
ಡಿಜಿಟಲ್ ಕನ್ನಡ ಟೀಮ್
- ರಾಷ್ಟ್ರದ್ರೋಹ- ರಾಷ್ಟ್ರಪ್ರೇಮಗಳ ಪರ- ವಿರೋಧ ಚರ್ಚೆಗಳು ತಾರಕಕ್ಕೇರಿರುವ ಹೊತ್ತಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತನ್ನ ಛಾಪನ್ನು ಸೂಕ್ತ ಸಮಯದಲ್ಲೇ ಮೂಡಿಸಿದೆ. ದೇಶದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿಇನ್ನು ಮಂದೆ ಕಡ್ಡಾಯವಾಗಿ ತ್ರಿವರ್ಣಧ್ವಜ ಹಾರಿಸಬೇಕೆಂಬ ಆದೇಶ ಕೇಂದ್ರ ಮಾನವ ಸಂಪನ್ಮೂಲ ಇಲಾಖಾ ಸಚಿವೆ ಸ್ಮೃತಿ ಇರಾನಿ ಅವರಿಂದ ಹೊರಬಿದ್ದಿದೆ. ಸಚಿವೆ ಇರಾನಿ ಅಧ್ಯಕ್ಷತೆಯಲ್ಲಿ ನಡೆದ ವಿವಿಗಳ ಕುಲಸಚಿವರ ಸಭೆಯಲ್ಲಿಕೈಗೊಂಡಿರುವ ಈ ನಿರ್ಧಾರ ಮೊದಲಿಗೆ ಎಲ್ಲಿ ಅನುಷ್ಠಾನಕ್ಕೆ ಬರಲಿದೆ ಊಹಿಸುತ್ತೀರಾ? ಸೂಕ್ತ ಉತ್ತರಕ್ಕೆ ಯಾವ ಬಹುಮಾನವೂ ಇಲ್ಲ! ಹೌದು, ದೆಹಲಿಯ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲೇ ತ್ರಿವರ್ಣ ಧ್ವಜ ಮೊದಲಿಗೆ ಹಾರಾಡಬೇಕು ಎಂಬುದು ಹುಕುಂ!
- ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ದೇಶಾದ್ಯಂತ ಪರ-ವಿರೋಧದ ಹೋರಾಟಗಳು ತಾರಕ್ಕಕೇರಿವೆ. ದೆಹಲಿಯಲ್ಲಿ ಪೊಲೀಸರು ಲಾಟಿಚಾರ್ಜ್ ನಡೆಸಿ ಪ್ರತಿಭಟನೆ ನಿರತರನ್ನು ಚದುರಿಸಿದರು. ಕಾಂಗ್ರೆಸ್ ಸೇರಿ ಹಲವು ಎಡ ಪಂಥಿಯ ಪಕ್ಷಗಳು, ಸಂಘಟನೆಗಳು ಕನ್ಹಯ್ಯ ಬಂಧನ ವಿರೋಧಿಸಿ ಮತ್ತು ಜೆ ಎನ್ ಯು ಮೇಲೆ ಕೇಂದ್ರ ಅಂಕುಶ ಸಾಧಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮೆರೆದವು. ಇನ್ನೊಂದೆಡೆ ಎಬಿವಿಪಿ ರಾಷ್ಟ್ರವಿರೋಧಿ ಘೋಷಣೆ ಕೂಗಿದವರಿಗೆ ಶಿಕ್ಷೆಯಾಗಬೇಕು, ಈ ವಿಷಯದಲ್ಲಿ ಕಾಂಗ್ರೆಸ್- ಎಡಪಕ್ಷಗಳ ಸಮರ್ಥನೆ ಸರಿಯಲ್ಲ ಅಂತ ಮೆರವಣಿಗೆಗಳನ್ನು ನಡೆಸಿತು. ಕನ್ಹಯ್ಯ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಯಾಗಿ ರಾಜ್ಯದ ಬೆಂಗಳೂರು ಮತ್ತು ದಾವಣೆಗೆರೆಯಲ್ಲಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ರಸ್ತೆಗಳಿದು ಪ್ರತಿಭಟನೆ ನಡೆಸಿದರು. ತಮಿಳುನಾಡಿನ ಚೆನೈನಲ್ಲಿ ಎಐಎಸ್ ಎಫ್ ಸಂಘಟನೆಯ ಕಾರ್ಯಕರ್ತರು ಕನ್ಹಯ್ಯ ಪರ ಪ್ರತಿಭಟಿಸಿದರು. ಪಟಿಯಾಲ ಕೋರ್ಟ್ ಆವರಣದಲ್ಲಿ ವಕೀಲರು “ದೇಶವಿರೋಧಿಗಳೆ ಪಾಕಿಸ್ತಾನಕ್ಕೆ ತೊಲಗಿ” ಎಂಬ ಬ್ಯಾನರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
- ಜೆ ಎನ್ ಯು ಗಲಾಟೆಗೆ ಸಂಬಂಧಿಸಿ ಎಬಿವಿಪಿಯಲ್ಲೂ ಭಿನ್ನಾಭಿಪ್ರಾಯಗಳಿರುವುದು ಬಹಿರಂಗವಾಗಿದೆ. ಜೆಎನ್ ಯುನ ಎಬಿವಿಪಿ ಘಟಕದ ಮೂರು ವಿದ್ಯಾರ್ಥಿಗಳು ಸಂಘಟನೆ ನೀಡಿದ್ದ ಜವಾಬ್ದಾರಿಗೆ ರಾಜಿನಾಮೆ ನೀಡಿದ್ದಾರೆ. ಜೆಎನ್ ಯು ವಿವಾದ ಪ್ರಕರಣದಲ್ಲಿ ಕೆಲವರು ಮಾತ್ರ ಭಾಗವಹಿಸಿದ್ದು ವಿವಿಯಲ್ಲಿನ ಎಲ್ಲಾ ವಿದ್ಯಾರ್ಥಿ ಮತ್ತು ಶಿಕ್ಷಕ ಸಮುದಾಯವನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿರುವುದು ಮನಸ್ಸಿಗೆ ದುಃಖವನ್ನುಂಟುಮಾಡುತ್ತಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ದೆಹಲಿಯ ಜೆಎನ್ ಯು ವಿವಾದ ಮತ್ತು ಹೈದರಾಬಾದ್ ಕೇಂದ್ರ ವಿವಿಯಲ್ಲಿ ನಡೆದ ರೋಹಿತ್ ವೇಮಲು ಆತ್ಮಹತ್ಯೆ ಪ್ರಕರಣಗಳ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂಬುದು ಎಬಿವಿಪಿಯ ಜೆಎನ್ ಯು ಘಟಕದ ಜಂಟಿ ಕಾರ್ಯದರ್ಶಿ ಪ್ರದೀಪ್ ನರ್ವಾಲ್, ಎಬಿವಿಪಿಯ ಜೆಎನ್ ಯು ನ ಸಮಾಜ ವಿಜ್ಞಾನ ಶಾಲೆ(ಎಸ್ ಎಸ್ ಎಸ್)ಯ ಅಧ್ಯಕ್ಷ ರಾಹುಲ್ ಯಾದವ್ ಮತ್ತು ಕಾರ್ಯದರ್ಶಿ ಅಕಿಂತ್ ಹನ್ಸ್ ಅಭಿಪ್ರಾಯ. ದೇಶದ್ರೋಹದ ಘೋಷಣೆ ಕೂಗಿದವರನ್ನಷ್ಟೇ ಗುರುತಿಸಿ ಶಿಕ್ಷಿಸಬೇಕಾಗಿದ್ದ ಪ್ರಕರಣವನ್ನು ಸರ್ಕಾರವು ಜೆ ಎನ್ ಯು ಸಮುದಾಯವನ್ನೇ ಹತ್ತಿಕ್ಕುವುದಕ್ಕೆ ಬಳಸಿಕೊಳ್ಳುತ್ತಿದೆ ಎಂಬುದಿವರ ಆಕ್ರೋಶ.
- ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ತಂಡ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಮಾಡಿ ಮಾಡಿ ಜೆಎನ್ ಯು ವಿವಾದದಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಮಾತನಾಡಿದ ರಾಹುಲ್ ‘ದೇಶವಿರೋಧಿಗಳನ್ನು ನಾವು ಬೆಂಬಲಿಸುವುದಿಲ್ಲ. ಆದರೆ ಈ ನೆಪದಲ್ಲಿ ಅಮಾಯಕರನ್ನು ಬಂಧಿಸುತ್ತಿರುವುದು ಸರಿಯಲ್ಲ.’ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಲಕ್ನೋಗೆ ಭೇಟಿ ನೀಡಿದ ರಾಹುಲ್ ಗೆ ಎಬಿವಿಪಿ ಮತ್ತು ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನದ ವಿರೋಧ ವ್ಯಕ್ತವಾಯಿತು. ದೇಶದ್ರೋಹಿಗಳಿಗೆ ಬೆಂಬಲ ವ್ಯಕಪಡಿಸುತ್ತಿರುವ ರಾಹುಲ್ ಗಾಂಧಿಯೂ ದೇಶದ್ರೋಹಿಯೆ ಅಂತ ಕಿಡಿ ಕಾರಿದರು ಯೋಗಗುರು ಬಾಬಾ ರಾಮ್ ದೇವ್.
- ದೇಶದ್ರೋಹದ ಆರೋಪದ ಮೇಲೆ ಎರಡು ದಿನಗಳ ಹಿಂದೆ ಬಂಧಿಯಾಗಿದ್ದ ಜೆಎನ್ ಯುನ ಮಾಜಿ ಉಪನ್ಯಾಸಕ ಪ್ರೊ. ಗಿಲಾನಿ ಅವರನ್ನು ಭದ್ರತೆಯ ಕಾರಣಗಳಿಂದ ಗುರುವಾರ ಕೋರ್ಟ್ ಗೆ ಹಾಜರು ಪಡಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಪಟಿಯಾಲ ಕೋರ್ಟ್ ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಗುರುವಾರ ಮತ್ತೆರಡು ಎಫ್ ಐಆರ್ ದಾಖಲಾಗಿವೆ. ಬುಧವಾರ ಕೋರ್ಟ್ ಆವರಣದಲ್ಲಿ ನಡೆದ ದೊಂಬಿಗೆ ಬಾರ್ ಕೌನ್ಸಿಲ್ ಕ್ಷಮೆ ಕೇಳಿದ್ದು, ತಪ್ಪಿತಸ್ಥ ನ್ಯಾಯವಾದಿಗಳನ್ನು ಗುರುತಿಸಿ, ವಿಚಾರಣೆ ನಂತರ ಅವರ ನೋಂದಣಿಯನ್ನು ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ.