ಟ್ವಿಟರ್ ದೂರುಗಳ ಸ್ಪಂದನೆಗೆಂದೇ ತಂಡ, ಸುರೇಶ್ ಪ್ರಭು ಮಿಡಿತದ ಮಾರ್ಗ ಬೇರೆ ಇಲಾಖೆಗಳಿಗೂ ಆದೀತೇ ಮಾದರಿ?

ಡಿಜಿಟಲ್ ಕನ್ನಡ ಟೀಮ್

ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಕಾರಣವೆಂದರೆ ಅದೇ ಸಾಮಾಜಿಕ ಮಾಧ್ಯಮವನ್ನು ಉಪಯೋಗಿಸಿಕೊಂಡು ಅವರು ಹಾಗೂ ಅವರ ಇಲಾಖೆ ಪ್ರತಿಸ್ಪಂದಿಸುವ ರೀತಿ. ‘ನನ್ನ ತಂದೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ. ಅವರು ಅಸ್ವಸ್ಥರು. ಮುಂದಿನ ನಿಲ್ದಾಣದಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಿಲಾಗುವುದೇ’ ಅಂತೊಬ್ಬರು ಕೆಲ ತಿಂಗಳ ಹಿಂದೆ ಟ್ವೀಟ್ ಮೂಲಕ ಸಚಿವರನ್ನು ಕೇಳಿಕೊಂಡಿದ್ದರು. ಏನಾಶ್ಚರ್ಯ? ನಿಗದಿತ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿ ಇವರಿರುವ ಬೋಗಿ ಮುಂದೆ ವೀಲ್ ಚೇರ್ ಹಿಡಿದು ನಿಂತಿದ್ದರು!

ರೈಲ್ವೆಯಲ್ಲಿ ಇಂಥದೊಂದು ಸಂವೇದನೆ ಹುಟ್ಟುಹಾಕಿದ್ದಾರೆ ಸುರೇಶ್ ಪ್ರಭು. ಇದು ಅವರೊಬ್ಬರಿಂದಲೇ ಅಂತಲ್ಲ. ಟ್ವಿಟರ್ ನಲ್ಲಿ ದೂರು- ಬೇಡಿಕೆಗಳು ಬಂದಿದ್ದಕ್ಕೆ ತ್ವರಿತ ಪ್ರತಿಸ್ಪಂದನೆಗೆ ಅನುವಾಗುವಂತೆ ಅಧಿಕಾರಿಗಳ ತಂಡವೇ ಕಾರ್ಯನಿರ್ವಹಿಸುತ್ತಿದೆ ಅಂತ ದೈನಿಕ್ ಭಾಸ್ಕರ್ ಪತ್ರಿಕೆಯ ವರದಿ ಸಾರಿದೆ.

ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮೂರು ಅಧಿಕಾರಿಗಳ ಜವಾಬ್ದಾರಿ ಮಹತ್ವದ್ದಾಗಿದೆ. ರೈಲ್ವೇ ಇಲಾಖೆಯ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ 454ನೇ ಸಂಖ್ಯೆಯ ಕೊಠಡಿಯಲ್ಲಿ ಈ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ, ಅದಕ್ಕೆ ಪರಿಹಾರ ಹುಡುಕುವ ಪ್ರಕ್ರಿಯೆ ಸಾಗುತ್ತದೆ. ಟ್ವಿಟರ್ ಕಂಟ್ರೋಲ್ ರೂಮ್ ನ ಆಧಾರ ಸ್ತಂಭ ಈ ಮೂವರು.

  • ಅನಂತ್ ಸ್ವರೂಪ್ (ಸಾರ್ವಜನಿಕ ದೂರಿನ ಕಾರ್ಯನಿರ್ವಾಹಕ ನಿರ್ದೇಶಕರು), ಎಲ್ಲ ಕಂಟ್ರೋಲ್ ರೂಮ್ ಗಳ ಪರಿಶೀಲನೆ ಜವಾಬ್ದಾರಿ ಇವರದಾಗಿರುತ್ತದೆ.
  • ಹಸೀನ್ ಯಾದವ್ (ವಿಶೇಷ ಕರ್ತವ್ಯ ಅಧಿಕಾರಿ), ಇವರು ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ವೇದ್ ಪ್ರಕಾಶ್ (ಮಾಹಿತಿ ಮತ್ತು ಪ್ರಚಾರ ನಿರ್ದೇಶಕರು) ರೈಲ್ವೇ ಸೋಷಿಯಲ್ ಮಿಡಿಯಾದ ಮುಖ್ಯಸ್ಥರೂ ಆಗಿರುತ್ತಾರೆ.

ಈ ರೈಲ್ವೇ ಕಂಟ್ರೋಲ್ ರೂಮ್ ದಿನಕ್ಕೆ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ, ನಂತರ 2ರಿಂದ ರಾತ್ರಿ 10ರ ವರೆಗೆ, ರಾತ್ರಿ 10ರಿಂದ ಬೆಳಗ್ಗೆ 4ರವರೆಗೆ ಈ ಪಾಳಿಗಳು ನಡೆಯುತ್ತವೆ. ಈ ಮೂವರು ಇತರೆ ರೈಲ್ವೇ ಇಲಾಖೆ ಸಿಬ್ಬಂದಿಗಳ ಜತೆ ಈ ಕಾರ್ಯ ನಿಭಾಯಿಸುತ್ತಿದ್ದಾರೆ. ಈ ತಂಡದ ಮೇಲ್ವಿಚಾರಣೆ ರೈಲ್ವೇ ಸಚಿವರಾದ ಸುರೇಶ್ ಪ್ರಭು ಅವರದ್ದು. ನಿತ್ಯ ದಾಖಲಾಗುವ ದೂರು ಹಾಗೂ ಅದಕ್ಕೆ ನೀಡಿದ ಪರಿಹಾರದ ಬಗ್ಗೆ ಈ ತಂಡ ಸಚಿವರಿಗೆ ವರದಿ ನೀಡಬೇಕು.

ಈ ರೀತಿಯಾಗಿ ಟ್ವಿಟರ್ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವ ಹಲವು ಪ್ರಕರಣಗಳಿವೆ ಆ ಪೈಕಿ ಪ್ರಮುಖವಾಗಿರುವುವು ಹೀಗಿವೆ.

– ಡಿ.22ರಂದು ಸೌರವ್ ಭಟ್ಟಾಚಾರ್ಜಿ ಎಂಬುವರು, ತಮ್ಮ ತಾಯಿ ರೈಲಿನಲ್ಲಿ ಪ್ರಯಾಮ ಮಾಡುವಾಗ ಹೆಚ್ಚು ಚಳಿ ಇದ್ದರೂ ಸರಿಯಾದ ಹೊದಿಕೆ ನೀಡಿಲ್ಲ ಎಂದು ತನ್ನ ತಾಯಿ ಪ್ರಯಾಣಿಸುತ್ತಿದ್ದ ಕೋಚ್ ಸಂಖ್ಯೆ ಮತ್ತು ಟಿಕೆಟ್ ಸಂಖ್ಯೆಯನ್ನು ಟ್ವೀಟ್ ಮಾಡಿದ್ದರು. ತಕ್ಷಣವೇ ಡಿವಿಷನ್ ರೈಲ್ವೇ ಮ್ಯಾನೇಜರ್ ‘ರೈಲಿನಲ್ಲಿರುವ ಟಿಟಿಇ ಜತೆ ಮಾತನಾಡಿದ್ದು, ಅವರಿಗೆ ಹೊದಿಕೆ ನೀಡಲು ತಿಳಿಸಿದ್ದೇನೆ’ ಎಂದು ಪ್ರತಿಕ್ರಿಯೆ ನೀಡಿದರು. ನಂತರ ‘ಅವರಿಗೆ ಹೊದಿಕೆ ನೀಡಲಾಗಿದೆ’ ಎಂದು ಸಮಸ್ಯೆ ಬಗೆಹರಿಸಿರುವ ಬಗ್ಗೆ ಮತ್ತೆ ಟ್ವೀಟ್ ಮೂಲಕ ಮಾಹಿತಿ ನೀಡಿದರು.

– ಮತ್ತೊಂದು ಪ್ರಕರಣದಲ್ಲಿ ದೆಹಲಿಯಿಂದ ಅಜ್ಮಿರ್ ಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅನಾರೋಗ್ಯಕ್ಕೆ ಸಿಲುಕಿದ ಬಗ್ಗೆ ಅಂಕಿತ್ ಎಂಬಾತ ಟ್ವೀಟ್ ಮಾಡಿದ. ಇದಾದ ಅರ್ಧ ತಾಸಿನಲ್ಲಿ ವೈದ್ಯರು ಜೈಪುರ ರೈಲ್ವೇ ನಿಲ್ದಾಣದಲ್ಲಿ ಚಿಕಿತ್ಸೆ ನೀಡಿದರು.

– ಕುಂಭಾ ಎಕ್ಸ್ ಪ್ರೆಸ್ ರೈಲಿನಲ್ಲಿ 27 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲಾ ಪ್ರವಾಸದಿಂದ ಪ್ರಯಾಣಿಸುತ್ತಿದ್ದ ವೇಳೆ ಕಾರಣಾಂತರದಿಂದ ರೈಲಿನ ಮಾರ್ಗ ಬದಲಾಯಿತು. ಹಾಗಾಗಿ ಇವರಿಗೆ ಊಟ ಹಾಗೂ ನೀರಿನ ಸಮಸ್ಯೆ ಎದುರಾಯಿತು. ತಕ್ಷಣವೇ ರೈಲ್ವೇ ಸಚಿವರು ಮತ್ತು ಇಲಾಖೆಗೆ ರಾತ್ರಿ 7.30ರ ಸುಮಾರಿಗೆ ಟ್ವೀಟ್ ಮಾಡಿದರು. ಪರಿಣಾಮವಾಗಿ ಡಿವಿಷನಲ್ ಮ್ಯಾನೇಜರ್ ಗೆ ಸೂಚನೆ ಹೋಗಿ ಅವರಿಗೆ ವಾರಣಾಸಿಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

Leave a Reply