ಭಾರತ ಬರ್ಬಾದಿ ಕೂಗೆಬ್ಬಿಸುತ್ತಿರುವವರ ನಡುವೆ ಜೆ ಎನ್ ಯುದಲ್ಲೇ ಓದಿದ್ದ ಪವನ್, ಪ್ರತ್ಯೇಕತೆ ಹತ್ತಿಕ್ಕುತ್ತ ಜೀವತೆತ್ತ!

(ಈ ಪೋಸ್ಟ್ ಅಪ್ಡೇಟ್ ಆಗಿದೆ. 8.45PM)

ಡಿಜಿಟಲ್ ಕನ್ನಡ ಟೀಮ್

ಒಂದೆಡೆ ದೇಶದ ಅವಿಭಾಜ್ಯ ಅಂಗ, ಕಣಿವೆ ರಾಜ್ಯ ಕಾಶ್ಮೀರವನ್ನು ಪ್ರತ್ಯೇಕಿಸುವುದಕ್ಕೆ ಹಲವರು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಅದೇ ಜನ ಮತ್ತು ರಾಜ್ಯವನ್ನು ಸಂರಕ್ಷಿಸಲು ಉಗ್ರರೊಂದಿಗೆ ಪ್ರತಿ ದಿನ ಕಾದಾಡಿ ಲೆಕ್ಕವಿಲ್ಲದಷ್ಟು ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದಾರೆ.

ಇದೀಗ ಈ ಹುತಾತ್ಮ ಪರಂಪರೆಗೆ ಕಾಶ್ಮೀರದ ಪಾಂಪೊರ್ ನಲ್ಲಿ ಉಗ್ರರ ವಿರುದ್ಧ ಕಾದಾಡುತ್ತ ಮೂವರು ಯೋಧರು ಮೃತರಾಗಿದ್ದಾರೆ. 22ರ ಹರೆಯದ ಕ್ಯಾಪ್ಟನ್ ಪವನ್ ಕುಮಾರ್, ಲ್ಯಾನ್ಸ್ ನಾಯಕ್ ಓಂಪ್ರಕಾಶ್, ಕ್ಯಾಪ್ಟನ್ ತುಷಾರ್ ಮಹಾಜನ್ ಭಾನುವಾರ ಹುತಾತ್ಮರಾಗಿದ್ದಾರೆ. ಶನಿವಾರ ಮೀಸಲು ಪೋಲೀಸ್ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದರು. 144 ನೇ ಬೆಟಾಲಿಯನ್ ಸಿಆರ್ ಪಿಎಫ್ ಯೋಧ ಜಿ ಡಿ ಭೋಲಾ ಪ್ರಸಾದ್, 79 ಬೆಟಾಲಿಯನ್ ನ ಯೋಧ-ಚಾಲಕ ಆರ್ ಕೆ ರೈನಾ ಪ್ರಾಣತ್ಯಾಗ ಮಾಡಿದ್ದರು. ಇದೇ ಸಂಘರ್ಷದಲ್ಲಿ ಓರ್ವ ನಾಗರಿಕ ಸತ್ತಿದ್ದು 12 ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದಾರೆ. ಸೈನಿಕರ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ ಮುಂದುವರೆದಿದೆ.

ವಾರದ ಹಿಂದೆ ಪ್ರತಿಷ್ಠಿತ ಜೆ ಎನ್ ಯುದಲ್ಲಿ ‘ಕಾಶ್ಮೀರ ಸ್ವತಂತ್ರವಾಗುವ ತನಕ ಹೋರಾಟ’, ‘ಭಾರತ ಬರ್ಬಾದ್ ಆಗುವ ತನಕ ಹೋರಾಟ’ ಎಂದಿದ್ದ ವಿದ್ಯಾರ್ಥಿಗಳ ದಂಡನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಲ್ಲಿ ಸಮರ್ಥಿಸಿಕೊಳ್ಳುವವರನ್ನು ದೇಶ ನೋಡುತ್ತಿದೆ. ಇನ್ನೊಂದೆಡೆ ದೇಶ ತುಂಡರಿಸಲು ಬಂದವರನ್ನುಸಂಹರಿಸುವಲ್ಲಿ ತಮ್ಮ ಪ್ರಾಣ ನೀಡುತ್ತಿರುವ ಪವನ್ ಕುಮಾರ್ ಅವರಂಥ ಯೋಧರು ದೇಶದ ಅಂತಃಸಾಕ್ಷಿಯನ್ನು ಕಲಕುತ್ತಿದ್ದಾರೆ.

ಒಬ್ಬ ಸೈನಿಕನನ್ನು ಜಾತಿ- ಪಂಗಡಗಳಲ್ಲಿ ಇಡಬಾರದು. ಆದರೆ, ಆದರ್ಶವೊಂದನ್ನು ಹೆಕ್ಕಿಕೊಳ್ಳುವ ನಿಟ್ಟಿನಲ್ಲಿ ಹುತಾತ್ಮ ಯೋಧನೊಂದಿಗೆ ತಳುಕು ಹಾಕಿಕೊಂಡಿರುವ ಕೆಲ ಅಂಶಗಳನ್ನು ಇವತ್ತಿನ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಕ್ಯಾಪ್ಟನ್ ಪವನ್ ಕುಮಾರ್ ಜೆ ಎನ್ ಯುದಲ್ಲೇ ಪದವಿ ಪಡೆದವರು. ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವೀಧರರಾಗಿ 2013ರಲ್ಲಿ ಸೇನೆ ಸೇರಿದರು. ಜೆ ಎನ್ ಯುದಲ್ಲಿ ದೇಶ ತುಂಡುಮಾಡುವ ಹೇಳಿಕೆ ಕೂಗಿರುವ ಆರೋಪ ಹೊತ್ತು ಒಬ್ಬ ಉಮರ್ ಖಾಲಿದ್ ತಲೆಮರೆಸಿಕೊಂಡಿದ್ದರೆ, ಅದೇ ಜೆ ಎನ್ ಯುದಲ್ಲಿ ಪದವಿ ಪಡೆದ ಪವನ್ ಕುಮಾರ್ ಬಡತನ- ಅಸಮಾನತೆ ಅಂತ ಭಾಷಣ ಹೊಡೆದುಕೊಂಡಿರದೇ, ಸೇನೆ ಸೇರಿ, ಉಗ್ರನಿಗ್ರಹದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ.

ಅತ್ತ, ಹರ್ಯಾಣದಲ್ಲಿ ಜಾಟ್ ಸಮುದಾಯದವರು ತಮ್ಮನ್ನು ಒಬಿಸಿ ಗುಂಪಿಗೆ ಸೇರಿಸಿ ಅಂತ ಇಡೀ ರಾಜ್ಯವನ್ನೇ ಹಿಂಸಾಗ್ರಸ್ತಗೊಳಿಸುತ್ತಿದ್ದರೆ, ಅದೇ ಹರ್ಯಾಣದ ಜಿಂದ್ ಜಿಲ್ಲೆಯಿಂದ ಬಂದ ಈ ಜಾಟ್ ಹುಡುಗ ಹುತಾತ್ಮರ ಗುಂಪಿನಲ್ಲಿ ತಮ್ಮನ್ನು ಸೇರಿಸಿಕೊಂಡುಬಿಟ್ಟಿದ್ದಾರೆ.

ಕ್ಯಾ. ಪವನ್ ಅವರ ಸಾವಿನ ಸುದ್ದಿ ಕೇಳುತ್ತಲೇ ಅವರ ತಂದೆ ನೀಡಿದ ಪ್ರತಿಕ್ರಿಯೆ ಮಾತ್ರ ದೇಶ ಯಾವತ್ತೂ ಅಭಿಮಾನದಿಂದ ನೆನಪಿಡಬೇಕಾದದ್ದು. ‘ಸೇನಾ ದಿವಸದಂದೇ ಆತನ ಜನನವಾಗಿತ್ತು. ಹೀಗಾಗಿ ಸೇನೆಗೆ ಸೇರಲೆಂದೇ ಹುಟ್ಟಿದವನು ಆತ. ಒಬ್ಬ ಮಗನಿದ್ದ, ಆತನನ್ನು ಸೇನೆಗೆ ಕೊಟ್ಟೆ. ದೇಶಕ್ಕಾಗಿ ಆತ ಪ್ರಾಣ ಬಿಟ್ಟಿದ್ದಾನೆ. ಇದಕ್ಕಿಂತ ಹೆಮ್ಮೆ ಮತ್ತೇನಿಲ್ಲ.’

ಲ್ಯಾನ್ಸ್ ನಾಯಕ್ ಓಂಪ್ರಕಾಶ್
ಲ್ಯಾನ್ಸ್ ನಾಯಕ್ ಓಂಪ್ರಕಾಶ್
ಕ್ಯಾಪ್ಟನ್ ತುಷಾರ್ ಮಹಾಜನ್
ಕ್ಯಾಪ್ಟನ್ ತುಷಾರ್ ಮಹಾಜನ್

ಶ್ರೀನಗರ–ಜಮ್ಮು ಹೆದ್ದಾರಿಯ ಕೇಂದ್ರಿಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ಯ ಬೆಂಗಾವಲು ತಂಡದ ಮೇಲೆ 3 ರಿಂದ 5 ಉಗ್ರರ ತಂಡ ಶನಿವಾರ ಸಂಜೆ ದಾಳಿ ನಡೆಸಿ, ಹತ್ತಿರದಲ್ಲೆ ಇದ್ದ ಜಮ್ಮು-ಕಾಶ್ಮೀರ ಉದ್ಯಮಶೀಲತೆಯ ಅಭಿವೃದ್ಧಿ ಸಂಸ್ಥೆ (ಜೆಕೆಇಡಿಐ)ಯ ಬಹುಮಹಡಿ ಕಟ್ಟದಲ್ಲಿಅಡಗಿಕೊಂಡರು. ಈ ವೇಳೆ ಕಟ್ಟಡವನ್ನು ಸುತ್ತುವರಿದ ಸೈನಿಕರು ಉಗ್ರರೊಂದಿಗೆ ಗುಂಡಿನ ಕಾಳಗ ನಡೆಸಿದರು. ಕಟ್ಟಡದಲ್ಲಿ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಜನರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಸಾಕಷ್ಟು ಮಂದಿ ಉಗ್ರರಿಂದ ತಪ್ಪಿಸಿಕೊಂಡು ಹೊರ ಓಡಿಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ಅಲ್ಲಿದ್ದ ಸುಮಾರು 115 ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಸತತ 21 ಗಂಟೆಗಳಿಂದ ಸೈನಿಕರು ಮತ್ತು ಉಗ್ರರು ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. ಉಗ್ರರ ಕಪಿಮುಷ್ಟಿಯಲ್ಲಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಲು ಸೇನೆ ಪ್ರಯತ್ನಿಸುತ್ತಿದೆ.

Leave a Reply