ಸಂಸಾರದಲ್ಲಿ ಗಂಡ-ಹೆಂಡತಿ ಪಾತ್ರ ಅದಲು-ಬದಲಾದರೆ ಹೇಗೆ? ಉತ್ತರಕ್ಕೆ ನೋಡಿ ಬಾಲ್ಕಿಕಾ ‘ಕಿ ಅಂಡ್ ಕ’!

ಡಿಜಿಟಲ್ ಕನ್ನಡ ಟೀಮ್

ಕುತೂಹಲ ಮೂಡಿಸ್ತಿದೆ, ಬಾಲ್ಕಿಯ ಮತ್ತೊಂದು ಪ್ರಯೋಗ ‘ಕಿ ಅಂಡ್ ಕ’ ಟ್ರೇಲರ್.
ಬಾಲಿವುಡ್ ನ ಹೊಸ ಸಿನಿಮಾ ‘ಕಿ ಅಂಡ್ ಕ’ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಚಿತ್ತ ಸೆಳೆಯುತ್ತಿದೆ. ಸೈಫ್ ಅಲಿ ಖಾನ್ ಮದುವೆಯಾದ ನಂತರ ಸಿನಿಮಾದ ಕಿಸ್ಸಿಂಗ್ ಸೀನ್ ಗಳಲ್ಲಿ ಕಾಣಿಸಿಕೊಳ್ಳೋದಿಲ್ಲ ಎಂದಿದ್ದ ಕರಿನಾ ಕಪೂರ್ ಖಾನ್ ಈ ಸಿನಿಮಾದಲ್ಲಿ ಅರ್ಜುನ್ ಕಪೂರ್ ಜತೆ ಸಾಕಷ್ಟು ಲಿಪ್ ಲಾಕ್ ಮಾಡಿ, ತಮ್ಮ ಮಾತು ಮುರಿದಿದ್ದಾರೆ. ಇದು ಸಿನಿಮಾ ಟ್ರೇಲರ್ ಬಿಡುಗಡೆಯಾದ ನಂತರ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಈ ಟ್ರೇಲರ್ ಕೇವಲ ಕರಿನಾ ಕಪೂರ್ ಕಿಸ್ಸಿಂಗ್ ಸೀನ್ ಬಗ್ಗೆ ಚರ್ಚೆಗೆ ಮಾತ್ರ ಸೀಮಿತವಾಗಿಲ್ಲ. ನಿರ್ದೇಶಕ ಆರ್. ಬಾಲ್ಕಿ ಎಂದಿನಂತೆ ತೆರೆಯ ಮೇಲೆ ವಿಭಿನ್ನ ಕತೆ ತಂದಿರುವ ಪ್ರಯತ್ನ ಗಮನ ಸೆಳೆದಿದೆ.
2007 ರಲ್ಲಿ ‘ಚೀನಿ ಕಮ್’ ಚಿತ್ರ ನಿರ್ದೇಶನದ ಮೂಲಕ ಪದಾರ್ಪಣೆ ಮಾಡಿದ ಆರ್. ಬಾಲ್ಕಿ, 2-3 ವರ್ಷಕ್ಕೊಂದು ಸಿನಿಮಾ ತಂದವರು. ‘ಪಾ’ (2009), ‘ಇಂಗ್ಲೀಷ್ ವಿಂಗ್ಲಿಷ್’ (2012), ‘ಶಮಿತಾಬ್’ (2015) ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡವರು. ‘ಶಮಿತಾಬ್’ ಬಂದ ವರ್ಷದ ಅಂತರದಲ್ಲೇ ಈ ಚಿತ್ರ ತಯಾರಾಗುತ್ತಿರುವುದು ಮತ್ತೊಂದು ವಿಶೇಷ. ಭಾಲ್ಕಿ ಕತೆ ವಿಭಿನ್ನತೆ ಏನು ಎಂಬ ಪ್ರಶ್ನೆಗೆ ಉತ್ತರ ಟ್ರೇಲರ್ ನಲ್ಲಿದೆ.

ಗಂಡ ಹೊರಗೆ ದುಡಿದು ಮನೆಗೆ ಆಧಾರವಾಗೋದು, ಹೆಂಡತಿ ಗೃಹಿಣಿಯಾಗಿ ಮನೆ ನಿಭಾಯಿಸೋದು ಭಾರತ ಸಮಾಜದ ಪರಾಂಪರಗತ ಪದ್ಧತಿ. ಆದರೆ ಇದು ಉಲ್ಟಾ ಆದರೆ ಹೇಗೆ? ಅದೇ ಈ ಸಿನಿಮಾ ಎಳೆ. ಅರರೆ.. ಇದೇಗೆ ಸಾಧ್ಯ? ‘ಉದ್ಯೋಗಂ ಪುರುಷ ಲಕ್ಷಣಂ’. ಹೀಗಿರುವಾಗ ಈ ಕತೆಯನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂದು ನೀವು ಕೇಳಬಹುದು.ಅದು ಒಂದು ಹಂತಕ್ಕೆ ಸರಿಯೇ.
ಆದರೆ ಇಲ್ಲೊಂದು ಕ್ಲಾರಿಫಿಕೇಷನ್. ಇಲ್ಲಿ ಮನೆ ಜವಾಬ್ದಾರಿ ನಿಭಾಯಿಸುವ ನಾಯಕ ಸಲಿಂಗಿ ಅಲ್ಲವೇ ಅಲ್ಲ. ಇತರ ಗಂಡಸರಂತೆ, ಗಂಡಂದಿರಂತೆ ಸಹಜವಾಗಿರುವವ. ಆದರೆ ವ್ಯಾಪಾರ, ವ್ಯವಹಾರದ ತಲೆ ನೋವಿನಿಂದ ಮುಕ್ತಿ ಬಯಸಿ, ತನ್ನ ತಾಯಿಯಂತೆ ಗೃಹಿಣಿ ಹೊಣೆ ಹೊರಲು ಇಷ್ಟ ಪಡುತ್ತಾನೆ. ಈ ಪರಿಕಲ್ಪನೆ ಕರಿನಾ ಕಪೂರ್ ಮತ್ತು ಅರ್ಜುನ್ ಕಪೂರ್ ಮನೋಜ್ಞ ಅಭಿನಯದ ಮೂಲಕ ತೆರೆಯ ಮೇಲೆ ಅಚ್ಚುಕಟ್ಟಾಗಿ ಬಂದಿದೆ. ಸಾಮಾಜಿಕ ವಲಯದಲ್ಲಿ ಬಾಲ್ಕಿಯವರ ಈ ಪ್ರಯೋಗದಲ್ಲಿ ಎಷ್ಟರ ಮಟ್ಟಿಗೆ ಸ್ವೀಕೃತಿ ಆಗುತ್ತದೆ ಎಂಬುದು ಸಿನಿಮಾ ಬಿಡುಗಡೆ ನಂತರ ತಿಳಿಯಬೇಕಷ್ಟೇ.

Leave a Reply