ಡಿಜಿಟಲ್ ಕನ್ನಡ ಟೀಮ್
ಮಾಧ್ಯಮ ಪ್ರಮುಖರು ಹಾಗೂ ಬುದ್ಧಿಜೀವಿಗಳ ಒಂದು ಗುಂಪು ಬೇಕಾದರೆ ದೇಶ ತುಂಡು ಮಾಡುವ ಘೋಷಣೆಗಳೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಅಂತ ಸಮರ್ಥಿಸಿಕೊಂಡಿರಲಿ, ಆದರೆ ದೊಡ್ಡ ಜನಸಮೂಹವೊಂದು ಇಂಥದ್ದನ್ನೆಲ್ಲ ಸಹಿಸಿಕೊಳ್ಳುವುದಕ್ಕೆ ತಯಾರಿಲ್ಲ- ಇದು ಭಾನುವಾರ ದೆಹಲಿ ನೀಡಿರುವ ಸಂದೇಶ.
ಹೌದು. ಜೆ ಎನ್ ಯುದಲ್ಲಿ ದೇಶವಿರೋಧಿ ಘೋಷಣೆಗಳನ್ನು ಮೊಳಗಿಸಿದವರಿಗೆ ಶಿಕ್ಷೆಯಾಗಲಿ ಅಂತ ಸೇನೆಯ ನಿವೃತ್ತ ಯೋಧರು ಭಾನುವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಹರಿದುಬಂದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ ಘಾಟ್ ನಿಂದ ಜಂತರ್ ಮಂತರ್ ವರೆಗಿನ ಕಾಲ್ನಡಿಗೆ ಅಭಿಯಾನ ತ್ರಿವರ್ಣವನ್ನೇ ಹೊದ್ದಂತೆ ಭಾಸವಾಗುತ್ತಿತ್ತು.
‘ರಾಷ್ಟ್ರ ಉಳಿಸಿ’ ಎಂಬ ಹೆಸರಲ್ಲಿ ನಿವೃತ್ತ ಸೇನಾಧಿಕಾರಿಗಳು ನಡೆಸಿದ ಅಭಿಯಾನಕ್ಕೆ ಜನಸಾಮಾನ್ಯರು, ಬಿಜೆಪಿ- ಆರೆಸ್ಸೆಸ್ ಕಾರ್ಯಕರ್ತರೂ ಜತೆಯಾಗಿದ್ದರು. ಜೆಎನ್ ಯುನಲ್ಲಿ ಅಫ್ಜಜ್ ಗುರು ಸ್ಮರಣೆ ಮತ್ತು ರಾಷ್ಟ್ರವಿರೋಧಿ ಹೇಳಿಕೆ ನೀಡಿದ ದೇಶದ್ರೋಹಿಗಳನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಲಾಯಿತು.
‘ಕೆಲವೊಂದು ವಸ್ತು ಮತ್ತು ವಿಷಯಗಳಲ್ಲಿ ಚರ್ಚೆಗಳಿಗೆ ಅವಕಾಶವಿಲ್ಲ ಹಾಗಂತ ವಾಕ್ ಸ್ವಾತಂತ್ರ್ಯವನ್ನು ನಿಯಂತ್ರಿಸಿದರು ಎಂಬುದಲ್ಲ. ಜೆಎನ್ ಯು ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದವರಿಗೆ ಶಿಕ್ಷೆಯಾಗಬೇಕೆನ್ನುವುದೆ ಈ ಪ್ರತಿಭಟನಾ ಮೆರವಣಿಗೆಯ ಉದ್ದೇಶ.’ ಎಂಬುದು ನಿವೃತ್ತ ಮೇಜರ್ ಜನರಲ್ ಧೃವ್ ಸಿ ಕಟೊಚ್ ರವರ ಸ್ಪಷ್ಟ ನುಡಿ.
‘ಕೆಲವರು ರಾಷ್ಟ್ರವಿರೋಧಿ ಹೇಳಿಕೆ ನೀಡಿ ದೇಶದ ಗಡಿ ಕಾಯುವ ಯೋಧರ ಮನೋಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಹಿರಿಯರಾಗಿ ಯೋಧರಿಗೆ ಧೈರ್ಯ ತುಂಬುವುದು ನಮ್ಮ ಕರ್ತವ್ಯ’ ಎಂದವರು ನಿವೃತ್ತ ಏರ್ ಮಾರ್ಷಲ್ ಪಿ ಕೆ ರಾಯ್.
ಭಾನುವಾರದ ಜಾಥಾ ಬಲವನ್ನು ಬಿಂಬಿಸುವ ಕೆಲವು ಚಿತ್ರಗಳು ಇಲ್ಲಿವೆ.