ವಂದೇ ಮಾತರಂ ಎನ್ನುತ್ತ ತನ್ನದೇ ದೇಶವಾಸಿಗಳ ಮೇಲೆ ಹಲ್ಲೆ ಮಾಡೋದು ಅದ್ಯಾವ ಸೀಮೆ ದೇಶಪ್ರೇಮ?

ಡಿಜಿಟಲ್ ಕನ್ನಡ ಟೀಮ್

ಭಾರತವನ್ನು ಬರ್ಬಾದ್ ಮಾಡುವ ದೇಶದ್ರೋಹದ ಘೋಷಣೆಗಳನ್ನು ಕೂಗಿದವರಿಗೆ ಶಿಕ್ಷೆಯಾಗಬೇಕಿದ್ದ ಪ್ರಕರಣವನ್ನು ಪಾಟಿಯಾಲದ ವಕೀಲರ ಸಮೂಹವೇ ಹಳ್ಳ ಹಿಡಿಸುತ್ತಿದೆ.

ಬುಧವಾರ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ ಜಾಮೀನು ವಿಚಾರಣೆ ವೇಳೆ ಪಾಟಿಯಾಲಾ ಹೌಸ್ ಗೆ ವರದಿಗೆಂದು ತೆರಳಿದ್ದ ಪತ್ರಕರ್ತರ ಮೇಲೆ ಈ ನ್ಯಾಯವಾದಿಗಳು ಹಲ್ಲೆ ನಡೆಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಯಾರೆಲ್ಲ ಹಾಜರಿರಬಹುದು ಎಂಬ ಬಗ್ಗೆ ಸುಪ್ರೀಂಕೋರ್ಟ್ ನ ನಿರ್ದೇಶನ ಸ್ಪಷ್ಟವಿತ್ತು. ಅಲ್ಲಿ ತೆರಳಿದ್ದ ಪತ್ರಕರ್ತರ ಕೈಯಲ್ಲಿ ಅಗತ್ಯ ಪಾಸ್ ಗಳೂ ಇದ್ದವು. ಇಷ್ಟಾಗಿಯೂ ‘ದೇಶಭಕ್ತಿ’ ಹೆಸರಲ್ಲಿ ಫಸ್ಟ್ ಪೋಸ್ಟ್ ಹಾಗೂ ಐಬಿಎನ್ ಪತ್ರಕರ್ತರ ಮೇಲೆ ಹಲ್ಲೆಯಾಗಿದೆ. ಎಂಥ ವೈರುಧ್ಯ ಎಂದರೆ ಈ ದಾಳಿಕೋರ ವಕೀಲರು ತ್ರಿವರ್ಣ ಧ್ವಜ ಹಿಡಿದು, ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’ ಅಂತ ಕೂಗುತ್ತಿದ್ದರು! ಎಂಥ ನಾಚಿಕೆಗೇಡು ಅಂತಂದ್ರೆ ತಾಯಿಗೆ ಜೈ ಎನ್ನುತ್ತ ಮಹಿಳಾ ಪತ್ರಕರ್ತರ ಮೇಲೆ ಇವರು ಹಲ್ಲೆ ಮಾಡಿದ್ದಾರೆ.

ಅಲ್ಲಿಗೆ, ಇಂಥ ಅತಿರೇಕದವರೆಲ್ಲ ಸೇರಿಕೊಂಡು ಮಾಡುತ್ತಿರುವುದೇನೆಂದರೆ, ‘ದೇಶಭಕ್ತ’ ಎಂಬ ಪದವನ್ನೇ ತೂಕ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಹೀಗೆ ಧ್ವಜ ಹಿಡಿದುಕೊಂಡು ನ್ಯಾಯಾಲಯದ ಆವರಣದಲ್ಲೇ ತಮ್ಮೊಂದಿಗೆ ಅಭಿಪ್ರಾಯ ಬೇಧ ಹೊಂದಿರುವವರ ಮೇಲೆ ಹಲ್ಲೆ ಮಾಡುವುದೇ ರಾಷ್ಟ್ರಪ್ರೇಮ, ದೇಶಾಭಿಮಾನದ ಅಭಿವ್ಯಕ್ತಿ ಎಂದಾಗಿಬಿಟ್ಟರೆ, ತಲೆ ಸರಿ ಇರುವ ಯಾರೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಬ್ರಾಂಡ್ ಗಿಂತ ದೇಶಪ್ರೇಮ ಇಲ್ಲದವನು ಅಂತ ಕರೆಸಿಕೊಳ್ಳೋದೇ ಗೌರವದ ಸ್ಥಾನ ಎಂಬ ವಿಷಾದದ ದಿನಗಳು ಬಂದಾವು!

‘ಪತ್ರಕರ್ತರೆಲ್ಲ ದೇಶವಿರೋಧಿಗಳನ್ನು ಹೀರೋ ಮಾಡುತ್ತಿದ್ದೀರಿ’ ಅಂತ ನ್ಯಾಯವಾದಿಯೊಬ್ಬ ವಾಹಿನಿಗಳಿಗೆ ಆಕ್ರೋಶದ ಪ್ರತಿಕ್ರಿಯೆ ಕೊಡುತ್ತಿದ್ದದ್ದು ಕಂಡುಬಂತು. ಇದಕ್ಕೆ ಪ್ರತಿಕ್ರಿಯಾತ್ಮಕವಾಗಿ ತಮ್ಮ ಹಲ್ಲೆ ಎಂಬ ಸಮರ್ಥನೆ ಅಲ್ಲಿತ್ತು. ಯಾವುದು ದೇಶ ವಿರೋಧ- ಯಾವುದಲ್ಲ ಅಂತ ತೀರ್ಮಾನವಾಗುವ ಪ್ರಕ್ರಿಯೆಯ ಆರಂಭಕ್ಕೆಂದೇ ಎಲ್ಲರೂ ನ್ಯಾಯಾಲಯಕ್ಕೆ ಬಂದಿರುವುದಲ್ಲವೇ? ಕನ್ಹಯ್ಯ ತಪ್ಪು ಮಾಡಿರುವುದರ ಬಗ್ಗೆ ಸಾಕ್ಷಿ ಇರುವವರು ಹಾಗೂ ಆತ ಮುಗ್ಧನೆನ್ನುವವರು ಮಾಡಬೇಕಿರುವುದು ನ್ಯಾಯಾಲಯದಲ್ಲಿ ವಾದವೇ ಹೊರತು ಆವರಣದಲ್ಲಿ ನಿಂತು ಬಲ ಪ್ರದರ್ಶನವಲ್ಲ. ಕಾನೂನನ್ನೇ ಗೌರವಿಸದೇ ತ್ರಿವರ್ಣ ಧ್ವಜ ಹಾರಿಸಿಕೊಂಡಿರೋದು ಯಾವ ಸೀಮೆಯ ದೇಶಭಕ್ತಿ?

ಚಿತ್ರಕೃಪೆ- ಎಎನ್ಐ ಸುದ್ದಿಸಂಸ್ಥೆ ಟ್ವೀಟ್
ಚಿತ್ರಕೃಪೆ- ಎಎನ್ಐ ಸುದ್ದಿಸಂಸ್ಥೆ ಟ್ವೀಟ್

ಇಲ್ಲಿ ದೆಹಲಿ ಪೋಲೀಸರಿಗೂ ಪ್ರಶ್ನೆಗಳಿವೆ. ಈ ಹಿಂದೆ ಕನ್ಹಯ್ಯರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದಾಗಲೂ ಪತ್ರಕರ್ತರ ಮೇಲೆ, ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿತ್ತು. ಅಷ್ಟಾಗಿಯೂ ಬುಧವಾರದ ವಿಚಾರಣೆ ವೇಳೆ ಗೊಂದಲ- ಗಲಾಟೆಗಳಿಗೆ ಅನುವಾಗದಂತೆ ಸಿದ್ಧರಾಗುವುದು ಪೋಲೀಸರಿಗೆ ಸಾಧ್ಯವಾಗಲಿಲ್ಲವೇ? ಯಾರಾದರೂ ಹೊಡೆದಾಡಿಕೊಂಡಿರಲಿ ಎಂಬ ಉಪೇಕ್ಷೆಯೇ? ದೇಶದ್ರೋಹದ ಘೋಷಣೆ ಆರೋಪ ಬಂದಾಗ ಜೆಎನ್ ಯು ಕ್ಯಾಂಪಸ್ ಪ್ರವೇಶಿಸಿದ್ದು ಕಾನೂನು ಸುವ್ಯವಸ್ಥೆ ದೃಷ್ಟಿಯಲ್ಲಿ ಸೂಕ್ತವಾಗಿಯೇ ಇದೆ. ಆದರೆ ಅಲ್ಲಿ ಮಾತ್ರ ಉತ್ಸುಕತೆ ತೋರಿ ನಂತರದ ಪ್ರಕ್ರಿಯೆಯಲ್ಲಿ ಕೈಕಟ್ಟಿ ಕುಳಿತಿರುವುದೇಕೆ? ವಕೀಲರು ತಮ್ಮನ್ನು ಸುತ್ತುವರೆದು ಬೆದರಿಸುತ್ತಿದ್ದಾಗ ಹತ್ತಿರದಲ್ಲೇ ಇದ್ದ ಪೋಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದಿದ್ದಾರೆ ಹಲ್ಲೆಗೊಳಗಾದ ಪತ್ರಕರ್ತರು.

ಇಷ್ಟಕ್ಕೇ ನಿಲ್ಲದೇ, ನ್ಯಾಯಾಲಯದ ಒಳಗಿನಿಂದ ಒಬಿ ವ್ಯಾನುಗಳ ಮೇಲೆ ಕಲ್ಲುಗಳು ಬಿದ್ದಿವೆ. ಪಾಟಿಯಾಲಾ ಹೌಸ್ ಕೋರ್ಟ್ ನ್ಯಾಯವಾದಿಗಳ ದಿನನಿತ್ಯದ ಕರ್ಮಭೂಮಿಯೇ ಆಗಿರಬಹುದು. ಆದರೆ ಇಂಥ ಸೂಕ್ಷ್ಮ ಪ್ರಕರಣದಲ್ಲಿ ಇದಕ್ಕೆ ನೇರ ಸಂಬಂಧವಿಲ್ಲದವರು ಆವರಣದಲ್ಲಿ ಆಮಟ್ಟಿಗೆ ಜಮಾಯಿಸುವುದಕ್ಕೆ ಅನುಕೂಲವಾಗಿದ್ದಾದರೂ ಹೇಗೆ?

ಜೆಎನ್ ಯು ಪ್ರಕರಣ ಸಂಕೀರ್ಣವೇನಲ್ಲ. ಭಾರತವನ್ನು ನೂರು ತುಂಡು ಮಾಡುವವರೆಗೆ ವಿರಮಿಸೆವು ಎನ್ನುತ್ತ ಅಫ್ಜಲ್ ಆರಾಧನೆ ಮಾಡಿದವರು ಯಾರೆಂದು ತೀರ್ಮಾನವಾಗಿ ಶಿಕ್ಷೆಯಾಗಬೇಕಿದೆ. ದೇಶ ತುಂಡು ಮಾಡುವ ಮಾತು ಅಭಿಪ್ರಾಯ ಬೇಧವೂ ಅಲ್ಲ, ಸೈದ್ಧಾಂತಿಕ ಭಿನ್ನಮತವೂ ಅಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಉದಾಹರಣೆ ಖಂಡಿತ ಅಲ್ಲ. ಆದರೆ ನಾನಾ ಬಣಗಳ ಪಾಲ್ಗೊಳ್ಳುವಿಕೆಯಿಂದ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿರುವ ಪ್ರಕರಣದಲ್ಲಿ ಈ ಮೂಲಪ್ರಶ್ನೆಯೇ ಮರೆಯಾಗಿ ದೊಂಬಿಯೊಂದೇ ಚರ್ಚಾವಸ್ತುವಾಗುತ್ತಿದೆ. ಈ ಹಂತದಲ್ಲಿ ‘ದೇಶಭಕ್ತ’ ನ್ಯಾಯವಾದಿಗಳು ಸೇರಿ ಹೆಚ್ಚು- ಕಡಿಮೆ ಪ್ರಕರಣವನ್ನೇ ಹಳ್ಳ ಹಿಡಿಸುತ್ತಿದ್ದಾರೆ.

Leave a Reply