ಸುದ್ದಿಸಂತೆ: ಆಮೀರ್, ಚೀನಾ, ವನಿತೆಯರ ವಿಜಯ… ನೀವು ತಿಳಿಯಬೇಕಾದ 7 ಸುದ್ದಿಗಳು

ಮಾ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಕನ್ಹಯ್ಯಾ

ದೇಶದ್ರೋಹ ಪ್ರಕರಣದಲ್ಲಿ ಬಂಧಿತನಾಗಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ಕೋರ್ಟ್ ಮಾ.2ರವರೆಗೆ ವಿಸ್ತರಿಸಿದೆ. ನ್ಯಾಯವಾದಿಗಳ ದೊಂಬಿಯ ನಡುವೆ ಬುಧವಾರ ಪೊಲೀಸರು ಕನ್ಹಯ್ಯಾ ಅವರನ್ನು ಸುರಕ್ಷಿತವಾಗಿ ಕೋರ್ಟ್ ವಿಚಾರಣೆಗೆ ಕರೆದೊಯ್ದರು. ವಕೀಲರ ಒಂದು ಗುಂಪು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದರಲ್ಲದೇ, ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ವಿಚಾರಣೆ ವೇಳೆ ಮಾತನಾಡಿರುವ ಕನ್ಹಯ್ಯಾ, ‘ನಾನು ಯಾವುದೇ ರೀತಿಯ ದೇಶ ವಿರೋಧಿ ಚಟುವಟಿಕೆಗೆ ಪ್ರೋತ್ಸಾಹ ನೀಡಿಲ್ಲ. ನಾನು ತಪ್ಪಿತಸ್ಥ ಎಂದು ಸಾಬೀತಾದರೇ ಜೈಲಿಗೆ ಹಾಕಿ. ಫೆ.9ರಂದು ನಡೆದ ಕಾರ್ಯಕ್ರಮದ ಹಾದಿ ತಪ್ಪಿಸಲು ನಡೆದ ಪ್ರಯತ್ನ ವಿಫಲವಾಯಿತು. ನಮ್ಮ ಬಳಿ ಸಾಕಷ್ಟು ಸಾಕ್ಷಾಧಾರಗಳಿವೆ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಪ್ರಚಾರಾಂದೋಲನಕ್ಕಿಲ್ಲ ಆಮೀರ್

ಇನ್ ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನದಿಂದ ಹೊರ ಬಂದ ಬಾಲಿವುಡ್ ನಟ ಅಮೀರ್ ಖಾನ್ ಅವರು ‘ಬರ ಮುಕ್ತ ಮಹಾರಾಷ್ಟ್ರ’ ಅಭಿಯಾನದ ರಾಯಭಾರಿಯಾಗಿ ಆಯ್ಕೆಯಾಗುತ್ತಾರೆ ಎಂದು ಮಂಗಳವಾರ ಸುದ್ದಿ ಹರಿದಾಡಿತ್ತು. ಈ ವರದಿಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿರಾಕರಿಸಿದ್ದಾರೆ. ದಂಗಾಲ್ ಚಿತ್ರದಲ್ಲಿ ನಿರಂತರಾಗಿರುವ ಅಮೀರ್ ಖಾನ್, ಈ ಆಂದೋಲನದ ರಾಯಭಾರಿಯಾಗುತ್ತಾರೆ ಎಂಬ ಮಾಹಿತಿ ಅವರ ಆಪ್ತ ವಲಯದಿಂದ ಬಂದಿದ್ದವು.

ಭಾರತ ವನಿತೆಯರ ಮಡಿಲಿಗೆ ಸರಣಿ

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಜಯ ಸಾಧಿಸಿದೆ. 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಬುಧವಾರ ರಾಂಚಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಲಂಕಾ ಪಡೆ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 178 ರನ್ ದಾಖಲಿಸಿತು. ಲಂಕಾ ಪರ ಸುರಾಂಗಿಕ 43, ವೀರಾಕ್ಕೊಡಿ 37 ಉತ್ತಮ ಬ್ಯಾಟಿಂಗ್ ಮಾಡಿದರು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ 46, ನಾಯಕಿ ಮಿಥಾಲಿ ರಾಜ್ ಅಜೇಯ 53 ಹಾಗೂ ಹರ್ಮನ್ ಪ್ರೀತ್ ಕೌರ್ ಆಕರ್ಷಕ ಬ್ಯಾಟಿಂಗ್ ನಿಂದ 43.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿ ಜಯ ಸಾಧಿಸಿತು. 4 ವಿಕೆಟ್ ಪಡೆದ ಭಾರತದ ದೀಪ್ತಿ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿವಾದಿತ ದ್ವೀಪದ ಮೇಲೆ ಚೀನಾ ಕ್ಷಿಪಣಿ ನಿಯೋಜನೆ

ದಕ್ಷಿಣ ಚೀನಾದ ಸಮುದ್ರ ಪ್ರದೇಶದಲ್ಲಿರುವ ವಿವಾದಿತ ದ್ವೀಪ ಪ್ರದೇಶದ ಮೇಲೆ ಚೀನಾ ವಾಯು ಕ್ಷಿಪಣಿ ನಿಯೋಜಿಸಿದೆ ಎಂದು ಥೈವಾನ್ ಬುಧವಾರ ಆರೋಪಿಸಿದೆ. ಈ ದ್ವೀಪದ ಕುರಿತಂತೆ ವಿವಾದಗಳಿರುವುದರ ನಡುವೆ ಸ್ವಯಂ ರಕ್ಷಣೆಗಾಗಿ ಈ ಕ್ಷಿಪಣಿ ನಿಯೋಜಿಸಲಾಗಿದೆ ಎಂದು ಚೀನಾ ಸಮರ್ಥಿಸಿಕೊಂಡಿದೆ. ಆ ಮೂಲಕ ಚೀನಾ ನಿರ್ಧಾರ, ಅಂತಾರಾಷ್ಟ್ರೀಯ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಸಿಮಿ ಉಗ್ರರ ಸೆರೆ

ಜೈಲಿನಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ನಾಲ್ಕು ಮಂದಿ ಸಿಮಿ ಉಗ್ರರನ್ನು ಒಡಿಶಾ ಮತ್ತು ತೆಲಂಗಾಣ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ದೇಶಾದ್ಯಂತ ನಡೆದ ಸರಣಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪಿಗಳು 2013 ರಲ್ಲಿ ಜೈಲಿನಿಂದ ಪರಾರಿಯಾಗಿದ್ದರು. ಖಚಿತ ಮಾಹಿತಿಯ ಮೇರೆಗೆ 4 ಗಂಟೆಗಳ ಕಾರ್ಯಚರಣೆ ನಡೆಸಿ ಉಗ್ರರನ್ನು ಹಿಡಿಯುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಹ್ಮದ್ ಅಜಾದುದ್ದಿನ್, ಅಮ್ಜದ್ ಖಾನ್, ಜಾಕೀರ್ ಹುಸೇನ್, ಮಹಬೂಬ್ ಗುಡ್ಡು ಎಂದು ಗುರುತಿಸಲಾಗಿದೆ.

ಬಾಲಿವುಡ್ ಗಾಯಕನ ಗಿನ್ನಿಸ್ ದಾಖಲೆ

ಬಾಲಿವುಡ್ ನಲ್ಲಿ ಅತಿ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸುವ ಮೂಲಕ ಸಾಹಿತಿ ಸಮೀರ್ ಅಂಜಾನ್ ಗಿನ್ನಿಸ್ ದಾಖಲೆ ಪುಸ್ತಕ ಸೇರಿದ್ದಾರೆ. ತಮ್ಮ 33 ವರ್ಷಗಳ ಸಿನಿ ಪಯಣದಲ್ಲಿ 650 ಸಿನಿಮಾಗಳಲ್ಲಿ 3524 ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಕುಚ್ ಕಚ್ ಹೊತಾ ಹೈ ಚಿತ್ರದ ತುಮ್ ಪಾಸ್ ಅಯೇ, ಆಶೀಕಿ ಚಿತ್ರದ ನಜರ್ ಕೇ ಸಾಮ್ನೇ, ದೀವಾನ ಚಿತ್ರದ ತೇರಿ ಉಮ್ಮೀದ್ ತೇರ ಇನ್ತೇಜರ್ ಕರ್ತೇ ಹಾಯ್ ಸೇರಿದಂತೆ ಹಲವು ಉತ್ತಮ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಶೀನಾ ಪ್ರಕರಣ: ಚಲನಚಿತ್ರಕ್ಕೆ ತಡೆ

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಾಲಿ ಭಾಷೆಯಲ್ಲಿ ನಿರ್ಮಾಣವಾಗಿರುವ “ಡಾರ್ಕ್ ಚಾಕೋಲೇಟ್” ಚಿತ್ರದ ಬಿಡುಗಡೆಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಪ್ರಕರಣದ ಆರೋಪಿ ಪೀಟರ್ ಮುಖರ್ಜಿಯ ಸಹೋದರಿ ಶಾನ್ ಗೊನ್ ದಾಸ್ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್ ಸಿ ಧರ್ಮಾಧಿಕಾರಿ ಮತ್ತು ನ್ಯಾ. ಜಿ ಎಸ್ ಪಟೇಲ್ ಒಳಗೊಂಡ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ.

Leave a Reply