ದೃಷ್ಟಿ ಕಳೆದುಕೊಂಡರೂ ಯಶಸ್ಸಿನ ದೀಪ ಹಚ್ಚಿದವರಿವರು!

ಡಿಜಿಟಲ್ ಕನ್ನಡ ಟೀಮ್

ದೀಪ ಹಚ್ಚಬೇಕು, ಬೆಳಕು ನೀಡಬೇಕು, ಸಮಾಜಕ್ಕೆ ದಾರಿದೀವಿಗೆ ಆಗಬೇಕು ಎಂದೆಲ್ಲ ಮಾತಾಡುತ್ತೇವೆ. ಇದೂ ದೀಪ ಹಚ್ಚಿದವರೊಬ್ಬರ ಕತೆ. ಕ್ಯಾಂಡಲ್ ಉದ್ಯಮಿಯೊಬ್ಬರ ಯಶೋಗಾಥೆ. ಮೇಣದಬತ್ತಿ ಫ್ಯಾಕ್ಟರಿ ಹೊಂದಿರೋದೇ ಸಾಧನೆಯೇ ಅಂತ ನಿಮ್ಮಲ್ಲಿ ಅನುಮಾನ ಸುಳಿಯತೊಡಗಿದರೆ… ಹೇಳಿಯೇಬಿಡ್ತೇವೆ… 25 ಕೋಟಿ ರು. ಮೌಲ್ಯದ ಕ್ಯಾಂಡಲ್ ಕಂಪನಿ ಕಟ್ಟಿದವಗೆ ದೃಷ್ಟಿಯೇ ಇಲ್ಲ. ಅವರು ಹಚ್ಚಿದ ದೀಪವನ್ನು ಸಮಾಜವಷ್ಟೇ ನೋಡುತ್ತದೆ!

ಭಾವೇಶ್ ಭಾಟಿಯಾ ಕತೆ. ಭಾವೇಶ್ ಸಾಧನೆಯ ಹಾದಿ ನಿಮಗೂ ಸ್ಫೂರ್ತಿಯಾಗಬಹುದು ಎಂದು ಈ ವಾರಾಂತ್ಯದಲ್ಲಿ ಅವರ ಬಗ್ಗೆ ಹೇಳುತ್ತಿದ್ದೇವೆ.

‘ನೀನು ಪ್ರಪಂಚ ನೋಡದಿದ್ದರೇನು, ಪ್ರಪಂಚ ನಿನ್ನ ನೋಡುವಂತೆ ಮಾಡು’ ಎಂಬ ತಾಯಿಯ ಮಾತನ್ನು ತನ್ನ ಮನದಲ್ಲಿ ಗುರಿಯಾಗಿಟ್ಟುಕೊಂಡು ಹೊರಟ ಒಬ್ಬ ದಿವ್ಯಾಂಗ ಇಂದು 25 ಕೋಟಿ ಮೌಲ್ಯದ ಕಂಪನಿಯೊಂದರ ಮಾಲೀಕ. ಸದ್ಯ ಮಹಾರಾಷ್ಟ್ರದಲ್ಲಿ ‘ಸನ್ ರೈಸ್ ಕ್ಯಾಂಡಲ್ಸ್’ ಮೊಂಬತ್ತಿ ಕಂಪನಿ ಸಾಕಷ್ಟು ಸುದ್ದಿ ಮಾಡಿದೆ. ಈ ಕಂಪನಿ ಈಗ 9000 ವಿಭಿನ್ನ ಮೊಂಬತ್ತಿಗಳನ್ನು ಉತ್ಪಾಸುತ್ತಿದೆ. ತೇಲುವ, ಖ್ಯಾತ ಕಾರ್ಟೂನ್ ಮಾದರಿಯ ಹಾಗೂ ವಿವಿಧ ಹಬ್ಬಗಳಿಗೆ ಹಾಗೂ ಸಮಾರಂಭಗಳಿಗೆ ಹೊಂದುವಂತಹ ಬಗೆ ಬಗೆಯ ಕ್ಯಾಂಡಲ್ ಗಳನ್ನು ತಯಾರಿಸುತ್ತಿದೆ. ಈ ಕಂಪನಿಯ ಒಟ್ಟು ಮೌಲ್ಯ ಈಗ ಬರೋಬ್ಬರಿ 25 ಕೋಟಿ. ಅಲ್ಲದೇ ಈ ಕಂಪನಿ ದೃಷ್ಟಿದೋಷ ಇರುವ ಇತರ 85 ಮಂದಿಗೂ ಉದ್ಯೋಗ ನೀಡಿದೆ. ಅರೆ, ದೃಷ್ಟಿ ಇಲ್ಲದಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಂಪನಿ ಬೆಳೆಸಲು ಹೇಗೆ ಸಾಧ್ಯ ಎಂದು ಅಚ್ಚರಿ ಪಡಬೇಡಿ. ಮನಸ್ಸಿದ್ದರೆ ಮಾರ್ಗ. ಗುರಿ ಮುಟ್ಟುವ ಛಲವಿದ್ದರೆ ಅಂಗವೈಕಲ್ಯ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂಬುದನ್ನು ಭಾವೇಶ್ ಸಾಬೀತು ಮಾಡಿರುವುದೇ ನಮಗೆ ಮಾದರಿ.

ಭಾವೇಶ್ ಹುಟ್ಟಿನಿಂದ ಅಂಧತೆಯನ್ನು ಪಡೆಯಲಿಲ್ಲ. ಪ್ರಾಪ್ತ ವಯಸ್ಕನಾಗಿದ್ದ ಸಂದರ್ಭದಲ್ಲಿ ಕಣ್ಣಿನ ರೆಟಿನಾ (ರೆಟಿನಾ ಮಸ್ಕ್ಯೂಲರ್ ಡಿಟೆರಿಯೊರೆಷನ್)ಗೆ ಸಂಬಂಧಿಸಿದ ಅನಾರೋಗ್ಯದಿಂದ ಭಾವೇಶ್ ದೃಷ್ಟಿ ಕಳೆದುಕೊಂಡ. ಆತನ ತಾಯಿಯ ಮಾತುಗಳು ಆತನಿಗೆ ಪ್ರೇರೇಪಣೆಯಾದವು. ಮಹಾರಾಷ್ಟ್ರದ ಮಹಾಬಲೇಶ್ವರದ ಹೊಟೇಲ್ ಒಂದರಲ್ಲಿ ಕೆಲಸ ಮಾಡುವಾಗ ದೃಷ್ಟಿ ಜತೆಗೆ ಕೆಲಸವನ್ನು ಕಳೆದುಕೊಂಡಾಗ ಅವರಿಗೆ 23 ವರ್ಷ. ಅದೇ ಸಂದರ್ಭದಲ್ಲಿ ಅವರ ತಾಯಿ ಕ್ಯಾನ್ಸರ್ ಗೆ ಬಲಿಯಾದರು.

ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಕಳೆದುಕೊಂಡೆ, ಇನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಕೊರಗದೇ ಭಾವೇಶ್ ನೇರವಾಗಿ ಹೋಗಿದ್ದು, ನ್ಯಾಷನಲ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಸಂಸ್ಥೆಗೆ. ಅಲ್ಲಿ ಮೊಂಬತ್ತಿ ತಯಾರಿಸುವ, ಮಸಾಜ್ ಥೆರಪಿಸ್ಟ್ ಮತ್ತು ಆಕ್ಯೂಪ್ರೆಷರ್ ನ ತರಬೇತಿ ಪಡೆದರು. ತರಬೇತಿ ಪಡೆದ ನಂತರ ಅವರ ಆಸಕ್ತಿ ಬೆಳೆದಿದ್ದು, ಕ್ಯಾಂಡಲ್ ತಯಾರಿಸುವ ವ್ಯವಹಾರ ಆರಂಭಿಸಲು. ಆದರೆ, ತಕ್ಷಣವೇ ಅದಕ್ಕೆ ಬಂಡವಾಳ ತರುವುದಾದರೂ ಎಲ್ಲಿಂದ? ಈ ಪರಿಸ್ಥಿತಿಯಲ್ಲಿ ಭಾವೇಶ್, ಹೊಟೇಲ್ ಒಂದರಲ್ಲಿ ಮಸಾಜ್ ಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸಿದರು. ಅಲ್ಲಿ ಸ್ವಲ್ಪ ಹಣವನ್ನು ಕೂಡಿಟ್ಟರು. ಈ ಕೂಡಿಟ್ಟ ಹಣದಿಂದ ಸಾಧಾರಣ ಮೊಂಬತ್ತಿ ಮಾಡುವ ಅಚ್ಚು ಮತ್ತು 5 ಕೆ.ಜಿ ಮೇಣ ಖರೀದಿಸಿ, ಕನಸಿನ ವ್ಯಾಪಾರಕ್ಕೆ ನಾಂದಿಯಾಡಿದರು. ಅಲ್ಲಿಂದ ಭಾವೇಶ್ ಯಶಸ್ಸಿನ ಪಯಣದಲ್ಲಿ ಹಿಂತಿರುಗಿ ನೋಡಿದ್ದಿಲ್ಲ. ಈಗ ಈ ಕಂಪನಿ ನಿತ್ಯ ಕ್ಯಾಂಡಲ್ ತಯಾರಿಸಲು ಟನ್ ಗಟ್ಟಲೆ ಮೇಣ ಬಳಸುತ್ತಿದೆ.

ತಮ್ಮ ಕಂಪನಿಯ ಬಗ್ಗೆ ದೇಶದ ವಿವಿಧ ಭಾಗಗಳಲ್ಲಿ ವಸ್ತುಪ್ರದರ್ಶನ ಏರ್ಪಡಿಸಿ, ವಿವಿಧ ಶಾಖೆಗಳನ್ನು ಆರಂಭಿಸಿ ಅಲ್ಲಿಯೂ ದೃಷ್ಟಿ ಸಮಸ್ಯೆ ಹೊಂದಿರುವವರಿಗೆ ಸ್ವಾಭಿಮಾನವಾಗಿ ಬದುಕಲು ಹೊಸ ಅವಕಾಶ ಕಲ್ಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ವ್ಯಾಪಾರದ ಆರಂಭಿಕ ದಿನಗಳಲ್ಲಿ ಭಾವೇಶ್ ಗೆ ನಿತ್ಯ ವ್ಯವಹಾರ ತಂತ್ರಗಳ ಹೊಸ ಹೊಸ ಕಲಿಕೆ ಹಂತ. ಮತ್ತೊಂದೆಡೆ ದೃಷ್ಟಿ ಇಲ್ಲ, ಕಾಡುವ ಬಡತನ, ಹೀಗೆ ಹತ್ತುಹಲವು ಸವಾಲುಗಳನ್ನು ಮೆಟ್ಟಿ ನಿಂತ ಭಾವೇಶ್ ಇಂದು ಯಶಸ್ವಿ ಉದ್ದಿಮೆದಾರ ಎಂದರೆ ತಪ್ಪಲ್ಲ.

ಭಾವೇಶ್ ಕ್ರೀಡೆಯಲ್ಲೂ ಮುಂದು. ಶಾಟ್ ಪುಟ್, ಡಿಸ್ಕಸ್ ಥ್ರೋ, ಜಾವ್ಲಿನ್ ಥ್ರೋ ಮತ್ತು 200ಮೀ. ಸ್ವಿಮ್ಮಿಂಗ್ ನಲ್ಲಿ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳು ಇವರ ಕೊರಳನ್ನು ಅಲಂಕರಿಸಿವೆ.

ಭಾರತದಲ್ಲಿ ಮೇಣದ ವಸ್ತು ಸಂಗ್ರಹಾಲಯ ಮಾಡುವುದು ಭಾವೇಶ್ ಅವರ ಕನಸು. ಕಣ್ಣು ಕಳೆದುಕೊಂಡು ಕತ್ತಲಲ್ಲಿ ಬೆಳಗುವ ಮೊಂಬತ್ತಿ ವ್ಯಾಪಾರದಲ್ಲಿ ಸಾಧನೆಯ ಶಿಖರ ಏರಿದ ಭಾವೇಶ್, ಕೇವಲ ದಿವ್ಯಾಂಗರಿಗೆ ಮಾತ್ರವಲ್ಲ ಇತರ ಯುವ ಜನಾಂಗಕ್ಕೂ ರೋಲ್ ಮಾಡೆಲ್ ಆಗುವುದರಲ್ಲಿ ಅನುಮಾನವಿಲ್ಲ.

Leave a Reply