ವ್ಯಾಲಂಟೈನ್ ದಿನಕ್ಕೆ ವಿರೋಧ, ನೆಲೆಯಿಲ್ಲದ ವಾದ

author-geethaಇದರ ಬಗ್ಗೆ ಬರೆಯಬಾರದು ಎಂದು ತುಂಬಾ ಅಂದು ಕೊಂಡೆ. ಆದರೆ ಈ ವಾರದ ಹೈಲೈಟ್ ಅದೇ ಆಗಿದ್ದರಿಂದ, ಎಲ್ಲೆಲ್ಲೂ ಅದರ ಬಗ್ಗೆ ಚರ್ಚೆ… (ಪರ-ವಿರೋಧ) ಆಗುತ್ತಲಿದ್ದರಿಂದ let me write my two sentences ಅಂತ ಈ ಬರಹ.

ವಿಷಯ ಅದೇ.. valentine’s day ! Google ಮಾಡುವುದರಿಂದ ಸಿಗದ ವಿಷಯವೇ ಇಲ್ಲ. ಅಲ್ಲಿ ನಾನು ಓದಿದ ವಿಷಯವನ್ನು ಇಲ್ಲಿ ಕನ್ನಡೀಕರಿಸಿ ಬರೆಯುವುದರಲ್ಲಿ ಅರ್ಥವೇ ಇಲ್ಲ. ಪರ, ವಿರೋಧ ಮಾತಾಡುವವರೆಲ್ಲರೂ ಒಮ್ಮೆ ಅದನ್ನು ಓದಿ ಬರಬೇಕು. ‘history of valentine’.. ಬಹಳ interesting ಆಗಿದೆ.

ಪ್ರಕೃತಿ, ಪ್ರೇಮ ನಮ್ಮ ಜೀವನದ ಪ್ರಮುಖ ಮುಖಗಳು. ನಮ್ಮ ಹಬ್ಬಗಳೆಲ್ಲಾ ಪ್ರಕೃತಿ ಮಾತೆಗೆ ವಂದಿಸುವ ಪ್ರಕ್ರಿಯೆಗಳೇ.

ಕ್ರಿಸ್ತರು ಫೆಬ್ರವರಿ ತಿಂಗಳನ್ನು month of romance ಎಂದು ಸಂಭ್ರಮಿಸುತ್ತಾರೆ. ಹದಿನಾಲ್ಕನೇ ಫೆಬ್ರವರಿಯನ್ನು ರಾಜಾಜ್ಞೆಗೆ ವಿರುದ್ಧ ಸೈನಿಕರಿಗೆ ಮದುವೆ ಮಾಡಿಸಿದ ಸೇಂಟ್ ವಾಲೆಂಟೈನ್ ದಿನವನ್ನಾಗಿ ಆಚರಿಸುತ್ತಾರೆ.

ಪಗಾಸ್ ಧರ್ಮದ ಪಾಲಕರಿಗೂ ಫೆಬ್ರವರಿ ತಿಂಗಳು ಮುಖ್ಯವಾಗಿತ್ತು. ಅದನ್ನು fertility month ಎಂದು ಆಚರಿಸುತ್ತಿದ್ದರು. fertility month.. ಎಂದು ಭೂಮಿಯನ್ನು, ಹೆಣ್ಣನ್ನು ಪೂಜಿಸುತ್ತಿದ್ದರು. ನಮ್ಮಲ್ಲಿ ಕೂಡ ಈ ಸಮಯದಲ್ಲಿ ಸಂಕ್ರಾಂತಿ ಹಬ್ಬ ಬರುತ್ತದೆ. ಭೂತಾಯಿಯ ಪೂಜೆ ಮಾಡುತ್ತೇವೆ. ಮಾಘ ಮಾಸ ಬರುವುದು ಫೆಬ್ರವರಿಯಲ್ಲೇ. ಲಗ್ನಕ್ಕೆ ಹೇಳಿ ಮಾಡಿಸಿದ ಮಾಸ, ಮಾಘ ಮಾಸ!

ಪ್ರೇಮಿಗಳು, ದಂಪತಿಗಳು ಒಬ್ಬರಿಗೆ ಒಬ್ಬರು ಕಾರ್ಡ್ ಕೊಟ್ಟೋ, ಹೂವು ಕೊಟ್ಟೋ, ಉಡುಗೊರೆ ಕೊಟ್ಟೋ ಪ್ರೇಮ ನಿವೇದಸಿಕೊಳ್ಳುತ್ತಾರೆ ಈಗ. ತಪ್ಪೇನು?

ತಾಯಿ ಮಗುವಿನ ಪ್ರೇಮವನ್ನು ವೈಭವೀಕರಿಸುವ ನಾವು ರೊಮ್ಯಾಂಟಿಕ್ ಪ್ರೇಮಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತೇವೆ? ಪ್ರೇಮ ನಮ್ಮ ಸಂಸ್ಕೃತಿ ಅಲ್ಲವೆಂದರೆ, ಪ್ರೇಮವೇ ಇಲ್ಲದ ಸಂಸ್ಕೃತಿ ಅಂದೆಂಥಹ ಸಂಸ್ಕೃತಿ, ಎಂಬ ಪ್ರಶ್ನೆ ಹುಟ್ಟುತ್ತದೆ. ಗಂಡು-ಹೆಣ್ಣಿನ ನಡುವಿನ ಪ್ರೇಮವನ್ನು ಬರೀ ಕಾಮವೆನ್ನುವ ದೃಷ್ಟಿಕೋನ ಬದಲಾಗಬೇಕಲ್ಲವೇ? ಕಾಮ ಇದೆ. ಇಲ್ಲವೆಂದಲ್ಲ.. ಇದ್ದರೆ ತಪ್ಪೇನು ಇಲ್ಲವಲ್ಲ.. ವಾತ್ಯಾಯನ ಕಾಮಸೂತ್ರ ಬರೆದ ನಾಡಿನಲ್ಲಿ ಜನಸಂಖ್ಯೆಯಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನ ಪಡೆಯುವ ದಿನ ದೂರವಿಲ್ಲದ ನಾಡಿನಲ್ಲಿ ಕಾಮದ ಬಗ್ಗೆ ಇಷ್ಟೊಂದು ಮಡಿವಂತಿಕೆ ಯಾಕೆ?

ಅರವತ್ತು ದಾಟಿರುವ ನನ್ನ ಸ್ನೇಹಿತೆಯೊಬ್ಬರು ತಮ್ಮ ಗಂಡ ತಮಗೆ ನೀಡುತ್ತಿರುವ ಕೆಂಪು ಗುಲಾಬಿಯನ್ನು ನಾಚಿಕೆಯಿಂದ ತಾವು ಸ್ವೀಕರಿಸುತ್ತಿರುವ ಫೋಟೋವನ್ನು ತಮ್ಮ ಫೇಸ್ ಬುಕ್ ವಾಲಿನಲ್ಲಿ ಹಾಕಿ ಸಂಭ್ರಮ ಪಟ್ಟರು. ನೋಡಿ ಸಂತೋಷ ಪಟ್ಟವರು ನೂರಾರು ಮಂದಿ. ಪ್ರೇಮ, ಪ್ರೇಮ ನಿವೇದನೆ, ಒಂದು ಆಲಿಂಗನ, ಒಂದು ಮುತ್ತು ಅಪರಾಧವಾದರೆ ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂದಾದರೆ ಅಷ್ಟೇ ಪೇಲವವೇ ಈ ಸಂಸ್ಕತಿ?

“ಹಾಗಲ್ಲಾ- ಈ ವಾಲೈಂಟೈನ್ ಡೇ ಫ್ರೆಂಡ್ ಶಿಫ್ ಡೇ ಎಲ್ಲಾ ಈ ವ್ಯಾಪಾರಿಗಳು ಅದೇ ಈ ಹೂವಿನ, ಕಾರ್ಡಿನ ವ್ಯಾಪಾರಿಗಳು ತಮ್ಮ ವ್ಯಾಪಾರ ವೃದ್ಧಿಸಲು ಇದನ್ನು ಪಾಪುಲರ್ ಮಾಡಿದ್ದಾರೆ… ಅವರ ವ್ಯಾಪಾರಕ್ಕಾಗಿ ಈಗಂತೂ ಈ ಹೊಟೆಲ್ಲಿನವರು, ಆಭರಣದ ಅಂಗಡಿಯವರೂ ಕೂಡ ಸೇರಿಕೊಂಡು.. ವ್ಯಾಲೆಂಟೆನ್ ಡೇ ಆಚರಿಸದರು ಹುಂಬರು ಎಂಬುವಂತಹ ಕೀಳರಿಮೆ ಹುಟ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.. ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಎಲ್ಲರೂ ಆಚರಿಸಲು ಆರಂಭಿಸಿದ್ದಾರೆ. ಈ ವ್ಯಾಪಾರಿಗಳ ಜೇಬು ತುಂಬುತ್ತಾರೆ” ಇದು ಒಂದು ವಾದ. ಇನ್ನೊಂದು.. ‘ನಮ್ಮ ಹೆಣ್ಣುಮಕ್ಕಳನ್ನು ಬಲೆಗೆ ಹಾಕಿಕೊಂಡು ಅವರನ್ನು ಹಾಳುಮಾಡುತ್ತಾರೆ. ಒಂದು ಕೆಂಪು ಗುಲಾಬಿ ಒಂದು ಚಾಕೋಲೇಟ್ ಬಾರ್ ಕೊಟ್ಟು!’

ಗುಲಾಬಿ ಮುಡಿದು, ಚಾಕೋಲೇಟ್ ತಿನ್ನುವ ಹೆಣ್ಣು ಮಕ್ಕಳೇನು ಲಾಲಿಪಾಪ್ ತಿನ್ನುವ ವಯಸ್ಸಿನವರೇ? ಯಾವುದು ಸರಿ ಯಾವುದು ಅಲ್ಲ ಎಂಬ ವಿವೇಚನೆ ಅವರಿಗಿಲ್ಲವೇ? ಗುಲಾಬಿ ಕೊಟ್ಟು ಪ್ರೇಮ ನಿವೇದನೆ ಮಾಡಿದ ತಕ್ಷಣ, ಕಾಮಕೇಳಿಯಲ್ಲಿ ತೊಡಗುತ್ತಾರೆ ಎನ್ನುವುದಾದರೆ ವ್ಯಾಲೆಂಟೈನ್ ದಿನವೇ ಏಕೆ ಬೇಕು?

ವರ್ಷದ ಮೂನ್ನೂರರವತೈದು ದಿನದಲ್ಲಿ ಯಾವುದೇ ದಿನ ಅದು ಸಂಭವಿಸಬಹುದು. ಸರಿ-ತಪ್ಪುಗಳ ತುಲನೆ ಅವರಿಗೆ ಬಿಟ್ಟಿದ್ದಲ್ಲವೇ? ಪಾರ್ಕಿಗೆ, ಥಿಯೇಟರಿಗೆ ನುಗ್ಗಿ, ಅಲ್ಲಿ ಕುಳಿತಿರುವ ಯುವ ಪ್ರೇಮಿಗಳನ್ನು ಥಳಿಸಿ, ಹೆಣ್ಣುಮಕ್ಕಳ ಕೆನ್ನೆಗೆ ಹೊಡೆದು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿರುವವರ ಸಂಸ್ಕೃತಿ ಸಂಸ್ಕಾರ ಎಂತಹುದು? ಹಾರ, ತಾಳಿ ತೆಗೆದುಕೊಂಡು ಹೋಗಿ ಮದುವೆಯೇ ಮಾಡಿಸಿ ಬಿಡಲು ಇವರು ಯಾವ ನಾಡಿನ ಸಂಸ್ಕೃತಿಯ ಸಂರಕ್ಷಕರು? ಇಂತಹ ರಕ್ಷಕರು ನಮಗೆ ಬೇಡ. ಅದರ ಬದಲು ಕಾಲೇಜುಗಳಲ್ಲಿ ಗಂಡು ಅಥವಾ ಹೆಣ್ಣು ಮಕ್ಕಳು ಮೋಸ ಹೋಗದಿರಲು ಅವರನ್ನು ಪ್ರಿಪೇರ್ ಮಾಡಬೇಕು.. ಮೋಸ ಮಾಡದಿರುವಂತೆ ತಿಳಿವಳಿಕೆ ನೀಡಬೇಕು.

ಮೊಬೈಲ್ ಕಿತ್ತುಕೊಂಡು, ಕೆನ್ನೆಗೆ ಹೊಡೆದು, ಕಾಲಲ್ಲಿ ಒದ್ದು ಹೆಣ್ಣು ಮಕ್ಕಳಿಗೆ (ವಾಲಂಟೈನ್ ದಿನ) ಬುದ್ಧಿ ಹೇಳುತ್ತಿದ್ದ ಎರಡು ನಿಮಿಷದ ವಿಡಿಯೋ ನೋಡಿ ಕೋಪ ಉಕ್ಕಿಬಂತು. ಹಾಳಾಗುವುದೇ ಇದ್ದರೆ, ಮೋಸ ಹೋಗುವುದೇ ಇದ್ದರೆ ಮಾರ್ಚ್ ಹದಿನೈದು ಕೂಡ ಆಗಬಹುದು.. ಏಪ್ರಿಲ್ ಒಂದು ಕೂಡ ಆಗಬಹುದು.

ಯಾರೂ ಯಾವ ಸಂಸ್ಕೃತಿಯನ್ನು ರಕ್ಷಿಸಲಾರರು. ಸಂಸ್ಕೃತಿಗೆ ರಕ್ಷಣೆ ಬೇಕಾಗಿಯೂ ಇಲ್ಲ. ಜೊತೆಗೆ ಸಂಸ್ಕೃತಿ ಎನ್ನುವುದರ ವ್ಯಾಪ್ತಿ ದೊಡ್ಡದು. ಹಾಗೂ ಸಂಸ್ಕೃತಿ ನಿಂತ ನೀರಲ್ಲ. ನಿಂತ ನೀರಾದರೆ ಅದು ಪಾಚಿಕಟ್ಟಿ ನಮ್ಮನ್ನು ಜಾರಿ ಬೀಳಿಸುತ್ತದೆ. ಸಂಸ್ಕೃತಿ ಎನ್ನುವುದು ಹರಿಯುವ ನದಿಯಂತೆ.. ಹಳಿತನ್ನು ಒಗೆದು, ಹೊಸತನ್ನು ಹೊತ್ತುಕೊಂಡು ಸುತ್ತಲ ಪ್ರದೇಶವನ್ನು ಹಸಿರುಗೊಳಿಸಿ, ಜೀವನವನ್ನುಕೊಡುವುದು ಸಂಸ್ಕೃತಿ. ಒಪ್ಪಿದನ್ನು ಸ್ವೀಕರಿಸಿ, ಒಪ್ಪಿಗೆಯಾಗದನ್ನು ಬಿಟ್ಟರೆ ಆಯಿತು. ಬದಲಾವಣೆಯನ್ನು ತರುವುದು ಯಾರ ಕೈಯಲ್ಲೂ ಇಲ್ಲ.. ಹುಂಬತನ ಬೇಡ.

Leave a Reply