ಚಾಮುಂಡೇಶ್ವರಿ ಮೇಲಾಣೆ, ಸಿದ್ರಾಮಯ್ಯ ಸರಕಾರದ ಮೀಸಲು ನೀತಿ ಇದೀಗ ಚಪ್ಪಲಿ ಸ್ಟಾಂಡ್ ಗೂ ವಿಸ್ತರಣೆ ಆಗಿದೆ!

ಡಿಜಿಟಲ್ ಕನ್ನಡ ವಿಶೇಷ

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಮೀಸಲು ನೀತಿ ಇದೀಗ ದೇಗುಲಗಳ ಚಪ್ಪಲಿ ಸ್ಟಾಂಡ್ ಗೂ ಬಂದು ನಿಂತಿದೆ!

ಇನ್ನು ಮುಂದೆ ದೇಗುಲುಗಳ ಬಳಿ ಭಕ್ತರು ಚಪ್ಪಲಿ ಬಿಡುವ ಸ್ಟಾಂಡ್ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿಗೆ ಶೇಕಡಾ 20 ರಷ್ಟು ಹಾಗೂ ಪರಿಶಿಷ್ಟ ವರ್ಗಗಳಿಗೆ ಶೇಕಡಾ 5 ರಷ್ಟು ಮೀಸಲು ಎಂದು ಕರ್ನಾಟಕ ಸರಕಾರ ಕಳೆದ ಗುರುವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು (ಅಹಿಂದ) ಮಂತ್ರ ಪಠಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು, ಇತ್ತೀಚೆಗೆ ಅದರಿಂದ ವಿಮುಖರಾಗಿದ್ದಾರೆ. ಹಿಂದುಳಿದ ವರ್ಗಗಳನ್ನು ಒಳಮೀಸಲು ಮೂಲಕ ಒಡೆಯಲು ಯತ್ನಿಸಿದ್ದಾರೆ. ತಮ್ಮನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಅದರ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಕೂಗು ಆಗಾಗ್ಗೆ ಕೇಳಿ ಬರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಇತ್ತೀಚಿನ ವಿಧಾನಸಭೆ ಮರುಚುನಾವಣೆಯಲ್ಲಿ ಕಾಂಗ್ರೆಸ್ ವೈಫಲ್ಯಕ್ಕೆ ಪರಿಶಿಷ್ಟರು ಸರಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿರುವುದೂ ಒಂದು ಕಾರಣ. ಈ ಹಿನ್ನೆಲೆಯಲ್ಲಿ ಪರಿಶಿಷ್ಟರನ್ನು ಓಲೈಸಲು ಸಿದ್ದರಾಮಯ್ಯ ಈ ಸಾಹಸಕ್ಕೆ ಕೈ ಹಾಕಿದ್ದಾರೆ.

chappal order

ರಾಜ್ಯದಲ್ಲಿ ಸುಮಾರು 34,500 ದೇಗುಲಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಇವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಕಟಿಲು ದುರ್ಗಾ ಪರಮೇಶ್ವರಿ, ಮೈಸೂರು ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ, ನಂಜನಗೂಡು ಶ್ರೀಕಂಠೇಶ್ವರ ಸೇರಿದಂತೆ ರಾಜ್ಯದಲ್ಲಿ 154 ಎ ವರ್ಗದ ದೇಗುಲಗಳಿದ್ದು, ಇಲ್ಲಿನ ಪಾದರಕ್ಷೆ ಸ್ಟಾಂಡ್ ಗಳಲ್ಲಿ ಸಿಕ್ಕಾಪಟ್ಟೆ ಆದಾಯವಿದೆ. ಇಲ್ಲಿ ನಿತ್ಯ ಸರಾಸರಿ 10,000 ಕ್ಕೂ ಹೆಚ್ಚು ಭಕ್ತರು ಬಂದು ಹೋಗುತ್ತಾರೆ. ವಾರದ ವಿಶೇಷ ದಿನಗಳಲ್ಲಿ ಈ ಸಂಖ್ಯೆ 25,000 ದಾಟುತ್ತದೆ. ಇಲ್ಲಿನ ಸ್ಟಾಂಡ್ ಗಳಲ್ಲಿ ಪ್ರತಿ ಜತೆ ಪಾದರಕ್ಷೆಗೆ 1 ರಿಂದ 5 ರುಪಾಯಿವರೆಗೂ ಶುಲ್ಕ ವಿಧಿಸಲಾಗುತ್ತದೆ. ಅಂದರೆ ನಿತ್ಯ 10 ರಿಂದ 50 ಸಾವಿರ ರುಪಾಯಿ, ತಿಂಗಳಿಗೆ 3 ರಿಂದ 15 ಲಕ್ಷ ರುಪಾಯಿವರೆಗೂ ಆದಾಯ ಬರುತ್ತದೆ. ಹೀಗಾಗಿ ಪ್ರಸ್ತುತ ಇಲ್ಲೆಲ್ಲ ಪ್ರಭಾವಿಗಳು ಚಪ್ಪಲಿ ಸ್ಟಾಂಡ್ ಗುತ್ತಿಗೆ ಪಡೆದುಕೊಂಡು, ಪರಿಶಿಷ್ಟರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುತ್ತಿದ್ದರು. ಇದೀಗ ಸಿದ್ದರಾಮಯ್ಯನವರ ಸರಕಾರದ ಮೀಸಲು ವ್ಯವಸ್ಥೆಯಿಂದ ಇನ್ನು ಮುಂದೆ ಪರಿಶಿಷ್ಟರಿಗೇ ಗುತ್ತಿಗೆ ಸಿಗಲಿದೆ.

ಈ ಮೊದಲು ದೇಗುಲಗಳ ಬಳಿ ಅಂಗಡಿಗಳು ಮತ್ತು ಕಾಲಿ ಜಾಗ ಗುತ್ತಿಗೆ ನೀಡುವುದರಲ್ಲೂ ಪರಿಶಿಷ್ಟರಿಗೆ ಮೀಸಲು ಕಲ್ಪಿಸಲಾಗಿತ್ತು. ಅದನ್ನೀಗ ಚಪ್ಪಲಿ ಸ್ಟಾಂಡ್ ಗಳಿಗೆ ವಿಸ್ತರಿಸಲಾಗಿದೆ. ಸಿದ್ದರಾಮಯ್ಯನವರ ಸರಕಾರ ಇನ್ನು ಯಾವ-ಯಾವುದರಲ್ಲಿ ಮೀಸಲು ತರುತ್ತದೋ, ಆ ಮೀಸಲು ವ್ಯವಸ್ಥೆಯಲ್ಲಿ ಎಂತೆಂಥ ರಾಜಕೀಯ ಬೆಳೆ ಬೆಳೆಯುತ್ತದೋ ನೋಡಬೇಕು.

1 COMMENT

  1. ತಪ್ಪೇನಿದೆ ಬಿಡಿ..ದೇವಸ್ಥಾನದ ಒಳಗೆ ಸಾಲದು ಅಂತ ಚಪ್ಪಲಿ ಸ್ಟಾಂಡ್ ಕೂಡ ಕೂಳರ ಪಾಲಾಗುವುದು ತಪ್ಪುತ್ತದೆ. ದೇವರಿಗೆ ಪೂಜೆ ಮಾಡುವಲ್ಲಿಯೂ ಮೀಸಲಾತಿ ತರಬೇಕು. ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಒಂದು ಜಾತಿಯ ದೊಣ್ಣೆ ನಾಯಕರೇ ಇರಬೇಕು ಎಂಬ ನಿಯಮ ಏಕೆ. ಸಾರ್ವಜನಿಕ ದುಡ್ಡಲ್ಲಿ ನಡೆಯುವ ದೇವಸ್ಥಾನಗಳಲ್ಲಿ ಎಲ್ಲಾ ಕೆಲಸಗಳಿಗೂ ಮೀಸಲಾತಿ ಬರಲಿ.
    ಇದರಿಂದ ರಾಜಕೀಯ ಬೇಳೆ ಬೇಯುವುದು ಬಿಡುವುದು ಬೇರೆ ಮಾಡು..

Leave a Reply