ಮಗುವಿನೊಂದಿಗೆ ಮಾತಾಡಿದ ಮಾತ್ರಕ್ಕೆ ಭಾಷೆ ಕಲಿಸೋಕಾಗುತ್ತಾ?

author-shamaಮಗುವೊಂದು ಒಡಲಲ್ಲಿ ಚಿಗುರಿದಾಕ್ಷಣ ಅದರ ದನಿ ಕೇಳುವ ಕಾತುರ. ಕಂದನ ಮೊದಲ ಕರೆಯ ಮಾಧುರ್ಯಕ್ಕೆ ಹೋಲಿಕೆಯಿಲ್ಲ. ಅವತ್ತಿನಿಂದಲೇ ಮಗುವಿಗೆ ಭಾಷೆ ಕಲಿಸುವ ಪ್ರಕ್ರಿಯೆ ಆರಂಭ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾಷೆಯ ಸಮರ್ಪಕ ಬಳಕೆ ಯಶಸ್ಸಿಗೆ ಬಹುಮುಖ್ಯ ಮೆಟ್ಟಿಲಾಗಿದೆ. ಸಂಶೋಧಕರು ಹೇಳುವಂತೆ ಮಗುವಿನ ಮೆದುಳಿನ ಬೆಳವಣಿಗೆ ತೀವ್ರಗತಿಯಲ್ಲಿದ್ದು ಗ್ರಹಣ ಸಾಮರ್ಥ್ಯ ತುಂಬ ಚುರುಕಾಗಿರುವ ಮೂರು ವರ್ಷದೊಳಗೆ ಗರಿಷ್ಠ ಮಟ್ಟದಲ್ಲಿ ಭಾಷೆಯ ಕಲಿಕೆ ಸಾಧ್ಯ. ಈ ಹಂತದಲ್ಲಿ ತಾಯ್ತಂದೆಯರ ಪಾತ್ರ ಮಹತ್ತರವಾದುದು.

ಪ್ರತಿ ಮಗುವೂ ಅನನ್ಯವಾಗಿದ್ದು ಮಕ್ಕಳ ಬೆಳವಣಿಗೆಯ ಗತಿಯಲ್ಲಿ ಭಿನ್ನತೆಯಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಬೆಳವಣಿಗೆಗೆ ಅನುಸಾರವಾಗಿ ಭಾಷೆ ಕಲಿಸುವುದು ಬಹಳ ಅಗತ್ಯ. ಮಗು ಇಷ್ಟಪಟ್ಟು ಕಲಿಯುವಂತಾಗಬೇಕೇ ಹೊರತು ಕಷ್ಟಪಟ್ಟು ಕಲಿಯುವಂತಾಗಬಾರದು. ಕಲಿಸುವ ಹುಮ್ಮಸ್ಸಿನಲ್ಲಿ ಒಟ್ಟಾರೆಯಾಗಿ ಎಲ್ಲವನ್ನು ಮಗುವಿನ ತಲೆಗೆ ತುರುಕುವುದು ಸಾಧುವೂ ಅಲ್ಲ; ಸಾಧ್ಯವೂ ಇಲ್ಲ. ಅದಕ್ಕಾಗಿಯೇ ತಜ್ಞರು ಪರಿಣಾಮಕಾರಿಯಾದ ಒಂದಷ್ಟು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಇವುಗಳ ಅಳವಡಿಕೆಯಿಂದ ಮಗುವಿನಲ್ಲಿ ಭಾಷೆಯೆಡೆಗೆ ಪ್ರೀತಿ ಜತೆಗೆ ಬಾಷಾ ಕೌಶಲ್ಯವನ್ನೂ ಬೆಳೆಸಬಹುದು.

 • ಆಲಿಸುವ ಕಲೆ ಬೆಳೆಸಿ : ಕೇಳುವಿಕೆ ಕಲಿಕೆಗೆ ಮೊದಲ ಮೆಟ್ಟಿಲು. ಮೆಲುದನಿಯ ಸಂಗೀತ ನಿರಂತರ ಮಗುವಿನ ಸುತ್ತ ಕೇಳುತ್ತಿದ್ದರೆ ಭಾಷಾ ಕಲಿಕೆಯ ಸಾಮರ್ಥ್ಯ ವೃದ್ಧಿಸುತ್ತದೆ.
 • ಹುಟ್ಟಿದ ದಿನದಿಂದಲೇ ಮಾತು ಆರಂಭಿಸಿ: ಮಗುವಿಗೆ ಭಾಷೆ ಕಲಿಕೆಯ ಏಕೈಕ ಮಾರ್ಗ ತನ್ನ ಸುತ್ತಲಿನ ಮಾತುಗಳನ್ನು ಕೇಳಿ ಕಲಿಯುವುದು. ಹಾಲೂಡಿಸುವಾಗ, ಸ್ನಾನ, ಆಟ ಎಲ್ಲಾ ಸಮಯಗಳಲ್ಲೂ ಮಾತಾಡುವ ಮೂಲಕ ಮಗುವಿಗೆ ಹೆಚ್ಚು ಉತ್ತೇಜನ ಸಿಗುತ್ತದೆ.
 • ಪ್ಯಾಸಿಫೈಯರ್ ಬಳಕೆ ಬೇಡ: ಯಾವಾಗಲೂ ಪ್ಯಾಸಿಫೈಯರ್ ಬಳಸುವುದರಿಂದ ಮಕ್ಕಳ ಸ್ನಾಯು ಬೆಳವಣಿಗೆ ಕುಂಠಿತವಾಗಿ ಮಾತು ನಿಧಾನವಾಗಬಹುದು.
 • ವಾತಾವರಣದಲ್ಲಿ ವೈವಿಧ್ಯತೆ: ಇದರಿಂದ ಮಗು ಬಹಳಷ್ಟು ಕಲಿಕೆಗೆ ಪ್ರಯತ್ನಿಸುತ್ತದೆ. ಸುತ್ತಲಿನ ಬೇರೆ ಬೇರೆ ವಸ್ತುಗಳ ಗುರುತಿಸುವಿಕೆ ಮತ್ತು ಹೆಸರಿಸುವಿಕೆ ಮಗುವಿಗೆ ಹೊಸ ಶಬ್ದಗಳನ್ನು ಕಲಿಸುತ್ತದೆ.
 • ಪ್ರತ್ಯಕ್ಷದರ್ಶಿ ಕಲಿಕೆಯಿರಲಿ: ಮೊದಲಿಗೆ ಮಗುವಿಗೆ ನೋಡಲು, ಮುಟ್ಟಲು ಸಿಗುವ ವಸ್ತು, ವಿಷಯಗಳ ಬಗ್ಗೆ ಮಾತನಾಡಿ. ಕಾಣದವುಗಳನ್ನು ಊಹಿಸಿಕೊಳ್ಳುವ ಸಾಮರ್ಥ್ಯ ಪುಟ್ಟ ಮಗುವಿಗೆ ಬೆಳೆದಿರುವುದಿಲ್ಲ.
 • ನಿಮ್ಮ ಭಾಷೆಯ ಸ್ಪಷ್ಟತೆ: ಮಗುವಿನ ಜತೆ ಮಾತನಾಡುವಾಗ ವ್ಯಾಕರಣ ಸರಿಯಾಗಿ ಮತ್ತು ಭಾಷೆ ಸ್ಪಷ್ಟವಾಗಿರಲಿ.
 • ಕೆಲಸಗಳ ಜತೆ ನಿರೂಪಣೆಯಿರಲಿ: ಮಗುವಿನ ಜತೆ ಏನೇ ಮಾಡುತ್ತಿದ್ದರೂ ಅದನ್ನು ವಿವರಿಸುತ್ತಿರಿ. ಉದಾ: ಊಟದ ಸಮಯದಲ್ಲಿ ಬಳಸಿದ ತರಕಾರಿಗಳು, ಅವುಗಳ ಬಣ್ಣ, ರುಚಿ, ಪರಿಮಳಗಳ ಬಗ್ಗೆ ಮಾತನಾಡಿ. ಮಗುವಿಗೆ ಆಸಕ್ತಿಯೂ ಹುಟ್ಟುತ್ತದೆ ಜತೆಗೆ ಬಹಳಷ್ಟು ಹೊಸ ಪದಗಳು ಪರಿಚಯವಾಗುತ್ತದೆ.
 • ಪ್ರಶ್ನೆಗಳನ್ನು ಕಡಿಮೆ ಮಾಡಿ: ಮಗುವಿನ ಕಲಿಕೆಯನ್ನು ಅಳೆಯಲು ಪದೇ ಪದೇ ಪ್ರಶ್ನೆಗಳನ್ನು ಕೇಳುವುದರಿಂದ ಮಗುವಿನ ಆಸಕ್ತಿ ಕುಂದಬಹುದು. ಬಹಳಷ್ಟು ಸಲ ಮಗು ತನಗೆ ಗೊತ್ತಿದ್ದರೂ ಹೇಳುವುದಿಲ್ಲ; ಬದಲಾಗಿ ಸಂದರ್ಭ ಬಂದಾಗ ಅದನ್ನು ಅಳವಡಿಸಿಕೊಳ್ಳುತ್ತದೆ.
 • ಹೊರಜಗತ್ತನ್ನು ತೆರೆದಿಡಿ: ತಾಯ್ತಂದೆಯರಿಗೆ ಹಳೆಯದೂ ನೀರಸವೂ ಎನಿಸುವ ಜಗತ್ತು ಪುಟ್ಟ ಕಂದನಿಗೆ ಬೆರಗು ಮತ್ತು ಹೊಸದು. ಪ್ರತಿದಿನದ ವಾಕಿಂಗ್, ಶಾಪಿಂಗ್ ಮುಂತಾದುವುಗಳು ಭಾಷೆಯ ಬೇರೆ ಬೇರೆ ರೀತಿಯ ಬಳಕೆಗೆ ಸಹಕಾರಿ. ಸಾಮಾಜಿಕ ಶಿಷ್ಟಾಚಾರಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯನ್ನು ಮಗು ಕಲಿಯುತ್ತದೆ.
 • ಸಾಧ್ಯವಾದಷ್ಟೂ ಮಗುವಿಗೆ ಓದಿ: ಮಕ್ಕಳಿಗೆ ಓದು ನೀಡುವಷ್ಟನ್ನು ಇನ್ಯಾವುದೂ ನೀಡಲಾರದು. ಪ್ರತಿದಿನವೂ ಒಂದಷ್ಟು ಸಮಯವನ್ನು ಓದಿಗಾಗಿ ಮೀಸಲಿಟ್ಟು ಮಕ್ಕಳಿಗೆ ಕಥೆಯನ್ನೋ, ದಿನ ಪತ್ರಿಕೆಯನ್ನೋ ಓದಿ ಹೇಳಿ. (ಇಷ್ಟು ಚಿಕ್ಕ ಮಗುವಿಗೆ ಏನು ಅರ್ಥವಾದೀತು ಎಂಬ ಯೋಚನೆ ಬೇಡ)
 • ದೇಹ ಬಾಷೆ (ಆಂಗಿಕ ಭಾಷೆ): ಮಾತಾಡುವ ಸಂದರ್ಭದಲ್ಲಿ ಮತ್ತು ಭಾವನೆಗಳನ್ನು ಇತರರಿಗೆ ತಲುಪಿಸುವಲ್ಲಿ ದೇಹ ಮತ್ತು ಆಂಗಿಕ ಭಾಷೆ ಬಹಳ ಕೆಲಸ ಮಾಡುತ್ತದೆ. ಇದರ ಬಗ್ಗೆಯೂ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ತಿಳಿಸಿ.
 • ನಿಮ್ಮ ಭಾಷೆ ಮಾದರಿಯಾಗಿರಲಿ: ಮಕ್ಕಳು ಹೇಳಿದ್ದನ್ನು ಕೇಳದೇ ಇದ್ದರೂ ದೊಡ್ಡವರು ಮಾಡಿದ್ದನ್ನು ಮಾಡುತ್ತಾರೆ. ಯಾವತ್ತೂ ನೀವು ಬಳಸುವ ಭಾಷೆ ಸುಸಂಸ್ಕೃತವಾಗಿಯೂ ಸುಂದರವಾಗಿಯೂ ಇರಲಿ.
 • ಎಲ್ಲವನ್ನೂ ಹೆಸರಿಸಿ ಮತ್ತು ವಿವರಿಸಿ: ಹೊಸದೇನನ್ನೇ ಕಂಡರೂ ಅದನ್ನು ಹೆಸರಿಸಿ ಮತ್ತು ಸರಿಯಾಗಿ ವಿವರಿಸಿ. ಉದಾ : ಹೊಸ ಹೂವೊಂದನ್ನು ಕಂಡಾಗ ಅದರ ಸರಿಯಾದ ಹೆಸರನ್ನು ಹೇಳಿ ಅದರ ಘಮ, ಬಣ್ಣಗಳನ್ನು ವಿವರಿಸಿ. ಸಾಧ್ಯವಾದರೆ ಮುಟ್ಟಲು ಅವಕಾಶ ಕೊಡಿ. ಕಲಿಕೆ ಗಟ್ಟಿಯಾಗುತ್ತದೆ.
 • ಕಲ್ಪನಾ ವಿಹಾರಕ್ಕೆ ತಡೆ ಬೇಡ: ಬೆಳವಣಿಗೆಯ ಒಂದು ಹಂತದಲ್ಲಿ ಮಗುವಿನ ಕಲ್ಪನಾ ಲೋಕ ವಿಸ್ತಾರವಾಗುತ್ತದೆ. ತನ್ನದೇ ಕಲ್ಪನೆಯ ಜಗತ್ತೊಂದನ್ನು ಸೃಷ್ಟಿಸಿಕೊಂಡು ಮಗು ಮಾತಾಡುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಅದಕ್ಕೆ ಅವಕಾಶ ನೀಡಿ. “ಅದೇನದು ಸುಮ್ನೇ ನಿನ್ನಷ್ಟಕ್ಕೆ ನೀನು ಮಾತಾಡ್ತೀಯ ? ಹಾಗ್ಮಾಡ್ಬೇಡ” ಎಂಬಂಥ ತಡೆ ಬೇಡ. ಭಾಷೆಯ ವಿಸ್ತರಣೆಗೆ ಅದರದೇ ಆದ ಕಲ್ಪನೆಗಳು ಸಹಾಯಕಾರಿ.
 • ಆಡು ಭಾಷೆ ಮತ್ತು ಬರಹಗಳ ಮಧ್ಯೆ ಸಂಬಂಧ ತಿಳಿಸಿ: ಆಡು ಭಾಷೆ ಮತ್ತು ಬರವಣಿಗೆಗಳ ನಡುವಿನ ಸಂಬಂಧ ಮತ್ತು ವ್ಯತ್ಯಾಸಗಳನ್ನು ವಿವರಿಸಿ. ಅವುಗಳಲ್ಲಿನ ಏಕತೆ ಮತ್ತು ಭಿನ್ನತೆಗಳ ಕಲಿಕೆ ಅವಶ್ಯಕ.
 • ಕಥೆ ಕಟ್ಟಲು ಹೇಳಿ : ಯಾವುದೋ ಒಂದು ಚಿತ್ರ ಅಥವಾ ಸನ್ನಿವೇಶವನ್ನು ಕೊಟ್ಟು ಅವರದೇ ಆದ ವಿವರಣೆಯನ್ನೋ ಕಥೆಯನ್ನೋ ಸೃಷ್ಟಿಸಲು ಹೇಳಿ. ಇದು ಭಾಷಾ ಕೌಶಲ್ಯಕ್ಕೆ ಬಹಳ ಸಹಕಾರಿ.
 • ಬಹುಭಾಷೆಗಳಿಗೆ ತೆರೆಯಿರಿ: ಹೆಚ್ಚು ಭಾಷೆಗಳನ್ನು ಕಲಿತಷ್ಟೂ ಜ್ಞಾನದ ಹಲವು ದಾರಿಗಳು ತೆರೆದಂತೆ. ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಲು ಅವಕಾಶ ಮಾಡಿಕೊಡಿ.

ಮಕ್ಕಳು ಕೇವಲ ನಮ್ಮ ಜೀನ್ಸ್^ಗಳ ಮುಂದುವರಿಕೆಯಲ್ಲ; ಅಥವಾ ವಂಶ ಬೆಳೆಸುವ ವಾಹಿನಿಗಳು ಮಾತ್ರವಲ್ಲ. ನಮ್ಮ ಕನಸು, ಸಂಸ್ಕಾರ ಮತ್ತು ಅಭಿರುಚಿಗಳ ಮುಂದುವರಿಕೆಯೂ ಹೌದು. “ಕುಲವ ನಾಲಿಗೆ ಹೇಳಿತು” ಎಂಬ ನಾಣ್ಣುಡಿಯಂತೆ ಮಕ್ಕಳು ಉಪಯೋಗಿಸುವ ಭಾಷೆ ಮನೆಯ ಸಂಸ್ಕೃತಿಯನ್ನು ಹೊರಜಗತ್ತಿಗೆ ಬಹು ಬೇಗ ಕೊಂಡೊಯ್ಯುತ್ತದೆ. ಎಳವೆಯಲ್ಲಿಯೇ ಒಳಿತನ್ನು ಹೇಳಿ ಕೊಡುವುದು ಮುಂದಿನ ದಿನಗಳ ಯಶಸ್ಸಿಗೆ ಅಡಿಗಲ್ಲು. ಭಾಷೆಯೆಂದರೆ ಬರಿ ಮಾತಲ್ಲ; ನಮ್ಮ ಸಂಸ್ಕಾರದ ಬಿಂಬ. ಭಾಷೆಯನ್ನು ಸಮರ್ಥವಾಗಿ ಬಳಸಬಲ್ಲವರು ಬದುಕಿನ ಹಲವು ಗೋಜಲುಗಳನ್ನು ಸುಲಭವಾಗಿ ಬಿಡಿಸಬಲ್ಲರು. ಎಲ್ಲರೊಳಗೊಂದಾಗಿ ಮನೆಯ ಹೆಮ್ಮೆಯಾಗುವರು. ನಮ್ಮ ಮಕ್ಕಳನ್ನು ಹಾಗೇ ತಯಾರು ಮಾಡೋಣ.

1 COMMENT

 1. ಲೇಖನ ಚೆನ್ನಾಗಿದೆ. ಬಹುಭಾಷೆಗಳ ಕಲಿಕೆ ಉತ್ತಮ ಎಂಬ ಬಗ್ಗೆ ಎರಡು ಮಾತಿಲ್ಲ. ಆದರೆ ಮಕ್ಕಳ ಬೆಳವಣಿಗೆ ಹಂತದಲ್ಲೇ ಬಹುಭಾಷೆ ಎಂಬುದು ಗೊಜಲಾಗಬಹುದಲ್ಲವೇ ಅನಿಸಿತು.

Leave a Reply