ಒಬಿಸಿ ಸ್ಥಾನಕ್ಕೆ ಆಗ್ರಹಿಸಿದ ಜಾಟರು ಸರ್ಕಾರವನ್ನು ಮಣಿಸಿದ್ದು ಹೇಗೆ? ಇದು ಇತರ ಸಮುದಾಯಗಳಿಗೂ ಪ್ರಚೋದನೆ ಆಗದೇ?

ಡಿಜಿಟಲ್ ಕನ್ನಡ ಟೀಮ್

ಹರ್ಯಾಣದಲ್ಲಿ ಜಾಟ್ ಸಮುದಾಯ ಮೀಸಲು ಸೌಕರ್ಯಕ್ಕೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದ ಅಲ್ಲಿನ ಕಟ್ಟರ್ ಸರ್ಕಾರ, ಈ ಸಮುದಾಯವನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸುವುದಕ್ಕೆ ಮಾರ್ಗ ಹುಡುಕಲಾಗುವುದು ಎಂದು ಶನಿವಾರ ಒಪ್ಪಿಗೆ ನೀಡಿದೆ.

ಆದರೆ ಸರ್ಕಾರ ಒತ್ತಡಕ್ಕೆ ಮಣಿದಿರುವುದು, ಒಬಿಸಿ ವರ್ಗಕ್ಕೆ ಸೇರಬೇಕೆಂದು ಪಟ್ಟು ಹಿಡಿದಿರುವ ಗುಜರಾತಿನ ಪಟೇಲ್ ಸಮುದಾಯ ಸೇರಿದಂತೆ ಹಲವರಿಗೆ ಪ್ರಚೋದನೆ ಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆ ಎಬ್ಬಿಸಿದೆ. ಹಾಗೆಂದು ಇದು ಬಿಜೆಪಿ ಸರ್ಕಾರದ ಸೌಮ್ಯತೆ ಎಂದಷ್ಟೇ ನೋಡಬೇಕಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರವೇ ಜಾಟ್ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಿ ಸೂಚನೆ ಹೊರಡಿಸಿತ್ತಾದರೂ, ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದ ಅದು ಸಾಕಾರವಾಗಿರಲಿಲ್ಲ. ಆದರೆ ಈ ಬಾರಿ ತಮ್ಮೆಲ್ಲ ಬಲವನ್ನೂ ಒಗ್ಗೂಡಿಸಿ ಪ್ರತಿಭಟನೆ ಹಮ್ಮಿಕೊಂಡ ಜಾಟ್ ಸಮುದಾಯ ಸರ್ಕಾರವನ್ನೇ ಅಲ್ಲಾಡುವಂತೆ ಮಾಡಿದೆ. ಜಾಟ್ ಸಮುದಾಯ ದೊಡ್ಡ ಮತಬ್ಯಾಂಕ್ ಎಂಬುದರಲ್ಲಿ ಅನುಮಾನವಿಲ್ಲ.

ಇದು ಕೇವಲ ಜಾಟ್ ಸಮುದಾಯಕ್ಕೆ ಸಂಬಂಧಿಸಿರದೇ, ಇತರ ಸಮುದಾಯಗಳನ್ನೂ ಪ್ರಚೋದಿಸಬಲ್ಲ ನಡೆಯಾಗಿರುವುದರಿಂದ, ಜಾಟ್ ಸಮುದಾಯದ ಪ್ರತಿಭಟನಾ ಪರ್ವದ ಮಗ್ಗಲುಗಳು, ಅದು ಸೃಷ್ಟಿಸಿದ ಒತ್ತಡ ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

  • ಐದು ದಿನಗಳಿಂದ ಪ್ರತಿಭಟನಕಾರರು ಮತ್ತು ಪೋಲೀಸರ ನಡುವಿನ ಸಂಘರ್ಷ ಹಿಂಸೆಗೆ ತಿರುಗಿತ್ತು. ಇದರ ಪರಿಣಾಮ ಮೂವರ ಸಾವು 18 ಕ್ಕೂ ಹೆಚ್ಚು ಮಂದಿಗೆ ಗಾಯ ಮತ್ತು 200 ಕೋಟಿಗೂ ಹೆಚ್ಚು ನಷ್ಟ. ರಾಜ್ಯದ ಎರಡು ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ಕಂಡಲ್ಲಿ ಗುಂಡು ಆದೇಶ ಜಾರಿಯಾಗಿತ್ತು, ಪರಿಸ್ಥಿತಿ ಹತೋಟಿಗೆ ತರಲು ಸೇನೆಯನ್ನು ನಿಯೋಜಿಸಲಾಗಿತ್ತು.
  • ಹರ್ಯಾಣ, ರಾಜಸ್ಥಾನ, ಪಂಜಾಬ್, ದೆಹಲಿ, ಯುಪಿ, ಎಂಪಿ ಮತ್ತು ಉತ್ತರಖಂಡ ರಾಜ್ಯಗಳಲ್ಲಿ ಒಟ್ಟು 8 ಕೋಟಿ ಜನಸಂಖ್ಯೆಯಿರುವ ಜಾಟ್ ಸಮುದಾಯ, ಸರ್ಕಾರಿ ಉದ್ಯೋಗದಲ್ಲಿ ಮಿಸಲಾತಿ ಮತ್ತು ಸಾಮಾಜಿಕ ಸ್ಥಾನಮಾನಕ್ಕಾಗಿ ಹಿಂದುಳಿದ ವರ್ಗಕ್ಕೆ ಸೇರಿಸಲು ಸರ್ಕಾರವನ್ನು ಒತ್ತಾಯಿಸಿದರು. 2008 ರಲ್ಲಿ ಕಾಂಗ್ರೆಸ್ ಸರ್ಕಾರ ಜಾಟ್ ಅನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಅನುಮೋದನೆಗೆ ಒಪ್ಪಿಗೆ ಸೂಚಿಸಿತ್ತು.
  • ಆದರೆ 2014 ರಲ್ಲಿ ಸುಪ್ರೀಂ ಕೋರ್ಟ್ ಈ ಅನುಮೋದನೆಯನ್ನು ತಳ್ಳಿಹಾಕಿತು. ಈ ಬಗ್ಗೆ ಸರ್ಕಾರವು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮರು ವಿಮರ್ಶೆ ಮನವಿಯೂ ತಿರಸ್ಕೃತವಾದಾಗ ಸಮುದಾಯದ ಪ್ರತಿಭಟನೆ ಶುರುವಾಯಿತು.
  • ಹಿಸ್ಸಾರ್ ನಲ್ಲಿ ರೈಲು ಹಳಿಗಳು ಮತ್ತು ಹೆದ್ದಾರಿಗಳನ್ನು ಬಂದ್ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಮನೋಹರ್ ಕಟ್ಟರ್ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾ ನಿರತರು ರಾಷ್ಟ್ರ ರಾಜಧಾನಿ ಜತೆಗಿನ ಸಂಪರ್ಕವನ್ನೂ ವ್ಯಸ್ತಗೊಳಿಸುವಷ್ಟರಮಟ್ಟಿಗೆ ಪ್ರತಿಭಟನೆ ತೀವ್ರಗೊಳಿಸಿದರು. ರಾಜಧಾನಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮತ್ತು ರೈಲು ನಿಲ್ದಾಣಗಳನ್ನು ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರು.
  • 206 ರೈಲುಗಳನ್ನು ತಡೆದ ಪರಿಣಾಮ 100ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಮತ್ತು 70ಕ್ಕೂ ಹೆಚ್ಚು ರೈಲುಗಳ ಸಂಚಾರ ಮಾರ್ಗ ಬದಲಿಸಲಾಯಿತು. ಐದು ದಿನಗಳಲ್ಲಿ ಇಲಾಖೆಗೆ 100 ಕೋಟಿಗೂ ಹೆಚ್ಚು ನಷ್ಟ ಉಂಟಾಯಿತು. ಇದರಲ್ಲಿ ಪಂಜಾಬ್ ನ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದಲ್ಲು ಸಾಗಿಸುತ್ತಿದ್ದ 20 ಕ್ಕೂ ಹೆಚ್ಚು ಸರಕು ಸಾಗಣೆಯ ರೈಲುಗಳು ಒಳಗೊಂಡಿದ್ದವು. ಪ್ರತಿಭಟನಾ ನಿರತರು ಸಚಿವರೊಬ್ಬರ ಮನೆಗೆ ಬೆಂಕಿ ಹಚ್ಚಿದರು. ಈ ವೇಳೆ ಪೊಲೀಸರ ಗುಂಡಿಗೆ ಒಬ್ಬ ಬಲಿಯಾದ. ಈ ವೇಳೆಗಾಗಲೆ ನಿಷೇಧಾಜ್ಞೆ ಜಾರಿಯಾಗಿ ಪ್ರತಿಭಟನಾಕಾರರನ್ನು ನಿಯತ್ರಿಸಲು ಸರ್ಕಾರ ಸೇನೆಯನ್ನು ಕರೆಸಿತು.
  • ರಾಜಧಾನಿ ಬಳಿಯ ಗುರಂಗಾವ್ ಗೆ ತಲುಪಿದ ಪ್ರತಿಭಟನೆಯ ಕಾವು ಇಲ್ಲಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿಸಿತು. ಶಾಲೆಗಳು ಸಹ ಮುಚ್ಚಲ್ಪಟ್ಟವು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಖಟ್ಟರ್ ಒಬಿಸಿಯ ಕರಡು ಮಸೂದೆಯನ್ನು ರೂಪಗೊಳಿಸುವ ಮುನ್ನ ಜಾಟ್ ಮುಖಂಡರನ್ನು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಸಲಹೆಗಳನ್ನು ಮತ್ತು ನಿಯಮಗಳನ್ನು ಪಾಲಿಸಲಾಗಿದೆ ಎಂದರು.
  • ರೊಹ್ಟಾಕ್ ನ ಐಜಿಯವರ ಧಿಗಲ್ ಮನೆಗೆ ಬೆಂಕಿ ಹಚ್ಚಿ ಮತ್ತು ದೆಹಲಿ ರಸ್ತೆಯಲ್ಲಿ ಇರುವ ಆಗ್ರೋ ಮಾಲ್ ಕಟ್ಟಡಕ್ಕೆ ಹಾನಿಮಾಡಿದರು. ಒಬಿಸಿ ಸ್ಥಾನಮಾನಕ್ಕೆ ವಿರೋಧಿಸಿದ್ದ ಜಾಟ್ಸ್ ಸಮುದಾಯದ ಕೆಲವರು ಮತ್ತು ಬಾಲ್ ಮಿಕಿಸ್ ಸೇರಿದಂತೆ 35ಕ್ಕೂ ಹೆಚ್ಚು ಸಮುದಾಯದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು 3300 ಹೆಚ್ಚುವರಿ ಆರಕಾಲಿಕ ಸಿಬ್ಬಂದಿಗಳನ್ನು ರಾಜ್ಯಸರ್ಕಾರ ನೇಮಿಸಿತ್ತು. ಶೀಘ್ರವಾಗಿ ಪ್ರತಿಭಟನಾ ಸ್ಥಳಕ್ಕೆ ತೇರಳಲು ಸೇನೆ ಹೆಲಿಕಾಪ್ಟರ್ ಸಹ ಬಳಸಲಾಗಿದೆ.

Leave a Reply