₹251ರ ಸ್ಮಾರ್ಟ್ ಫೋನ್ ಮಾರಾಟ ಸದ್ಯಕ್ಕೆ ನಿಂತಿದೆ, ಖರೀದಿ ಉತ್ಸಾಹದಲ್ಲಿರೋರೂ ಸ್ವಲ್ಪ ನಿಧಾನಿಸಿ ಎನ್ನೋದಕ್ಕೆ ಇಲ್ಲಿವೆ 5 ಕಾರಣಗಳು

ಡಿಜಿಟಲ್ ಕನ್ನಡ ಟೀಮ್

₹251 ರ ಸ್ಮಾರ್ಟ್ ಫೋನ್ ಉದ್ಘಾಟನೆ ಭಾರೀ ಸದ್ದು ಮಾಡಿತು. ಎಲ್ಲರಿಗೂ ಸ್ಮಾರ್ಟ್ ಫೋನ್ ಕೈಗೆಟಕಿಸುವ ಮಾರ್ಗದಲ್ಲಿ ಇದು ಮಹತ್ವದ ಹೆಜ್ಜೆಯೇ ಆದರೂ ಉದ್ಘಾಟನೆ ಬೆನ್ನಲ್ಲೇ ಕೆಲವು ಆತಂಕಗಳು ನಿಚ್ಚಳವಾಗಿವೆ.

  1. ಗುರುವಾರದಿಂದ ಪ್ರಾರಂಭವಾಗಿರುವ ಆನ್ ಲೈನ್ ಮಾರಾಟದಲ್ಲಿ ಫ್ರೀಡಂ 251ರ ಉತ್ಪಾದಕ, ನೋಯ್ಡಾದ ರಿಂಗಿಂಗ್ ಬೆಲ್ ಕಂಪನಿ, ಆರ್ಡರ್ ಸಲ್ಲಿಕೆಯಾದ ಫೋನ್ ಅನ್ನು ತಲುಪಿಸುವುದಕ್ಕೆ ನಾಲ್ಕು ತಿಂಗಳ ಕಾಲಾವಕಾಶ ವಿಧಿಸಿಕೊಂಡಿದೆ! ನಾಲ್ಕು ತಿಂಗಳ ನಂತರ ನಿಮ್ಮ ಕೈಗೆ ಸ್ಮಾರ್ಟ್ ಫೋನ್ ಬಂದು ಅದರ ಗುಣಮಟ್ಟ ಪರೀಕ್ಷಿಸಬೇಕಷ್ಟೆ.
  2. ಈ ಕಂಪನಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯಲ್ಲಿ ಈವರೆಗೆ ಯಾವ ಅನುಭವವೂ ಇಲ್ಲ ಎಂಬುದೂ ಗಮನಾರ್ಹ. ಗುರುವಾರ ಆನ್ ಲೈನ್ ಮಾರಾಟ ಆರಂಭವಾದ ಕೆಲ ಸಮಯದಲ್ಲೇ ವೆಬ್ ಸೈಟ್ ಸ್ಥಗಿತಗೊಂಡು, ಇನ್ನು 24 ತಾಸುಗಳಲ್ಲಿ ಪುನರಾರಂಭ ಮಾಡುವುದಾಗಿ ಹೇಳಿದೆ. ಅತಿಯಾದ ಆನ್ ಲೈನ್ ಟ್ರಾಫಿಕ್ ನಿಂದ ತಾಂತ್ರಿಕ ದೋಷ ಎದುರಾಗಿದೆ ಅಂತ ಫ್ರೀಡಂ 251 ವೆಬ್ ಸೈಟ್ ಹೇಳಿಕೊಂಡಿದೆ.
  3. ನೀವು ಶಿಪ್ಪಿಂಗ್ ಶುಲ್ಕ ಎಂದು ಹೆಚ್ಚುವರಿ 40 ರು ತೆರಬೇಕಾಗುತ್ತದೆ. ಒಂದು ವರ್ಷದ ವಾರಂಟಿ ಎಂಬ ನಿಯಮವಿದೆಯಾದರೂ, ಪಡೆದ ಸ್ಮಾರ್ಟ್ ಫೋನ್ ಸುಸ್ಥಿತಿಯಲ್ಲಿಲ್ಲ ಎಂದಾದಾಗ ಹಿಂತಿರುಗಿಸುವುದು ಹೇಗೆ ಎಂಬ ಬಗ್ಗೆ ವಿವರಗಳಿಲ್ಲ.
  4. ಮೊಬೈಲ್ ಫೋನ್ ಉದ್ಯಮದಲ್ಲಿರುವವರ ಸಂಘಟನೆಯಾದ ‘ಇಂಡಿಯನ್ ಸೆಲ್ಯುಲಾರ್ ಅಸೋಸಿಯೇಷನ್’ ಈ ಬಗ್ಗೆ ಅದಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಅವೇನೇ ಸಬ್ಸಿಡಿ ಕೊಟ್ಟರೂ ₹3500 ಕ್ಕಿಂತ ಕಡಿಮೆ ದರದಲ್ಲಿ ಮಾರಲಾಗುವುದಿಲ್ಲ ಎಂಬುದು ಅದರ ಅಭಿಪ್ರಾಯ.
  5. 2015ರಲ್ಲಷ್ಟೇ ಆರಂಭವಾದ ಕಂಪನಿ ಜತೆ ‘ಮೇಕ್ ಇನ್ ಇಂಡಿಯಾ’ ಬ್ರಾಂಡ್ ಸಂಯೋಜಿಸುವುದಕ್ಕೆ ಹೋಗಿ ಸರ್ಕಾರ ಎಡವುತ್ತಿದೆಯಾ? ಎಂಬ ಪ್ರಶ್ನೆ ಈಗ ಎದ್ದಿದೆ.

Leave a Reply