ಜೆನ್‌ಫೋನ್ ಮ್ಯಾಕ್ಸ್: ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!

Srinidhi_Oct_2014

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳು ಸ್ಮಾರ್ಟ್ ಆಗಿ ಕೆಲ ವರ್ಷ ಕಳೆದಿವೆಯಲ್ಲ, ಈ ಅವಧಿಯಲ್ಲಿ ಏನೆಲ್ಲ ಬದಲಾಗಿದೆ.. ಕರೆ ಮಾಡಲು ಮತ್ತು ಎಸ್ಸೆಮ್ಮೆಸ್ ಕಳುಹಿಸಲಷ್ಟೆ ಸೀಮಿತವಾಗಿದ್ದ ಮೊಬೈಲುಗಳು ಇದೀಗ ಅಂಗೈ ಮೇಲಿನ ಕಂಪ್ಯೂಟರುಗಳೇ ಆಗಿಹೋಗಿವೆ. ಹೊಸ ಮಾದರಿಗಳು ಮಾರುಕಟ್ಟೆಗೆ ಬಂದಂತೆಲ್ಲ ಮೊಬೈಲಿನಲ್ಲಿ ಸಿಗುವ ಸೌಲಭ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆಗೆ ಮೊಬೈಲುಗಳ ಬೆಲೆಯೂ ಕಡಿಮೆಯಾಗುತ್ತಿದೆ. ಕಳೆದ ವರ್ಷದ ‘ಟಾಪ್-ಎಂಡ್’ ಮಾಡೆಲಿನಲ್ಲಿ ದೊರಕುತ್ತಿದ್ದ ಸೌಲಭ್ಯ ಈ ವರ್ಷದ ‘ಬಜೆಟ್’ ಫೋನಿಗೇ ಸೇರಿರುವುದು ಇದೀಗ ಸರ್ವೇಸಾಮಾನ್ಯ.

ಅಂದಹಾಗೆ ಕಡಿಮೆಯಾಗುತ್ತಿರುವುದು ಮೊಬೈಲಿನ ಬೆಲೆಯಷ್ಟೇ ಅಲ್ಲ; ಪ್ರತಿ ಚಾರ್ಜಿನ ನಂತರ ಫೋನಿನ ಬ್ಯಾಟರಿ ಬಾಳಿಕೆಬರುವ ಸಮಯವೂ ಗಣನೀಯವಾಗಿ ಕಡಿಮೆಯಾಗಿದೆ.

ಮೊಬೈಲಿನ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ಅದು ದಿನಗಟ್ಟಲೆ ಬಾಳುತ್ತಿದ್ದ ಕಾಲವೊಂದಿತ್ತು. ಆದರೆ ಈಗ, ವಿವಿಧ ಸೌಲಭ್ಯಗಳ ಮಹಾಪೂರದಲ್ಲಿ ಬ್ಯಾಟರಿಯ ಶಕ್ತಿಯೆಲ್ಲ ಕೊಚ್ಚಿಹೋಗಿ ಅರ್ಧಮುಕ್ಕಾಲು ದಿನಕ್ಕೆಲ್ಲ ಮತ್ತೆ ಚಾರ್ಜ್ ಮಾಡುವ ಪರಿಸ್ಥಿತಿ ಬಂದುಬಿಡುತ್ತದೆ. ಜೇಬಿನಲ್ಲಿರುವ ಫೋನಿನ ಬ್ಯಾಟರಿ ಎರಡರಿಂದ ಮೂರು ಸಾವಿರ ಎಂಎಎಚ್ ಇದ್ದರೆ ಬ್ಯಾಗಿನಲ್ಲಿ ಕನಿಷ್ಟ ಐದಾರು ಸಾವಿರ ಎಂಎಎಚ್ ಸಾಮರ್ಥ್ಯದ ಪವರ್ ಬ್ಯಾಂಕ್ ಹೊತ್ತೊಯ್ಯುವುದು ನಮಗೆಲ್ಲ ಅಭ್ಯಾಸದಂತೆಯೇ ಆಗಿಬಿಟ್ಟಿದೆ.

ಪವರ್‌ಬ್ಯಾಂಕ್‌ನಲ್ಲಿರುತ್ತದಲ್ಲ, ಈ ಹೆಚ್ಚುವರಿ ಸಾಮರ್ಥ್ಯ, ಅದು ಮೊಬೈಲಿನಲ್ಲೇ ಇದ್ದರೆ ಹೇಗೆ?

ಈ ಆಲೋಚನೆಯ ಪರಿಣಾಮವಾಗಿ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಇರುವ ಅನೇಕ ಮೊಬೈಲುಗಳು ಮಾರುಕಟ್ಟೆಗೆ ಬರುತ್ತಿವೆ. ಸಾಮಾನ್ಯ ಮೊಬೈಲುಗಳ ಹೋಲಿಕೆಯಲ್ಲಿ ಒಂದೂವರೆ – ಎರಡು ಪಟ್ಟು ಹೆಚ್ಚು ಸಾಮರ್ಥ್ಯದ ಬ್ಯಾಟರಿ ಹೊಂದಿರುವುದು ಇಂತಹ ಫೋನುಗಳ ಹೆಚ್ಚುಗಾರಿಕೆ. ಸದಾಕಾಲ ಮೊಬೈಲ್ ಬಳಸುವ ಆದರೆ ಪದೇಪದೇ ಚಾರ್ಜ್ ಮಾಡಲು ಬಯಸದ ಬಳಕೆದಾರರನ್ನು ತಲುಪುವುದು ಈ ಮೊಬೈಲುಗಳ ಉದ್ದೇಶ.

ಇಂತಹುದೇ ಒಂದು ಫೋನು ಇದೀಗ ಕೈಗೆಟುಕುವ ಬೆಲೆಯಲ್ಲಿ ದೊರಕುತ್ತಿದೆ. ಏಸಸ್ ಸಂಸ್ಥೆ ರೂಪಿಸಿರುವ ಈ ಫೋನಿನ ಹೆಸರು ‘ಜೆನ್‌ಫೋನ್ ಮ್ಯಾಕ್ಸ್’. ಅದರಲ್ಲಿರುವ ಬ್ಯಾಟರಿಯ ಸಾಮರ್ಥ್ಯ ೫೦೦೦ ಎಂಎ‌ಎಚ್! (ಸಾಮಾನ್ಯವಾಗಿ ಫೋನುಗಳ ಬ್ಯಾಟರಿ ಸಾಮರ್ಥ್ಯ ೩೦೦೦ ಎಂಎಎಚ್ ಆಸುಪಾಸಿನಲ್ಲಿರುತ್ತದೆ).

ಇಷ್ಟೊಂದು ಸಾಮರ್ಥ್ಯದ ಬ್ಯಾಟರಿ ಮೊಬೈಲಿನಲ್ಲಿದೆ ಎಂದರೆ ಬಳಕೆದಾರನ ಅರ್ಧ ತಲೆನೋವು ಕಡಿಮೆ ಅಂತಲೇ ಲೆಕ್ಕ. ಲೆಕ್ಕದ ವಿಷಯಕ್ಕೆ ಬರುವುದಾದರೆ ಕೇಳಿ: ಏಸಸ್ ಸಂಸ್ಥೆ ಹೇಳುವ ಪ್ರಕಾರ ಪೂರ್ತಿ ಚಾರ್ಜ್ ಆದ ಬ್ಯಾಟರಿಯಿಂದ ಮೂವತ್ತೇಳೂವರೆ ಗಂಟೆ ಕಾಲ ಫೋನಿನಲ್ಲಿ ಮಾತನಾಡಬಹುದಂತೆ; ಯಾರ ಜೊತೆಗೂ ಮಾತನಾಡದೆ ಸದಾಕಾಲ ಇಂಟರ್‌ನೆಟ್‌ನಲ್ಲಿ ಮುಳುಗಿರುವವರು ಮೂವತ್ತೆರಡೂವರೆ ಗಂಟೆ ಕಾಲ ಬ್ರೌಸ್ ಮಾಡಬಹುದಂತೆ!

“ಪವರ್ ಬ್ಯಾಂಕ್ ಇದ್ದಿದ್ದರೆ ಬೇರೆ ಫೋನನ್ನೂ ಚಾರ್ಜ್ ಮಾಡಬಹುದಿತ್ತಲ್ಲ!” ಎಂದು ಗೊಣಗುವವರೂ ಚಿಂತಿಸಬೇಕಿಲ್ಲ. ಏಕೆಂದರೆ ಈ ಫೋನನ್ನು ಪವರ್‌ಬ್ಯಾಂಕಿನಂತೆಯೂ ಬಳಸುವುದು ಸಾಧ್ಯ! ಹೌದು, ಜೊತೆಗೇ ಬರುವ ಓಟಿಜಿ ಕೇಬಲ್ ಬಳಸಿ ಬೇರೆ ಫೋನುಗಳನ್ನು ಜೆನ್‌ಫೋನ್ ಮ್ಯಾಕ್ಸ್‌ಗೆ ಸಂಪರ್ಕಿಸಬಹುದು, ಚಾರ್ಜ್ ಮಾಡಿಕೊಳ್ಳಬಹುದು!

ಬ್ಯಾಟರಿ ಬಗೆಗಷ್ಟೇ ವಿವರ ಕೊಟ್ಟಮಾತ್ರಕ್ಕೆ ಈ ಫೋನಿನಲ್ಲಿ ಬೇರೇನೂ ಇಲ್ಲ ಎಂದುಕೊಳ್ಳಬೇಡಿ. ಹತ್ತು ಸಾವಿರ ರೂಪಾಯಿಯೊಳಗೆ ಸಿಗುವ (ರೂ. ೯೯೯೯/-) ಈ ಫೋನಿನ ರೂಪುರೇಖೆ ಉತ್ತಮವಾಗಿಯೇ ಇದೆ. ೧.೨ ಗಿಗಾಹರ್ಟ್ಸ್‌ನ ಸ್ನಾಪ್‌ಡ್ರಾಗನ್ ೪೧೦ ಕ್ವಾಡ್-ಕೋರ್ ಪ್ರಾಸೆಸರ್, ೨ ಜಿಬಿ ರ್‍ಯಾಮ್, ೧೬ ಜಿಬಿ ಸಂಗ್ರಹಣಾ ಸಾಮರ್ಥ್ಯ ಹಾಗೂ ಎರಡು ಸಿಮ್ ಬಳಸುವ ಸೌಲಭ್ಯ – ಇದು ಜೆನ್‌ಫೋನ್ ಮ್ಯಾಕ್ಸ್‌ನ ಪ್ರಮುಖಾಂಶಗಳು.

ಇದರಲ್ಲಿ ಆಂಡ್ರಾಯ್ಡ್ ೫.೦ ಕಾರ್ಯಾಚರಣ ವ್ಯವಸ್ಥೆ ಇದೆ. ಕಾರ್ಯಾಚರಣ ವ್ಯವಸ್ಥೆಯ ಮೇಲುಹೊದಿಕೆಯಾಗಿ ಏಸಸ್‌ನದೇ ‘ಜೆನ್ ಯುಐ’ ಇದೆ. ಇದರಿಂದ ಕೆಲ ಉತ್ತಮ ಸೌಲಭ್ಯಗಳು ದೊರಕುತ್ತವೆ ನಿಜ (ಉದಾ: ಪರದೆಯ ಮೇಲೆ ‘ಸಿ’ ಎಂದು ಬರೆದರೆ ಕ್ಯಾಮೆರಾ ಚಾಲನೆಯಾಗುವಂತೆ ಮಾಡುವ ‘ಜೆನ್‍ಮೋಶನ್’), ಆದರೆ ಇದರ ಜೊತೆಯಲ್ಲೇ ಬರುವ ಹೆಚ್ಚಿನ ಸಂಖ್ಯೆಯ ಆಪ್‌ಗಳು ಮತ್ತು ಅವುಗಳಿಗೆ ಆಗಿಂದಾಗ್ಗೆ ಬರುವ ಅಪ್‌ಡೇಟುಗಳು ಒಮ್ಮೊಮ್ಮೆ ಕಿರಿಕಿರಿ ಮಾಡುವುದುಂಟು. ಕನ್ನಡ ಅಕ್ಷರಗಳು ಸೊಗಸಾಗಿ ಮೂಡುತ್ತವೆ, ಕನ್ನಡದ್ದೇ ಯೂಸರ್ ಇಂಟರ್‌ಫೇಸ್ ಹಾಗೂ ಕೀಲಿಮಣೆಗಳನ್ನು ಬಳಸುವ ಆಯ್ಕೆ ಕೂಡ ಇದೆ.

೫.೫ ಇಂಚಿನ ಸ್ಪರ್ಶಸಂವೇದಿ ಪರದೆಯ ರೆಸಲ್ಯೂಶನ್ 1280 X 720 (ಅಂದರೆ, ಫುಲ್ ಎಚ್‌ಡಿ ಅಲ್ಲ). ಇದಕ್ಕೆ ಗೊರಿಲ್ಲಾ ಗ್ಲಾಸ್ ೪ ಹೊದಿಕೆ ಇರುವುದರಿಂದ ಸುಲಭಕ್ಕೆ ಗೀರುಗಳು ಬೀಳುವುದಿಲ್ಲ. ಚಿತ್ರ ಹಾಗೂ ವೀಡಿಯೋ‌ಗಳು ಪರದೆಯ ಮೇಲೆ ಮೂಡುವ ಗುಣಮಟ್ಟ ಚೆನ್ನಾಗಿದೆ.

ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್‌ನದು; ನೋಡಲು ಲೆದರ್‌ನಂತೆ ಕಾಣುವ ವಿನ್ಯಾಸ ಚೆನ್ನಾಗಿದೆ. ಮೇಲ್ಮೈಯನ್ನೂ ಲೆದರ್‌ನಂತೆಯೇ ಒರಟಾಗಿಸಿರುವುದರಿಂದ ಸುಲಭಕ್ಕೆ ಕೈಜಾರುವ ಅಪಾಯವೂ ಇಲ್ಲ. ವಾಲ್ಯೂಮ್ ಬಟನ್ ಅನ್ನು ಫೋನಿನ ಬಲಬದಿಯಲ್ಲಿ ಕೊಟ್ಟಿರುವುದು ಒಳ್ಳೆಯ ಬದಲಾವಣೆ (ಈ ಹಿಂದೆ ಬಿಡುಗಡೆಯಾಗಿದ್ದ ಕೆಲ ಜೆನ್‌ಫೋನ್‌ ಮಾದರಿಗಳಲ್ಲಿ ಇದು ಫೋನಿನ ಹಿಂಬದಿಯಲ್ಲಿ, ಕ್ಯಾಮೆರಾ ಕೆಳಗಡೆ ಇತ್ತು). ಆನ್/ಆಫ್ ಬಟನ್ ಕೂಡ ಬಲಭಾಗದಲ್ಲೇ ಇದೆ. ಮೈಕ್ರೋ ಯುಎಸ್‌ಬಿ ಪೋರ್ಟ್ ಫೋನಿನ ಕೆಳಭಾಗದಲ್ಲಿದ್ದರೆ ಇಯರ್‌ಫೋನಿನ ಕಿಂಡಿ ಮೇಲುಗಡೆ ಇದೆ. ಫೋನಿನ ಜೊತೆ ಇಯರ್‌ಫೋನ್ ಕೊಡುವುದಿಲ್ಲ, ಹಾಗಾಗಿ ಎಫ್‌ಎಂ – ಎಂಪಿ೩ಗಳನ್ನೆಲ್ಲ ಕೇಳಲು ನಿಮ್ಮದೇ ಇಯರ್‌ಫೋನ್ ಬಳಸಬೇಕು.

ಜೆನ್‌ಫೋನ್ ಮ್ಯಾಕ್ಸ್‌ನ ಪ್ರಾಥಮಿಕ ಕ್ಯಾಮೆರಾ ೧೩ ಮೆಗಾಪಿಕ್ಸೆಲಿನದು, ಸೆಲ್ಫಿ ಕ್ಯಾಮೆರಾ ೫ ಮೆಗಾಪಿಕ್ಸೆಲಿನದು. ಪ್ರಾಥಮಿಕ ಕ್ಯಾಮೆರಾ ಜೊತೆ ಎಲ್‌ಇಡಿ ಫ್ಲ್ಯಾಶ್ ಹಾಗೂ ಲೇಸರ್ ಫೋಕಸ್ ಸೌಲಭ್ಯ ಇದೆ. ಜೆನ್‌ಫೋನ್ ಸರಣಿಯ ಹೈಲೈಟ್ ಎಂದೇ ಹೇಳಬಹುದಾದ ‘ಪಿಕ್ಸೆಲ್‌ಮಾಸ್ಟರ್’ ತಂತ್ರಜ್ಞಾನ ಇಲ್ಲೂ ಬಳಕೆಯಾಗಿರುವುದರಿಂದ ಒಳ್ಳೆಯ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಕ್ಯಾಮೆರಾ ಆಪ್‌ನಲ್ಲಿ ಹಲವು ಉತ್ತಮ ಆಯ್ಕೆಗಳಿವೆ: ಸ್ವಯಂಚಾಲಿತ (ಆಟೋ) ಮೋಡ್ ಅಷ್ಟೇ ಅಲ್ಲದೆ ಎಚ್‌ಡಿಆರ್, ನೈಟ್, ಲೋ ಲೈಟ್, ಪನೋರಮಾ, ಡೆಪ್ತ್ ಆಫ್ ಫೀಲ್ಡ್ ಮುಂತಾದ ಹಲವು ಮೋಡ್‌ಗಳಲ್ಲಿ ನಾವು ಫೋಟೋ ಕ್ಲಿಕ್ಕಿಸುವುದು ಸಾಧ್ಯ. ಪೂರ್ವನಿರ್ಧಾರಿತ ಆಯ್ಕೆಗಳು ಬೇಡವೆಂದರೆ ಡಿಎಸ್‌ಎಲ್‌ಆರ್‌ನಲ್ಲಿ ಬಳಸುವಂತೆ ಮ್ಯಾನ್ಯುಯಲ್ ಮೋಡ್‌ ಕೂಡ ಉಪಯೋಗಿಸಬಹುದು. ಸೆಲ್ಫಿ ಕ್ಯಾಮೆರಾದಲ್ಲೂ ಪನೋರಮಾ ಆಯ್ಕೆ ಬಳಸುವುದು ಸಾಧ್ಯ.

ಎರಡು ಸಿಮ್‌ಗಳ ಪೈಕಿ ಒಂದರಲ್ಲಿ ೩ಜಿ/೪ಜಿ ಸಂಪರ್ಕ ಬಳಸಬಹುದು, ಇನ್ನೊಂದು ೨ಜಿಗಷ್ಟೇ ಸೀಮಿತ. ಮೆಮೊರಿ ಕಾರ್ಡ್‌ಗಾಗಿ ಪ್ರತ್ಯೇಕ ಸ್ಥಳಾವಕಾಶವಿದೆ, ಮತ್ತು ಅದರಲ್ಲಿ ೬೪ಜಿಬಿವರೆಗಿನ ಕಾರ್ಡ್ ಬಳಸುವುದು ಸಾಧ್ಯ. ಬ್ಯಾಟರಿ ಸಾಮರ್ಥ್ಯದಂತೆ ಗಾತ್ರವೂ ಕೊಂಚ ದೊಡ್ಡದೇ. ಇಂದಿನ ಅನೇಕ ಫೋನುಗಳಂತೆ ಜೆನ್‌ಫೋನ್ ಮ್ಯಾಕ್ಸ್‌ನಲ್ಲೂ ಬ್ಯಾಟರಿ ಹೊರತೆಗೆಯುವಂತಿಲ್ಲ.

ಈ ಫೋನಿನ ಜೊತೆ ಕೊಟ್ಟಿರುವ ಚಾರ್ಜರ್ ಸಾಮರ್ಥ್ಯ ಬ್ಯಾಟರಿಯ ಸಾಮರ್ಥ್ಯಕ್ಕೆ ತಕ್ಕಂತಿಲ್ಲ (ಅಂದರೆ, ಬ್ಯಾಟರಿ ವೇಗವಾಗಿ ಚಾರ್ಜ್ ಆಗುವುದಿಲ್ಲ). ಆದರೆ ಹೆಚ್ಚು ವೇಗವಾಗಿ ಜಾರ್ಜ್ ಮಾಡುವ ಬೇರೆಯ ಚಾರ್ಜರ್ (ಉದಾ: ೨.೧ ಆಂಪಿಯರ್‌ ಕರೆಂಟ್ ನೀಡುವಂತದ್ದು) ಕೊಂಡರೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಈ ಫೋನನ್ನು ಪವರ್‌ಬ್ಯಾಂಕ್‌ನಂತೆ ಬಳಸಿ ಚಾರ್ಜ್ ಮಾಡುವಾಗಲೂ ಅಷ್ಟೆ, ಇನ್ನೊಂದು ಫೋನ್ ಚಾರ್ಜ್ ಆಗುವುದು ಕೊಂಚ ನಿಧಾನ.

ಹೆಚ್ಚು ಒತ್ತಡದಲ್ಲಿ (ಉದಾ: ಹಲವು ಆಪ್‌ಗಳನ್ನು ಒಟ್ಟಿಗೆ ತೆರೆದಾಗ, ದೀರ್ಘ ಅವಧಿಯವರೆಗೆ ಕ್ಯಾಮೆರಾ ಬಳಸಿದಾಗ ಇತ್ಯಾದಿ) ಈ ಫೋನ್ ಕೆಲವೊಮ್ಮೆ ಸರಿಯಾಗಿ ಕೆಲಸಮಾಡಲು ಪರದಾಡುತ್ತದೆ, ಆದರೆ ಸಾಮಾನ್ಯ ಬಳಕೆಯಲ್ಲಿ ಇದರ ಕಾರ್ಯಕ್ಷಮತೆ ತೃಪ್ತಿಕೊಡುತ್ತದೆ. ಹಾಗಾಗಿ ಕೊಡುವ ಹಣಕ್ಕೆ ಇದು ಒಳ್ಳೆಯ ಆಯ್ಕೆ ಎಂದೇ ಹೇಳಬೇಕು. ಹೆಚ್ಚು ಸಾಮರ್ಥ್ಯದ ಬ್ಯಾಟರಿಯಿಂದಾಗಿ ಇದನ್ನು ಪದೇಪದೇ ಚಾರ್ಜ್ ಮಾಡಬೇಕಾದ ಪರಿಸ್ಥಿತಿ ಬರುವುದಿಲ್ಲ. ಪ್ರತಿನಿತ್ಯವೂ ಹೆಚ್ಚು ಸಮಯ ಮೊಬೈಲ್ ಬಳಸುವವರು ಖಂಡಿತಾ ಪರಿಗಣಿಸಬಹುದಾದ ಫೋನು ಇದು.

ಜೆನ್‌ಫೋನ್ ಮ್ಯಾಕ್ಸ್ ಮೊಬೈಲನ್ನು ಫ್ಲಿಪ್‌ಕಾರ್ಟ್‌ ಮೂಲಕ ಕೊಳ್ಳಬಹುದು. ಜಾಲತಾಣದ ಕೊಂಡಿ ಇಲ್ಲಿದೆ [http://fkrt.it/efBi4NNNNN].

(ಸಾಫ್ಟ್ಪವೇರ್ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಲೇಖಕರು ಕನ್ನಡದ ಹಲವು ಪತ್ರಿಕೆಗಳಿಗೆ ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಬರೆದಿದ್ದಾರೆ. www.ejnana.com ಎಂಬ ತಂತ್ರಜ್ಞಾನ ಕುರಿತ ಕನ್ನಡ ಬರಹಗಳ ಜಾಲತಾಣದ ಉಸ್ತುವಾರಿ ಹೊತ್ತಿದ್ದಾರೆ.)

1 COMMENT

Leave a Reply to Prabhuteja Cancel reply