ಪೋಪ್ ಫ್ರಾನ್ಸಿಸ್‍ರನ್ನು ಪಲ್ಟಾಯಿಸಿದ ಝಿಕಾ ವೈರಸ್

 

tr anantaramu

ಟಿ.ಆರ್. ಅನಂತರಾಮು

ಝಿಕಾ ವೈರಸ್ ಗೊತ್ತಲ್ಲ, ಲ್ಯಾಟಿನ್ ಅಮೆರಿಕ ದೇಶಗಳನ್ನು ಪಟ್ಟಾಗಿ ಹಿಡಿದು ಜ್ವರ ತಂದು ಅಲ್ಲಾಡಿಸಿಬಿಟ್ಟಿದೆ. ಇದೂ ಕೂಡ ಹೆಣ್ಣು ಸೊಳ್ಳೆಯಿಂದ ಹರಡುವ ಕಾಯಿಲೆ. ಇನ್ನುಮೇಲೆ ಅನಾಫಿಲಿಸ್ ಸೊಳ್ಳೆಯನ್ನು ಜ್ಞಾಪಿಸಿಕೊಂಡಂತೆ ಇದನ್ನೂ ಬಾಯಿಪಾಠ ಮಾಡಬೇಕೋ ಏನೋ. ಲ್ಯಾಟಿನ್ ಅಮೆರಿಕ ದೇಶಗಳಷ್ಟೇ ಅಲ್ಲ, ಕೆಲವು ಆಫ್ರಿಕ ದೇಶಗಳಿಗೂ ದಮಕಿ ಹಾಕಿದೆ. ಡೆಂಗ್ಯೂ, ಚಿಕನ್‍ಗುನ್ಯಾ, ಹಳದಿಜ್ವರ, ಜಪಾನೀಸ್ ಎನ್‍ಸೆಪೆಲೈಟಿಸ್ ತರೋ ವೈರಸ್‍ಗಳ ಬಹಳ ಹತ್ತಿರ ಸಂಬಂಧಿ ಇದಂತೆ-ಮಾರಿ ವಂಶದ ಪ್ರಜೆ! ನಮ್ಮಲ್ಲಿ ಕ್ಯಾಸನೂರು ಕಾಡಿನಿಂದ ಬಂದ ಮಂಗನ ಜ್ವರದ ತರಹ ಉಗಾಂಡಾದ ಝಿಕಾ ಕಾಡಿನ ಕೋತಿಗಳಲ್ಲಿ ಮೊದಲು ಪತ್ತೆಯಾದ ಕಾಯಿಲೆ ಇದು. ನಮಗೆ ಇಲ್ಲಿ ಸ್ವಾತಂತ್ರ್ಯ ಬಂದಾಗ, ಅಲ್ಲಿ ಈ ಕಾಯಿಲೆ ಸ್ವತಂತ್ರವಾಗಿ ಅಡ್ಡಾದಿಡ್ಡಿಯಾಗಿ ಹಾಯ್ದು ಜನಗಳನ್ನು ಗೋಳು ಹೊಯ್ದುಕೊಂಡಿತ್ತು. ಹಗಲಿನಲ್ಲಿ ಹಾರಾಟ, ಕಚ್ಚಾಟ ಮಾಡುವ ಏಡೀಸ್ ಎಂಬ ಜಾತಿಯ ಸೊಳ್ಳೆ ಈ ವೈರಸ್ಸನ್ನು ಬಿಟ್ಟಿಯಾಗಿ ಸಾಗಿಸುತ್ತದೆ. ಲೈಂಗಿಕ ಕ್ರಿಯೆಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡಬಹುದು. ಬಸುರಿಯರ ಭ್ರೂಣಕ್ಕೂ ಸಂಚಕಾರ ತಂದು ಕೊನೆಗೆ ಮಗು ಹುಟ್ಟಿದಾಗ ಮಿದುಳು ಯದ್ವಾತದ್ವಾ ಬೆಳೆದು ಶಾಶ್ವತವಾಗಿ ಬುದ್ಧಿಮಾಂದ್ಯವಾಗಬಹುದು. ಈ ದರಿದ್ರ ಕಾಯಿಲೆ ತರುವ ವೈರಸ್ಸಿಗೆ ಸದ್ಯಕ್ಕಂತೂ ಯಾವ ರಾಮಬಾಣವೂ ಇಲ್ಲ. ವ್ಯಾಕ್ಸೀನ್ ತಯಾರು ಮಾಡೋದಕ್ಕೆ ಇನ್ನೂ ಎರಡು ವರ್ಷ ಬೇಕಂತೆ. ಸದ್ಯಕ್ಕೆ ಸೊಳ್ಳೆಗಳಿಂದ ದೂರವಿರಿ ಅನ್ನೋದೆ ಮಂತ್ರ ಆಗಿದೆ.

ರೋಮ್ ಚಕ್ರಾಧಿಪತ್ಯದಲ್ಲಿ ಕೂತ ಪೋಪ್ ಫ್ರಾನ್ಸಿಸ್‍ಗೂ ಈ ವೈರಸ್ಸಿಗೂ ಏನು ಸಂಬಂಧ? ಪೋಪ್ ಫ್ರಾನ್ಸಿಸ್ ಈಗ್ಗೆ ಎರಡು ದಿನಗಳ ಹಿಂದೆ ಲ್ಯಾಟಿನ್ ಅಮೆರಿಕ ದೇಶಗಳಿಗೆ ಭೇಟಿಕೊಟ್ಟು ಹಿಂತಿರುಗುವಾಗ ವಿಮಾನದಲ್ಲೇ ಪ್ರೆಸ್ಸಿನವರು ಫಜೀತಿ ಪ್ರಶ್ನೆ ಕೇಳಿದ್ದರು. ‘ಧರ್ಮ ಗುರುಗಳೇ, ಈಗಿನ ಸ್ಥಿತಿ ಹೇಳಿ. ಕಾಂಟ್ರಸೆಪ್ಟಿವ್ ಬಳಸಿ ಇಂಥ ರೋಗ ತಡೆಯಬೇಕೋ, ಇಲ್ಲಾ ಈ ರೋಗ ತಗಲಿದ ಗರ್ಭಿಣಿಯ ಗರ್ಭಪಾತ ಮಾಡಿಸಬೇಕೋ’. ಪೋಪ್‍ಗೆ ಸಖತ್ ಕೋಪ ಬಂತು.’ಎಲ್ಲಾದ್ರೂ ಉಂಟೇ, ಗರ್ಭಪಾತ ಮಹಾಪಾಪ. ಒಬ್ಬರನ್ನು ಉಳಿಸೋದಕ್ಕೆ ಇನ್ನೊಬ್ಬರನ್ನು ಕೊಲ್ಲೋದೆ? ಉಂಟೇ’ ಎಂದು ಮರುಪ್ರಶ್ನೆ ಎಸೆದರು. (ಪಾಪ ಪೋಪ್ ರಿಗೆ ಒಂದು ಸಂಗತಿ ಮರೆತೇ ಹೋಗಿದೆ. 2012ರಲ್ಲಿ ಸವಿತಾ ಹಾಲಪ್ಪ ಎಂಬ ದಂತವೈದ್ಯೆ ತನ್ನ ಗರ್ಭಪಾತ ಮಾಡೀಂತ ಪರಿಪರಿಯಾಗಿ ಐರ್ಲೆಂಡಿನ ಯೂನಿವರ್ಸಿಟಿ ಆಸ್ಪತ್ರೆಯವರನ್ನ ಬೇಡಿಕೊಂಡ್ರೂ ಆಸ್ಪತ್ರೆಯವರು ಕೇಳದೆ ಆಕೆ ಸತ್ತಳು. ಮಗೂ ಕೂಡ ಹೋಯಿತು). ಪೋಪ್‍ಗೆ ಥಟ್ ಅಂಥ ಒಂದು ಐಡಿಯಾ ಹೊಳೆಯಿತು. ‘ನೋಡಿ, ಒಂದು ಕೆಲಸ ಮಾಡ್ಬಹುದು. ಗರ್ಭನಿರೋಧಕಗಳ್ನ ಬಳಸಬಹುದು. ಹಿಂದೆ ಆರನೇ ಪೋಪ್ ಪಾಲ್ ಒಂದು ಜಡ್ಜ್ ಮೆಂಟ್ ಕೊಟ್ಟಿದ್ದರಲ್ಲಾ, ಆಫ್ರಿಕನ್ ನನ್‍ಗಳನ್ನು ರೇಪ್ ಮಾಡಿದ ಸಂದರ್ಭ ಅದು. ಅಂಥ ಸಂದರ್ಭದಲ್ಲಿ ಪೋಪ್ ಗರ್ಭನಿರೋಧಕ ಬಳಸಬಹುದು ಎಂದಿದ್ದರು’. ಕಾಂಗೋದಲ್ಲಿ ರಾಜಕೀಯ ಅಸ್ಥಿರತೆ ಇದ್ದಾಗ ಯಾರು ಯಾರೋ ನನ್‍ಗಳನ್ನು ರೇಪ್ ಮಾಡಿದಾಗ ಅವರು ಇದನ್ನೇ ಪಾಲಿಸಿದ್ದರಂತೆ. ಝಿಕಾ ವೈರಸ್ ಅಮರಿಕೊಂಡಿರೋ ವ್ಯಕ್ತಿ ಲೈಂಗಿಕ ಚಟುವಟಿಕೆ ಮಾಡಿಯೂ ಬಚಾವಾಗೋದಕ್ಕೆ ಇದೊಂದೇ ಮದ್ದು ಅಂತ ಹೇಳಿ ಧೈರ್ಯವಾಗಿ ಘೋಷಣೆ ಮಾಡಿಯೇಬಿಟ್ಟರು. ಆದರೆ ಈ ಘೋಷಣೆಯಿಂದ ತಮ್ಮ ಮೈಮೇಲೆ ಒಂದು ದೊಡ್ಡ ಚಪ್ಪಡಿ ಎಳೆದುಕೊಂಡುಬಿಟ್ಟರು ಅನ್ನೋದು ಈಗ ಕ್ಯಾಥೋಲಿಕ್ ಚರ್ಚುಗಳ ಅಭಿಪ್ರಾಯ. ಆದರೆ ಜನ ಕ್ಯಾರೇ ಅಂತಿಲ್ಲ. ಮೆಕ್ಸಿಕೋ, ಕೊಲಂಬಿಯ, ಬ್ರಿಜಿಲ್‍ನಲ್ಲಿ ಝಿಕಾ ವೈರಸ್ ಅಟ್ಯಾಕ್ ಮಾಡಲಿ, ಬಿಡಲಿ, ಗರ್ಭನಿರೋಧಕಗಳನ್ನು ಬಳಸ್ತಾ ಇದ್ದಾರೆ. ‘ಹೆಣ್ಣುಮಕ್ಕಳೇ, ನೀವು ಗರ್ಭ ಧರಿಸೋದನ್ನ ಪೋಸ್ಟ್‍ಪೋನ್ ಮಾಡಿ ಜುಲೈವರೆಗೆ’ ಅಂತ ಬ್ರೆಜಿಲ್ ಮೊರೆ ಇಟ್ಟಿದೆ. ಅತ್ತ, ವಿಶ್ವ ಆರೋಗ್ಯ ಸಂಸ್ಥೆ ಇದನ್ನೇ ಬೆಂಬಲಿಸಿದೆ. ಬಿಷಪ್‍ಗಳು ಗರಂ ಆಗಿದ್ದಾರೆ. ಈ ಪೋಪ್‍ಗೇನು ತಲೆ ಕೆಟ್ಟಿದೆಯಾ ಅಂಥ ಕೇಳುತ್ತಿದ್ದಾರೆ. ಇದು ಧರ್ಮಕ್ಕೆ ವಿರುದ್ಧ ಅಲ್ವಾ ಅಂಥ ರಿವರ್ಸ್ ಪ್ರಶ್ನೆ ಎಸೆದಿದ್ದಾರೆ. ಚರ್ಚುಗಳು ಇದನ್ನೇ ದೊಡ್ಡದಾಗಿ ಚರ್ಚೆ ಮಾಡುತ್ತಿವೆ. ‘ಪೋಪ್ ಅವರು ಧರ್ಮಗುರು. ಬಡವರ ಪರವಾಗಿ, ನೊಂದವರ ಪರವಾಗಿ ನಿಂತಿದ್ದಾರೆ. ಮನುಷ್ಯರ ಸಂಕಟ ಸಮಯದಲ್ಲಿ ಈಗ ಅವರು ನೀಡಿರುವ ಹೇಳಿಕೆಯೇ ಸರಿ’ ಅಂತ ಕೆಲವರ ವಾದ. ಅಂತೂ ಝಿಕಾ ವೈರಸ್ ಧರ್ಮವನ್ನು ಅಲ್ಲಾಡಿಸುತ್ತಾ ಇದೆಯೋ ಅಥವಾ ಪೋಪ್‍ಅವರಿಗೆ ಏಟುಕೊಡುತ್ತ ಇದೆಯೋ ಗೊತ್ತಾಗೋದಕ್ಕೆ ಇನ್ನೂ ಕೆಲವು ಸಮಯ ಬೇಕು. ಅಷ್ಟರಲ್ಲೇ ಎಷ್ಟು ಮಂದಿ ಗೊಟಕ್ ಅಂತಾರೋ ಸದ್ಯಕ್ಕಂತೂ ಅದೂ ಗೊತ್ತಿಲ್ಲ. ಹವಾಗುಣ ಬದಲಾವಣೆ, ಜಾಗತೀಕರಣ ಎರಡೂ ಕೈಜೋಡಿಸಿದರೆ ಈ ವೈರಸ್ ಯಾವ ದೇಶಕ್ಕಾದರೂ ವಕ್ಕರಿಸಬಹುದು. ಜಾಗತೀಕರಣ ಅಂದರೆ ಬರೀ ವ್ಯಾಪಾರ ವಹಿವಾಟು ಮಾತ್ರ ಅಲ್ಲ, ರೋಗಗಳು ಹರಡೋದಕ್ಕೂ ಈಗ ಅದು ಭರ್ಜರಿ ಫ್ರೀ ಪಾಸ್.

(ಲೇಖಕರು ಭೂವಿಜ್ಞಾನಿ, ಕನ್ನಡದ ಜನಪ್ರಿಯ ವಿಜ್ಞಾನ ಬರಹಗಾರರು. ಐವತ್ತಕ್ಕೂ ಹೆಚ್ಚು ಪುಸ್ತಕಗಳ ಕೃತಿಕಾರರು)

Leave a Reply