ರಿಟೈರ್ಮೆಂಟ್ ಪಂದ್ಯ ಹಿಂಗಿರ್ಬೇಕು ಗುರೂ… ಮೆಕಲಮ್ 54 ಎಸೆತಕ್ಕೆ ನೂರು!

ಸೋಮಶೇಖರ ಪಿ. ಭದ್ರಾವತಿ

ಕಳೆದ ದಶಕಕ್ಕೂ ಹೆಚ್ಚು ಅವಧಿ ಸ್ಫೋಟಕ ಬ್ಯಾಟ್ಸ್ ಮನ್, ವಿಕೆಟ್ ಹಿಂದೆ ಅತ್ಯುತ್ತಮ ಕೀಪರ್ ಹಾಗೂ ಮಿಂಚಿನ ಫೀಲ್ಡರ್ ಹೀಗೆ ಸಾಕಷ್ಟು ಹವಾ ನಿರ್ಮಿಸಿದ್ದು, ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಂ. ಸದ್ಯ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ತಮ್ಮ ಅಂತಿಮ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಇದು ಅಂತಿಮ ಪಂದ್ಯವಷ್ಟೇ ಅಲ್ಲ ಮೆಕಲಂ 101 ನೇ ಪಂದ್ಯ ಎನ್ನುವುದು ಮತ್ತೊಂದು ವಿಶೇಷ. ಈ ಮಹತ್ವದ ಪಂದ್ಯದಲ್ಲಿ ಮೆಕಲಂ ದಾಖಲೆ ಇನಿಂಗ್ಸ್ ಆಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೇವಲ 54 ಎಸೆತಗಳಲ್ಲಿ 100 ರನ್ ಪೂರೈಸಿ ಟೆಸ್ಟ್ ಇತಿಹಾಸದಲ್ಲೇ ವೇಗದ ಶತಕ ಬಾರಿಸಿದ್ದಾರೆ ಬ್ರೆಂಡನ್. ಆ ಮೂಲಕ 30 ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್ (56 ಎಸೆತದಲ್ಲಿ ಶತಕ) ದಾಖಲೆಯನ್ನು ಪುಡಿ ಮಾಡಿದ್ದಾರೆ. ಮೆಕಲಂ ಮಿಂಚಿನ ಬ್ಯಾಟಿಂಗ್ ನೋಡಿದ ನಂತರ ಅಭಿಮಾನಿಗಳಲ್ಲಿ ಮೂಡುತ್ತಿರುವ ಪ್ರಶ್ನೆ, ಬ್ರೆಂಡನ್ ಇಷ್ಟುಬೇಗ ನಿವೃತ್ತಿಯಾಗಬೇಕೆ ಎಂದು.

ನಿಜ, ಪ್ರತಿ ಕ್ರಿಕೆಟಿಗನಿಗೂ ಪದಾರ್ಪಣೆಯ ಪಂದ್ಯ ಹೇಗೆ ಮಹತ್ವವೋ ಅದೇ ರೀತಿ ವಿದಾಯದ ಪಂದ್ಯವೂ ಭಾವನಾತ್ಮಕವಾಗಿ ಪ್ರಾಮುಖ್ಯತೆ ಪಡೆದಿರುತ್ತದೆ. ಈ ಅವಕಾಶವನ್ನು ಬಳಸಿಕೊಂಡು ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದ ಅಂತಿಮ ಪುಟವನ್ನು ಸುವರ್ಣಾಕ್ಷರದಲ್ಲಿ ಬರೆದುಕೊಂಡಿದ್ದಾರೆ ಮೆಕಲಂ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಕಾಲಾವಧಿಯವರೆಗೂ ಕೌಶಲ್ಯ ಹಾಗೂ ಸಾಮರ್ಥ್ಯ ಪ್ರದರ್ಶಿಸಿ, ಅಭಿಮಾನಿಗಳ ಮನ ಗೆದ್ದು ವಿಜೃಂಭಿಸಿದ ಎಷ್ಟೋ ಕ್ರಿಕೆಟಿಗರಿಗೆ ಸರಿಯಾಗಿ ವಿದಾಯದ ಪಂದ್ಯವೆಂಬ ಗೌರವ ಸಿಕ್ಕೇ ಇಲ್ಲ. ಅದಕ್ಕೆ ನಮ್ಮದೇ ಆದ ತಾಜಾ ಉದಾಹರಣೆ ಆಗಿ ನಿಲ್ಲುವವರು ವಿರೇಂದ್ರ ಸೆಹ್ವಾಗ್. ಮತ್ತೆ ಕೆಲವರಿಗೆ ಈ ಗೌರವ ಸಿಕ್ಕರೂ, ಫಾರ್ಮ್ ವೈಫಲ್ಯವೊ ಅಥವಾ ಇತರೆ ಒತ್ತಡದಿಂದಲೋ, ತಮ್ಮ ಪ್ರದರ್ಶನದ ಮೂಲಕ ವಿದಾಯದ ಪಂದ್ಯವನ್ನು ಅವಿಸ್ಮರಣೀಯವಾಗಿಸುವುದು ತೀರಾ ಕಡಿಮೆ. ಆದರೆ, ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಂ ಈ ವಿಷಯದಲ್ಲಿ ಎಲ್ಲರಿಗಿಂತ ಭಿನ್ನ.

ಟೆಸ್ಟ್ ಪಂದ್ಯ ಎಂದರೇ ಸ್ಲೋಮೊಷನ್ ಪಂದ್ಯ, ಸಿಕ್ಕಾಪಟ್ಟೆ ಬೋರು, ಪಂದ್ಯ ನೋಡುತ್ತಿದ್ದರೆ ನಿದ್ದೆ ಬರುತ್ತದೆ ಎಂದು ಕೊರಗುವವರ ಸಂಖ್ಯೆ ಹೆಚ್ಚು. ಇವರಿಗೆ ಟೆಸ್ಟ್ ಪಂದ್ಯದಲ್ಲೂ ಟಿ20 ಫ್ಲೇವರ್ ಪರಿಚಯಿಸಿದ ದೈತ್ಯ ಬ್ಯಾಟ್ಸ್ ಮನ್ ಗಳ ಪೈಕಿ ಮೆಕಲಂ ಸಹ ಪ್ರಮುಖರು.

ಭಾರತದ ವಿರೇಂದ್ರ ಸೆಹ್ವಾಗ್, ವಿಂಡೀಸ್ ನ ವಿವಿಯನ್ ರಿಚರ್ಡ್ಸ್, ಕ್ರಿಸ್ ಗೇಯ್ಲ್, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಆ್ಯಡಂ ಗಿಲ್ ಕ್ರಿಸ್ಟ್ ರಂತಹ ಮಹಾನ್ ಆಟಗಾರರ ಸಾಲಿನಲ್ಲಿ ಮೆಕಲಂ ಸಹ ಸ್ಥಾನ ಗಿಟ್ಟಿಸಿಕೊಂಡವರು. ಟಿ20, ಏಕದಿನ ಅಷ್ಟೇ ಅಲ್ಲ ಟೆಸ್ಟ್ ಕ್ರಿಕೆಟ್ ನಲ್ಲೂ ನಾವೂ ಬೌಲರ್ ಗಳನ್ನು ದಂಡಿಸಿಯೇ ತೀರುತ್ತೇವೆ ಎಂದು ಶಪಥ ತೊಟ್ಟವರು ಮೆಕಲಂ. ಬ್ಯಾಟಿಂಗ್, ಕೀಪಿಂಗ್ ಹಾಗೂ ಫೀಲ್ಡಿಂಗ್ ಎಲ್ಲದರಲ್ಲೂ 100% ಕಮಿಟ್ಮೆಂಟ್ ಇವರದು. ಮೈದಾನದಲ್ಲಿ ಬ್ಯಾಟಿಂಗ್ ಮಾಡುವಾಗಷ್ಟೇ ಉಗ್ರಾವತಾರ ತಾಳುತ್ತಿದ್ದ ಮೆಕಲಂ, ಯಾವುದೇ ವಿವಾದಕ್ಕೂ ಸಿಲುಕದ ಕ್ರಿಕೆಟ್ ನ ಪರ್ಫೆಕ್ಟ್ ಜಂಟಲ್ ಮನ್.

ಮೆಕಲಂ ಉತ್ತಮ ಫಾರ್ಮ್ ನಲ್ಲಿರುವಾಗಲೇ ನಿವೃತ್ತಿ ಪಡೆಯುತ್ತಿರುವುದೇಕೆ? ಇನ್ನು ಎರಡು ವರ್ಷ ಆಡಬಹುದಿತ್ತು ಎಂಬ ನಿರಾಶೆಯ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಮೆಕಲಂ ಅವರ ವೃತ್ತಿ ಜೀವನದಲ್ಲಿ ವಿಲನ್ ಆಗಿದ್ದು, ಫಾರ್ಮ್ ಸಮಸ್ಯೆಯಲ್ಲ. ಇವರ ವೃತ್ತಿ ಬದುಕಿಗೆ ಅಡ್ಡಗಾಲು ಹಾಕಿದ್ದು, ಗಾಯದ ಸಮಸ್ಯೆ. ಕೆಲ ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದ ಮೆಕಲಂ, ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಜಾಹೀರಾತು ಫಲಕದ ಮೇಲೆ ಬಿದ್ದರು. ಆರಂಭದಲ್ಲಿ ಅದು ಸಣ್ಣ ಪ್ರಮಾಣದ ಗಾಯ ಎಂದು ಭಾವಿಸಲಾಯಿತು. ಆದರೆ, ಗಾಯದ ಸ್ವರೂಪ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರಿಯಲು ಸಹಕರಿಸುವುದು ಕಷ್ಟ ಎಂಬುದನ್ನು ಅರಿತ ಮೆಕಲಂ ಕಳೆದ ತಿಂಗಳೇ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳುವ ನಿರ್ಧಾರಕ್ಕೆ ಬಂದರು. ಈ ದಾಖಲೆಯ ಇನಿಂಗ್ಸ್ ನಂತರ ಮೆಕಲಂ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಆಡುತ್ತಿಲ್ಲ ಎಂಬ ಕೊರಗು ಅಭಿಮಾನಿಗಳನ್ನು ಕಾಡುವುದರಲ್ಲಿ ಅನುಮಾನವಿಲ್ಲ.

ಬ್ರೆಂಡನ್ ಮೆಕಲಂ ವೃತ್ತಿ ಜೀವನದ ಪ್ರಮುಖ ಹೆಜ್ಜೆ ಗುರುತು ಹೀಗಿವೆ.

  • 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹ್ಯಾಮಿಲ್ಟನ್ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ. ಆಸ್ಟ್ರೇಲಿಯಾ ವಿರುದ್ಧ ಫೆ.20 2016 ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯ ಕಡೇಯ ಅಂತಾರಾಷ್ಟ್ರೀಯ ಪಂದ್ಯ.
  • ಅಂಕಿ ಅಂಶ: ಟೆಸ್ಟ್ (101 ಪಂದ್ಯ, 6428 ರನ್, 38.07 ಸರಾಸರಿ, 302 ಗರಿಷ್ಠ, 12 ಶತಕ, 31 ಅರ್ಧಶತಕ, 194 ಕ್ಯಾಚ್, 11 ಸ್ಟಂಪ್) (ಫೆ.20ರ ವರೆಗಿನ ಮಾಹಿತಿ), ಏಕದಿನ (260 ಪಂದ್ಯ, 6083 ರನ್, 30.41 ಸರಾಸರಿ, 166 ಗರಿಷ್ಠ, 5 ಶತಕ, 32 ಅರ್ಧಶತಕ, 262 ಕ್ಯಾಚ್, 15 ಸ್ಟಂಪ್), ಟಿ20 (71 ಪಂದ್ಯ, 2140 ರನ್, 35.66 ಸರಾಸರಿ, 123 ಗರಿಷ್ಠ, 2 ಶತಕ, 13 ಅರ್ಧಶತಕ, 36 ಕ್ಯಾಚ್, 8 ಸ್ಟಂಪ್)
  • ಮೆಕಲಂ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ 2015ರಲ್ಲಿ ಫೈನಲ್ ಪ್ರವೇಶ. ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ.
  • ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 1000 ರನ್ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟ್ಸ್ ಮನ್.
  • ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಎರಡು ಶತಕ ದಾಖಲಿಸಿರುವ ಏಕೈಕ ಬ್ಯಾಟ್ಸ್ ಮನ್.

Leave a Reply