ಸ್ಮಾರ್ಟ್ ಫೋನ್ ಗಳು ಭಾರತವನ್ನು ಹೇಗೆ ಬದಲಾಯಿಸಲಿವೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ಅತಿ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಒದಗಿಸುವ ರಿಂಗಿಂಗ್ ಬೆಲ್ ಕಂಪನಿಯ ಪ್ರಯತ್ನ ಎಷ್ಟರಮಟ್ಟಿಗೆ ಸಫಲವಾಗುವುದೋ ತಿಳಿದಿಲ್ಲ. ಆದರೆ ಸ್ಮಾರ್ಟ್ ಫೋನ್ ಒಂದಿಲ್ಲೊಂದು ಪ್ರಯತ್ನಗಳ ಮೂಲಕ ಭಾರತವನ್ನು ಆವರಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದು ಭಾರತೀಯರ ಮಾಹಿತಿ ಮಾರ್ಗ ಹಾಗೂ ವ್ಯಾವಹಾರಿಕ ಪದ್ಧತಿಗಳನ್ನು ಹೇಗೆ ಬದಲಿಸಲಿದೆ, ಎಲ್ಲರ ಬದುಕನ್ನು ಹೇಗೆ ಪ್ರಭಾವಿಸಲಿದೆ ಎಂಬುದು ಆಸಕ್ತಿಕರ ಅಂಶ.

  • 2015ರ ಅಂತ್ಯದ ವೇಳೆಗೆ ಭಾರತದಲ್ಲಿ ಸುಮಾರು 80 ಕೋಟಿ ಜನರು ಮೊಬೈಲ್ ಬಳಸುತ್ತಿದ್ದು, 2020ರ ವೇಳೆಗೆ ಈ ಸಂಖ್ಯೆ 99 ಕೋಟಿಗೆ ಹೆಚ್ಚುವ ನಿರೀಕ್ಷೆ ಇದೆ. ಇವೆಲ್ಲವೂ ಸ್ಮಾರ್ಟ್ ಫೋನ್ ಗಳಲ್ಲ. ಆದರೆ ಮಾಮೂಲಿ ಸೆಲ್ ಫೋನ್ ಗಳಿಂದ ಸ್ಮಾರ್ಟ್ ಫೋನ್ ಗಳಿಗೆ ವರ್ಗಾವಣೆಯಾಗುವುದು ಒಂದು ಪ್ರಕ್ರಿಯೆ. ಹೀಗೆ ಸ್ಮಾರ್ಟ್ ಫೋನ್ ಗಳೊಂದಿಗೆ ಬೆಸೆದುಕೊಂಡಿರುವ ಭಾರತ ಬದಲಾಗುತ್ತಿರುವ ಬಿಂಬಗಳು ಇಲ್ಲಿವೆ.
  • ಭಾರತದಲ್ಲಿ ಮೊಬೈಲ್ ಹಾಗೂ ಸ್ಮಾರ್ಟ್ ಫೋನ್ ಬಳಕೆ ಬಗ್ಗೆ ಮಾಹಿತಿ ನೋಡಿ. ಪ್ರತಿ ಮೂರು ತಿಂಗಳಲ್ಲಿ ಈ ಮೊಬೈಲ್ ಗಳಲ್ಲಿ ಶೇ.15ರಷ್ಟು ಸ್ಮಾರ್ಟ್ ಫೋನ್ ಗಳಾಗಿ ಬದಲಾಗುತ್ತಿವೆ. ಇತ್ತೀಚೆಗೆ ಭಾರತದಲ್ಲಿ 22 ಕೋಟಿಗೂ (220 ಮಿಲಿಯನ್) ಹೆಚ್ಚು ಜನ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಆ ಮೂಲಕ ಅಮೆರಿಕ (149.3 ಮಿ.)ವನ್ನು ಹಿಂದಿಕ್ಕಲಾಗಿದೆ. ಇನ್ನು ಕನೆಕ್ಟಿವಿಟಿ ಪೈಕಿ 4ಜಿ ಸದ್ಯಕ್ಕೆ ಹೆಚ್ಚು ಬಳಸಲಾಗುತ್ತಿಲ್ಲವಾದರೂ ಭವಿಷ್ಯದಲ್ಲಿ ಇದು ವ್ಯಾಪಕವಾಗುವ ಹಾದಿ ಗೋಚರಿಸುತ್ತಿದೆ. 2015ರಲ್ಲಿ 3ಜಿ ಬಳಕೆದಾರರ ಪ್ರಮಾಣ ಶೇ.15.7 ರಷ್ಟಿದ್ದು, 2020ರ ವೇಳೆಗೆ ಶೇ.52.6 ರಷ್ಟು ಹೆಚ್ಚಲಿದೆ. ಇನ್ನು 4ಜಿ ಬಳಕೆದಾರರ ಪ್ರಮಾಣ 2020ರ ವೇಳೆಗೆ ಶೇ.26.2ರಷ್ಟು ಹೆಚ್ಚಲಿದೆ.
  • ಮೊಬೈಲ್ ಈಗ ಕೇವಲ ಮಾತನಾಡಲು ಮಾತ್ರ ಬಳಸುತ್ತಿಲ್ಲ. ಇದನ್ನು ಬಳಸದಿರುವ ಕಾರಣ ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಕರೆ ಮಾಡುವುದರ ಜತೆಗೆ, ಚಾಟಿಂಗ್, ಮನರಂಜನೆ, ಸುದ್ದಿಯ ಮಾಧ್ಯಮ, ಗೇಮ್, ಬ್ಯಾಂಕಿಂಗ್, ವ್ಯವಹಾರ ಹೀಗೆ ಪ್ರತಿನಿತ್ಯ ನಾವು ಮಾಡಬೇಕಾದ ಕೆಲಸಗಳನ್ನು ಮೊಬೈಲ್ ಮೂಲಕ ಮಾಡುವ ಮಟ್ಟಿಗೆ ಬಂದು ನಿಂತಿದ್ದೇವೆ. ಹಾಗಾಗಿ ಭವಿಷ್ಯದಲ್ಲಿ ಪ್ರತಿ ಕ್ಷೇತ್ರಗಳಿಗೂ ಮೊಬೈಲ್ ಹಾಸುಹೊಕ್ಕಲಿದ್ದು, ಈ ಸಾಧನದ ಮೇಲೆ ಅವಲಂಬನೆ ಸಹಜವಾಗಿ ಹೆಚ್ಚಲಿದೆ.
  • ಸದ್ಯದ ಟ್ರೆಂಡ್ ಆಗಿರುವ ಸ್ಟಾರ್ಟ್ ಅಪ್ ಗಳ ಪೈಕಿ ಕೆಲವು ಮಾತ್ರ ಮೊಬೈಲ್ ಆ್ಯಪ್ ಗಳ ಮೇಲೆಯೇ ಪೂರ್ಣವಾಗಿ ಅವಲಂಬಿತವಾಗಿದೆ. ಉಬೆರ್, ಒಲಾ ದಂತಹ ಕ್ಯಾಬ್ ಆ್ಯಪ್, ಆಹಾರ ಪದಾರ್ಥಕ್ಕೆ ಸಂಬಂಧಿಸಿದಂತೆ ಜೊಮ್ಯಾಟೊ, ಫಾಸೋಸ್ ಮತ್ತು ಸ್ವಿಗ್ಗಿ, ಹೊಟೇಲ್ ರೂಮ್ ಬುಕ್ಕಿಂಗ್ ಸಂಬಂಧಿಸಿದಂತೆ ಓಯೊ ರೂಮ್ಸ್ ಮತ್ತು ಜೊ ರೂಮ್ಸ್ ಹಾಗೂ ಇತರೆ ವಿವಿಧ ಸ್ಟಾರ್ಟ್ ಅಪ್ ಗಳು ಮೊಬೈಲ್ ಆ್ಯಪ್ ಗ್ರಾಹಕರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮತ್ತೊಂದೆಡೆ ಭಾರತದಲ್ಲಿ ಸ್ಟಾರ್ಟ್ ಅಪ್ ವ್ಯವಸ್ಥೆ ಕ್ರಮೇಣವಾಗಿ ವಿಸ್ತರಣೆಗೊಳ್ಳುತ್ತಿರುವಾಗ ಮೊಬೈಲ್ ಗಳು ಈ ವ್ಯವಹಾರದ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡುತ್ತಿವೆ. ಭಾರತದಲ್ಲಿ ಸ್ಟಾರ್ಟ್ ಅಪ್ ವ್ಯವಸ್ಥೆ ಸುದೀರ್ಘವಾಗಿ ವಿಸ್ತರಣೆಗೊಳ್ಳುತ್ತಿದ್ದು, ವಾರ್ಷಿಕ ಸ್ಟಾರ್ಟ್ ಅಪ್ ಗಳ ಆರಂಭದ ಪೈಕಿ ಭಾರತ ಬ್ರಿಟನ್ ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಅಗ್ರಸ್ಥಾನಿಯಾಗಿ ನಿಂತಿದೆ.
  • ಮಾಧ್ಯಮ ಕ್ಷೇತ್ರಕ್ಕೆ ಬಂದರೆ, ಭವಿಷ್ಯದಲ್ಲಿ ಪ್ರಜ್ವಲಿಸಲಿರುವ ಡಿಜಿಟಲ್ ಮಾಧ್ಯಮಕ್ಕೆ ಮೊಬೈಲ್ ಗಳು ಸಮೂಹ ಮಾಧ್ಯಮವಾಗಿ ಮಹತ್ತರ ಪಾತ್ರ ನಿಭಾಯಿಸಲಿದೆ. ಪ್ರಸ್ತುತ ಇತರೆ ಸಮೂಹ ಮಾಧ್ಯಮಗಳಾದ ಪತ್ರಿಕೆ, ಸಿನಿಮಾ, ಟಿವಿ, ರೇಡಿಯೋಗಳನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಮೊಬೈಲ್ ಅತ್ಯುತ್ತಮ ಸಾಥ್ ನೀಡಲಿದೆ. ಹಾಗಾಗಿ ಹೊಸ ಡಿಜಿಟಲ್ ಮಾಧ್ಯಮದ ಯಶಸ್ಸಿನಲ್ಲೂ ಮೊಬೈಲ್ ಮಹತ್ತರ ಪಾತ್ರ ನಿರ್ವಹಿಸಲಿದೆ.
  • ಭಾರತದಲ್ಲಿ ಮೊಬೈಲ್ ಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸುತ್ತಾ ಸಾಗಿದರೆ ರೈತರೂ ಬೆಳೆ, ಇಳುವರಿ ಮತ್ತು ಗೊಬ್ಬರ, ಹವಾಮಾನ ಮತ್ತಿತರ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಮೊಬೈಲ್ ಪೇಮೆಂಟ್ ಮತ್ತು ಮೊಬೈಲ್ ಬ್ಯಾಕಿಂಗ್ ಗಳು ಸುಧಾರಣೆ ಕಾಣುತ್ತಿದ್ದಂತೆ ಆರ್ಥಿಕ ವ್ಯವಹಾರಕ್ಕೆ ಮೊಬೈಲು ಅವಶ್ಯಕವಾಗಲಿದೆ. ಕೇವಲ ಕೃಷಿ ಮಾತ್ರವಲ್ಲದೇ ಇತರೆ ಕ್ಷೇತ್ರಗಳಿಗೂ ಮೊಬೈಲ್ ಬಳಕೆಯಾದರೆ, ಸಹಜವಾಗಿ ಪ್ರತಿ ಕ್ಷೇತ್ರ ಬೆಳವಣಿಗೆಯಲ್ಲೂ ಮೊಬೈಲ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲಿದೆ.

Leave a Reply