ಇಂದು ಎರಡನೇ ಹಂತದ ಮತದಾನ
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟವನ್ನು ಪಣಕ್ಕೆ ಒಡ್ಡಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಎರಡನೇ ಹಂತದ ಚುನಾವಣೆ ಶನಿವಾರ ನಡೆಯಲಿದೆ. ಚುನಾವಣೆ ಮುಗಿಯುತ್ತಿದ್ದಂತೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಹೇಳಿರುವುದು ಸಚಿವರ ಎದೆಬಡಿತ ನಗಾರಿ ಮಾಡಿದೆ.
ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣ ಈ ಚುನಾವಣೆ ಮೇಲೆ ಬೀರಬಹುದಾದ ಪರಿಣಾಮ ಕೂಡ ಕುತೂಹಲಕ್ಕೆ ಕಾರಣವಾಗಿದೆ. ಈ ಹಂತದಲ್ಲಿ ರಾಜ್ಯದ ಹದಿನೈದು ಜಿಲ್ಲೆಗಳ 531 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಹಾಗೂ 1939 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಫೆಬ್ರವರಿ 23ರಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಮಂಡ್ಯ, ಚಾಮರಾಜ ನಗರ, ಉಡುಪಿ, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಈ ಹಂತದ ಮತದಾನ ಪ್ರಕ್ರಿಯೆಗೆ 17698 ಮತಗಟ್ಟೆಗಳನ್ನು ಸ್ಥಾಪಿಸಿದೆ. ಈ ಪೈಕಿ 3626 ಮತಗಟ್ಟೆಗಳನ್ನು ಸೂಕ್ಷ್ಮ
ಮತಗಟ್ಟೆಗಳೆಂದು, 4097 ಮತಗಟ್ಟೆಗಳನ್ನು ಅತಿ ಸೂಕ್ಷ್ಮವೆಂದು ಪರಿಗಣಿಸಿ ಅಗತ್ಯದ ಬಂದೋಬಸ್ತ್ ಕಲ್ಪಿಸಿದೆ. ಅದೇ ರೀತಿ ಒಂದು ಲಕ್ಷಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಒಂದು ಕೋಟಿ ನಲವತ್ತೆರಡು ಲಕ್ಷಕ್ಕೂ ಹೆಚ್ಚು ಮಂದಿ ಮತ ಚಲಾವಣೆ ಮಾಡಲಿದ್ದಾರೆ.
ಸಿಎಂ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು
ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣದ ಚೆಂಡು ಜಾರಿ ನಿರ್ದೇಶನಾಲಯ (ಇಡಿ) ಅಂಗಳಕ್ಕೆ ಬಿದ್ದಿದೆ. ಈ ವಾಚ್ ಸಿದ್ದರಾಮಯ್ಯ ಅವರಿಗೆ ಹೇಗೆ ಬಂತು ? ಅದನ್ನು ಉಡುಗೊರೆಯಾಗಿ ನೀಡಿದವರಾರು ? ಈ ದುಬಾರಿ ವಾಚ್ ಗೆ ಸುಂಕ ಕಟ್ಟಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಫೆ.17ರಂದು ವಕೀಲರಾದ ನಟರಾಜ್ ಶರ್ಮಾ ಇಡಿಗೆ ದೂರು ನೀಡಿದ್ದರು.
ಸುಪ್ರೀಂಗೆ ಅಫಿಡವಿಟ್ ಸಲ್ಲಿಸಲು ಬಿಸಿಸಿಐ ನಿರ್ಧಾರ
ನ್ಯಾಯಮೂರ್ತಿ ಆರ್.ಎಂ.ಲೋಧಾ ಸಮಿತಿಯ ಶಿಫಾರಸ್ಸಿನ ಅಳವಡಿಕೆಗೆ ಸಾಕಷ್ಟು ತೊಂದರೆಗಳಿರುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಸುಧಾರಣೆಗೆ ಲೋಧಾ ಸಮಿತಿ ಸೂಚಿಸಿದ್ದ ಶಿಫಾರಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಲು ಮಾ.3 ರವರೆಗೆ ಗಡವು ನೀಡಲಾಗಿತ್ತು. ಹಾಗಾಗಿ ಶುಕ್ರವಾರ ಮುಂಬೈನಲ್ಲಿ ವಿಶೇಷ ಸಭೆ ಸೇರಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿತು.
ಮಂಡಳಿಯ ಸಿಇಒ ಮತ್ತು ಸಿಎಫ್ಒ ಆಯ್ಕೆಗೆ ಸಂಬಂಧಿಸಿದಂತೆ ಸಮಿತಿ ನೀಡಿದ್ದ ಶಿಫಾರಸ್ಸನ್ನು ಅಳವಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಇನ್ನು ಮಂಡಳಿಯಲ್ಲಿ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳಿರಬಾರದು, ಇನ್ನು 70 ವರ್ಷ ಮೇಲ್ಪಟ್ಟವರು ಆಡಳಿತ ಮಂಡಳಿಯಲ್ಲಿರಬಾರದು, ಬಿಸಿಸಿಐ ಚುನಾವಣೆಯಲ್ಲಿ ಒಂದು ರಾಜ್ಯಕ್ಕೆ ಒಂದು ಮತದಂತಹ ಪ್ರಮುಕ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕಷ್ಟ ಎಂದು ಬಿಸಿಸಿಐ ಸುಪ್ರೀಂ ಕೋರ್ಟ್ ಗೆ ತಿಳಿಸಲು ಮುಂದಾಗಿದೆ. ಅಲ್ಲದೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತರೆ ಕ್ರೀಡೆಗಳ ಪಂದ್ಯ ಆಯೋಜನೆಗೆ ಅವಕಾಶ ಮಾಡಿಕೊಡುವ ಶಿಫಾರಸ್ಸು ಸಹ ಅನುಷ್ಠಾನಕ್ಕೆ ಬಹಳ ಕಷ್ಟ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಛತ್ತೀಸಗಡಕ್ಕೆ ಬಿಸಿಸಿಐನ ಪೂರ್ಣ ಸದಸ್ಯತ್ವ ನೀಡಲಾಗಿದ್ದು, ಮುಂದಿನ ರಣಜಿ ಋತುವಿನಿಂದ ಈ ತಂಡ ಭಾಗವಹಿಸಬಹುದಾಗಿದೆ. ಆದಿತ್ಯ ವರ್ಮಾ ನೇತೃತ್ವದ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಿಹಾರಕ್ಕೆ ಸಹ ಸದಸ್ಯತ್ವ ನೀಡಲಾಗಿದ್ದು, ಮತ ಚಲಾವಣೆಯ ಹಕ್ಕು ನೀಡಲಾಗಿಲ್ಲ. ಇನ್ನು ಐಸಿಸಿ ಅಧಿಕಾರ ಹಂಚಿಕೆಯಲ್ಲಿ ‘ಬಿಗ್ ತ್ರಿ’ ಪದ್ಧತಿ ಕುರಿತಂತೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತು ಕಾರ್ಯದರ್ಶಿ ಅನುರಾಗ್ ಠಾಕೂರ್ ಚರ್ಚೆ ನಡೆಸಬೇಕು ಎಂಬ ನಿರ್ಧಾರ ತೆಗೆದುಕೊಂಡಿತು.
ಗಿಲಾನಿಗೆ ಜಾಮೀನು ನಿರಾಕರಿಸಿದ ದೆಹಲಿ ಕೋರ್ಟ್
ದೇಶದ್ರೋಹ ಆರೋಪದಡಿ 14 ದಿನ ನ್ಯಾಯಾಂಗ ಬಂಧನಕ್ಕೊಳಗಾಗಿರುವ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಎಸ್ಎಆರ್ ಗಿಲಾನಿ ಅವರಿಗೆ ದೆಹಲಿ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಫೆ.6ರಂದು ಬಂಧಿತರಾಗಿದ್ದ ಗಿಲಾನಿ ಅವರನ್ನು ಮಾ.3ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಸೂಚಿಸಿತ್ತು. ಶುಕ್ರವಾರ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ, ಪೊಲೀಸರು ಗಿಲಾನಿ ಅವರಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದರೆ, ತನಿಖೆಗೆ ಪರಿಣಾಮ ಬೀರಬಹುದು. ಅಲ್ಲದೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಗಳಿವೆ. ಅಲ್ಲದೆ ಗಿಲಾನಿ ಅವರು ತನಿಖೆಗೆ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಮನವಿ ಮಾಡಿದರು.
ಸಲ್ಮಾನ್ ಗೆ ಸುಪ್ರೀಂ ನೋಟಿಸ್
2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸಲ್ಮಾನ್ ಖಾನ್ ಅವರಿಗೆ 6 ವಾರಗಳ ಕಾಲಾವಧಿ ನೀಡಿದೆ.
ಸಮ-ಬೆಸ: ಮಹಿಳಾ ಮತ್ತು ದ್ವಿಚಕ್ರ ವಿನಾಯಿತಿ ಅರ್ಜಿ ವಜಾ
ದೆಹಲಿಯಲ್ಲಿ ಎರಡನೆ ಹಂತದ ಸಮ-ಬೆಸ ಸಂಚಾರ ಅನುಷ್ಠಾನದಲ್ಲಿ ಮಹಿಳೆಯರಿಗೆ ಮತ್ತು ದ್ವಿಚಕ್ರವಾಹನಗಳಿಗೆ ವಿನಾಯಿತಿ ಕೋರಿ ಕೇಜ್ರಿವಾಲ್ ನೇತೃತ್ವದ ಅಪ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾ.ಜಯಂತ್ ನಾಥ ಅವರನ್ನೊಳಗೊಂಡ ಜಂಟಿ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಸಮ-ಬೆಸ ಸಂಚಾರ ನಿಯಮವನ್ನು ನ್ಯಾಯಾಲಯ ಗಮನಿಸಿದ್ದು ಇದರಲ್ಲಿ ಸಾರ್ವಜನಿಕರ ಹಿತಾಸಕ್ತಿ ಬದಲು ಸರ್ಕಾರದ ಪ್ರಚಾರದ ಸ್ವಹಿತಾಸಕ್ತಿ ಎದ್ದು ಕಾಣುತ್ತಿದೆ ಎಂದಿದೆ.
ಏಪ್ರಿಲ್ 15 ರಿಂದ ದೆಹಲಿಯಲ್ಲಿ 2ನೇ ಹಂತದ ಸಮ-ಬೆಸ ಸಂಖ್ಯೆ ಆಧಾರಿತ ಸಂಚಾರ ನಿಯಮ ಜಾರಿಗೆ ಬರಲಿದೆ.
ಬಂಗಾರ ಬಲು ಭಾರ: 10 ಗ್ರಾಂಗೆ 29290 ರು
ಮದುವೆ ಸಿಜನ್ ಬಂದಿರುವುದರಿಂದ ಚಿನ್ನ ಕೊಳ್ಳುವವರ ಸಂಖ್ಯೆ ಹೆಚ್ಚಾದ ಪರಿಣಾಮ 10 ಗ್ರಾಂ ಚಿನ್ನದ ದರ 540 ರು ಹೆಚ್ಚಾಗಿ ಒಟ್ಟು 29,290 ರುಗೆ ಏರಿಕೆಯಾಗಿದೆ. ಬೆಳ್ಳಿ ದರವು 1 ಕೆ.ಜಿಗೆ 375 ರು ಏರಿಕೆಯಾಗಿ ಒಟ್ಟು 37,475 ರುಗೆ ತಲುಪಿದೆ.
ಜಾಟ್ ಪ್ರತಿಭಟನೆ: ಒಂದು ಸಾವು
ತಮ್ಮನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲಾತಿ ಸೌಕರ್ಯ ನೀಡುವಂತೆ ಒತ್ತಾಯಿಸಿ ಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸಿರುವ ಪ್ರತಿಭಟನೆ ಶುಕ್ರವಾರ ಹಿಂಸಾರೂಪ ಪಡೆದಿದೆ. ಪೊಲೀಸರು ನಡೆಸಿದ ಗೋಲಿಬಾರ್ ಗೆ ಒಬ್ಬರು ಸಾವನಪ್ಪಿ ಆರು ಮಂದಿಗೆ ಗಾಯಗಳಾಗಿವೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಸೇನೆಯನ್ನು ಕರೆಸಿದೆ.