‘ನಾನು ಧೃತರಾಷ್ಟ್ರ ಆದ್ರೂ ಪರ್ವಾಗಿಲ್ಲ, ನನ್ ವೈರಿಗಳು ಒಕ್ಕಣ್ ಶುಕ್ಲಾಚಾರಿ ಆದ್ರೆ ಸಾಕು’ ಅಂತಂದ್ರು ನೋಡಿ ಗೌಡ್ರು..,

ಟೀಪು

‘ನನ್ನ ಒಂದು ಕಣ್ಣು ಹೋದ್ರೂ ಪರ್ವಾಗಿಲ್ಲ. ಎದುರಾಳಿಯ ಎರ್ಡೂ ಕಣ್ಣು ಇಂಗೋಗ್ಬೇಕು’ ಅನ್ನೋದು ವೈರಿಗಳ ಹಳೇ ಸಿದ್ಧಾಂತ.  ‘ನಾನು ಧೃತರಾಷ್ಟ್ರ ಆದ್ರೂ ಚಿಂತೆ ಇಲ್ಲ, ನನ್ ವೈರಿ ಒಕ್ಕಣ್ ಶುಕ್ಲಾಚಾರಿ ಆದ್ರೆ ಸಾಕು’ ಅನ್ನೋದು ಮಾಜಿ ಪ್ರಧಾನಿ ದೇವೇಗೌಡ್ರ ಹೊಸ ಥಿಯರಿ. ಅದನ್ನವರು ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಮರುಚುನಾವಣೇಲಿ ನಿವಾಳಿಸಿ, ತೆಗೆದು ಕೃತಾರ್ಥರಾಗಿದ್ದಾರೆ.

ದ್ವೇಷ ರಾಜಕಾರಣದಲ್ಲಿ ಗೌಡ್ರನ್ನ ಸರಿಗಟ್ಟೋರು ಇಡೀ ದೇಶದ ರಾಜಕಾರಣದಲ್ಲೇ ಯಾರೂ ಇಲ್ಲ ಅಂದ್ರೆ ಉತ್ಪ್ರೇಕ್ಷೆ ಆಗ್ಲಾರದು. ನೆಟ್ಟಗಿರೋರನ್ನ ಸೊಟ್ಟಗೆ ಮಾಡ್ಕೊಂಡು, ಅವರೊಡನೆ ಸೆಣಸೋದು ಅಂದ್ರೆ ಗೌಡರಿಗೆ ಬಲು ಇಷ್ಟ. ಅದು ಅವರ ಸಹಜ ಸಮರಕಲೆ. ಅಂಥಾದ್ರಲ್ಲಿ ವಿನಾಕಾರಣ ತಮ್ಮ ತಂಟೆಗೆ ಬಂದವರನ್ನು ಸುಮ್ಕೆ ಬಿಟ್ಟಾರೆಯೇ? ಅದು ಅವರ ಜಾಯಮಾನವೇ ಅಲ್ಲ. ಕೆರಳಿಸಿದೋರನ್ನ ಮೆಟರೆ ಹಿಡಿದು ಪೊಟರೆಗೆ ತಳ್ಳಿ ಮಿಸುಕಾಡದಂತೆ ಉಸಿರುಕಟ್ಟಿಸಿದ ಮೇಲಷ್ಟೇ ಅವರಿಗೆ ಸಮಧಾನ. ಅದನ್ನವರು ಹೆಂಗ್ ಮಾಡವ್ರೆ ನೋಡಿ!

ನಿಜ, ಈ ಬಾರಿ ಚುನಾವಣೆಗೆ ಪಕ್ಷನಾ ಇಳಿಸಬಾರ್ದು ಅನ್ನೋದು ಗೌಡರ ಆರಂಭದ ನಿಲುವಾಗಿತ್ತು. ಆದರೆ ತಮ್ಮ ಆ ನಿರ್ಧಾರಾನ ಪಲ್ಲಟ ಮಾಡಿದ್ದೇ ಅಲ್ಲದೇ, ಮಾನ ಮುಕ್ಕಾಗುವಂತೆ ಮನಸ್ಸಿಗೆ ಬಂದಂತೆ ಆಟವಾಡಿದ ಶತ್ರುಗಳ ವಿರುದ್ಧ ‘ಕಣ’ಕ್ಕಿಳಿದು ಸೇಡು ತೀರಿಸಿಕೊಂಡಿದ್ದಾರೆ. ಅದೂ ಮಾಮೂಲಿ ಸ್ಟೈಲಲ್ಲಿ. ಒಂದೇ ಕಲ್ಲಲ್ಲಿ ಮೂರ್ಮೂರು ಹಕ್ಕಿ ಹೊಡೆದುರುಳಿಸುವಂಗೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿತ ಭೈರತಿ ಸುರೇಶ್ ವಿರುದ್ದದ ಪೈಪೋಟಿಯಲ್ಲಿ ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಗೆ ಟಿಕೆಟ್ ಡೌಟಾದಾಗ ಜಾಫರ್ ಷರೀಫ್ ಗೌಡರ ಮನೆ ಕದ ಬಡಿದಿದ್ದರು. ರೆಹಮಾನ್ ನ ಜೆಡಿಎಸ್ ಅಭ್ಯರ್ಥಿ ಮಾಡ್ಕೊಳ್ಳಿ ಅಂತ ಹೇಳ್ಬಿಟ್ಟು, ಸೀದಾ ದಿಲ್ಲಿ ವಿಮಾನ ಏರಿದ್ದರು. ಅಲ್ಲಿ ಅಹಮದ್ ಪಟೇಲ್, ದಿಗ್ವಿಜಯ್ ಸಿಂಗ್ ಸೇರ್ದಂಗೆ ಬೇರೆ, ಬೇರೆ ದೊಡ್ಡೋರಿ ದುಂಬಾಲು ಬಿದ್ದು ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸ್ಕೊಂಡು, ಗೌಡರ ಮನೆ ದಿಕ್ಕನ್ನೇ ಮರೆತುಬಿಟ್ರು. ಹಿಂದೆ ಲೋಕಸಭೆ ಚುನಾವಣೇಲೂ ಇದೇ ರೀತಿ ತಾವೇ ಜೆಡಿಎಸ್ ಅಭ್ಯರ್ಥಿ ಆಗೋದಾಗಿ ಹೇಳಿ ಮೆಕ್ಕಾ ಫ್ಲೈಟ್ ಹತ್ತಿದ್ದ ಷರೀಫರು ಈಗಲೂ ಅದೇ ರೀತಿ ಉಲ್ಟಾ ಹೊಡೆದರೆ ಗೌಡರಿಗೆ ಹೆಂಗಾಗಬೇಡ? ತಕ್ಷಣ ಕಾಂಗ್ರೆಸ್ ಟಿಕೆಟ್ ವಂಚಿತ ಭೈರತಿಯನ್ನೇ ಜೆಡಿಎಸ್ ಕ್ಯಾಂಡಿಡೇಟ್ ಆಗು ಅಂದ್ರು. ಸಿದ್ರಾಮಯ್ನೋರ ಮೇಲಿನ ಪ್ರೀತಿಯಿಂದ ಸುರೇಶ್ ಆಗಲ್ಲ ಅಂದ್ರು. ಗೌಡರು ತಲೆ ಕೆಡಿಸಿಕೊಳ್ಳಲಿಲ್ಲ, ತಡಾನೂ ಮಾಡಲಿಲ್ಲ. ರೆಹಮಾನ್ ಹೆಸರು ಅನೌನ್ಸ್ ಆಗುವ ಮೊದ್ಲೇ ಕೈಗೆ ಸಿಕ್ಕ ಇಸ್ಮಾಯಿಲ್ ಷರೀಫ್ ನೇ ಕ್ಯಾಂಡಿಡೇಟ್ ಮಾಡಿ ಷರೀಫ್ ಗೆ ಮೊದಲ ಶಾಕ್ ಕೊಟ್ಟರು. ‘ಮುಸ್ಲಿಂ ಮತ ವಿಭಜನೆ ಮಾಡಿ ತೋರಿಸ್ತೀನಿ ನೋಡು..’ ಅಂತಾ.

ಹೇಳಿ, ಕೇಳಿ ಷರೀಫ್ ಕೂಡ ಹಳೇ ಹುಲಿ. 1989 ರಲ್ಲಿ ಚನ್ನಪಟ್ಟಣ, ರಾಮನಗರ ಮತ್ತಿತರ ಕಡೆ ಹುಸಿ ಕೋಮುಗಲಭೆ ಸೃಷ್ಟಿಸಿ ವೀರೇಂದ್ರ ಪಾಟೀಲ್ ಅವರಂಥವರನ್ನೇ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದ್ದ ಮಹಾನುಭಾವರು! ‘ನಮ್ತಾವು ಅತಾರ ಐತೆ ನೋಡಿ’ ಅಂತ ಗೌಡರ ಪಕ್ಷದ ಜಮೀರ್ ಅಹಮದ್ ಖಾನ್ ಅವರನ್ನೇ ಹೈಜಾಕ್ ಮಾಡಿಬಿಟ್ಟರು. ಭೈರತಿಗೆ ಟಿಕೆಟ್ ತಪ್ಪಿದ್ದಕ್ಕೆ ತಲೆಗೆ ಪೆಟ್ಟು ಬಿದ್ದಂತಾಗಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಜಮೀರ್ ಮತ್ತೊಂದು ರೀತಿ ತಲೆ ಕೆಡಿಸಿದ್ದರು. ‘ಆಗಿದ್ದು ಆಗೋಗೈತೆ, ಗೌಡರಿಗೆ ಪಾಠ ಕಲ್ಸಕ್ಕೆ ರೆಹಮಾನ್ ಗೆ ಸಪೋರ್ಟ್ ಮಾಡಿ’ ಅಂತ ವರಾತ ಹಿಡ್ಕೊಂಡ್ರು. ರೆಹಮಾನ್ ಬಗ್ಗೆ ಪ್ತೀತಿ ಇಲ್ಲದಿದ್ರೂ ಗೌಡರ ಮೇಲಿನ ಹಳೇ ಜಿದ್ದಿನಿಂದ ಸಿಎಂ ಇದಕ್ಕೆ ಒಪ್ಕೊಂಡ್ರು. ಕೋತಿಗೆ ಹೆಂಡ ಕುಡಿಸಿದಂತಾದ ಜಮೀರ್ ಉರ್ದು ಪತ್ರಿಕೇಲಿ ಗೌಡರ ವಿರುದ್ಧ ಜಾಹೀರಾತು ಕೊಟ್ರು. ಗೌಡ್ರುದು ಕೂಡ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಪಾಲಿಸಿ, ಹೀಗಾಗಿ ಜಮೀರ್ ಗೆ ‘ಮೀರ್ ಸಾದಿಕ್’ ಅಂತ ಬಿರುದು ಕೊಟ್ರು.

ಇದು ಬರೀ ಬಿರುದು ಅಷ್ಟೇ ಅಂತ ತಿಳಿದುಕೊಳ್ಳದೇ ಆ ಪಾತ್ರದ ಪರಕಾಯ ಪ್ರವೇಶ ಮಾಡಿದ ಜಮೀರ್, ಟೌನ್ ಹಾಲ್ ಮುಂದಕ್ಕೆ ಬೆಂಬಲಿಗರನ್ನು ಅಟ್ಟಿ, ಗೌಡರ ಪಟಾನ ತುಳಿಸಿ, ಬೆಂಕಿ ಹಚ್ಚಿಸಿಬಿಟ್ರು. ಮರೇಲಿ ನಿಂತ ಷರೀಫರು ಕೆಮ್ಕೊಂಡೇ ನಕ್ರು. ಸಿದ್ದರಾಮಯ್ಯ ಚಪ್ಪಾಳೆ ತಟ್ಟಿದ್ರು. ಗೌಡರಿಗೆ ಆದ ಅವಮಾನ ಕಂಡು ಒಕ್ಕಲಿಗರು ಕೆಂಡಮಂಡಲರಾದರು. ಸಮುದಾಯದ ನಾಡಿ ತಮ್ಮ ಪರ ಸಿಕ್ಕಾಪಟ್ಟೆ ಮಿಡಿತಾ ಐತೆ ಅಂತ ಗೊತ್ತಾಗಿದ್ದೇ ತಡ ದೇವೇಗೌಡರ ಸ್ಟ್ಯಾಟರ್ಜಿ ಫುಲ್ ಚೇಂಜ್ ಆಗೋಯ್ತು. ಮೊದಲಿಗೆ ಆದಷ್ಟು ಮುಸ್ಲಿಂ ಮತ ಸೆಳೆದು, ಆ ಸಮುದಾಯದ ಮತ ವಿಭಜನೆ ಮಾಡಿ, ಒಕ್ಕಲಿಗ ಸಮುದಾಯದವರೇ ಆದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಬೇಕು. ಆ ಮೂಲಕ ಷರೀಫ್, ಜಮೀರ್, ಸಿದ್ರಾಮಯ್ಯ ಅವರಿಗೆ ಪಾಠ ಕಲಿಸಬೇಕು ಅನ್ನೋದು ಅವರ ಒರಿಜಿನಲ್ ಲೆಕ್ಕಾಚಾರ ಆಗಿತ್ತು. ಆದರೆ ಅದನ್ನು ಕೈಬಿಟ್ಟರು. ‘ಇಸ್ಮಾಯಿಲು ನೀನು ಹೆಂಗಿದ್ರೂ ಗೆಲ್ಲಾಕಿಲ್ಲ, ಚುನಾವಣೆ ಬರ್ತದೆ, ಹೋಗ್ತದೆ, ಮಾನ-ಸ್ವಾಭಿಮಾನ ಬಹಳ ಮುಖ್ಯ ಕಣಪ್ಪಾ, ನೀನು ಮನೆಗೆ ಹೋಗಿ ರೆಸ್ಟ್ ತಗೋ ಅಂತಾ’ ಹೇಳಿ, ಬೇರೆಯದೇ ಆದ ಸೂಪರ್ ರಣತಂತ್ರಕ್ಕೆ ಇಳಿದರು. ಹಿಂದಿನ ವಿಧಾನಸಭೆ ಚುನಾವಣೇಲಿ ಜೆಡಿಎಸ್ ಅಭ್ಯರ್ಥಿಗೆ ಸುಮಾರು 25 ಸಾವಿರ ವೋಟು ಬಿದ್ದಿದ್ದವು. ಮಹಾನಗರ ಪಾಲಿಕೆ ಚುನಾವಣೇಲೂ ಕ್ಷೇತ್ರದಲ್ಲಿ ಅದಕ್ಕಿಂತಲೂ ಹೆಚ್ಚಿನ ಮತಗಳು ಸಿಕ್ಕಿದ್ದವು. ಆದರೆ ಈ ಬಾರಿ ಅವ್ಯಾವವೂ ಜೆಡಿಎಸ್ಗೆ ಬರಬಾರ್ದು. ಪಕ್ಷ ಬರ್ಬಾದ್ ಆದ್ರೂ ಪರ್ವಾಗಿಲ್ಲ, ಅವೆಲ್ಲ ಸೀದಾ ಬಿಜೆಪಿಗೆ ಹೋಗಬೇಕು ಅಂತ ಒಂದೇ ಒಂದು ಹುಕುಂ ಕೊಟ್ಟರು. ಆ ಕಡೆ ಭೈರತಿ ಬೇರೆ ಟಿಕೆಟ್ ಸಿಗದ ಕೋಪಕ್ಕೆ ಕುರುಬ ವೋಟುಗಳನ್ನೆಲ್ಲ ಸಾರಸಗಟಾಗಿ ‘ನಾರಾಯಣಸ್ವಾಮಿಯೇ ನಮಃ’ ಮಾಡಿಟ್ಟಿದ್ದರು. ಈ ಕಡೆ ಗೌಡ್ರುದೂ ಥೇಟು ಪೈಲ್ವಾನ್ ರೀತಿ ಕತ್ತರಿ ಷಾಟ್. ಭೈರತಿ ಮತ್ತು ಗೌಡರ ಷಾಟ್ ಗೆ ಒಂದು ಕಡೆ ಜಾಷರ್, ಇನ್ನೊಂದು ಕಡೆ ಅವರ ಜತೆ ಕೈ ಜೋಡಿಸಿದ ಜಮೀರ್, ಮತ್ತೊಂದು ಕಡೆ ಜಮೀರ್ ಕೈ ಹಿಡಿದ ಸಿದ್ದರಾಮಯ್ಯ – ಇವರೆಲ್ರೂದು ಜಾನ್ ನಿಕಾಲ್ ಆಗೋಗೈತೆ! ಅಟ್ ದ ಕಾಸ್ಟ್ ಆಫ್ ಜೆಡಿಎಸ್ ಠೇವಣಿ!!

Leave a Reply