ಅಫ್ಜಲ್ ಆರಾಧನೆಯೊಂದಿಗೆ ಎಲ್ಲವಕ್ಕೂ ಮುನ್ನುಡಿ ಬರೆದ ಉಮರ್ ಖಾಲಿದ್, ಕಾನೂನಿಗೆ ಬಾಗದೇ ತಲೆಮರೆಸಿಕೊಂಡಿರೋದೇಕೆ?

ಡಿಜಿಟಲ್ ಕನ್ನಡ ವಿಶೇಷ

ಜೆಎನ್ ಯು ವಿವಾದವೆಲ್ಲ ಈಗ ಒಬ್ಬ ಕನ್ಹಯ್ಯ ಕುಮಾರ್ ಬಂಧನದ ಮೇಲಷ್ಟೇ ಕೇಂದ್ರೀಕೃತಗೊಂಡು ಚರ್ಚೆಯಾಗುತ್ತಿದೆ. ಕನ್ಹಯ್ಯ ದೇಶವಿರೋಧಿ ಘೋಷಣೆಯಲ್ಲಿ ಭಾಗಿಯಾಗಿದ್ದರೆ ಮಾತ್ರವೇ ಅವರ ವಿರುದ್ಧ ಹೊರಿಸಲಾಗಿರುವ ದೇಶದ್ರೋಹವೆಂಬ ಗುರುತರ ಆರೋಪಕ್ಕೆ ಬಲ ಬರಲು ಸಾಧ್ಯ.

ಆದರೆ… ವಾಸ್ತವವಾಗಿ ಈ ಎಲ್ಲ ವಿವಾದಕ್ಕೆ ವೇದಿಕೆ ಒದಗಿಸಿತ್ತು ಜೆ ಎನ್ ಯು ಆವರಣದಲ್ಲಿ ನಡೆದ ಅಫ್ಜಲ್ ಆರಾಧನೆ. ಇದನ್ನು ಆಯೋಜಿಸಿದ್ದ ಉಮರ್ ಖಾಲಿದ್ ಎಲ್ಲಿ? ಇದು ದೇಶ ಕೇಳಬೇಕಾದ ಪ್ರಶ್ನೆ. ನಾವು ಸಂವಿಧಾನಕ್ಕೆ ಬದ್ಧರಾಗಿದ್ದೇವೆ ಎಂದು ಉಸಿರಿಗೊಮ್ಮೆ ಹೇಳುವವರು ಖಾಲಿದ್ ರನ್ನು ಕಟಕಟೆಗೆ ತರುವ ಬಗ್ಗೆ ಏಕೆ ಉತ್ಸುಕರಾಗಿಲ್ಲ? ನ್ಯಾಯ ವ್ಯವಸ್ಥೆಯನ್ನು ಗೌರವಿಸಿ, ತನ್ನ ಮೇಲಿನ ಆರೋಪ ಸುಳ್ಳು ಎಂದು ನಿರೂಪಿಸಬೇಕಾದ ವಿದ್ಯಾರ್ಥಿ ನೇತಾರ ಉಮರ್ ಖಾಲಿದ್ ತಲೆಮರೆಸಿಕೊಂಡಿರುವುದಾದರೂ ಏಕೆ?

ಸಂಸತ್ ದಾಳಿ ಪ್ರಕರಣದಲ್ಲಿ ನೇಣಿಗೇರಿದ ಅಫ್ಜಲ್ ಗುರುವಿನ ಪುಣ್ಯಸ್ಮರಣೆಯನ್ನು ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿರೂಪಿಸಿ, ಜೆಎನ್ ಯುನಲ್ಲಿ ಆಯೋಜಿಸಿದ್ದು ವಿವಿಯ ಮತ್ತೊಬ್ಬ ಸಂಶೋಧನಾ ವಿದ್ಯಾರ್ಥಿ, ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ (ಡಿಎಸ್ ಯು) ಮಾಜಿ ಮುಖ್ಯಸ್ಥ ಉಮರ್ ಖಾಲಿದ್ ಎಂಬುದು ಸ್ಪಷ್ಟವಾಗಿದೆ. ಮತ್ತೊಂದು ಆತಂಕದ ವರದಿ ಎಂದರೆ ದೇಶದ 18ಕ್ಕೂ ಹೆಚ್ಚೂ ವಿವಿಗಳಲ್ಲಿ ಅಫ್ಜಲ್ ಗುರುವಿನ ಸ್ಮರಣೆ ಕಾರ್ಯಕ್ರಮ ಆಯೋಜನೆಗೆ ತಯಾರಿ ಮಾಡಿಕೊಂಡಿದ್ದ ಎಂಬುದು. ವಿವಿಯಲ್ಲಿ ಪ್ರಾಬಲ್ಯ ಹೊಂದಿರುವ ಎಡಪಂಥೀಯ ಸಂಘಟನೆ ಡಿಎಸ್ ಯು. ಭಾರತವನ್ನು ತುಂಡಾಗಿಸುವ ಘೋಷಣೆಗಳು ಮೊಳಗಿದ್ದು ಇವರು ಆಯೋಜಿಸಿದ್ದ ಕಾರ್ಯಕ್ರಮದಲ್ಲೇ. ಇಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಎಲ್ಲರ ಗುರುತೂ ಪತ್ತೆಯಾಗಿಲ್ಲ.

ತಾನೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದ್ರೋಹದ ಘೋಷಣೆಗಳು ಮೊಳಗಿದ್ದು ಹೇಗೆ ಅಂತ ವಿವರಣೆ ನೀಡಬೇಕಿರುವುದು ಖಾಲಿದ್ ಹೊಣೆಗಾರಿಕೆ. ಸಮರ್ಥನೆ ಹಾಗಿರಲಿ, ಉಗ್ರನೊಬ್ಬನ ಪರವಾಗಿ ಕಾರ್ಯಕ್ರಮ ಆಯೋಜಿಸುವುದೇ ದೇಶದ್ರೋಹ. ಇಷ್ಟಾಗಿ, ಈಗ ಖಾಲಿದ್ ಕುಟುಂಬದವರು- ಪರಿಚಯಸ್ಥರು ವಾದಿಸುತ್ತಿರುವುದೇನೆಂದರೆ, ಆತ ಜನಾಕ್ರೋಶದಿಂದ ಪ್ರಾಣಕ್ಕೆ ತೊಂದರೆ ಉಂಟಾಗಬಹುದೆಂದು ಸದ್ಯಕ್ಕೆ ಶರಣಾಗುತ್ತಿಲ್ಲ ಅಂತ! ಅಫ್ಜಲ್ ಪರ ಕಾರ್ಯಕ್ರಮ ಮಾಡಿದ್ದೇಕೆ ಅಂತ ಕೇಳಿದರೆ, ಅದು ತಮಗೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವವರಿಗೆ, ಪ್ರಕರಣ ದಾಖಲಾದಾಗ ಕಾನೂನಿಗೆ ಶರಣಾಗಬೇಕಲ್ಲದೇ ತಲೆಮರೆಸಿಕೊಳ್ಳಬಾರದು ಅನ್ನುವುದೂ ಸಂವಿಧಾನ ಗೌರವಿಸುವ ಮಾರ್ಗ ಅಂತ ಅನ್ನಿಸುವುದಿಲ್ಲವೇ?

ಈ ಉಮರ್ ಖಾಲಿದ್, ನಿಷೇಧಿತ ಸಿಮಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಸಯ್ಯದ್ ಕಾಸಿಂ ರಸೂಲ್ ಇಲಿಯಾಸ್ ಮಗ ಗೊತ್ತೇ ಎಂಬ ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕೆಲವು ಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೆ ಸಂದರ್ಶನ ನೀಡಿರುವ ರಸೂಲ್, ‘ನನ್ನ ಇತಿಹಾಸವಿಟ್ಟುಕೊಂಡು ಮಗನನ್ನು ದೋಷಿಯಾಗಿಸುವುದು ತಪ್ಪು. ನಾನು ಸಿಮಿ ಸಂಘಟನೆಯಲ್ಲಿ ಇದ್ದದ್ದು ನಿಜ. ಆದರೆ 1985 ರಲ್ಲೆ ಸಿಮಿಯನ್ನು ತೊರೆದಿದ್ದೇನೆ. ಆ ನಂತರವೇ ಉಮರ್ ಜನಿಸಿರುವುದು. ವೈಯಕ್ತಿಕವಾಗಿ ನನ್ನ ಮೇಲೆ ಇಲ್ಲಿಯ ತನಕ ಯಾವುದೇ ಕೇಸ್ ದಾಖಲಾಗಿಲ್ಲ. ಅಲ್ಲದೇ ಸಿಮಿ ನಿಷೇಧವಾಗಿದ್ದು 2001 ರಲ್ಲಿ’ ಎಂದಿದ್ದಾನೆ.

ಉಮರ್ ನ ಸಹೋದರಿ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಭೋಧಕಿಯಾಗಿದ್ದಾರೆ. ‘ಅಮೆರಿಕಕ್ಕೆ ನನ್ನೊಂದಿಗೆ ಅಧ್ಯಯನಕ್ಕೆ ಬರಲೊಪ್ಪದೇ ಭಾರತದಲ್ಲಿಯೇ ಉಳಿದ ಉಮರ್ ದೇಶದ್ರೋಹ ಮಾಡಲಾರ. ಕೆಲ ಮಾಧ್ಯಮಗಳೂ ಸೇರಿದಂತೆ ಹಲವು ಹಿತಾಸಕ್ತಿಗಳು ಆಕ್ರೋಶದ ವಾತಾವರಣ ಸೃಷ್ಟಿಸಿರುವುದರಿಂದ ಆತ ಪ್ರಾಣಾಪಾಯದ ಸಾಧ್ಯತೆಗೆ ಹೆದರಿ ಶರಣಾಗಿಲ್ಲ’ ಎನ್ನುತ್ತಾರಿವರು.

ನಿಜ. ಧರ್ಮದ ಆಧಾರದಲ್ಲಿ, ತಂದೆಯ ಚರಿತ್ರೆ ಆಧಾರದಲ್ಲಿ ಉಮರ್ ನನ್ನು ತಪ್ಪಿತಸ್ಥನಾಗಿಸಬೇಕಿಲ್ಲ. ಆದರೆ ಮುಗ್ಧತೆ ಸಾಬೀತಾಗಬೇಕಿರುವುದು ನ್ಯಾಯಾಲಯದಲ್ಲಿ. ತನಗೆ ಪೂರಕ ವಾತಾವರಣ ಕಲ್ಪಿಸಿದರೆ ಮಾತ್ರ ಶರಣಾಗುವ ಇರಾದೆಯಿದೆ ಎಂಬ ಖಾಲಿದ್ ಸಂದೇಶ ಒಪ್ಪಲಾಗದ್ದು. ಅಷ್ಟೇ ಅಲ್ಲ, ಅಂಬೇಡ್ಕರ್ ಕೊಟ್ಟು ಹೋಗಿರುವ ಸಂವಿಧಾನ ಗೌರವಿಸಬೇಕು ಎಂಬ ಲೆಫ್ಟ್ ಗಳ ಮಾತಲ್ಲೂ ಸತ್ವ ಇಲ್ಲ ಎಂಬುದನ್ನು ಈ ತಲೆಮರೆಸಿಕೊಳ್ಳುವಿಕೆಯೇ ಸಾರಿ ಹೇಳುತ್ತಿದೆ.

ಉಮರ್ ವಿಷಯದಲ್ಲಿ ಮಾಧ್ಯಮದಲ್ಲಿ ಎರಡು ಅತಿರೇಕಗಳಾಗುತ್ತಿವೆ. ನ್ಯೂಸ್ ಎಕ್ಸ್ ನಂಥ ಚಾನೆಲ್ ಗಳು ಉಮರ್ ಗೆ ಪಾಕಿಸ್ತಾನದ ಲಿಂಕಿದೆಯಂತೆ ಅಂತ ಮೂಲಗಳನ್ನು ಉಲ್ಲೇಖಿಸಿ ರೋಚಕ ಕತೆಗಳನ್ನು ಹೆಣೆಯುತ್ತಿವೆ. ಇದೇ ವಾಹಿನಿ ಕನ್ಹಯ್ಯ ಘೋಷಣೆ ಕೂಗಿದ್ದೆಂದು ಆರೋಪಿಸಿ ಬಿತ್ತರಿಸಿದ್ದ ವಿಡಿಯೋ ಫೇಕ್ ಅಂತ ಸಾಬೀತಾಗಿದೆ. ಇನ್ನೊಂದೆಡೆ ಲೆಫ್ಟ್ ಲಿಬರಲ್ ಮಾಧ್ಯಮಗಳದ್ದು ಇನ್ನೊಂದು ಬಗೆ ಅತಿರೇಕ. ಅಯ್ಯೋ ಪಾಪ, ಖಾಲಿದ್ ಗೆ ಶರಣಾಗತಿಯಾಗುವ ಪೂರಕ ವಾತಾವರಣ ಇಲ್ಲ ಅಂತ ಅಳುಮೋರೆ ಮಾಡಿಕೊಂಡು ಇದೇ ಅಭಿಪ್ರಾಯ ಹೇಳುವವರಿಗೆಲ್ಲ ಮೈಕ್ ಹಿಡಿಯುತ್ತಿವೆ. ಪತ್ರಕರ್ತರ ಮೇಲೆ ದಾಳಿ ಮಾಡಿದ ವಕೀಲರನ್ನು ಇನ್ನೂ ಬಂಧಿಸಿಲ್ಲವೇಕೆ ಎಂದು ಇದೇ ಮಾಧ್ಯಮಗಳು ಪ್ರಶ್ನಿಸುತ್ತಿವೆ. ಆ ಪ್ರಶ್ನೆ ಸರಿಯಾಗಿಯೂ ಇದೆ. ಆದರೆ ಖಾಲಿದ್ ಆತನಿಗೆ ಪುರಸೊತ್ತಾದಾಗ ಪೋಲೀಸರೆದುರು ಬರಲಿ, ವಕೀಲರನ್ನು ಈಗಲೇ ಬಂಧಿಸಿ ಅನ್ನೋದು ಮಾತ್ರ ದ್ವಂದ್ವವಲ್ಲದೇ ಮತ್ತೇನಲ್ಲ.

Leave a Reply