ಅರಬ್ಬರ ಮೋದಿ ಅಪ್ಪುಗೆ- ತೈಲ ಕಾಣಿಕೆ, ಇಲ್ಲಿದೆ ಪರಸ್ಪರ ಲಾಭ- ಜಾಗತಿಕ ರಾಜಕೀಯದಾಟದ ಮೇಳೈಕೆ

authors-rangaswamyಯುನೈಟೆಡ್ ಅರಬ್ ಎಮಿರೇಟ್ಸ್ , ಏಳು ದೇಶಗಳ ಒಕ್ಕೂಟ. ಅಬುಧಾಬಿ  ಇದರ ರಾಜಧಾನಿ. ಉಳಿದಂತೆ ದುಬೈ, ಅಜ್ಮಾನ್, ರಾಸ್ ಅಲ್ ಖೈಮಾ, ಶಾರ್ಜಾ, ಫುಜೈರಃ, ಉಮ್ಮ್ ಅಲ್ ಕುವೈನ್ ಒಕ್ಕೂಟದ ಇತರ ದೇಶಗಳು. ಪ್ರತಿ ದೇಶಕ್ಕೂ ಬೇರೆ ರಾಜರು, ಅವರದೇ ಆಳ್ವಿಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಆಟಕ್ಕೆ ಹೆಚ್ಚು ಬಲ, ಬೆಂಬಲ ತುಂಬಲು 1971 ರಲ್ಲಿ ಒಕ್ಕೂಟ ರಚನೆ ಮಾಡಿಕೊಂಡರು.
ಕೆಲವು ದಿನಗಳ ಹಿಂದೆ ಅಬುಧಾಬಿಯ ಯುವರಾಜ ಶೇಖ್ ಮೊಹಮದ್ ಬಿನ್ ಜ್ಯಯೆದ್ ಅಲ್ ನಹಯನ್ ಭಾರತಕ್ಕೆ ಭೇಟಿ ಕೊಟ್ಟರು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಶಿಷ್ಟಾಚಾರ ಬದಿಗೊತ್ತಿ ತೆರೆದ ಬಾಹುಗಳಿಂದ ಯುವರಾಜನನ್ನು ಸ್ವಾಗತಿಸಿದ್ದು, ‘ನಮ್ಮ ತೈಲ ನೀವು ಸಂರಕ್ಷಿಸಿ, ಎರಡನೇ ಮೂರು ಭಾಗ ನಿಮಗೆ, ಉಳಿದ ಒಂದು ಭಾಗಕ್ಕೆ ಹಣಕೊಟ್ಟರೆ ಸಾಕು (ಅಂದರೆ ಪ್ರತಿ 3 ಲೀಟರ್ ತೈಲ ಸಂರಕ್ಷಿಸಿದರೆ ಎರಡು ಲೀಟರ್ ಪುಕ್ಕಟ್ಟೆ) ಎನ್ನುವ ಆಫರ್ ಎಲ್ಲಾ ತಿಳಿದ ವಿಷಯವೇ.
ಕಳೆದ ವರ್ಷ ಆಗಸ್ಟ್ ನಲ್ಲಿ ಮೋದಿ ಅವರ ಪ್ರವಾಸದ ಫಲವಾಗಿ , 38 ವರ್ಷಗಳ ನಂತರ ಅರಬ್ ದೇಶವೊಂದು ಭಾರತದ ಮೇಲೆ ಇಂತಹ ವಿಶ್ವಾಸ ಇಟ್ಟು ವ್ಯಾಪಾರಕ್ಕೆ ಮುಂದಾಗಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣ, ಕರ್ನಾಟಕದ ಮಂಗಳೂರು ಹಾಗೂ ಪದೂರ್ ಗಳಲ್ಲಿ 5.33 ಮಿಲಿಯನ್ ಟನ್ ಕಚ್ಚಾ ತೈಲ ಶೇಖರಣೆ ಮಾಡುವ ಇರಾದೆ ಹೊಂದಿದೆ.
ಇವೆಲ್ಲ ಬಹುಪಾಲು ಎಲ್ಲರಿಗೂ ತಿಳಿದ ವಿಷಯವೇ. ನಮ್ಮ ಕೆಲಸ  ನ್ಯೂಸ್ ಹೇಳುವುದಲ್ಲ, ವಿಶ್ಲೇಷಿಸುವುದು.. ಮೂರರಲ್ಲಿ ಎರಡು ಭಾಗ ಪುಕ್ಕಟೆ (!?) ಕೊಡಲು ಅರಬ್ ಸಂಯುಕ್ತ ಸಂಸ್ಥಾನಕ್ಕೆ ತಲೆ ಕೆಟ್ಟಿದೆಯೇ? ಗಮನಿಸಿ, ನಮ್ಮ ದೇಶದಲ್ಲೇ ಜನ ಮೋದಿ ಹಿಂದುತ್ವವಾದಿ , ನರಹಂತಕ ಹೀಗೆ ಇನ್ನು ಏನೇನೋ ಬಿರುದು ಬಾವಲಿ ನೀಡಿದ್ದಾರೆ. ಅರಬ್ ದೇಶಗಳು ಕೂಡ ಹೇಳಿ ಕೇಳಿ ಕಟ್ಟರ್ ಮುಸ್ಲಿಂ ಸಂಪ್ರದಾಯ , ಷರಿಯಾ ಕಾನೂನು ಪಾಲಿಸುವ ನಾಯಕರನ್ನು ಹೊಂದಿವೆ. ಉತ್ತರ ಧ್ರುವ, ದಕ್ಷಿಣ ಧ್ರುವ ಹೀಗೆ ಒಂದಾಗಲು ಕಾರಣಗಳೇನು?

 • ಗಮನಿಸಿ , ಯಾವುದೇ ಸರಕು ಕಾದಿಡಲು ತಗಲುವ ವೆಚ್ಚವನ್ನು ಗೂಡ್ಸ್ ಕ್ಯಾರಿಂಗ್ ಕಾಸ್ಟ್ ಅಥವಾ ಸ್ಟೋರೇಜ್ ಕಾಸ್ಟ್ ಎಂದು ಕರೆಯುತ್ತೇವೆ. ಪುಕ್ಕಟೆ  ಎನ್ನುವುದು ಇಂದು ಅರ್ಥ ಕಳೆದುಕೊಂಡ ಪದ. ಕಚ್ಚಾ ತೈಲ ಶೇಖರಿಸಿ ಇಡುವುದು ಸುಲಭದ ಮಾತಲ್ಲ. ಅಪ್ಪಿತಪ್ಪಿ ಬೆಂಕಿ ಬಿದ್ದರೆ ಮುಗಿಯಿತು, ಜತನದಿಂದ ತೈಲವನ್ನು ಸಂರಕ್ಷಿಸಿ ಇಡುವುದಕ್ಕೆ ತಗಲುವ ನಿಖರ ಲೆಕ್ಕ  RTI ಮೂಲಕ ಪಡೆದು ಕೊಳ್ಳಬೇಕು, ನಂತರವಷ್ಟೇ ಪುಕ್ಕಟೆಯೋ ಅಲ್ಲವೋ ಎನ್ನುವುದರ ಮಾತು!
 • ಇನ್ನೊಂದು ಮಹತ್ವದ ವಿಷಯವೇ ಏನೆಂದರೆ, ಕುಸಿಯುತ್ತಿರುವ ತೈಲ ಬೆಲೆಯ  ತಳ ಯಾವುದು? ಬಲ್ಲವರಾರು? ಇಂದು 30 ಡಾಲರ್ ಬ್ಯಾರೆಲ್ ರ ಆಸುಪಾಸಿನಲ್ಲಿ ಇರುವ ಕಚ್ಚಾ ತೈಲದ ಬೆಲೆ , ೨೦ ಡಾಲರ್ ಅಥವಾ ೧೫ ಡಾಲರ್ ಗೆ ಇಳಿಯುವ ಸಾಧ್ಯತೆ ಇದೆ ಎಂದು ಪಂಡಿತರು ಹೇಳುತ್ತಿದ್ದಾರೆ. ಹಾಗೊಮ್ಮೆ ತೈಲ ಬೆಲೆ ಕುಸಿದರೂ  ನಾವು ಮೂರನೇ ಒಂದು ಭಾಗಕ್ಕೆ ಹಣ ತೆರಲೇ ಬೇಕು. ಸ್ಟೋರೇಜ್ ಕಾಸ್ಟ್ ನಮ್ಮದೇ. ಖರ್ಚು ತೆಗೆದು ಉಳಿಕೆ ನೋಡಿದಾಗ ಮಾತ್ರ ಗೊತ್ತಾಗುತ್ತೆ ಅವರು ನಮಗೆ ಪುಕ್ಕಟ್ಟೆ ಕೊಟ್ಟದ್ದು ಏನು ಎನ್ನುವುದು. ಮುಂದಾಗುವ ಲಾಭ ಅಥವಾ ನಷ್ಟವನ್ನು ಸರಿದೂಗಿಸಲು ಮುಂಗಡ ಒಪ್ಪಂದಕ್ಕೆ ‘ಹೆಡ್ಜಿಂಗ್’ ಎನ್ನುತ್ತೇವೆ. ಭಾರತ ಯುಎಇ ಯೊಂದಿಗೆ  ಮಾಡಿಕೊಂಡಿರುವುದು ಇದೆ.
 • ಅಮೆರಿಕದ ದ್ವಿನೀತಿ ಎಲ್ಲರಿಗೂ ಗೊತ್ತಿರುವ ವಿಷಯವೇ. ಅಮೆರಿಕ ಹಾಗೂ ಬ್ರಿಟನ್ ಸಿರಿಯಾ ದೇಶದಲ್ಲಿನ ತೈಲವನ್ನು ಲೂಟಿ ಹೊಡೆದು, ಯುದ್ಧದ ಖರ್ಚು ಎಂದು ತೋರಿಸಿ ಬಂದ ಹಣವನ್ನು ಕಬಳಿಸುತ್ತಿವೆ. ಸಿರಿಯಾದ ತೈಲ ಕಪ್ಪು ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿಯಲು ಇದು ಪ್ರಮುಖ ಕಾರಣ. ನಾಳೆ ಗಲ್ಫ್ ಪ್ರಾಂತ್ಯದಲ್ಲಿ ಯುದ್ಧ ಶುರುವಾಗುವುದಿಲ್ಲ ಎನ್ನುವ ಗ್ಯಾರಂಟಿ ಏನು? ತಮ್ಮ ತೈಲ ಭಾರತದ ಬಳಿ ಸುರಕ್ಷಿತ, ಭಾರತವನ್ನು ನಂಬಬಹುದು ಎನ್ನುವುದು ಅರಬ್ಬರ ನಿಲುವು!
 • ಇನ್ನು ಭಾರತ ಕೂಡ ಅಮೆರಿಕವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಗಣರಾಜ್ಯ ಸಮಾರಂಭಕ್ಕೆ ಒಬಾಮ ಬಂದದ್ದು ಮೋದಿಯ ತಬ್ಬಿ ಮಾತನಾಡಿದ್ದು ಹಲವರಲ್ಲಿ ಆಶಾಕಿರಣ ಮೂಡಿಸಿತ್ತು. ಆದರೆ ಅಮೆರಿಕ ತಾನು ಯಾರಿಗೂ ಇಲ್ಲ, ತನ್ನ ಮನೆಯ ಉದ್ಧಾರ ಒಂದೇ ಗುರಿ ಎಂದು ಆಗಾಗ ಸಾಬೀತುಪಡಿಸುತ್ತಲೇ ಇದೆ. ಇತ್ತೀಚೆಗೆ ಭಾರತದ ಆಕ್ಷೇಪದ ನಡುವೆಯೂ ಪಾಕಿಸ್ತಾನಕ್ಕೆ ಮತ್ತೆ ಶಸ್ತ್ರಾಸ್ತ್ರ ಹಾಗು ಹಣಕಾಸು ನೆರವು ನೀಡಿದ್ದು ತಾಜಾ ಉದಾಹರಣೆ. ಅಮೆರಿಕ ಓಲೈಕೆಗಿಂತ ನಂಬಿ ಬಂದ ಅರಬ್ಬರು ಸಾವಿರ ಪಾಲು ವಾಸಿ ಎನ್ನುವುದು ಮೋದಿ ಅವರಿಗೂ ಮನದಟ್ಟಾಗಿದೆ.
 • ಭಾರತಕ್ಕೆ ಇನ್ನೊಂದು ಪೂರಕ ಅಂಶ- ನಮಗೆ ಬೇಕಿರುವ ತೈಲದ 8 ಪ್ರತಿಶತ ಪೂರೈಕೆ ಮಾಡುವುದು ಅರಬ್ ಸಂಯುಕ್ತ ಸಂಸ್ಥಾನ. ನಮ್ಮ ಮನೆಯಲ್ಲೇ  ಶೇಖರ ಆಗಿರುವುದರಿಂದ ಇದನ್ನು ನಾವು ಮೊದಲು ಬಳಸುತ್ತೇವೆ ಸಹಜವಾಗಿ. ಹೀಗಾಗಿ 8 ಪ್ರತಿಶತ  ಮುಂಬರುವ ದಿನಗಳಲ್ಲಿ 15 ಅಥವಾ 20 ಆಗಬಹುದು. ಅಷ್ಟರ ಮಟ್ಟಿಗೆ ನಮಗೆ ಅದು ಉಳಿತಾಯವೇ.
 • ಯುಎಇ  ಮುಂಬರುವ ದಿನಗಳಲ್ಲಿ ಗುಜರಾತ್ ಹಾಗು ಮಧ್ಯಪ್ರದೇಶದಲ್ಲಿ 75 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಮಾತು ಕೊಟ್ಟಿದೆ. ಅಕಸ್ಮಾತ್ ತೈಲ ಶೇಖರಣೆ ಒಪ್ಪಂದ (ಹೆಡ್ಜಿಂಗ್) ದಲ್ಲಿ ನಷ್ಟ ಆದರೂ  (ಸಾಧ್ಯತೆ ಕಡಿಮೆ) ಮುಂಬರುವ ಹೂಡಿಕೆ ಇಂದ ಕೆಲಸ ಸೃಷ್ಟಿ, ಲಾಭ ಖಂಡಿತ ಇದೆ.
  ಷರಿಯಾ ಕಾನೂನು ಪಾಲಿಸುವ ಕಟ್ಟರ್ ಮುಸ್ಲಿಂ ದೇಶ, ಕಟ್ಟರ್ ಹಿಂದುತ್ವವಾದಿ ನಾಯಕನ ಹೊಂದಿರುವ ದೇಶದೊಂದಿಗೆ ಇಂತಹ  ಭಾಂದವ್ಯ ಹೇಗೆ ಸಾಧ್ಯ ಎಂದು ನೀವು ಇನ್ನೂ ಯೋಚಿಸುತ್ತಿದ್ದರೆ ಒಂದು ವಿಷಯ ಹೇಳುತ್ತೇನೆ ಕೇಳಿ… ಧರ್ಮ, ಜಾತಿ, ಮತ ಎಲ್ಲಾ  ತಮಗೆ ಬೇಕಾದಾಗ ಉಪಯೋಗಿಸಲು ಇಟ್ಟುಕೊಂಡಿರುವ ಆಯುಧಗಳು. ಉಳಿದಂತೆ ವಿತ್ತ ಪ್ರಪಂಚದಲ್ಲಿ ಲಾಭ ನಷ್ಟದ್ದೆ ರಾಯಭಾರ.

(ಲೆಕ್ಕ ಪರಿಶೋಧಕರಾಗಿ ಹಲವು ದೇಶಗಳನ್ನು ಸುತ್ತಿರುವ, ಹಣಕಾಸು ಜಗತ್ತನ್ನು ಹತ್ತಿರದಿಂದ ನೋಡಿರುವ ಅನುಭವ ಲೇಖಕರದ್ದು. 15 ವರ್ಷಗಳ ಕಾಲ ಸ್ಪೇನ್ ನಿವಾಸಿಯಾಗಿದ್ದವರು ಈಗ ಬೆಂಗಳೂರಿನಲ್ಲಿ ಪೆಟ್ರಾಬೈಟ್ಸ್ ಎಂಬ ತೈಲಕ್ಕೆ ಸಂಬಂಧಿಸಿದ ಡಾಟಾ ಅನಾಲಿಸಿಸ್ ನವೋದ್ದಿಮೆಯ, ವಹಿವಾಟು ವೃದ್ಧಿಯ (ಬಿಸಿನೆಸ್ ಡಿವಲಪ್ಮೆಂಟ್) ಹೊಣೆ ನಿರ್ವಹಿಸುತ್ತಿದ್ದಾರೆ.)

ಈ ಲೇಖನ ವೆಬ್ ನಲ್ಲಿ ಓದುತ್ತಿದ್ದೀರಾ? ನೀವ್ಯಾಕೆ ಈ ಕೆಂಪು ಸಾಲನ್ನೇ ಕ್ಲಿಕ್ಕಿಸಿ ಆ್ಯಂಡ್ರಾಯ್ಡ್ ಆ್ಯಪ್ ಡೌನ್ಲೋಡ್ ಮಾಡ್ಕೋಬಾರ್ದು?

2 COMMENTS

 1. Very interesting.
  ಪುಕ್ಕಟೆ ತೈಲದ ಹಿಂದಿನ ಕರಾಮತ್ತು ನನಗೆ ಗೊತ್ತಾಗಿರಲಿಲ್ಲ.
  ಒಳಗಿನ ವಿಷಯ ತಿಳಿಸಿದ್ದಕ್ಕೆ ಧನ್ಯವಾದ.
  -Rj

 2. Since India had to store crude oil in the strategic reservoir in any way and secure at own cost, the 2/3 given by UAE is practically a net profit for India. and on top that Karnataka government will earn additional revenue as VAT for any trade done by UAE from this storage facility.

Leave a Reply