ಬಾಲಿವುಡ್ ಮೀರಿಸುವಂಥ ಪ್ರಯೋಗಗಳು ಮಲಯಾಳಂ, ತಮಿಳು ಚಿತ್ರಗಳಲ್ಲಾಗಿವೆ ಗೊತ್ತಾ?

Shreesha

ಶ್ರೀಶ ಪುಣಚ

ಭಾರತೀಯ ಚಿತ್ರರಂಗದಲ್ಲಿ ಈಗ ದಕ್ಷಿಣ ಭಾರತದ ಸಿನಿಮಾಗಳು ವಿಶಿಷ್ಟ ಸ್ಥಾನ ಪಡೆದುಕೊಳ್ಳುತ್ತಿವೆ. ಅದರಲ್ಲೂ ಮಲೆಯಾಳಂ ಸಿನಿಮಾದ ವಿಷಯಗಳ ಆಯ್ಕೆ, ತೆಲುಗಿನ ಅದ್ದೂರಿತನ ಹಿಂದಿ ಸಿನಿಮಾ ನಿರ್ದೇಶಕರಿಗೂ ಹೊಸ ಸವಾಲು ಒಡ್ಡಿದೆ. ಕಳೆದ ವರ್ಷ ಕನ್ನಡದ ರಂಗಿತರಂಗ ತನ್ನ ವಿಶಿಷ್ಟ ಪ್ರಯೋಗದಿಂದ ದೇಶದ ಜನರ ಗಮನ ಸೆಳೆದಿತ್ತು. ಆದರೆ ಮಲಯಾಳಂ, ತಮಿಳು, ತೆಲುಗಿನಲ್ಲಿ ಈ ಥರನ ಹಲವು ಸಿನಿಮಾಗಳು ಕಳೆದ ವರ್ಷ ಬಂದಿವೆ. ಅವುಗಳಲ್ಲಿ ನಾವು ನೋಡಿದ, ನೀವು ನೋಡಲೇ ಬೇಕಾದ ಸಿನಿಮಾಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಪಥೆಮಾರಿ (ಮಲಯಾಳಂ)

ಗಲ್ಫ್ ರಾಷ್ಟ್ರಗಳು ಮಲೆಯಾಳಿಗಳಿಗೆ ಎರಡನೇ ಮನೆಯಿದ್ದಂತೆ. ಬದುಕಿನ ನೆಲೆ ಅರಸಿ ಒಮ್ಮೆ ಗಲ್ಫ್ ಗೆ ಬಂದು ಕೆಲಸ ಮಾಡಲು ಶುರು ಮಾಡಿದರೆ, ಅವರು ಹಿಂತಿರುಗಿ ಭಾರತಕ್ಕೆ ಬಂದು ನೆಲೆಸುವುದು ಸುಲಭದ ಮಾತಲ್ಲ. ಅದಕ್ಕೆ ಕಾರಣಗಳು ಹಲವು. ಆ ಕಾರಣಗಳ ಸುತ್ತ ಹೆಣೆದ ಸಿನಮಾವೇ ಪಥೆಮಾರಿ. ಅಕ್ರಮವಾಗಿ ದುಬೈಗೆ ಬಂದ ನಾರಾಯಣ ಎಂಬ ಕಾರ್ಮಿಕನ ಬದುಕನ್ನು ಅನಾವರಣಗೊಳಿಸುವ ನೆಪದಲ್ಲಿ, ಈ ಸಿನಿಮಾ ದುಬೈನ ಭಾರತೀಯ ಕಾರ್ಮಿಕರ ಕಷ್ಟ-ಸುಖಗಳನ್ನು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ. ಖ್ಯಾತ ಚಿತ್ರ ನಟ ಮಮ್ಮುಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು, ನಿರ್ದೇಶಕ ಸಲೀಂ ಅಹಮದ್ ನಿರ್ದೇಶಿಸಿದ್ದಾರೆ. ಈ ಸಿನಿಮಾಕ್ಕಾಗಿ ಅವರು ಗಲ್ಫ್ ನಲ್ಲಿ ಕೆಲಸ ಮಾಡುವ ವಿವಿಧ ಕೂಲಿಕಾರ್ಮಿಕರ ಬದುಕನ್ನು ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಅವರ ಶ್ರಮ ಸಿನಿಮಾದ ಪ್ರತಿ ಚೌಕಟ್ಟಿನಲ್ಲೂ ಎದ್ದು ಕಾಣುತ್ತದೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ.

ಪಿಕೆಟ್ 43 (ಮಲಯಾಳಂ)

ಹಿಮಚ್ಛಾದಿತ ಕಾಶ್ಮೀರದ ಕೊರೆಯುವ ಚಳಿಯಲ್ಲಿ ಭಾರತದ ಗಡಿ ಕಾಯುವ ಯೋಧನೊಬ್ಬನ ಕಥೆಯಿದು. ಸ್ವತಃ ಸೈನಿಕನಾಗಿದ್ದ ಮೇಜರ್ ರವಿ ಅವರೇ ಈ ಸಿನಿಮಾದ ನಿರ್ದೇಶನ ಮಾಡಿರುವುದರಿಂದ, ಸೈನಿಕರ ಬದುಕಿನ ಕುರಿತು ಸಾಮಾನ್ಯ ನೋಟಕ್ಕೆ ದಕ್ಕದ ವಿಶಿಷ್ಟ ಸನ್ನಿವೇಶವೊಂದು ಇಲ್ಲಿ ಆಪ್ತವಾಗಿ ದಾಖಲಾಗಿದೆ. ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿರುವ 43ನೇ ಪಿಕೆಟ್‍ಗೆ ಹವಾಲ್ದಾರ್ ಹರೀಂದ್ರನ್ ನಾಯರ್ ನ ವರ್ಗವಾಗುತ್ತದೆ. ನಿರ್ಜನವಾಗಿರುವ ಆ ಪ್ರದೇಶದಲ್ಲಿ ಹರಿಂದ್ರನ್ ಅಂಜುತ್ತಾ ಕೆಲಸ ಶುರುಮಾಡುತ್ತಾನೆ. ಎದುರಲ್ಲೊಬ್ಬ ಪಾಕಿಸ್ತಾನಿ ಸೈನಿಕ, ಪಕ್ಕದಲ್ಲೊಂದು ಮುದ್ದಿನ ನಾಯಿ ಬಿಟ್ಟರೆ ಆತ ಅಕ್ಷರಶಃ ಏಕಾಂಗಿ. ಈ ಏಕಾಂಗಿತನ ದೇಶ, ಗಡಿಯ ಭಿನ್ನತೆಯನ್ನು ತೊಡೆದು ಹಾಕಿ ಒಂದು ನವಿರಾದ ಭಾವವನ್ನು ಸ್ಫುರಿಸುತ್ತದೆ. ಎದುರಿಗೆ ಶತ್ರುವಾಗಿ ನಿಂತಿರುವ ಪಾಕ್ ಸೈನಿಕನ ಜತೆಗೇ ಗೆಳೆತನವಾಗುತ್ತದೆ. ಭಾರತ-ಪಾಕ್ ಸೈನಿಕರ ಮಧ್ಯದ ಈ ಗೆಳೆತನ ಹೇಗೆ ಕೊನೆಯಾಯಿತು ಎಂಬುದೇ ಸಿನಿಮಾದ ಮುಖ್ಯ ಕಥೆ. ಪೃಥ್ವೀರಾಜ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾದ ಈ ಟ್ರೇಲರ್ ನೋಡಿದರೇನೇ ಕುತೂಹಲ ಗರಿಗೆದರತೊಡಗುತ್ತದೆ.

ಎನ್ನು ನಿಂಟೆ ಮೊಯಿದ್ದೀನ್ (ಮಲಯಾಳಂ)

ಎನ್ನು ನಿಂಟೆ ಮೊಯಿದ್ದೀನ್ ಸಿನಿಮಾ ಬಂದ ನಂತರ ಕೇರಳದಲ್ಲಿ ಅಮರಪ್ರೇಮಿಗಳ ಪಟ್ಟಿಗೆ ಲೈಲಾ-ಮಜ್ನು, ರೋಮಿಯೋ-ಜೂಲಿಯೆಟ್ ಜತೆ ಇನ್ನೊಂದು ಜೋಡಿ ಸೇರಿಕೊಂಡಿದೆ. ಅವರೇ ಕಾಂಚನ ಮಾಲಾ ಹಾಗೂ ಮೊಯಿದ್ದೀನ್. ಎನ್ನು ನಿಂಟೆ… ಸಿನಿಮಾದ ಮೂಲಕ ಕಾಂಚನಾಮಾಲಾ ಎಂಬ ಹೆಂಗಸಿನ ನಿಜ ಜೀವನದ ಸತ್ಯ ಪ್ರೀತಿ ಕಥೆಯನ್ನು ತೆರೆಯ ಮೇಲೆ ತಂದು ಇವರ ತ್ಯಾಗಕ್ಕೊಂದು ಮನ್ನಣೆ ಕೊಟ್ಟಿದ್ದಾರೆ ನಿರ್ದೇಶಕ ಆರ್.ಎಸ್. ವಿಮಲ್. ಐವತ್ತು ವರ್ಷಗಳ ಹಿಂದಿನ ಸಮಾಜದ ಚಿತ್ರಣವನ್ನು ಮರುಸೃಷ್ಟಿಗೊಳಿಸುವುದು ಸುಲಭದ ಮಾತಲ್ಲ. ಆದರೆ ಪ್ರತಿ ಫ್ರೇಮಿನಲ್ಲೂ ಸಮರ್ಥವಾಗಿ ಇದನ್ನು ಕಟ್ಟಿಕೊಟ್ಟಿರುವ ವಿಮಲ್, ನಮ್ಮ ಕಣ್ಣೆದುರಿಗೆ ದೃಶ್ಯ ಕಾವ್ಯವನ್ನೇ ತೆರೆದಿಡುತ್ತಾರೆ. ಕಾಂಚನಮಾಲಾರಾಗಿ ನಟಿ ಪಾರ್ವತಿ, ಮೊಯಿದ್ದೀನ್ ಆಗಿ ನಟ ಪೃಥ್ವೀರಾಜ್ ಮಿಂಚಿದ್ದಾರೆ. ಹಿಂದೆ ಪ್ರೇಮ ವಿವಾಹವನ್ನೇ ಸಮಾಜ ಸ್ವೀಕರಿಸುವ ಸ್ಥಿತಿಯಲಿರಲಿಲ್ಲ. ಅಂತಹ ಸಂದರ್ಭದಲ್ಲಿ ಕಾಂಚನ ಮಾಲಾ ಎಂಬ ಹಿಂದೂ ಹುಡುಗಿಯೊಬ್ಬಳು ಮೊಯಿದ್ದೀನ್ ಎಂಬ ಮುಸ್ಲಿಂ ಹುಡುಗನೊಬ್ಬನನ್ನೇ ಮದುವೆಯಾಗಬೇಕು ರಚ್ಚೆ ಹುಡಿದು ಕುಳಿತಿದ್ದರು. ಅವರ ಕುಟುಂಬ, ಆಗಿನ ಸಮಾಜ ಇವರ ಪ್ರೇಮವನ್ನು ಸ್ವೀಕರಿಸಲು ಸುತಾರಾಂ ತಯಾರಿರಲಿಲ್ಲ್ಲ. ಆದರೆ ಬೇರೆಯಾಗಲು ಈ ಪ್ರೇಮಿಗಳೂ ಒಪ್ಪಲಿಲ್ಲ. ಮುಂದೇನಾಯಿತು ಎಂಬುದೇ ಒಟ್ಟು ಸಿನಿಮಾದ ಕಥೆ. ಕಥೆಯ ಒಂದು ಸುಳಿವಿಗಾಗಿ ಈ ಟ್ರೈಲರ್ ನೋಡಬಹುದು.

ಕಾಕಾ ಮುಟ್ಟೈ (ತಮಿಳು)

ಚೆನ್ನೈನ ಸ್ಲಂನ ಮಕ್ಕಳಿಬ್ಬರ ಬದುಕಿನ ಸುತ್ತ ಸುತ್ತುವ ಸಿನಿಮಾ ಕಾಕಾ ಮುಟ್ಟೈ ಮೆಲ್ನೋಟಕ್ಕೆ ಒಂದು ಕಲಾತ್ಮಕ ಚಿತ್ರದಂತೆ ಕಂಡರೂ, ಕಳೆದ ವರ್ಷ ಬಾಕ್ಸ್ ಅಫೀಸಿನಲ್ಲೂ ದೊಡ್ಡದಾಗಿ ಸದ್ದು ಮಾಡಿತ್ತು. ಅತ್ಯಂತ ಕಡಿಮೆ ಬಜೆಟ್‍ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಚಿತ್ರದಲ್ಲಿ ಕಥೆ, ನಿರೂಪಣೆಯೇ ನಿಜವಾದ ಹೀರೋ. ಸ್ಲಂನಲ್ಲಿ ಬದುಕು ಸಾಗಿಸುವ ಮಕ್ಕಳಿಬ್ಬರಿಗೆ ಎರಡು ಹೊತ್ತಿನ ಊಟಕ್ಕೇ ಗತಿಯಿರುವುದಿಲ್ಲ. ಕೆಲವುದಿನ ತಮ್ಮ ವಠಾರದಲ್ಲಿ ಗೂಡು ಕಟ್ಟಿರುವ ಕಾಗೆಯ ಮೊಟ್ಟೆಗಳನ್ನು ತಿಂದು ದಿನಕಳೆಯಬೇಕಾದ ಸ್ಥಿತಿ ಬಂದುದೂ ಇದೆ. ಅಂತಹ ಮಕ್ಕಳಿಗೆ ಒಂದು ದಿನ ಪಿಜ್ಜಾ ತಿನ್ನಬೇಕೆಂಬ ಆಸೆಯುಂಟಾಗುತ್ತದೆ. ಅದಕ್ಕಾಗಿ ರೈಲ್ವೇ ಟ್ರಾಕಿನಲ್ಲಿ ಬಿದ್ದಿರುವ ಕಲ್ಲಿದ್ದಲನ್ನು ಹೆಕ್ಕಿ ಹಣ ಒಟ್ಟು ಹಾಕುತ್ತಾರೆ. ಆದರೆ ಹಣ ತೆಗೆದುಕೊಂಡು ಪಿಜ್ಜಾದ ಅಂಗಡಿಗೆ ಹೋದ ಆ ಮಕ್ಕಳನ್ನು ಥಳಿಸಿ ಹೊರಗೆ ಕಳುಹಿಸುತ್ತಾರೆ. ಆದರೆ ಕೊನೆಗೆ ಪರಿಸ್ಥಿತಿ ಯಾವ ಸ್ಥಿತಿಗೆ ಬರುತ್ತದೆಯೆಂದರೆ ಅಂಗಡಿಯ ಮಾಲಿಕನೇ ಮಕ್ಕಳನ್ನು ಹುಡುಕಿಕೊಂಡು ಬಂದು ಪಿಜ್ಜಾದ ಅಂಗಡಿಯಲ್ಲಿ ಆದರಾತಿಥ್ಯ ನೀಡಬೇಕಾಗುತ್ತದೆ. ‘ಯಾಕೆ ಹಾಗಾಯಿತು?’ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಪೂರ್ತಿ ಸಿನಿಮಾ ನೋಡಿ. ಸ್ಲಂನ ಮಕ್ಕಳ ಕಿತ್ತುತಿನ್ನುವ ಬಡತನ, ಬಂಡವಾಳ ಶಾಹಿಗಳ ದರ್ಪವನ್ನು ಎಳೆ ಎಳೆಯಾಗಿ ಬಿಡಿಸಿರುವ ಈ ಚಿತ್ರದ ಒಂದು ನೋಟ ಇಲ್ಲಿದೆ.

ಓಕೆ ಕಣ್ಮಣಿ (ತಮಿಳು)

ಮಣಿರತ್ನಂ ಅವರನ್ನು ಮತ್ತೆ ಫಾರ್ಮಿಗೆ ತಂದ ಚಿತ್ರ ಓ ಕಾದಲ್ ಕಣ್ಮಣಿ ಅರ್ಥಾತ್ ಒಕೆ ಕಣ್ಮಣಿ. ಲಿವಿಂಗ್ ರಿಲೇಷನ್‍ನಂತಹ ಸೂಕ್ಷ್ಮ ವಿಷಯಗಳನ್ನು ಮನೋಜ್ಞವಾಗಿ ಈ ಥರ ತೆರೆಯ ಮೇಲೆ ತರಲು ಮಣಿಯಂಥ ಮಣಿಯವರಿಗೆ ಮಾತ್ರ ಸಾಧ್ಯ. ಆದಿತ್ಯ ವರದರಾಜನ್(ಡುಲ್ಕರ್ ಸಲ್ಮಾನ್) ಎಂಬ ವಿಡಿಯೋ ಗೇಮ್ ಡಿಸೈನರ್ ಮುಂಬೈಯಲ್ಲಿ ತಾರಾ (ನಿತ್ಯಾ ಮೆನನ್) ಎಂಬ ಬೆಡಗಿಯನ್ನು ಭೇಟಿಯಾಗುತ್ತಾನೆ. ಅವರ ಗೆಳತನ ಸಲುಗೆಗೆ, ಪ್ರೀತಿಗೆ ಸರಿಯುತ್ತದೆ. ಆದರೆ ಮದುವೆ ಮಾಡಿಕೊಳ್ಳಲು ಇಬ್ಬರಿಗೂ ಇಷ್ಟವಿರುವುದಿಲ್ಲ. ಒಪ್ಪಂದದೊಂದಿಗೆ ಲಿವಿನ್ ರಿಲೇಷನ್‍ಷಿಪ್ ಆರಂಭಿಸುತ್ತಾರೆ. ಈ ಹೊಸ ಪ್ರಕಾರದ ಸಂಬಂಧದ ಮನೋಜ್ಞ ಚಿತ್ರಿಕೆಯೇ ಓಕೆ ಕಣ್ಮಣಿ. ಆದಿತ್ಯನಾಗಿ ನಟಿಸಿರುವ ಡುಲ್ಕರ್ ಸಲ್ಮಾನ್ ನಟನೆಗೆ ಸಿನಿಮಾರಂಗದ ದಿಗ್ಗಜರುಗಳೇ ದಂಗಾಗಿದ್ದಾರೆ. ಚಿತ್ರನಿರ್ದೇಶಕ ರಾಮಗೋಪಾಲ್ ವರ್ಮ ‘ಮಗ ಡುಲ್ಕರ್ ಸಲ್ಮಾನ್‍ರನ್ನು ನೋಡಿ ತಂದೆ ಮಮ್ಮುಟ್ಟಿ ನಟನೆಯನ್ನು ಕಲಿಯಬೇಕು’ ಎಂದು ಟ್ವೀಟ್ ಮಾಡಿದ್ದು, ಅದು ತಂದೆ-ಮಗನ ನಡುವೆ ತಂದಿಡಲು ವರ್ಮಾ ಮಾಡಿರುವ ಹುನ್ನಾರ ಅಂತ ಅಭಿಮಾನಿಗಳು ಕೆರಳಿಸಿದ್ದು ಈಗ ಹಳೆಯ ಸುದ್ದಿ. ಸದ್ಯದಲ್ಲೇ ಬಾಲಿವುಡ್‍ನಲ್ಲಿ ರಿಮೇಕ್ ಆಗಿಲಿರುವ ನವ್ಯ ಪ್ರೇಮ ಕಾವ್ಯದ ತುಣುಕನ್ನು ಈಗಲೇ ನೋಡಿ ಬಿಡಿ.

2015ರಲ್ಲಿ ಗಮನಸೆಳೆದ ದಕ್ಷಿಣ ಭಾರತದ ಕೆಲವು ಉತ್ತಮ ಚಿತ್ರಗಳ ಪಟ್ಟಿಯನ್ನಷ್ಟೇ ಇಲ್ಲಿ ನೀಡಿದ್ದೇವೆ. ಬಹುತೇಕ ನೀವೆಲ್ಲ ನೋಡಿರಬಹುದಾದ ಬಾಹುಬಲಿಯಂಥ ಚಿತ್ರಗಳನ್ನು ವಿವರಿಸಲು ಹೋಗಿಲ್ಲ. ಆದರೆ ಈ ಪಟ್ಟಿಯಲ್ಲಿರದ ಕೆಲವು ಪರಭಾಷಾ ಸಿನಿಮಾಗಳನ್ನು ನೀವೂ ನೋಡಿ ಖುಷಿ ಪಟ್ಟಿರಬಹುದು. ಅದನ್ನು ‘ಕಮೆಂಟ್’ ವಿಭಾಗದಲ್ಲಿ ಸೇರಿಸಿಬಿಡಿ. ವೀಕೆಂಡಿನಲ್ಲಿ ಕುಳಿತು ಆಸ್ವಾದಿಸೋಣ.

(ಲೇಖಕರು ಒಮಾನ್‍ನ ಉನ್ನತ ಶಿಕ್ಷಣ ಸಚಿವಾಲಯದ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್, ಇಬ್ರಿಯಲ್ಲಿ ಬಹು ಮಾಧ್ಯಮ ಪ್ರಾಧ್ಯಾಪಕರು)

Leave a Reply