ಅಪಘಾತ ಸಂತ್ರಸ್ತನ ರಕ್ಷಣೆಗೆ ಹೋದರೆ ಇಲ್ಲದ ಉಸಾಬರಿ ಎಂಬ ಭಯವೇ? ಸುಪ್ರೀಂ ಕೋರ್ಟ್ ಶಿಫಾರಸು ಏನು ಹೇಳಿದೆ ತಿಳಿಯೋಣ

ಡಿಜಿಟಲ್ ಕನ್ನಡ ಟೀಮ್

ನಿತ್ಯ ರಸ್ತೆ ಅಪಘಾತ ನೋಡಿ ನೋಡಿ ಇದು ಸರ್ವೇ ಸಾಮಾನ್ಯ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಈ ಅಪಘಾತ ಸಂದರ್ಭದಲ್ಲಿ ಸಾರ್ವಜನಿಕರು ಎಷ್ಟರ ಮಟ್ಟಿಗೆ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂಬ ಪ್ರಶ್ನೆ ನಮಗೆ ನಾವೇ ಕೇಳಿಕೊಂಡರೆ, ನಿಖರವಾಗಿ ಉತ್ತರಿಸಲು ಸಾಧ್ಯವಿಲ್ಲ.

ಮೊನ್ನೆ ತಾನೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಗುಬ್ಬಿ ಮೂಲದ ಹರೀಶ್ ಲಾರಿ ಚಕ್ರಕ್ಕೆ ಸಿಲುಕಿ ರಕ್ತದ ಮಡುವಿನಲ್ಲಿ ಸುಮಾರು 6-8 ನಿಮಿಷಗಳ ಕಾಲ ನರಳಾಡಿ ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಾಣ ಬಿಟ್ಟ ಪ್ರಕರಣ ಮನಸಿನಲ್ಲಿ ಹಸಿಯಾಗಿಯೇ ಉಳಿದಿದೆ. ಈ ಪ್ರಕರಣದಲ್ಲಿ ಮೃತ ಹರೀಶ್ ತನ್ನ ಅಂಗಾಂಗ ದಾನ ಮಾಡಿ ಎಂದು ತಿಳಿಸುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದು, ಸಾಕಷ್ಟು ಚರ್ಚೆಯಾಗಿ ಎಲ್ಲರ ಮನ ಗೆದ್ದಿತು. ಕೇವಲ ಇದೊಂದು ವಿಷಯಕ್ಕೆ ಮಾತ್ರ ಈ ಪ್ರಕರಣ ಚರ್ಚೆಗೆ ಸೀಮಿತವಾಗಲಿಲ್ಲ. ಅಪಘಾತವಾದಾಗ ಆ ಸ್ಥಳದಲ್ಲಿದ್ದ ಸಾರ್ವಜನಿಕರ ಕರ್ತವ್ಯದ ಬಗ್ಗೆ ಪ್ರಶ್ನೆ ಮೂಡಿದೆ.

ಇಂತಹ ಸಂದರ್ಭದಲ್ಲಿ ಅಪಘಾತಕ್ಕೆ ಸಿಲುಕಿದವನ ರಕ್ಷಣೆಗೆ ಮುಂದಾಗುವ ಬದಲು, ಅಲ್ಲಿನ ಜನರಲ್ಲಿ ಕೆಲವರು ತಮ್ಮ ಪಾಡಿಗೆ ತಾವು ಈತನ ನರಳಾಟ ನೋಡಿ ಮುಂದೆ ಹೋದರೆ, ಮತ್ತೆ ಕೆಲವರು ತಮ್ಮ ಮೊಬೈಲ್ ಗಳಲ್ಲಿ ಈ ಘಟನೆಯನ್ನು ಚಿತ್ರೀಕರಿಸಿದ್ದು ಟೀಕೆಗೆ ದಾರಿ ಮಾಡಿಕೊಟ್ಟಿತು. ಇಲ್ಲಿ ಸ್ಥಳೀಯರ ಪರಿಸ್ಥಿತಿಯನ್ನು ಗಮನಿಸೋದಾದರೆ, ಎಲ್ಲರು ಇಂತಹ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಮಾನಸಿಕವಾಗಿ ಗಟ್ಟಿಯಾಗಿರುವುದಿಲ್ಲ. ಕೆಲವರು ಸಣ್ಣ ಪ್ರಮಾಣದಲ್ಲಿ ರಕ್ತ ನೋಡಿದರೇ, ಥಟ್ಟನೆ ಗಾಬರಿಗೊಂಡು ಕಣ್ಮುಚ್ಚಿಕೊಳ್ಳುವುದು ಸಹಜ. ಅದರಲ್ಲೂ ಈ ರೀತಿಯಾಗಿ ದೇಹ ಎರಡು ಭಾಗವಾಗಿ ತುಂಡರಿಸಿ ರಕ್ತ ಝಳಝಳನೆ ಸುರಿಯುವುದನ್ನು ನೋಡಿದರೆ, ಎಂಥ ಗಟ್ಟಿಗನಾದರೂ ಒಂದು ಕ್ಷಣ ವಿಚಲಿತನಾಗುವುದು ಸಾಮಾನ್ಯ.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜನಸಾಮಾನ್ಯರಲ್ಲಿರುವ ದೊಡ್ಡ ತಪ್ಪು ಕಲ್ಪನೆ ಎಂದರೆ, ಅಪಘಾತದಲ್ಲಿ ಸಿಲುಕಿದವರಿಗೆ ನೆರವಾದರೆ, ಪ್ರಕರಣದಲ್ಲಿ ಸಾಕ್ಷಿಯಾಗಿ ಕೋರ್ಟ್ ಅಲೆಯಬೇಕು. ಇಲ್ಲದ ಉಸಾಬರಿ ನಮಗೇಕೆ ಎಂಬ ಭಾವನೆ, ಈ ರೀತಿಯ ಪ್ರಕರಣದಲ್ಲಿ ಸಂತ್ರಸ್ಥನ ರಕ್ಷಣೆಗೆ ಮುಂದಾಗಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಈ ರೀತಿಯಾದ ಅನುಮಾನ ಬಹುತೇಕರಲ್ಲಿದೆ. ಆದರೆ, ಅದು ನಿಜವಲ್ಲ. ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸಿದವರಿಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬ ಉದ್ದೇಶದೊಂದಿಗೆ ಈ ಬಗ್ಗೆ ವರದಿ ನೀಡಲು ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎಸ್ ಅಗರ್ವಾಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಶಿಫಾರಸ್ಸು ಪಡೆಯಿತು. ಈ ಸಮಿತಿ ನೀಡಿದ ಪ್ರಮುಖ ಶಿಫಾರಸ್ಸು ಹೀಗಿವೆ.

  • ಅಪಘಾತ ಸ್ಥಳಕ್ಕೆ ಪೊಲೀಸರು ಆಗಮಿಸುವ ಮುನ್ನ ಸಂತ್ರಸ್ಥನ ನೆರವಿಗೆ ಧಾವಿಸುವರನ್ನು ಉದಾರಿಗಳೆಂದು ಪರಿಗಣಿಸಿ, ಅವರಿಗೆ ಪೊಲೀಸರು ಮತ್ತು ನ್ಯಾಯಾಲಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
  • ಅವರಿಗೆ ನಾಗರೀಕ ಮತ್ತು ಅಪರಾಧ ಪ್ರಕರಣದಲ್ಲಿ ಸೇರಿಸಿಕೊಳ್ಳದೇ ವಿನಾಯಿತಿ ನೀಡಬೇಕು.
  • ಇಂಥವರು ತಮ್ಮ ಗುರುತು ಹಾಗೂ ವೈಯಕ್ತಿಯ ಮಾಹಿತಿಯನ್ನು ನೀಡುವಂತೆ ಬಲವಂತ ಮಾಡಬಾರದು.
  • ತನಿಖೆಗೆ ಸಹಕರಿಸಲು ಆ ವ್ಯಕ್ತಿ ಅಥವಾ ಸಂಸ್ಥೆ ಇಚ್ಛಿಸಿದರೆ, ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಅವರ ನಿವಾಸ ಅಥವಾ ಕೆಲಸ ಮಾಡುವ ಜಾಗದಲ್ಲೇ ಪೂರೈಸಬೇಕು.
  • ಅಫಿಡವಿಟ್ ಮೂಲಕ ತಮ್ಮ ಹೇಳಿಕೆ ನೀಡಲು ಅವಕಾಶ. ತೀರಾ ಅಪರೂಪದ ಪ್ರಕರಣದಲ್ಲಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗುವ ಸೂಚನೆ ಇರಬೇಕು.
  • ಅಲ್ಲದೆ ಈ ವ್ಯಕ್ತಿಗಳು ಪ್ರತ್ಯಕ್ಷದರ್ಶಿಯಾದರೆ, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒಂದೇ ವಿಚಾರಣೆಯಲ್ಲಿ ಪಡೆಯಬೇಕು. ಪದೇ ಪದೇ ನ್ಯಾಯಾಲಯಕ್ಕೆ ಬರುವಂತೆ ಮಾಡಬಾರದು.
  • ರಾಜ್ಯ ಮತ್ತು ಸಿ ಬಿ ಎಸ್ ಸಿ ಪಠ್ಯ ಕ್ರಮದಲ್ಲಿ ಪ್ರಾಥಮಿಕ ಚಿಕಿತ್ಸೆ ಬಗ್ಗೆ ಮಕ್ಕಳಿಗೆ ಪಾಠವಿರಬೇಕು.
  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 30 ಕಿ.ಮೀಗೆ ಆ್ಯಂಬುಲೆನ್ಸ್ ಮತ್ತು ಪ್ರಾಥಮಿಕಾ ಚಿಕಿತ್ಸಾ ಘಟಕ ಹೊಂದಿರಬೇಕು.

ಇನ್ನು ಯಾವುದೇ ರೀತಿಯ ಅಪಘಾತ ಸಂದರ್ಭದಲ್ಲಿ ತೊಂದರೆಗೊಳಗಾದ, ನಮಗೆ ಪೊಲೀಸರು ತೊಂದರೆ ಕೊಡುತ್ತಾರೆ, ಕೋರ್ಟ್ ಗೆ ಅಲೆಯಬೇಕಾಗುತ್ತದೆ ಎಂಬ ಅನುಮಾನವನ್ನು ಬಿಟ್ಟು, ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವ ಪ್ರಮುಖ ಕರ್ತವ್ಯ ನಿಭಾಯಿಸಬಹುದು.

ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ವೈದ್ಯರು ನಿರಾಕರಿಸುವ ಹಾಗಿಲ್ಲ. ಕಾರಣ, 1989ರ ಆಗಸ್ಟ್ 28ರ ಪರಮಾನಂದ ಕತರಾ ಮತ್ತು ಯೂನಿಯನ್ ಆಫ್ ಇಂಡಿಯಾ ನಡುವಣ ಕ್ರಿಮಿನಲ್ ದಾವೆ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಅಪಘಾತಕ್ಕೆ ಸಿಲುಕಿದ ವ್ಯಕ್ತಿಯ ರಕ್ಷಣೆ ಕುರಿತಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿತ್ತು. ‘ಅಪಘಾತದಲ್ಲಿ ಗಾಯಾಳುವಾಗಿ ಬಂದ ಪ್ರತಿಯೊಬ್ಬರಿಗೂ ವೈದ್ಯಕೀಯ ಚಿಕಿತ್ಸೆ ನೀಡುವುದು ಮೂಲ ಆದ್ಯತೆಯಾಗ ಬೇಕು. ಮೊದಲು ಜೀವ ಉಳಿಸಬೇಕು ಆನಂತರ ಕಾನೂನು ಪ್ರಕ್ರಿಯೆಯನ್ನು ನಡೆಸಬೇಕು. ಆ ಮೂಲಕ ನಿರ್ಲಕ್ಷ್ಯದಿಂದ ಸಾವನ್ನಪ್ಪುವುದನ್ನು ತಡೆಯಬಹುದು. ಅಪಘಾತಕ್ಕೆ ಸಿಲುಕಿದವರಿಗೆ ಚಿಕಿತ್ಸೆ ನೀಡಿದವರಿಗೆ ಯಾವುದೇ ರೀತಿಯ ಕಾನೂನು ಕ್ರಮವಿಲ್ಲ’ ಎಂಬುದು ಸುಪ್ರೀಂ ಕೋರ್ಟ್ ತೀರ್ಪು.

ಈ ಮಾಹಿತಿ ಪ್ರತಿಯೊಬ್ಬರೂ ಅರಿತು, ಮುಂದೆ ಚಿಕ್ಕದಾಗಲಿ, ದೊಡ್ಡ ಪ್ರಮಾಣದಲ್ಲಾಗಲಿ ಅಪಘಾತ ಸಂಭವಿಸಿದಾಗ ತಮ್ಮಿಂದ ಸಾಧ್ಯವಾಗುವ ನೆರವು ನೀಡಬೇಕು. ಎಂಥಹುದೇ ತುರ್ತು ಕೆಲಸವಿದ್ದರೂ ಆ್ಯಂಬುಲೆನ್ಸ್ ಗೆ ಕರೆ ಮಾಡಿ ವಿಷಯ ತಿಳಿಸುವುದು, ವ್ಯಕ್ತಿ ಜೀವಂತವಾಗಿರಿಸಲು ನೀರು ಕುಡಿಸುವುದು, ಸಾಧ್ಯವಾದರೆ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮನಸ್ಸು ಮಾಡಬೇಕು. ಮಾನವೀಯ ಕರ್ತವ್ಯ ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮರೆಯಬಾರದು.

Leave a Reply