ಪ್ರಶ್ನೆ- ರಾಷ್ಟ್ರಧ್ವಜ ಹಾರಿಸಿದ ಮಾತ್ರಕ್ಕೆ ದೇಶಪ್ರೇಮ ಸಾಬೀತಾಗುತ್ತಾ? ಉತ್ತರ- ಲಾಲ್ ಸಲಾಮ್ ಕೂಗಿ ಕೂಗಿ ಬಡತನ ಎಷ್ಟ್ ಕಡಿಮೆ ಮಾಡಿದೀರಿ?

ಪ್ರವೀಣ್ ಕುಮಾರ್

ಮಾನವ ಸಂಪನ್ಮೂಲ ಸಚಿವಾಲಯದ ಸ್ಮೃತಿ ಇರಾನಿ ಅವರು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ನಿರ್ಧಾರವನ್ನು ಪ್ರಕಟಿಸಿದಾಗ ಎದ್ದ ಥರಾವರಿ ಪ್ರಶ್ನೆಗಳೆಲ್ಲ ಈ ಧಾಟಿಯಲ್ಲಿದ್ದವು. ಇದೇನಿದು ದೇಶಪ್ರೇಮವನ್ನು ಎದೆಬಡಿದುಕೊಂಡು ಸಾರಬೇಕಾ? ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟ ಮೇಲೂ ದೇಶವಿರೋಧಿ ಕೆಲಸ ಮಾಡಲ್ಲ ಅನ್ನೋದಕ್ಕೆ ಗ್ಯಾರಂಟಿ ಏನು? ತ್ರಿವರ್ಣಕ್ಕೆ ಸಲಾಂ ಹೊಡೆದವರು ಮಾತ್ರ ದೇಶಭಕ್ತರಾಗುತ್ತಾರೇನು?

ಉತ್ತರ ಸ್ಪಷ್ಟ. ರಾಷ್ಟ್ರಧ್ವಜಕ್ಕೆ ವಂದಿಸಿವುದು ಮಾತ್ರವೇ ದೇಶಪ್ರೇಮ ಅಂತ ಖಂಡಿತ ಅಲ್ಲ. ತಿರಂಗಾ ಹಾರಿಸಿದರೆ ಸಾಕು, ನಿಮ್ಮ ಸಾಥ್ ಖೂನ್ ಮಾಫ್ ಅಂತ ಕೇಂದ್ರ ಸರ್ಕಾರವೇನೂ ಕಾಯ್ದೆ ತಂದಿಲ್ಲ. ಹೀಗಾಗಿ ತ್ರಿವರ್ಣ ಹಾರಿಸುವುದಕ್ಕೆ ಕೆಲವರು ವ್ಯಕ್ತಪಡಿಸುತ್ತಿರುವ ಸಿನಿಕತೆ ಅತಿಬುದ್ಧಿವಂತಿಕೆ ಪ್ರದರ್ಶನವಷ್ಟೆ.

ಹೀಗೆ ಪ್ರಶ್ನಿಸುವವರೇ ಚೆ ಗುವೆರಾ ಮುಖ ಹೊತ್ತ ಟೀ ಶರ್ಟ್ ಗಳನ್ನೂ, ಕಮ್ಯುನಿಸ್ಟ್ ಕತ್ತಿ ಚಿತ್ರದ ಕೆಂಬಾವುಟವನ್ನೂ ಪಟಪಟಿಸಿಕೊಂಡಿರುತ್ತಾರೆ. ಕನ್ಹಯ್ಯ ಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆಗಳಲ್ಲಿ ನಿರತವಾಗಿರುವ ಎಡಪಂಥೀಯ ವಿದ್ಯಾರ್ಥಿ ಸಮೂಹ, ಎ ಐ ಎಸ್ ಎಫ್ ನ ಕೆಂಬಾವುಟ- ಬ್ಯಾನರ್ ಗಳನ್ನು ಪಟಪಟಿಸಿಕೊಂಡಿದೆಯಲ್ಲ?

ಅಂದರೆ… ನಿಮ್ಮ ಕೈಯಲ್ಲಿರುವ ಬಾವುಟ ಸೈದ್ಧಾಂತಿಕತೆಯ ಪ್ರತೀಕ. ಅದೇ ದೇಶದ ತ್ರಿವರ್ಣವು ವಿಶ್ವವಿದ್ಯಾಲಯಗಳ ಮೇಲೆ ಹಾರಾಡಿದರೆ ಅದು ಟೊಳ್ಳು ಭಾವನಾತ್ಮಕತೆಯಾಗಿಬಿಡುತ್ತದೆಯೇ?

aisf

ಖಂಡಿತ, ತ್ರಿವರ್ಣಕ್ಕೆ ನಮಿಸಿದವರೆಲ್ಲಕಾನೂನನ್ನೇ ಮೀರುವುದಿಲ್ಲ ಅಂತ ಹೇಳಲು ಬರುವುದಿಲ್ಲ. ಹಾಗಂತ ಯುನಿವರ್ಸಿಟಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದಕ್ಕೆ ಇದು ಆಕ್ಷೇಪದ ಕಾರಣವಾಗುವುದಕ್ಕೆ ಸಾಧ್ಯವೇ ಇಲ್ಲ. ಸಲ್ಲದ ವಿಷಯಗಳಿಗೆ ಹಾರಾಡಿಕೊಂಡಿರುವವರಿಗೆ ತಲೆ ಮೇಲೆ ತ್ರಿವರ್ಣ ಹಾರಾಡುತ್ತಿದ್ದರೆ ಅಷ್ಟಾದರೂ ದೇಶದ ಬಗ್ಗೆ ನೆನಪು ಇರುವಂತಾಗುತ್ತದೆ ಎಂಬುದು ಆಶಯವಷ್ಟೆ.

ಕೆಟ್ಟ ಚಟಗಳನ್ನಿಟ್ಟುಕೊಳ್ಳದೇ ಸಮತೋಲಿತ ಆಹಾರ ಸೇವಿಸಿದರೆ ಆಯಸ್ಸು- ಆರೋಗ್ಯ ಚೆನ್ನಾಗಿರುತ್ತದೆ ಅನ್ನೋದು ಒಂದು ಆಶಯ. ನಮ್ಮ ಪಕ್ಕದ ಮನೆಯವ ದಿನವೂ ವ್ಯಾಯಾಮ ಮಾಡಿಕೊಂಡು, ಸಾತ್ವಿಕ ಆಹಾರ ಸೇವಿಸುತ್ತಿದ್ದ. ಆದರೂ ಕ್ಯಾನ್ಸರ್ ಬಂದು ಸತ್ತುಹೋದ. ಹೀಗಾಗಿ ನಾನು ಸಾತ್ವಿಕ ಆಹಾರ-ವಿಹಾರದ ಆದರ್ಶವನ್ನು ಒಪ್ಪೋದೇ ಇಲ್ಲ ಅಂತ ವಾದಿಸುವವರು ನೀವಾದರೆ, ಅಲ್ಲಿ ಏನೂ ಹೇಳೋಕೆ ಸಾಧ್ಯವಿಲ್ಲ. ಸ್ವೇಚ್ಛೆಯಿಂದ ಇರುವುದಕ್ಕೆ ನೆಪ ಹುಡುಕಿಕೊಳ್ತಿದೀರಿ ಅಷ್ಟೆ.

ರಾಷ್ಟ್ರಧ್ವಜ ಹಾರಿಸಿದ ಮಾತ್ರಕ್ಕೆ ದೇಶಪ್ರೇಮ ನೆಲೆಯಾಗಿಬಿಡುತ್ತದಾ ಅಂತ ತರ್ಕಿಸುವವರದ್ದೂ ಈ ನೆಪ ಹುಡುಕೋ ಜಾಯಮಾನವಷ್ಟೆ. ಇದೇನ್ ಕಾಲ ಬಂತ್ರೀ… ದೇಶಪ್ರೇಮವನ್ನು ಎದೆ ಮೇಲೆ ತ್ರಿವರ್ಣ ಇಟ್ಟುಕೊಂಡೇ ಪ್ರೂವ್ ಮಾಡ್ಬೇಕೇನ್ರೀ ಅಂತ ತರ್ಕಿಸುವ ಲಿಬರಲ್ ಮಹಾಶಯರ ಬಳಿ- ‘ಹೌದು ಕಣ್ರೀ.. ಯಾವುದೇ ಪ್ರೇಮ ಅಭಿವ್ಯಕ್ತಿಗೊಳ್ಳಬೇಕು ಅನ್ನೋದೇ ತಪ್ಪು. ಕರೆಕ್ಟಾಗಿ ಹೇಳಿದ್ರಿ… ವ್ಯಾಲಂಟೈನ್ ದಿನ ಅದೇನ್ರೀ ಅದು ತಬ್ಬಿಕೊಂಡು ಕೂರೋದು…’ ಅಂತ ಲೈಟಾಗಿ ಕಾಲೆಳೆದು ನೋಡಿ. ವಿಶ್ವದ ಎಲ್ಲ ಅಭಿವ್ಯಕ್ತಿ ಪ್ರವಾಹವನ್ನೂ ತನ್ನೊಳಗೆ ಆವಾಹಿಸಿಕೊಂಡವರಂತೆ ಅವರು ಬುಸುಗುಟ್ಟುತ್ತಾರೆ. ‘ಪ್ರೇಮವನ್ನು ಯಾಕ್ರೀ ಹತ್ತಿಕ್ಕಿ ಇಡಬೇಕು? ಯಾವ ಶತಮಾನದಲ್ಲಿ ಬದುಕುತ್ತಿದ್ದೀರಿ ನೀವು? ಪಬ್ಲಿಕ್ಕಲ್ಲೂ ಚುಂಬಿಸ್ತೀವಿ, ನಿಮ್ಮನೆ ಎದುರಿನ ಪಾರ್ಕಲ್ಲೂ ಸಲ್ಲಾಪ ಮಾಡ್ತೀವಿ… ನೀವ್ಯಾರ್ರೀ ಅಭಿವ್ಯಕ್ತಿ ಹತ್ತಿಕ್ಕೋರು..’

ಖಂಡಿತ. ಅವರ ಮಾತಿಗೆ ಸಹಮತ ಇದೆ. ಆದರೆ ಹೇಗೆ ಜಗದೆದುರು ಚುಂಬಿಸಿಕೊಂಡವರ ಪ್ರೇಮವೂ ಮುಂದೊಮ್ಮೆ ಮುರಿದುಬೀಳಬಹುದಾದ ಎಲ್ಲ ಸಾಧ್ಯತೆಗಳಿರ್ತವೋ… ಅಂತೆಯೇ ರಾಷ್ಟ್ರಧ್ವಜಕ್ಕೆ ವಂದಿಸಿದವರಲ್ಲೂ ತಪ್ಪುಗಳು ಕಾಣಬಹುದು. ಆದರೆ, ದೇಶಪ್ರೇಮ ಉದ್ದೀಪಿಸಬಹುದಾದ ಈ ನಿಯಮವೇ ಬೇಡ, ಅದು ಹೇರಿಕೆ ಎಂಬುದು ಮಾತ್ರ ಕುತರ್ಕ. ಧೂಮಪಾನದಿಂದ ಕ್ಯಾನ್ಸರ್ ಬರುತ್ತೆ ಎಂದರೆ, ಧೂಮಪಾನ ಮಾಡದವರಿಗೆ ಅದು ಬರೋದೇ ಇಲ್ಲ ಅಂತ ಪ್ರೂವ್ ಮಾಡ್ತೀರಾ ಅಂತ ಕೇಳುವುದು ಎಷ್ಟು ಅಸಂಬದ್ಧವೋ ಅಷ್ಟೇ ಅಸಂಬದ್ಧ- ತ್ರಿವರ್ಣ ಹಾರಿಸಿದ ಮಾತ್ರಕ್ಕೆ ದೇಶಪ್ರೇಮ ಸಾಬೀತಾಗುತ್ತಾ ಅಂತ ಕೇಳೋದು.

ಲಿಬರಲ್ ಗಳು ಮಾತಿಗೊಮ್ಮೆ ಅಂಬೇಡ್ಕರ್, ಸಂವಿಧಾನ ನೀಡಿದ ಮೂಲಭೂತ ಹಕ್ಕು, ಸರ್ಕಾರವು ಸಂವಿಧಾನಕ್ಕಿಂತ ದೊಡ್ಡದಲ್ಲ ಅಂತೆಲ್ಲ ಡೈಲಾಗು ಉದುರಿಸಿಕೊಂಡಿರುತ್ತಾರೆ. ಅದೇ ಅಂಬೇಡ್ಕರ್ ಪ್ರಣೀತ ಸಂವಿಧಾನದಲ್ಲೇ ಕರ್ತವ್ಯಗಳ ಪಟ್ಟಿಯೂ ಒಂದಿದೆಯಲ್ಲ? ಅದರಲ್ಲಿ ರಾಷ್ಟ್ರಧ್ವಜ, ರಾಷ್ಟ್ರಲಾಂಛನಗಳನ್ನು ಗೌರವಿಸುವುದು ಎಂಬ ಅಂಶವೂ ಇದೆಯಲ್ಲವೇ? ನೆನಪಿರಲಿ… ಇದನ್ನು ಆಯ್ಕೆಯಾಗಿಸಿಲ್ಲ. ಮಾಡಲೇಬೇಕಾದದ್ದು ಎಂಬರ್ಥದಲ್ಲಿ ಕರ್ತವ್ಯಗಳ ಪಟ್ಟಿಯಲ್ಲಿರಿಸಿದ್ದಾರೆ. ಹಾಗಾದರೆ, ಲಿಬರಲ್ ಗಳೇ… ಅಂಬೇಡ್ಕರ್ ಪ್ರಣೀತ ಸಂವಿಧಾನದ ಈ ಅಂಶವೂ ನಿಮಗೆ ‘ಹೇರಿಕೆ’ ಎನ್ನಿಸುವುದೇನು?

ಕೇಂದ್ರ ಸರ್ಕಾರ ಹೇಳುತ್ತಿರುವುದು, ಅದರ ಅಧೀನದ, ಸಮಷ್ಟಿಯ ತೆರಿಗೆ ಹಣದಲ್ಲಿ ನಡೆಯುತ್ತಿರುವ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಿಕೆ ಕಡ್ಡಾಯ ಅಂತ. ಅಲ್ಲಿಗೆ ಓದಲು ಬರುವ ವಿದ್ಯಾರ್ಥಿಯ ಮನೆ ಮೇಲೋ, ಕೊಠಡಿಯಲ್ಲೋ ಕಡ್ಡಾಯ ಅಂತ ಹೇಳುತ್ತಿಲ್ಲ. ಮತ್ತೇಕೆ ಬೊಬ್ಬೆ, ಸಿನಿಕತೆ, ಕೊಂಕು? ಇದು ಹೇರಿಕೆ ಅಂತಾದರೆ ದೇಶದ ಪ್ರತಿ ಕಾಯ್ದೆಯೂ ಹೇರಿಕೆ, ಶೋಷಣೆ, ತುಳಿತ ಅಂತಲೇ ವ್ಯಾಖ್ಯಾನಿಸಿಬಿಡಬಹುದಲ್ಲವೇ?

1 COMMENT

Leave a Reply