತಿನಿಧಿಸುವ ಪಕ್ಷ, ಸರಕಾರ ಹಾಗೂ ನಾಡಿಗೂ ಮುಜುಗರ ತಂದಿದೆ.

ಸರಿ, ತಪ್ಪುಗಳು ಒಂದರ ಮೇಲೊಂದರಂತೆ ಮೆಟ್ಟಿಲು ಕಟ್ಟಿಕೊಂಡು ಹೋಗುತ್ತವೆ. ತಪ್ಪು ಮಾಡಿದವರಿಗೆ ಅದು ಗೋಚರಿಸುವುದಿಲ್ಲ. ಗೋಚರಿಸಿದಾಗ ಏನೂ ಮಾಡುವಂತಿರುವುದಿಲ್ಲ. ಏಕೆಂದರೆ ಅಷ್ಟೊತ್ತಿಗೆ ಕಾಲ ಸರಿದು ಹೋಗಿರುತ್ತದೆ. ಆದರೆ ಇದನ್ನು ಗಮನಿಸುತ್ತಿರುವವರ ಮನಸ್ಥಿತಿ ಆ ರೀತಿ ಇರುವುದಿಲ್ಲ. ತಪ್ಪು ಮಾಡಲು ಬಿಟ್ಟು, ಅವು ಒಟ್ಟುಗೂಡಿದ ನಂತರ ಒಟ್ಟಿಗೆ ಆಪರಿ ಬೀಳುತ್ತಾರೆ. ಸದ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರ ಮನಸ್ಥಿತಿ ಇದೇ ಆಗಿದೆ. ಹೀಗಾಗಿ ವಿಧಾನಸಭೆ ಮರುಚುನಾವಣೆ ಫಲಿತಾಂಶದ ಸುತ್ತ ತಿರುಗಿರುವ ವಿದ್ಯಮಾನಗಳು ಕಾಂಗ್ರೆಸ್ ಮತ್ತು ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳಿಗೆ ನಾಂದಿ ಹಾಡುವುದರಲ್ಲಿ ಅನುಮಾನವಿಲ್ಲ.

ಲಗೋರಿ : ಮಿತಿ ದಾಟಿದ ನಂತರ ತಾಳ್ಮೆಯೂ ತಾಳ್ಮೆಗೆಡುತ್ತದೆ.

1 COMMENT

  1. Digital kannada is giving good articles…we will happpy to see more from P.TYAGRAJ sir and Chaitanya hegde sir…It would be the best if u provide columns,stories from renowed columnists of kannada…thank u sir.

Leave a Reply