ಸುದ್ದಿಸಂತೆ: ಮೋದಿಯವರಿಂದ ರೈತರಿಗೆ ಡಿಜಿಟಲ್ ಮಾರುಕಟ್ಟೆ ಘೋಷಣೆ, ಅರ್ಜುನ್ ತೆಂಡುಲ್ಕರ್, ವಿಜೇಂದರ್… ನೀವು ತಿಳಿಯಬೇಕಿರುವ 7 ಸುದ್ದಿಗಳು

ಏಷ್ಯನ್ ಟೈಟಲ್ ಗಾಗಿ ಭಾರತದಲ್ಲಿ ವಿಜೇಂದರ್ ಸೆಣಸು

ವೃತ್ತಿಪರ ಬಾಕ್ಸಿಂಗ್ ನಲ್ಲಿ ಅಜೇಯ ಯಾತ್ರೆ ಮುಂದುವರಿಸಿರುವ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಜೂನ್ ನಲ್ಲಿ ಡಬ್ಲ್ಯೂಬಿಒ ಏಷ್ಯನ್ ಪ್ರಶಸ್ತಿಗಾಗಿ ಭಾರತದಲ್ಲೆ ಪಂದ್ಯವನ್ನಾಡಲಿದ್ದಾರೆ. ಇದು ವಿಜೇಂದರ್ ಪ್ರಶಸ್ತಿಗಾಗಿ ಸೆಣಸಲಿರುವ ಮೊದಲ ಬಾಕ್ಸಿಂಗ್ ಪಂದ್ಯವಾಗಿದೆ. ಈವರೆಗೂ ಮೂರು ವೃತ್ತಿಪರ ಬಾಕ್ಸಿಂಗ್ ಪಂದ್ಯವನ್ನಾಡಿರುವ ವಿಜಿ, ಎಲ್ಲ ಪಂದ್ಯದಲ್ಲೂ ಗೆದ್ದಿದ್ದಾರೆ. ಮುಂದಿನ ಪಂದ್ಯವನ್ನು ಮಾ.12ರಂದು ಲಿವರ್ಪೂಲ್ ನಲ್ಲಿ ಆಡಲಿದ್ದಾರೆ. ಪ್ರಶಸ್ತಿಗಾಗಿ ಸೆಣಸಲಿರುವ ಮೊದಲ ಪಂದ್ಯವನ್ನು ತವರಿನಲ್ಲಿ ಆಡುತ್ತಿರುವುದನ್ನು ಕೇಳಿ ಕಾತರಗೊಂಡಿದ್ದೇನೆ. ನನ್ನ ಎದುರಾಳಿ ಯಾರು ಎಂಬುದು ತಿಳಿದಿಲ್ಲ. ಈವರೆಗೂ ನೀಡಿರುವ ಪ್ರದರ್ಶನವನ್ನೇ ಮುಂದುವರಿಸುತ್ತೇನೆ ಎಂದು ವಿಜೇಂದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚೆನ್ನೈನಲ್ಲಿ ಐಪಿಎಸ್ ಅಧಿಕಾರಿ ಆತ್ಮಹತ್ಯೆ

ಗುರುವಾರ ಬೆಳಗ್ಗೆ ಚೆನ್ನೈನಲ್ಲಿ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಎನ್ ಹರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. 2009ನೇ ಸಾಲಿನ ಐಪಿಎಸ್ ವಿಭಾಗದಲ್ಲಿ ತೇರ್ಗಡೆಯಾದ ಹರೀಶ್, ಚೆನ್ನೈನಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ವಿಚಕ್ಷಣಾ ದಳ ವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಮಧುರೈನಿಂದ ವರ್ಗಾವಣೆಯಾಗಿದ್ದರು. ‘ಗುರುವಾರ ಬೆಳಗ್ಗೆ 10 ಗಂಟೆಯಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಬಾಗಿಲನ್ನು ಮುರಿದು ಪರೀಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 2009ರ ಪಡೆಯಲ್ಲಿ ಹರೀಶ್ ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದರು. ಅವರ ಸಹೋದ್ಯೋಗಿಗಳು ಎರಡು ವರ್ಷಗಳ ಹಿಂದೆಯೇ ಕೆಲಸದಲ್ಲಿ ಬಡ್ತಿ ಸಿಕ್ಕಿ ಉನ್ನತ ಹುದ್ದೆ ಪಡೆದಿದ್ದರು. ಆದರೆ, ಆಗಿನ ಡಿಜಿಪಿ ಕೆ.ರಾಮಾನುಜಮ್ ಅವರ ತನಿಖೆಯ ಆದೇಶದ ಹಿನ್ನೆಯಲ್ಲಿ ಹರೀಶ್ ಅವರ ಬಡ್ತಿ ಹಾಗೇ ಉಳಿಯಿತು. ಅವರು ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆಯೂ ವರದಿಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರೆ ಮಾಧ್ಯಮಗಳ ವರದಿ ಪ್ರಕಾರ ಪ್ರೇಮ ವೈಫಲ್ಯದಿಂದ ಹರೀಶ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದೆ. ಮಾ.19 ಅವರ ವಿವಾಹ ನಿಶ್ಚಯವಾಗಿತ್ತು. ಹರೀಶ್ ಇತರೆ ಅಧಿಕಾರಿಗಳೊಂದಿಗೆ ಮನಸ್ತಾಪ ಹೊಂದಿದ್ದಾರೆಂದು ಅವರ ಆಪ್ತ ವಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಯಾವುದೇ ಆತ್ಮಹತ್ಯೆ ಪತ್ರ ಲಭಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಡಿಜಿಟಲ್ ಫಾರ್ಮ್ ಮಾರುಕಟ್ಟೆ ವೇದಿಕೆ ಏ.14ಕ್ಕೆ ಉದ್ಘಾಟನೆ

ರೈತರು ಬೆಳೆದ ಉತ್ಪನ್ನಗಳನ್ನು ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಲು ನೆರವಾಗುವ ಡಿಜಿಟಲ್ ಮಾರುಕಟ್ಟೆ ವೇದಿಕೆಯನ್ನು ಏ.14ರಂದು ಉದ್ಘಾಟಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದೇ ವೇಳೆ 2022ರ ವೇಳೆಗೆ ರೈತರ ಆದಾಯವನ್ನು ಎರಡುಪಟ್ಟು ಹೆಚ್ಚಿಸುವ ಭರವಸೆಯನ್ನು ನೀಡಿದ್ದಾರೆ. ಗುರುವಾರ ಮಧ್ಯಪ್ರದೇಶದಲ್ಲಿ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ, ಬೆಳೆ ವಿಮೆ ಯೋಜನೆಯ ರೂಪುರೇಷೆಗಳನ್ನು ಬಿಡುಗಡೆ ಮಾಡಿದ ಮೋದಿ, ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಪ್ರಮುಖ ಯೋಜನೆಗಳಲ್ಲಿ ಇದು ಒಂದು ಎಂದರು.

ನಕಲಿ ಹಾಲ್ ಟಿಕೆಟ್ ನಲ್ಲಿ ಅರ್ಜುನ್ ತೆಂಡೂಲ್ಕರ್ ಫೋಟೊ

ಉತ್ತರ ಪ್ರದೇಶದಲ್ಲಿ 10ನೇ ತರಗತಿ ಪರೀಕ್ಷೆ ಬರೆಯಲು ನಕಲಿ ಹಾಲ್ ಟಿಕೆಟ್ ಮಾಡಿದ್ದು, ಇಲ್ಲಿ ಅರ್ಜುನ್ ಸಿಂಗ್ ಎಂಬ ವಿದ್ಯಾರ್ಥಿಯ ಪ್ರವೇಶ ಚೀಟಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಫೋಟೊ ಹಾಕಲಾಗಿದೆ. ಆ ಮೂಲಕ ಅಲ್ಲಿನ ಶಾಲಾ ಆಡಳಿತದಲ್ಲಿನ ಗೋಲ್ ಮಾಲ್ ಬಹಿರಂಗಗೊಂಡಿದೆ. ಗುರುವಾರದಿಂದ 10ನೇ ತರಗತಿ ಪರೀಕ್ಷೆ ಆರಂಭವಾಗಿದ್ದು, ಒಟ್ಟು 1.63 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ವೇಳೆ  0025488 ಹಾಜರಾತಿ ಸಂಖ್ಯೆಯ ಹಾಲ್ ಟಿಕೆಟ್ ನಲ್ಲಿ ವಿದ್ಯಾರ್ಥಿಯ ಅರ್ಜುನ್ ಸಿಂಗ್ ಫೋಟೊ ಬದಲಿಗೆ ಸಚಿನ್ ಪುತ್ರನ ಫೋಟೊ ಬಂದಿರುವುದು ಅಚ್ಚರಿ ಮೂಡುವುದರ ಜತೆಗೆ ಅನುಮಾನವನ್ನು ಹುಟ್ಟು ಹಾಕಿದೆ. ಈ ಫೋಟೊವನ್ನು ಹಿರಿಯ ಅಧಿಕಾರಿಗಳು ಮಾನ್ಯತೆ ಸಹ ಮಾಡಿದ್ದಾರೆ.

ನಿತ್ಯಾನಂದಗೆ ಹೈಕೋರ್ಟ್ ತಡೆ

ತಮಿಳುನಾಡಿನ ತಿರುವರುರ್ ಸುತ್ತಮುತ್ತಲಿನ ನಾಲ್ಕು ದೇವಾಲಯದ ಮಠಗಳಿಗೆ ನಿತ್ಯಾನಂದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತಡೆ ಹಿಡಿದಿದೆ. ಶಾರದ ನಿಕೇತನ್ ಸಮಿತಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಶಿವಕುಮಾರ್, ನಿತ್ಯಾನಂದ ಅವರು ತಿರುವರುರ್ ನ ಸೋಮನಾಥಸ್ವಾಮಿ ದೇವಾಲಯ, ವಿದ್ಯಾರಣ್ಯಂ ನ ಶ್ರೀ ಪೊ.ಕ ಸತುಕಲ್ ಮಠ, ಶ್ರೀ ಅರುಣಾಚಲ ಜ್ಞಾನದೇಸಿಕರ್ ಸ್ವಾಮಿಗಲ್, ಶ್ರೀ ಪಲಸಾಮಿ ಮತ್ತು ಶಂಕರಸ್ವಾಮಿ ಮಠದ ಮುಖ್ಯಸ್ಥ ಸ್ಥಾನ ಏರದಂತೆ ಮಾ.14ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮೇಕ್ ಇನ್ ಇಂಡಿಯಾದಿಂದ ರಾಜ್ಯಕ್ಕೆ 9700 ಕೋಟಿ ಬಂಡವಾಳ

ಮುಂಬೈನಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮದ ವೇಳೆ ರಾಜ್ಯಕ್ಕೆ ಸುಮಾರು ₹9,700 ಕೋಟಿ ಬಂಡವಾಳ ಹರಿದು ಬರುವ ಪ್ರಸ್ತಾವ ಬಂದಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇತ್ತೀಚೆಗೆ ಇನ್ವೆಸ್ಟ್ ಕರ್ನಾಟಕ 2016 ಕಾರ್ಯಕ್ರಮದಿಂದ ರಾಜ್ಯ ಸರ್ಕಾರ ₹1.3 ಲಕ್ಷ ಕೋಟಿ ಬಂಡವಾಳ ಹೂಡಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರದ ಕಾರ್ಯಕ್ರಮದಿಂದ ಬಂದಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಪರವಾಗಿ ಉತ್ಪಾದನೆ, ಏರೋಸ್ಪೇಸ್, ರಕ್ಷಣೆ, ಕೃಷಿ ಉತ್ಪನ್ನ ವ್ಯಾಪಾರ, ಬಯೋಟೆಕ್ನಾಲಜಿ ಮತ್ತು ಐಟಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಮಿನಾರ್ ಗಳನ್ನು ಆಯೋಜಿಸಲಾಗಿತ್ತು.

ಅರುಣಾಚಲ ಪ್ರದೇಶದಲ್ಲಿ ಸರ್ಕಾರ ರಚಿಸಲು ಸುಪ್ರೀಂ ಅಸ್ತು

14 ಕಾಂಗ್ರೆಸ್ ಬಂಡಾಯ ಶಾಸಕರನ್ನು ಅನರ್ಹತೆಯಿಂದ ಅರುಣಾಚಲ ಪ್ರದೇಶದಲ್ಲಿ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ನಂತರ ಸುಪ್ರೀಂ ಕೋರ್ಟ್ ಈ ರಾಜ್ಯದಲ್ಲಿ ಮತ್ತೆ ಸರ್ಕಾರ ರಚನೆಗೆ ಅವಕಾಶ ನೀಡಿದೆ. ರಾಜಕೀಯ ಬಿಕ್ಕಟ್ಟಿನ ಕುರಿತು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಲ್ಲಿನ ನ್ಯಾ. ಜೆ.ಎಸ್ ಖೆಹರ್ ನೇತೃತ್ವದ ಪಂಚ ಸದಸ್ಯ ಸಂವಿಧಾನಿಕ ಪೀಠ, ಈ ಶಾಸಕರ ಅನರ್ಹತೆ ಬಗೆಗಿನ ದಾಖಲೆಗಳನ್ನು ಪರಿಶೀಲಿಸಿತು. ಪ್ರಕರಣದಲ್ಲಿ ಗುವಾಹತಿ ಹೈಕೋರ್ಟ್ 14 ಶಾಸಕರ ಅನರ್ಹತೆ ಮುಂದುವರಿಸುವ ನಿರ್ಧಾರಕ್ಕೆ ತೃಪ್ತಿ ವ್ಯಕ್ತಪಡಿಸಿ ಮತ್ತೆ ರಾಜ್ಯದಲ್ಲಿ ಸರ್ಕಾರ ರಚಿಸಲು ಅನುಮತಿ ನೀಡಿದೆ.

Leave a Reply