ಕಣ್ಣೂರು ಎಂಬ ಕಿಲ್ಲಿಂಗ್ ಫೀಲ್ಡ್… ಕಮ್ಯುನಿಸ್ಟರು ಪ್ರಾರಂಭಿಸಿದ ರಕ್ತಚರಿತೆಯಲ್ಲಿ ಕೇಸರಿಯೂ ಕೆಂಪಾಯಿತು!

ಚಿತ್ರಕೃಪೆ- ಸಂವಾದ ಡಾಟ್ ಆರ್ಗ್

ಚೈತನ್ಯ ಹೆಗಡೆ

ನ್ಯಾಯಾಲಯದಲ್ಲಿ ವಕೀಲರ ಗೂಂಡಾವರ್ತನೆ, ಪತ್ರಕರ್ತರ ಮೇಲಾಗುತ್ತಿರುವ ಹಲ್ಲೆ ಇವೆಲ್ಲವೂ ಖಂಡನೀಯ ಮತ್ತು ಚರ್ಚೆಯಾಗಬೇಕಿರುವ ಸಂಗತಿಗಳೇ. ಆದರೆ ಈ ಸುದ್ದಿ ಪ್ರವಾಹದ ನಡುವೆಯೇ ನಿಜಕ್ಕೂ ಚರ್ಚಾರ್ಹವಾಗಬೇಕಿದ್ದದ್ದು, ಸಂಘರ್ಷದ ಗುಂಪುಗಳೆರಡನ್ನು ಕರೆಸಿ ಘಟನೆಯ ತಿರುಳನ್ನು ದೇಶದ ಮುಂದಿರಿಸಬೇಕಾದ ವಿದ್ಯಮಾನವೊಂದು ಮಾಧ್ಯಮದಲ್ಲಿ ಜಾಗ ಪಡೆಯಲಿಲ್ಲ.

ಕೇರಳದ ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ 27ರ ಹರೆಯದ ಸುಜಿತ್ ಅವರ ಪೋಷಕರ ಎದುರಲ್ಲೇ ಅಮಾನುಷವಾಗಿ ಕೊಲೆಯಾದ ಘಟನೆ ಏನೂ ಆಗಿಲ್ಲ ಎಂಬಂತೆ ನೇಪಥ್ಯಕ್ಕೆ ಸರಿಯಬೇಕೇ? ದ್ವೇಷ- ಅಸಹಿಷ್ಣುತೆ ಪದಪುಂಜಗಳಡಿ ದಾದ್ರಿ- ಗೋಧ್ರಾಗಳು ಚರ್ಚೆಯಾಗುವಂತೆ ಕಣ್ಣೂರು ಎಂಬ ಸ್ಥಳವೂ ಚರ್ಚೆ ಆಗೋಲ್ಲ ಏಕೆ? ಕಣ್ಣೂರಿನ ಹೆಸರೆತ್ತಿದರೆ ಎಡಚಿಂತನೆಯಲ್ಲಿರುವ ರಕ್ತದಾಹ, ಅಸಹಿಷ್ಣುತೆಗಳು ಕಣ್ಣಿಗೆ ರಾಚುತ್ತವೆ ಅಂತ ಇದನ್ನು ಚರ್ಚಾ ವೇದಿಕೆಗಳಿಂದ ದೂರ ಇಡಲಾಗುತ್ತಿದೆಯೇ?

ಸೋಮವಾರ ರಾತ್ರಿ 11.30ಕ್ಕೆ ಸುಜಿತ್ ಮನೆಗೆ ನುಗ್ಗಿದವರು ಆತನನ್ನು ಮನೆಯವರೆದುರೇ ಕೊಚ್ಚಿ ಕೊಂದಿದ್ದಾರೆ. ಹತ್ಯೆಗೆ ಸಂಬಂಧಿಸಿ ಸಿಪಿಎಂನ ಹತ್ತು ಕಾರ್ಯಕರ್ತರ ಬಂಧನವೂ ಆಯಿತು.

ಕಣ್ಣೂರಿನ ರಕ್ತಚರಿತೆಗೆ ದಶಕಗಳ ಇತಿಹಾಸವಿದೆ. ಇದು ಆರೆಸ್ಸೆಸ್ ವರ್ಸಸ್ ಸಿಪಿಎಂ ಸಮರ. ಕೇರಳ ಕಮ್ಯುನಿಸ್ಟರ ಆಡುಂಬೊಲ. ಆ ರಾಜ್ಯದಲ್ಲಿ ಒಂದೇ ಎಡಪಕ್ಷಗಳು ಅಧಿಕಾರದಲ್ಲಿರುತ್ತವೆ ಇಲ್ಲವೇ ಕಾಂಗ್ರೆಸ್ ಅಧಿಕಾರ ಗದ್ದುಗೆಯಲ್ಲಿರುತ್ತದೆ. ಇಂತಿಪ್ಪ ರಾಜ್ಯದಲ್ಲಿ ಕಣ್ಣೂರಿನ ಮೂಲಕ ರಾಜಕೀಯ ಅಸ್ತಿತ್ವ ಸಾಧಿಸುವ ಪ್ರಯತ್ನದಲ್ಲಿದೆ ಕೇಸರಿ ಪಡೆ. ಇದು ಕಮ್ಯುನಿಸ್ಟ್ ರಾಜಕಾರಣದ ಪಾಲಿಗೆ ಸಹಿಸಲಾಗದ ವಿದ್ಯಮಾನ. ಸರಿ, ಅದಕ್ಕೆ ಪ್ರಜಾಪ್ರಭುತ್ವ ಮಾದರಿಯ ಸಂಘರ್ಷ ತುಳಿದಿದ್ದರೆ ತಕರಾರಿರುತ್ತರಲಿಲ್ಲ. ಆದರೆ ಕಮ್ಯುನಿಸ್ಟರು ರಾಜಕೀಯ ವಿರೋಧಿಗಳನ್ನು ಇಲ್ಲವಾಗಿಸುವ ಕೆಂಪುಹಾದಿ ತುಳಿದರು. ಇದಕ್ಕೆ ಪ್ರತಿರೋಧವೂ ಅಷ್ಟೇ ತೀವ್ರತೆಯಲ್ಲಿರುವುದರಿಂದ ರಕ್ತಗಾಥೆ ಮುಂದುವರಿದುಕೊಂಡೇ ಬಂದಿದೆ.

ಈ ರಕ್ತಚರಿತೆ ಇತಿಹಾಸ ಹೇಳುವವರು 1968ನೇ ಇಸ್ವಿಯನ್ನು ಬೊಟ್ಟು ಮಾಡುತ್ತಾರೆ. ಆ ವರ್ಷ ಆರೆಸ್ಸೆಸ್ ಕಾರ್ಯಕರ್ತ ವಡಿಕ್ಕಳ್ ರಾಮಕೃಷ್ಣ ಅವರನ್ನು ಸಿಪಿಎಂ ಬೆಂಬಲಿಗರು ಕೊಂದರು. ಅಲ್ಲಿಂದ ಶುರುವಾದ ರಾಜಕೀಯ ಹತ್ಯೆಗಳ ಸರಮಾಲೆ ಈವರೆಗೆ ಒಂದು ಲೆಕ್ಕಾಚಾರದ ಪ್ರಕಾರ 170 ಮಂದಿಯನ್ನು ಬಲಿ ತೆಗೆದುಕೊಂಡಿದೆ. 16 ಲಕ್ಷ ಜನಸಂಖ್ಯೆಯ ಕಣ್ಣೂರು ಪ್ರಾಂತ್ಯದಲ್ಲಿ ಈ ರಾಜಕೀಯ ಹಲ್ಲಾಹಲ್ಲಿಯಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ ಕೆಡಿಸಿಕೊಂಡವರು 3 ಸಾವಿರ ಸಂಖ್ಯೆಯಲ್ಲಿದ್ದಾರೆ. ಸಿಪಿಎಂ ಪಾಳೆಯದಲ್ಲೂ ಹತ್ಯೆ- ನೋವುಗಳಾಗಿವೆ. ಆದರೆ ಹೆಚ್ಚು ಸಾವು- ನೋವು ಉಂಡಿರುವುದು ಕೇಸರಿ ಪಡೆ. 1981ರಲ್ಲಿ ಆರೆಸ್ಸೆಸ್- ಸಿಪಿಎಂಗಳು ವಾರಗಳ ಕಾಲ ಬಡಿದಾಡಿಕೊಂಡು ರಕ್ತದಲ್ಲೇ ಮಿಂದೆದ್ದವು. ಸಂಘರ್ಷ ಮುಗಿದಾಗ ಆರೆಸ್ಸೆಸ್ ಕಡೆ 12 ಹಾಗೂ ಸಿಪಿಎಂ ಕಡೆ 12 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಪಶ್ಚಿಮ ಬಂಗಾಳದ ಎಡಪಕ್ಷ ಮಾದರಿಯನ್ನೇ ನೋಡಿದರೂ ಒಂದಂಶ ಸ್ಪಷ್ಟವಾಗುತ್ತದೆ. ಇವರು ಪ್ರಭಾವ ಹೊಂದಿರುವ ಜಾಗಗಳಲ್ಲಿ ರಾಜಕೀಯ ಎಂಬುದನ್ನು ಬದುಕಿನ ಒಂದು ಭಾಗವಾಗಿ ಮಾತ್ರವೇ ಇರುವುದಕ್ಕೆ ಬಿಡುವುದಿಲ್ಲ. ಅಲ್ಲಿ ರಾಜಕೀಯವೇ ಬದುಕು. ಸಾಮಾನ್ಯನೂ ನಮ್ಮ ಪರ, ಇಲ್ಲವೇ ವಿರುದ್ಧ ಎರಡರಲ್ಲೊಂದು ಬಣದಲ್ಲಿರಲೇಬೇಕು ಅಂತ ಬಯಸೋದು ಕಮ್ಯುನಿಸ್ಟ್ ಪಕ್ಷಗಳ ಜಾಯಮಾನ. ಹಾಗೆಂದೇ ಹಳ್ಳಿಗೆ ಹಳ್ಳಿಯೇ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯತ್ವದ ಕಾರ್ಡ್ ಇಟ್ಟುಕೊಂಡು ಬದುಕುವ ಸ್ಥಿತಿ. ಕಮ್ಣೂರಿನಲ್ಲಿ ಸಹ ದಾಳಿಗೆ ಬಳಸುವ ಮಾರಕಾಸ್ತ್ರ, ನಾಡಬಾಂಬುಗಳು ಆಯಾ ಪಾಳೆಯದ ಬಗ್ಗೆ ಸಿಂಪಥಿ ಇರುವ ಮನೆಗಳಲ್ಲೇ ತಯಾರಾಗುತ್ತವೆ. ಇಂಥ ಕಣ್ಣೂರಿನಲ್ಲಿ ಆರೆಸ್ಸೆಸ್ ಹಾಗೂ ಆ ಮೂಲಕ ಬಿಜೆಪಿ ತನ್ನ ಅಸ್ತಿತ್ವ ಸ್ಥಾಪನೆಗೆ ಮುಂದಾಗಿದ್ದನ್ನು ಕಮ್ಯುನಿಸ್ಟರು ಸಹಿಸಿಕೊಳ್ಳೋದಾದ್ರೂ ಹೇಗೆ? ಶುರುವಾಯಿತು ರಾಜಕೀಯ ಹತ್ಯೆ. ತೀರ ಇತ್ತೀಚೆಗೆ, 2014ರಲ್ಲಿ ಭಾರತೀಯ ಮಜ್ದೂರ್ ಸಂಘದ ಸುರೇಶ್ ಕುಮಾರ್ ಹಾಗೂ ಆರೆಸ್ಸೆಸ್ ಕಾರ್ಯಕರ್ತ ಇ. ಮನೋಜ್ ಅವರ ಹತ್ಯೆಯಾಗಿತ್ತು. ಇಲ್ಲೂ ಸಿಪಿಎಂ ಕಾರ್ಯಕರ್ತರ ಸಂಚು ಮೇಲ್ನೋಟಕ್ಕೆ ಸಾಬೀತಾಗಿ, ನ್ಯಾಯಾಲಯದಲ್ಲಿ ಮೊಕದ್ದಮೆ ಜಾರಿಯಲ್ಲಿದೆ.

ನಾಲ್ಕು ದಶಕಗಳಿಂದಲೇ ನಡೆದುಬರುತ್ತಿರುವ ಈ ಸಂಘರ್ಷದಲ್ಲಿ ಆರೆಸ್ಸೆಸ್ ಹಿಂತೆಗೆಯಲಿಲ್ಲ. ಹಾಗಂತ ದೊಡ್ಡಮಟ್ಟದ ರಾಜಕೀಯ ಫಲವೇನೂ ಸಿಕ್ಕಿಲ್ಲ. ಆದರೆ ಬಿಜೆಪಿಯ ಮತಗಳಿಕೆ ಪ್ರಮಾಣ ಹೆಚ್ಚಾಗಿರುವುದು ಸತ್ಯ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಕಲಸು ಕಲಸು. ಅರ್ಥಾತ್, ಒಂದೊಮ್ಮೆ ಸಿಪಿಎಂ ಪಾಳೆಯದಲ್ಲಿಇದ್ದ ಕಾರ್ಯಕರ್ತರೇ ಬಿಜೆಪಿ- ಸಂಘದ ಕಡೆ ಬರುತ್ತಿದ್ದಾರೆ. ಸಿಪಿಎಂ ಮತ್ತಷ್ಟು ವ್ಯಗ್ರವಾಗಿದೆ.

ಕಣ್ಣೂರಿನಲ್ಲಿಆರೆಸ್ಸೆಸ್- ಬಿಜೆಪಿಗಳ ಬಿಗಿಪಟ್ಟು ನಿಧಾನಕ್ಕೆ ಕೇರಳದ ಇತರ ಕಡೆಗಳಲ್ಲೂ ಕೇಸರಿ ಧ್ವನಿಗಳಿಗೆ ಬಲ ಕೊಡುತ್ತಿರುವುದು ಸಿಪಿಎಂಗೆ ಅರಗಿಸಿಕೊಳ್ಳಲಾಗದ ಸತ್ಯ. ನಾರಾಯಣ ಗುರುಗಳ ಪೀಠಕ್ಕೆ ನಡೆದುಕೊಳ್ಳುವ ಕೇರಳದ ದೊಡ್ಡ ಸಮುದಾಯವಾದ ಏಳವ, ಬಿಜೆಪಿ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಇತ್ತೀಚಿನ ಬೆಳವಣಿಗೆ. ಕಣ್ಣೂರಿನಲ್ಲೂ ಏಳವರು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಸಮುದಾಯದವರ ಪೀಠವಾದ ‘ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ’ ಅಥವಾ ಎಸ್ ಎನ್ ಡಿ ಪಿ, ಬಿಜೆಪಿಯನ್ನು ತನ್ನೊಂದಿಗಿನ ಸಂಪರ್ಕಕ್ಕೆ ಬಿಟ್ಟುಕೊಂಡಿರುವುದು ಕಮ್ಯುನಿಸ್ಟರು- ಕಾಂಗ್ರೆಸ್ಸಿಗರೆಲ್ಲರಿಗೂ ನಿದ್ದೆ ಕೆಡಿಸಿದೆ. ‘ಈ ಮೂಲಕ ನಾರಾಯಣ ಗುರುಗಳ ಆದರ್ಶಕ್ಕೆ ದ್ರೋಹ ಬಗೆಯಲಾಗುತ್ತಿದೆ’ ಅಂತ ಸಿಪಿಎಂ ದೂರಿತು. ಆ ಬಗ್ಗೆ ಎಸ್ ಎನ್ ಡಿ ಪಿ ತಲೆಕೆಡಿಸಿಕೊಳ್ಳದ ಕಾರಣ, ಸಿಪಿಎಂ ತನ್ನ ಎಂದಿನ ಸಿದ್ಧಾಂತ ವರಸೆಯನ್ನು ಬಿಟ್ಟು ಕೇಸರಿ ಪಡೆಯನ್ನು ಎದರಿಸುವಲ್ಲಿ ಕೆಲವು ರಾಜಿಗಳಿಗೆ ಮುಂದಾಯಿತು. ಅದರಂತೆ, ಗಣೇಶೋತ್ಸವ ಆಚರಿಸುವುದಕ್ಕೆ ತನ್ನ ಕಾರ್ಯಕರ್ತರಿಗೆ ಕರೆ ಕೊಟ್ಟಿತು. ಸಂಘ ಪರಿವಾರ ಅಲ್ಲಿ ಮೊದಲಿಂದ ಬಾಲಗೋಕುಲ ಜಯಂತಿ ಆಚರಿಸಿಕೊಂಡುಬಂದಿತ್ತು. ಇದಕ್ಕೆ ಪ್ರತಿಯಾಗಿ ಸಿಪಿಎಂ ಸಹ ಹಿಂದಿನ ವರ್ಷ ಕೃಷ್ಣ ಜಯಂತಿ ಅಂಗವಾಗಿ ವೇಷಭೂಷಣ ಸ್ಪರ್ಧೆ ಆಯೋಜಿಸಿತು.

ಕೇಸರಿ ಪಡೆ ಕೇರಳದಲ್ಲಿ ಕಾಲೂರಲು ಬಿಡದ ಜಿದ್ದಿಗೆ ಸಿಪಿಎಂ ಆರಂಭಿಸಿದ ರಕ್ತಚರಿತೆ ಇದು ಅನ್ನೋದು ಸ್ಪಷ್ಟ. ಆದರೆ ಇಷ್ಟೆಲ್ಲ ವರ್ಷಗಳ ನಂತರ ಇಲ್ಲಿ ಮುಗ್ಧರು ಯಾರು ಎಂಬ ಪ್ರಶ್ನೆಯನ್ನೇ ಅಪ್ರಸ್ತುತವಾಗಿಸುವಂತೆ ಹಿಂಸೆಯ ದಿನಚರಿ ಹಾಸುಹೊಕ್ಕಾಗಿಬಿಟ್ಟಿದೆ ಎಂಬುದು ದುರಂತ ವಾಸ್ತವ. ಉದಾಹರಣೆಗೆ, ವಾರದ ಹಿಂದೆ ಸಿಪಿಎಂ ನೇತಾರ ಪಿ. ಜಯರಾಜನ್ ಶರಣಾಗತಿ ಆಯಿತು. ಏಕೆಂದರೆ ಮನೋಜ್ ಹತ್ಯಾಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತು. ಕಣ್ಣೂರು ವಿಭಾಗದಲ್ಲಿ ಸಿಪಿಎಂನ ಮುಖಂಡತ್ವವಿದ್ದ ಜಯರಾಜನ್ ವಿರುದ್ಧ ಕಾನೂನು ಬಿಗಿಯಾಗುತ್ತಿರುವುದು ಎಡಪಕ್ಷಕ್ಕೆ ಭಾರಿ ಹೊಡೆತ.

ಮನೋಜ್ ಹಾಗೂ ಇನ್ನೊಬ್ಬ ಆರೆಸ್ಸೆಸ್ ಕಾರ್ಯಕರ್ತ ಪ್ರಮೋದ್ ಪ್ರಯಾಣಿಸುತ್ತಿದ್ದ ವೇಳೆ ಅವರ ವಾಹನಕ್ಕೆ ನಾಡಬಾಂಬ್ ಎಸೆಯಲಾಯಿತು. ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಮನೋಜ್ ಆಸ್ಪತ್ರೆಯ ದಾರಿಯಲ್ಲಿ ಹಾಗೂ ಪ್ರಮೋದ್ ಕೆಲದಿನಗಳ ನಂತರ ಆಸ್ಪತ್ರೆಯಲ್ಲಿ ತೀರಿಕೊಂಡರು. ಈ ಸಂಬಂಧವಾಗಿಯೇ ಜಯರಾಜನ್ ಬಂಧನವಾಗಿದ್ದು. ಇಷ್ಟನ್ನೇ ಓದಿಕೊಂಡರೆ ನೀವು ಒಂದು ಅಭಿಪ್ರಾಯಕ್ಕೆ ಬಂದುಬಿಡಬಹುದು.

ಆದರೆ ಇದು ಅನುರಾಗ್ ಕಶ್ಯಪ್ ನಿರ್ದೇಶನದ ‘ಗ್ಯಾಂಗ್ಸ್ ಆಫ್ ವಾಸೇರ್ಪುರ’ ಚಿತ್ರದ ದ್ವೇಷ ಕಥಾನಕವಿದ್ದಂತೆ. ಹೀರೋ- ವಿಲನ್ ಗಳೆಲ್ಲ ಕಲಸಿಹೋಗಿದ್ದಾರೆ. 1999ರ ಆಗಸ್ಟ್ ನ ಓಣಂ ಹಬ್ಬದ ಸಂದರ್ಭದಲ್ಲಿ ಇದೇ ಜಯರಾಜನ್ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಆ ಪ್ರಕರಣದಲ್ಲಿ ಮನೋಜ್ ಹತ್ತನೇ ಆರೋಪಿಯಾಗಿ 10 ವರ್ಷಗಳ ಕಠಿಣ ಸಜೆಗೆ ಒಳಗಾಗಿದ್ದರು. ಕೆಳ ನ್ಯಾಯಾಲಯದ ಈ ತೀರ್ಪನ್ನು ಮೇಲಿನ ಹಂತದಲ್ಲಿ ಪ್ರಶ್ನಿಸಿ ತಡೆಯಾಜ್ಞೆ ಸಿಕ್ಕಿದ್ದರಿಂದ ಮನೋಜ್ ಗೆ ಸ್ವಾತಂತ್ರ್ಯ ಲಭಿಸಿತ್ತು. 2014ರ ಅಂಥದೇ ಓಣಂ ಹಬ್ಬದ ದಿನ ಮನೋಜ್ ಮತ್ತು ಸಹಚರನ ಹತ್ಯೆಯಾಯಿತು.

‘ಗ್ಯಾಂಗ್ಸ್ ಆಫ್ ಕಣ್ಣೂರ್’ ನ ರಕ್ತಚರಿತೆ ನಿಲ್ಲುವ ಸೂಚನೆಗಳ್ಯಾವವೂ ಕಾಣುತ್ತಿಲ್ಲ. ಆರೆಸ್ಸೆಸ್ ಹಲವು ಬಾರಿ ಶಾಂತಿ ಮಾತುಕತೆ ನಡೆಸಿದೆ. ನಮಗೆ ಹಿಂಸೆ ಬೇಡ ಅಂತ ಉಭಯ ಪಾಳೆಯದವರೂ ಆಗಾಗ ಹೇಳಿದ್ದಾರೆ. ಆದರೆ, ಇನ್ನೇನು ಸ್ವಲ್ಪ ಶಾಂತವಾಯಿತು ಎಂದುಕೊಳ್ಳುವಾಗಲೇ ಕಣ್ಣೂರಿನಲ್ಲಿ ಎಲ್ಲೋ ಒಂದು ಕಿಡಿ ಹೊತ್ತಿಕೊಳ್ಳುತ್ತದೆ, ಸುಜಿತ್ ರಂಥ ಕಾರ್ಯಕರ್ತರ ಮನೆಯಲ್ಲಿ ರಕ್ತಸಿಂಚನವಾಗುತ್ತದೆ. ಮತ್ತೆ ಭಾವನೆಗಳು ಹರಿದಾಡುತ್ತವೆ. ಇಬ್ಬರೂ ಹಿಂದಡಿ ಇಡಲಾರದ ಹಂತಕ್ಕೆ ಹೋಗಿಯಾಗಿದೆ. ಸೈದ್ಧಾಂತಿಕ ಸಂಘರ್ಷ ಎಂಬಮಟ್ಟಕ್ಕೆ ಇದು ಉಳಿದೇ ಇಲ್ಲ. ಏಕೆಂದರೆ, ಸಿಪಿಎಂ ನಲ್ಲಿ ಮಚ್ಚು-ಕತ್ತಿ ಹಿಡಿದಿದ್ದವರೇ ಕೇಸರಿ ಪಡೆಗೂ ಸ್ಥಾನ ಬದಲಾಯಿಸಿದ್ದಾರೆ. ಇಲ್ಲಿನವರು ಅಲ್ಲಿಗೆ- ಅಲ್ಲಿನವರು ಇಲ್ಲಿಗೆ ಎಲ್ಲವೂ ಮಿಕ್ಸಪ್ ಆಗಿ ಯುದ್ಧದಲ್ಲಿ ಎಲ್ಲವೂ ಸರಿ ಎಂಬ ಸ್ಥಿತಿಯಾಗಿದೆ.

ಕೆಂಪಾದವೋ ಎಲ್ಲ ಕೆಂಪಾದವೋ… ಅಷ್ಟರಮಟ್ಟಿಗೆ ಕಮ್ಯುನಿಸ್ಟರು ಕೇರಳದಲ್ಲಿ ತಮ್ಮ ಸಿದ್ಧಾಂತವೇ ಗೆಲ್ಲುತ್ತಿದೆ ಅಂದುಕೊಳ್ಳಲಡ್ಡಿಯಿಲ್ಲ!

Leave a Reply