
ಡಿಜಿಟಲ್ ಕನ್ನಡ ಟೀಮ್
ನಾಡಿಗಾಗಿ ಜೀವತೆತ್ತವರ ಕುಟುಂಬ ಸದಸ್ಯರ ಗೋಳು ಅಧಿಕಾರಿಶಾಹಿ ಎಮ್ಮೆ ಚರ್ಮಕ್ಕೆ ಹೇಗೆ ತಗುಲೋದೇ ಇಲ್ಲ ಅನ್ನೋದಕ್ಕೆ ಇಲ್ಲಿದೆ ಮತ್ತೊಂದು ನಿದರ್ಶನ.
ಎರಡು ವರ್ಷಗಳ ಹಿಂದೆ ಕಲಬುರಗಿ ಆಳಂತ ತಾಲೂಕಿನ ಖಜೂರಿ ಗ್ರಾಮದಲ್ಲಿ ಉಗ್ರನೊಬ್ಬನ ಗುಂಡಿಗೆ ಬಲಿಯಾದ ಎಸ್.ಐ. ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ಬ್ರೈನ್ ಟ್ಯೂಮರ್ ನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬಂಡೆ ಅವರ ಉಳಿದ ಸೇವಾ ಅವಧಿಯ ಮಾಸಿಕ ವೇತನವನ್ನು ಮಲ್ಲವ್ವ ಅವರಿಗೆ ನೀಡುವುದಾಗಿ ಸರಕಾರ ಆಶ್ವಾಸನೆ ಕೊಟ್ಟಿತ್ತು. ಆದರೆ ಅಧಿಕಾರಿಗಳ ಅಸಡ್ಡೆಯಿಂದ ಈ ವೇತನ ಎರಡು ವರ್ಷದಿಂದಲೂ ಬಿಡುಗಡೆ ಆಗದಿದ್ದು, ಸೊಸೆಯ ಚಿಕಿತ್ಸೆ ವೆಚ್ಚ ಭರಿಸಲಾಗದ ಮಾವ ಕರಿಬಸಪ್ಪ ಮುಖ್ಯಮಂತ್ರಿಗಳ ಗಮನ ಸೆಳೆಯಲು ಕೊನೆಗೆ ಬೆಂಗಳೂರಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಬೇಕಾಗಿ ಬಂತು.
ಫ್ರೀಡಂ ಪಾರ್ಕ್ ಮುಂದೆ ಪ್ರತಿಭಟನೆಗೆ ಕೂತ ಕರಿಬಸಪ್ಪ ಅವರನ್ನು ಅಧಿಕೃತ ನಿವಾಸ ಕಾವೇರಿಗೆ ಸಂಜೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಆಹವಾಲು ಆಲಿಸಿದರಲ್ಲದೇ ವೇತನ ಬಿಡುಗಡೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದರು. ಮಕ್ಕಳ ವಿದ್ಯಾಭ್ಯಾಸ ವೆಚ್ಚ ಭರಿಸುವುದಾಗಿಯೂ ಹೇಳಿದರು. ಅಧಿಕಾರಿಗಳ ದಪ್ಪ ಚರ್ಮ ಈಗ ಹೇಗೆ ಸ್ಪಂದಿಸುತ್ತದೋ ನೋಡಬೇಕು.
ಮುಂಬಯಿಯಿಂದ ಕಲಬುರಗಿಗೆ ಬಂದು ಖಜೂರಿ ಗ್ರಾಮದ ಮನೆಯೊಂದರಲ್ಲಿ ತಲೆ ಮರೆಸಿಕೊಂಡಿದ್ದ ಉಗ್ರಗಾಮಿ ಅಬ್ದುಲ್ ರೆಹಮಾನ್ ಮುನ್ನಾ ನನ್ನು ಸೆರೆಹಿಡಿಯಲು 2014 ಜನವರಿ 13 ರಂದು ಸಬ್ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಮುನ್ನುಗ್ಗಿದಾಗ, ಅವರ ಪಿಸ್ತೂಲನ್ನು ಕಸಿದುಕೊಂಡು ಮುನ್ನಾ ಗುಂಡಿಕ್ಕಿ ಕೊಂದಿದ್ದ. ತದನಂತರ ಸರಕಾರ ಬಂಡೆ ಕುಟುಂಬಕ್ಕೆ 50 ಲಕ್ಷ ರುಪಾಯಿ ಪರಿಹಾರ, ಮಕ್ಕಳ ಪೂರ್ಣ ವಿದ್ಯಾಭ್ಯಾಸ, ಸಾವನ್ನಪ್ಪಿದ ಸಂದರ್ಭದಲ್ಲಿ ಬಂಡೆ ಅವರಿಗೆ ಬರುತ್ತಿದ್ದ ವೇತನ ಕುಟುಂಬ ಸದಸ್ಯರಿಗೆ ಮುಂದುವರಿಕೆ, ನಿವೇಶನ, ಮಲ್ಲಮ್ಮ ಅವರಿಗೆ ಉದ್ಯೋಗ ಭರವಸೆ ಕೊಟ್ಟಿತ್ತು. ಪರಿಹಾರ ವಿತರಣೆ ಆಗಿದ್ದು. ಅದನ್ನು ಮಕ್ಕಳಿಬ್ಬರ ಹೆಸರಲ್ಲಿ ಠೇವಣಿ ಇಡಲಾಗಿದೆ. ನಿವೇಶನ, ಅಂಗನವಾಡಿಯಲ್ಲಿ ಕೆಲಸ ಕಲ್ಪಿಸಲಾಗಿತ್ತು. ಆದರೆ ಮಾಸಿಕ ವೇತನ ಎರಡು ವರ್ಷದಿಂದ ಹಾಗೆಯೇ ಬಾಕಿ ಉಳಿಸಿಕೊಳ್ಳಲಾಗಿತ್ತು. ಮೊದಲಿಗೆ ಮಕ್ಕಳ ಸಂಪೂರ್ಣ ಶಿಕ್ಷಣ ನೋಡಿಕೊಳ್ಳುವುದಾಗಿ ಹೇಳಿದ್ದ ಸರಕಾರ ನಂತರ ಮತ್ತೊಂದು ಪತ್ರ ಬರೆದು, ಐದನೇ ತರಗತಿವರೆಗೆ ಮಾತ್ರ ಶಿಕ್ಷಣ ಜವಾಬ್ದಾರಿ ಹೊರುವುದಾಗಿ ತಿಳಿಸಿ ಕೈ ತೊಳೆದುಕೊಂಡಿತ್ತು.
ಇದೀಗ ಮಲ್ಲಮ್ಮ ಬಂಡೆ ಅವರು ಬ್ರೈನ್ ಟ್ಯೂಮರ್ ನಿಂದ ಒಂದೂವರೇ ತಿಂಗಳಿಂದ ನರಳುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.