ಕನ್ಹಯ್ಯಾ ಜಾಮೀನು ಅರ್ಜಿ ವಿಚಾರಣೆ ತಿರಸ್ಕರಿಸಿದ ಸುಪ್ರೀಂ

ಡಿಜಿಟಲ್ ಕನ್ನಡ ಟೀಮ್

ಪ್ರತಿಭಟನಾ ಮೆರವಣಿಗೆಗಳ ಒತ್ತಡಕ್ಕೆ ಮಣಿದು ಕಾನೂನು ಪ್ರಕ್ರಿಯೆಯನ್ನು ಬದಲಿಸಲು ತಾನು ತಯಾರಿಲ್ಲ, ಅದೇ ವೇಳೆ ಆರೋಪಿಗೆ ಭದ್ರತೆ- ನ್ಯಾಯದಾನ ವ್ಯವಸ್ಥೆ ಸೂಕ್ತವಾಗಿರಬೇಕೆಂಬ ಬಗ್ಗೆ ಕಾಳಜಿ ಇದೆ- ಶುಕ್ರವಾರ ಸುಪ್ರೀಂಕೋರ್ಟ್ ಕನ್ಹಯ್ಯಾ ಪ್ರಕರಣದಲ್ಲಿನೀಡಿರುವ ನಿರ್ದೇಶನವನ್ನು ಹೀಗೆ ವ್ಯಾಖ್ಯಾನಿಸಬಹುದು.

ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಕನ್ಹಯ್ಯಾ ಪರ ವಕೀಲರಾದ ರಾಜು ರಾಮಚಂದ್ರನ್ ಪಟಿಯಾಲಾ ಹೌಸ್ ಕೋರ್ಟ್ ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದರು. ಈ ವೇಳೆ ಸುಪ್ರೀಂ ಕೋರ್ಟ್, ಮೊದಲು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜು ರಾಮಚಂದ್ರನ್, ‘ದೆಹಲಿ ಹೈಕೋರ್ಟ್ ನಲ್ಲೂ ಪಟಿಯಾಲಾ ಕೋರ್ಟ್ ನಂತೆ ಬಿಗುವಿನ ವಾತಾವರಣವಿದೆ. ವಿದ್ಯಾರ್ಥಿ ಕನ್ಹಯ್ಯಾ ಮೇಲೆ ಹಲ್ಲೆ ನಡೆಸಲು ವಕೀಲರು ಮುಂದಾಗಿದ್ದಾರೆ. ಪ್ರತಿಭಟನೆಯಲ್ಲಿ ಪಟಿಯಾಲ ಹೌಸ್ ನ್ಯಾಯಾಲಯದ ವಕೀಲರ ಜತೆ ದೆಹಲಿ ಹೈ ಕೋರ್ಟ್ ವಕೀಲರು ಭಾಗಿಯಾಗಿದ್ದರು. ಕನ್ಹಯ್ಯಾ ಅವರಿಗೆ ಜೀವ ಭಯವಿದೆ. ಈ ಕಾರಣದಿಂದ ನೇರವಾಗಿ ಇಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದೇವೆ. ಜೈಲಿನಲ್ಲಿದ್ದರೆ, ಸಹ ಖೈದಿಗಳಿಂದ ಹಲ್ಲೆಗೊಳಗಾಗುವ ಸಾಧ್ಯತೆ ಇದೆ’ ಎಂದರು.

ಯಾವುದೇ ಪ್ರಕರಣದ ವಿಚಾರಣೆಯಾಗಲಿ, ಅದು ಹಂತ ಹಂತವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು. ಏಕಾಏಕಿ ನೇರವಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಕನ್ಹಯ್ಯಾ ಅವರಿಗೆ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನಾಕಾರರಿಂದ ಹಲ್ಲೆಯಾಗುವ ಭೀತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೆಲವು ಸೂಚನೆಗಳನ್ನು ನೀಡಿದೆ. ಕನ್ಹಯ್ಯಾ ಕುಮಾರ್ ಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಹೈಕೋರ್ಟ್ ಆವರಣದಲ್ಲಿ ಪತ್ರಕರ್ತರ ಪ್ರವೇಶದ ಮೇಲೆ ನಿಯಂತ್ರಣವಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕನ್ಹಯ್ಯಾ ಪರ ವಕೀಲರು ಶುಕ್ರವಾರ ಮಧ್ಯಾಹ್ನ 2 ಗಂಟೆ ಒಳಗೆ ದೆಹಲಿ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

Leave a Reply