ಈ ಜೆ ಎನ್ ಯು ಕೂಗುಮಾರಿಗಳೇಕೆ ಚಿಂತಕರೆಲ್ಲ ತಮ್ಮ ಬೆನ್ನಿಗಿದ್ದಾರೆ ಅಂತ ಬೊಗಳೆ ಬಿಡುತ್ತಿದ್ದಾರೆ?

ಪ್ರವೀಣ್ ಕುಮಾರ್

ಕಳೆದ ಹದಿನೈದು ದಿನಗಳಿಂದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಕೂಗು ವ್ಯಾಪಕ ಚರ್ಚೆಯಲ್ಲಿರುವ ವಿಷಯ.

‘ಇದು ಕೇವಲ ಬಿಜೆಪಿ- ಆರ್ ಎಸ್ ಎಸ್ ಹಾಗೂ ಕೆಲ ಮಾಧ್ಯಮಗಳು ಸೇರಿ ನಡೆಸುತ್ತಿರುವ ಕುತಂತ್ರ. ದೇಶದಲ್ಲಿ ಬುದ್ಧಿಜೀವಿಗಳು ನಮ್ಮ ಬೆಂಬಲಕ್ಕಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಅದರಲ್ಲೂ ಜೆ ಎನ್ ಯು ಇಡಿ ಇಡಿಯಾಗಿ ತಮ್ಮ ಬೆನ್ನಿಗೆ ನಿಂತಿದೆ. ಚಾಮ್ ಸ್ಕಿಯಂಥ ಅಂತಾರಾಷ್ಟ್ರೀಯ ಬುದ್ಧಿಜೀವಿಗಳು ತಮ್ಮ ಪರವಿದ್ದಾರೆ’ ಎಂಬುದು ದೇಶದ್ರೋಹ ಆರೋಪ ಹೊತ್ತಿರುವ ವಿದ್ಯಾರ್ಥಿಗಳ ಪ್ರತಿಪಾದನೆ. ಸೋಮವಾರ ವಿಶ್ವವಿದ್ಯಾಲಯದೊಳಗೆ ಸೇರಿಕೊಂಡು ಪೊಲೀಸರನ್ನು ವಿಶ್ವವಿದ್ಯಾಲಯದ ಆವರಣದ ಆಚೆ ಕಾಯುವಂತೆ ಮಾಡಿರುವ ಐವರು ವಿದ್ಯಾರ್ಥಿಗಳು, ಮಾಡಿದ ಭಾಷಣದಲ್ಲಿ ಹೇಳಿರುವುದೂ ಇದನ್ನೆ. ದೇಶದ ಒಂದು ವರ್ಗ ಮಾತ್ರ ನಮ್ಮನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿದ್ದು, ಮಿಕ್ಕವರೆಲ್ಲ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು.

ಆದರೆ ವಾಸ್ತವ ಏನು? ಇವರ ಆಡುಂಬೊಲವಾದ ಜೆ ಎನ್ ಯು ಕ್ಯಾಂಪಸ್ಸಿನಿಂದಲೇ ರಿಯಾಲಿಟಿ ಚೆಕ್ ಮಾಡೋಣ. ಜೆ ಎನ್ ಯುದ 180 ಉಪನ್ಯಾಸಕರು ತಮ್ಮ ಕ್ಯಾಂಪಸ್ಸಿನಲ್ಲಿ ದೇಶವಿರೋಧಿ ಘೋಷಣೆ ಮೊಳಗಿಸಿದವರಿಗೆ ಶಿಕ್ಷೆಯಾಗಲಿ ಅಂತ ವೈಸ್ ಚಾನ್ಸೆಲರ್ ಗೆ ಪತ್ರ ಬರೆದಿದ್ದಾರೆ. ‘ಯಾರೇ ಆಗಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಆ ನೆಲದ ಕಾನೂನಿಗೆ ತಕ್ಕ ಶಿಕ್ಷೆ ನೀಡಬೇಕು. ಪೊಲೀಸರು ಕ್ಯಾಂಪಸ್ ಪ್ರವೇಶಿಸಿ ಉತ್ತಮ ಕೆಲಸ ಮಾಡಿದರು. ವಿದ್ಯಾರ್ಥಿಗಳು ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಬೋಧನೆ ಮಾಡುತ್ತೇವೆ ಹೊರತು ದೇಶ ವಿರೋಧಿಸಿ ಎಂದಲ್ಲ. ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗ ಬೇಕು’ ಎಂಬುದು ಜೆ ಎನ್ ಯುನ 180 ಉಪನ್ಯಾಸಕರ ಒತ್ತಾಸೆ. ಕಾನೂನುಬಾಹಿರ ಚಟುವಟಿಕೆಗಳು ಆದಾಗಲೂ ಪೋಲೀಸರು ಕ್ಯಾಂಪಸ್ ಪ್ರವೇಶಿಸಬಾರದೆನ್ನುವುದಕ್ಕೆ ಈ ವಿಶ್ವವಿದ್ಯಾಲಯವೇನು ಪ್ರತ್ಯೇಕ ರಾಷ್ಟ್ರವೇ ಅಂತ ಆಕ್ರೋಶ ವ್ಯಕ್ತಪಡಿಸಿದೆ ಈ ಉಪನ್ಯಾಸಕ ಸಮೂಹ.

ಇನ್ನು ಸೆಲೆಬ್ರಿಟಿಗಳ ವಿಷಯಕ್ಕೆ ಬರೋಣ. ಶಿಖರ್ ಧವನ್, ಮಹೇಂದ್ರಸಿಂಗ್ ಧೋನಿ ಅವರು ತಮ್ಮ ಟ್ವೀಟ್ ಗಳ ಮೂಲಕ ಈ ಆಪಾದಿತ ಜೆ ಎನ್ ಯು ಕಾರ್ಯಕರ್ತರ ವಿಷಯದಲ್ಲಿ ಪರೋಕ್ಷವಾಗಿ ಅಭಿಪ್ರಾಯ ಹೊರಹಾಕಿದ್ದಾರೆ. ನಾವೆಲ್ಲ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಕ್ಕೆ ಅನುವಾಗಲಿ ಎಂದೇ ಅಲ್ಲಿ ದೇಶಭಕ್ತ ಸೈನಿಕರು ರಾಷ್ಟ್ರವನ್ನು ಒಟ್ಟಾಗಿ ಇಡ್ತಿದಾರೆ ಅಂತ ಧೋನಿ ಕೊಟ್ಟಿರುವ ಟಾಂಗ್ ಕಡಿಮೆಯದ್ದೇನಲ್ಲ. ಇವೆಲ್ಲದರ ನಡುವೆ, ಕಮ್ಯುನಿಸ್ಟರ ನೆಲೆವೀಡು ಅಂತಲೇ ಹೆಸರಾಗಿರುವ ಕೇರಳದಿಂದ, ಪ್ರಖ್ಯಾತ ನಟ ಮೋಹನ್ ಲಾಲ್, ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಹಾರಾಡುತ್ತಿರುವವರನ್ನು ತಮ್ಮ ಬ್ಲಾಗ್ ಬರಹದಲ್ಲಿ ಸಖತ್ತಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

‘ದಿನಪತ್ರಿಕೆಯಲ್ಲಿ ಲ್ಯಾನ್ಸ್ ನಾಯಕ್ ಸುಧೀಶ್ ಅವರ ನಾಲ್ಕು ತಿಂಗಳ ಪುತ್ರಿಗೆ ತಮ್ಮ ತಂದೆಯ ಮೃತ ದೇಹ ತೋರಿಸುತ್ತಿರುವ ಚಿತ್ರವನ್ನು ನೋಡಿದೆ. ಅದೇ ಪತ್ರಿಕೆಯಲ್ಲಿ ವಿಶ್ವವಿದ್ಯಾಲಯದಲ್ಲಿ ನಮ್ಮ ದೇಶಕ್ಕೆ ತೋರುತ್ತಿರುವ ಪ್ರೀತಿಯ ಬಗ್ಗೆಯೂ ನೋಡಿದೆ. ನಿಜವಾಗಿಯು ಬೇಸರ ಹಾಗೂ ನಾಚಿಕೆಯಾಯಿತು. ಯೋಧರು ಸಾಯುತ್ತಿರುವಾಗ ನಾವು ದೇಶಭಕ್ತಿ ಬಗ್ಗೆ ಚರ್ಚೆ ನಡೆಸುತ್ತಿರುವುದಕ್ಕಿಂತ ನಾಚಿಕೆ ಮತ್ತೊಂದಿಲ್ಲ.’ ಎಂದಿದ್ದಾರವರು.

ಈಗ ಬುದ್ಧಿಜೀವಿ ಹಾಗೂ ಅಭಿಪ್ರಾಯ ನಿರೂಪಕರ ವಿಷಯಕ್ಕೆ ಬರೋಣ. ತಮ್ಮ ವಿಚಾರ ಪ್ರತಿಪಾದಿಸುವವರನ್ನು ಮಾತ್ರವೇ ಚಿಂತಕರು ಎಂದುಕೊಂಡಿದ್ದಾರೆ ಎಡಪಂಥೀಯರು. ಗೊತ್ತಿರಲಿ, ಖ್ಯಾತ ಅರ್ಥಶಾಸ್ತ್ರಜ್ಞ ವಿವೇಕ್ ದೇಬ್ರಾಯ್, ಹಿಂದೂಸ್ಥಾನಿ ಸಂಗೀತ ಗಾಯಕ ಚನ್ನುಲಾಲ್ ಮಿಶ್ರಾ, ಹಿಂದಿ ಬರಹಗಾರ್ತಿ ಚಿತ್ರಾ ಮುದ್ಗಲ್, ಗಿರಿಜಾ ದೇವಿ, ಮಾಜಿ ಚುನಾವಣಾ ಮುಖ್ಯ ಆಯುಕ್ತ ಎನ್.ಗೋಪಾಲಸ್ವಾಮಿ, ಇತಿಹಾಸಕಾರ ಪುಷ್ಪೇಶ್ ಪಂತ್, ಶಾಸ್ತ್ರೀಯ ಸಂಗೀತಗಾರ ರಾಜನ್ ಸಾಜನ್ ಮಿಶ್ರಾ ಹಾಗೂ ಸಂವಿದಾನ ತಜ್ಞ ಸುಭಾಷ್ ಕಶ್ಯಪ್ ರಂತಹ ಚಿಂತಕರು ಜೆ ಎನ್ ಯು ಆವರಣದಲ್ಲಿ ನಡೆದ ದೇಶದ್ರೋಹ ಕೂಗಿನ ಘಟನೆಯನ್ನು ಕಟುವಾಗಿ ಟೀಕಿಸಿದ ಪ್ರಮುಖರು. ವಿಶ್ವವಿದ್ಯಾಲಯದ ಆವರಣದಲ್ಲಿ 2001ರ ಸಂಸತ್ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರು ಪರವಾದ ಹೇಳಿಕೆ ಒಂದು ಪೂರ್ವ ನಿಯೋಜಿತ ಪಿತೂರಿ ಎಂಬುದು ಈ ಚಿಂತಕರ ವಾದ. ‘ಆಡಳಿತ ವರ್ಗದ ವಿರುದ್ಧದ ಕೂಗು ಸ್ವೀಕರಿಸಬಹುದು ಆದರೆ, ದೇಶ ವಿರೋಧಿ ಕೂಗನ್ನು ಯಾವುದೇ ದೇಶ ಪ್ರೇಮಿ ಸಹಿಸಿಕೊಳ್ಳಲಾರ. ದೇಶದ ಕಾಳಜಿ ಇಲ್ಲದ ಈ ರೀತಿಯಾದ ಹೇಳಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗಾಗುತ್ತೆ’ ಎಂಬುದು ಇವರ ಪ್ರಶ್ನೆ.

‘ಆರಂಭದಲ್ಲಿ ಅಸಹಿಷ್ಣುತೆ ಎಂಬ ಕೂಗಿನಿಂದ ವಾತಾವರಣ ಹಾಳುಮಾಡುವ ಪ್ರಯತ್ನ ನಡೆಯಿತು. ನಂತರ ದಲಿತ ವಿದ್ಯಾರ್ಥಿ ಮೇಲೆ ಶೋಷಣೆ ಎಂಬ ಮಾತುಗಳು ಕೇಳಿ ಬಂದವು. ಈ ಪ್ರಯತ್ನಗಳು ವಿಫಲವಾದಾಗ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ದೇಶವಿರೋಧಿ ಕೂಗು ಕೇಳಿಬಂದಿದೆ. ಈ ಎಲ್ಲ ಬೆಳವಣಿಗೆಗಳನ್ನು ಕೆಲ ವರ್ಗ ಬೆಂಬಲಿಸುತ್ತಿರುವುದು ಶೋಚನೀಯ ಪರಿಸ್ಥಿತಿ’ ಎಂದು ಈ ಚಿಂತಕರು ವ್ಯಾಖ್ಯಾನಿಸಿದ್ದಾರೆ.

ಇಷ್ಟೆಲ್ಲದರ ಹೊರತಾಗಿಯೂ ಜೆ ಎನ್ ಯುದ ಅಭಿವ್ಯಕ್ತಿ ಸ್ವಾತಂತ್ರ್ಯದ ‘ಹಾರಾಟ’ಗಾರರಿಗೆ ಇಡೀ ದೇಶವೇ ತಮ್ಮ ಪರ ನಿಂತಿರುವಂತೆ ಭಾಸವಾಗುತ್ತಿದೆ. ನಗುವುದೋ ಅಳುವುದೋ ನೀವೇ ಹೇಳಿ!

Leave a Reply